ಮಾರುಕಟ್ಟೆ ನಿರ್ಮಾಣಕ್ಕೆ ನಡೆಯುತ್ತಿದ್ದ ಅನಿರ್ದಿಷ್ಟ ಧರಣಿ ಅಂತ್ಯ
ಜೆಡಿಎಸ್ ಯುವ ಮುಖಂಡ ಅಶೋಕ ಮನಗೂಳಿ ಭರವಸೆಗೆ ತಲೆದೂಗಿದ ವ್ಯಾಪಾರಿಗಳು
Team Udayavani, Jul 24, 2019, 3:54 PM IST
ಸಿಂದಗಿ: ವ್ಯಾಪಾರಸ್ಥರ ಧರಣಿಯಲ್ಲಿ ಜೆಡಿಎಸ್ ಯುವ ಮುಖಂಡ ಅಶೋಕ ಮನಗೂಳಿ ಮಾತನಾಡಿದರು.
ಸಿಂದಗಿ: ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆ ಆಗ್ರಹಿಸಿ ಅಬ್ದುಲ್ ಕಲಾಂ ತರಕಾರಿ ಮತ್ತು ಹಣ್ಣು ಹಂಪಲು ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘ ಕಳೆದ ಮೂರು ದಿನದಿಂದ ನಡೆಸುತ್ತಿದ್ದ ಧರಣಿ ಮಂಗಳವಾರ ಅಂತ್ಯವಾಯಿತು. ತಾತ್ಕಾಲಿಕ ಕಾಯಿಪಲ್ಲೆ ಮಾರಾಟ ಮಾಡಲು ಸ್ಥಳಾವಕಾಶ ಕೊಡುವುದಾಗಿ ಮಾಜಿ ಸಚಿವ ಎಂ.ಸಿ. ಮನಗೂಳಿ ಪುತ್ರ ಅಶೋಕ ಮನಗೂಳಿ ಅವರು ಭರವಸೆ ನೀಡಿದ ಹಿನ್ನೆಲೆ ಧರಣಿ ಹಿಂಪಡೆಯಲಾಯಿತು.
ಪಟ್ಟಣದ ಬಸ್ ನಿಲ್ದಾಣದ ಎದುರಿನಲ್ಲಿರುವ ಹಳೆ ಪ್ರವಾಸಿ ಮಂದಿರದ ಜಾಗ ತಾಪಂಗೆ ಸೇರಿದ್ದು ಈ ಜಾಗದಲ್ಲಿ ಪತ್ರಿಕಾ ಭವನಕ್ಕಾಗಿ ನಿವೇಶನ ಮೀಸಲಿದೆ. ತಾಪಂ ಸಾಮಾನ್ಯ ಸಭೆಯಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕಾಗಿ ನಿವೇಶನ ನೀಡಿ ಠರಾವು ಮಾಡಲಾಗಿದೆ.
ಹಳೆ ಪ್ರವಾಸಿ ಮಂದಿರದ ಜಾಗದಲ್ಲಿ ತಾತ್ಕಾಲಿಕವಾಗಿ ಕಾಯಿಪಲ್ಲೆ ಮಾರಾಟ ಮಾಡಲು ಸ್ಥಳಾವಕಾಶ ನೀಡಬೇಕಾದರೂ ತಾಪಂ ಸಾಮಾನ್ಯ ಸಭೆಯಲ್ಲಿ ಠರಾವು ಆಗಬೇಕು. ಅಲ್ಲದೇ ಅಲ್ಲಿ ಪತ್ರಿಕಾ ಭವನದ ನಿವೇಶನವಿದೆ, ಸಿಡಿಪಿಓ ಕಚೇರಿಯಿದೆ. ಇಷ್ಟೆಲ್ಲ ಇದ್ದರೂ ಯಾವ ಆಧಾರದ ಮೇಲೆ ಮಾಜಿ ಸಚಿವ ಎಂ.ಸಿ. ಮನಗೂಳಿ ಪುತ್ರ ಅಶೋಕ ಮನಗೂಳಿ ಅವರು ಭರವಸೆ ನೀಡಿದ್ದಾರೆ ಎಂಬುದು ತಿಳಿಯದಾಗಿದೆ.
ಡಾ| ಅಬ್ದುಲ್ ಕಲಾಂ ತರಕಾರಿ ಮತ್ತು ಹಣ್ಣು ಹಂಪಲು ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದವರು ಪಟ್ಟಣದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆ ಬೇಡಿಕೆ ಇಟ್ಟು ನಡೆಸುತ್ತಿದ್ದ ಧರಣಿ ಮಂಗಳವಾರ 4ನೇ ದಿನಕ್ಕೆ ಕಾಲಿಟ್ಟಿತ್ತು.
ಧರಣಿ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ ಎಂ.ಸಿ. ಮನಗೂಳಿ ಪುತ್ರ ಅಶೋಕ ಮನಗೂಳಿ ಮಾತನಾಡಿ, ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದವರಿಗೆ ಸಮಾಧಾನ ಪಡಿಸಲು ಪ್ರವಾಸಿ ಮಂದಿರದಲ್ಲಿ ತಾತ್ಕಾಲಿಕವಾಗಿ ಕಾಯಿಪಲ್ಲೆ ಮಾರಾಟ ಮಾಡಲು ಹಳೆ ಪ್ರವಾಸಿ ಮಂದಿರದ ಜಾಗದಲ್ಲಿ ಸ್ಥಳಾವಕಾಶ ನೀಡುವುದಾಗಿ ಭರವಸೆ ನೀಡಿದರು.
ನಮ್ಮ ತಂದೆ ಪಟ್ಟಣದ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಜಾಗದ ಕೊರತೆಯಿಂದ ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಮಾಡಲು ಆಗಿಲ್ಲ. ಪಟ್ಟಣದ ಸಾರ್ವಜನಿಕರ ಕಳೆದ 15 ವರ್ಷಗಳ ಬೇಡಿಕೆಯಾದ ಒಳಚರಂಡಿ ನಿರ್ಮಾಣಕ್ಕಾಗಿ 90 ಕೋಟಿ ರೂ. ಮಂಜೂರು ಮಾಡಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಬಳಗಾನೂರ ಕೆರೆಯಿಂದ ಸಿಂದಗಿ ಪಟ್ಟಣದ ಕೆರೆಗೆ ನೀರು ಸರಬರಾಜು ಮಾಡಲು 27.10 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ. ಹೀಗೆ ವಿವಿಧ ಯೋಜನೆಗಳಿಗೆ 13 ತಿಂಗಳಿನಲ್ಲಿ 190 ಕೋಟಿ ರೂ. ಅನುದಾನ ತಂದಿದ್ದಾರೆ. ಪಟ್ಟಣದಲ್ಲಿ ಆಲಮೇಲ ರೋಡ್ ಹತ್ತಿರದಲ್ಲಿನ 3 ಎಕರೆ ಜಮೀನಿನಲ್ಲಿ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣ ಮಾಡುವ ಯೋಜನೆ ಹೊಂದಲಾಗಿದೆ ಎಂದು ತಿಳಿಸಿದರು.
ಬಿಎಸ್‌ಪಿ ಮುಖಂಡ ಡಾ| ದಸ್ತಗೀರ್ ಇಂಗಳಗಿ ಮಾತನಾಡಿ, ಸಚಿವ ಎಂ.ಸಿ. ಮನಗೂಳಿ ಅವರು ವಿಧಾನಸಭಾ ಚುನಾವಣೆಯಲ್ಲಿ ಕಾಯಿಪಲ್ಲೆ ಮತ್ತು ಹಣ್ಣು ಮಾರಾಟಗಾರರಿಗೆ ನಿಮಗೆ ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಅವರು ಸಮ್ಮಿಶ್ರ ಸರಕಾರದಲ್ಲಿ ಸಚಿವರಾಗಿದ್ದಾರೆ. 14 ತಿಂಗಳಾದರು ಮಾರುಕಟ್ಟೆ ನಿರ್ಮಾಣ ಮಾಡುವ ಯೋಜನೆ ಮಾಡದೇ ಇರುವುದು ವಿಷಾದಕರ ಸಂಗತಿಯಾಗಿದೆ ಎಂದು ವಿಷಾದಿಸಿದರು.
ಕಿರಾಣಿ ವರ್ತಕರ ಸಂಘದ ಅಧ್ಯಕ್ಷ ಅಶೋಕ ವಾರದ, ಕಾಂಗ್ರೆಸ್ ಮುಖಂಡ ಚಂದ್ರಶೇಖರ ದೇವರೆಡ್ಡಿ, ವಕೀಲ ಎಸ್.ಬಿ. ಪಾಟೀಲ ಗುಂದಗಿ ಮಾತನಾಡಿದರು.
ಪುರಸಭೆ ಮಾಜಿ ಸದಸ್ಯ ಇಕ್ಬಾಲ್ ತಲಕಾರಿ, ರಾಜು ಗುಬ್ಬೆವಾಡ, ರಮೇಶ ಹೂಗಾರ, ಚನ್ನು ಪಟ್ಟಣಶೆಟ್ಟಿ, ಜಿಲಾನಿ ನಾಟೀಕಾರ, ಶಿರಸ್ತೇದಾರ್ ಸುರೇಶ ಮ್ಯಾಗೇರಿ, ಅಧ್ಯಕ್ಷ ಸೈಫನ್ ನಾಟೀಕಾರ, ಉಪಾಧ್ಯಕ್ಷ ಹಾಜಿಗುಲಾಬಸಾಬ ಮರ್ತೂರ ಸೇರಿದಂತೆ ಕಾಯಿಪಲ್ಲೆ ಮಾರಾಟಗಾರರು, ಬಾಗವಾನರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.