ರಾಜೀವ್ ನಗರಕ್ಕೆ ಸೌಲಭ್ಯ ಕಲ್ಪಿಸಿ
ಹೈದರಾಬಾದ್-ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ
Team Udayavani, Sep 5, 2019, 7:45 PM IST
ಸಿರವಾರ: ರಾಜೀವ್ ನಗರಕ್ಕೆ ಮೂಲ ಸೌಕರ್ಯ ಕಲ್ಪಿಸಲು ಆಗ್ರಹಿಸಿಹೈದರಾಬಾದ್-ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಉಪ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಸಿರವಾರ: ಪಟ್ಟಣದ ರಾಜೀವ ನಗರಕ್ಕೆ ಅಗತ್ಯ ಮೂಲ ಸೌಕರ್ಯ ಹಾಗೂ ಜಾಲಾಪುರ ಗ್ರಾಮದಲ್ಲಿನ ಅವೈಜ್ಞಾನಿಕ ಕಾಮಗಾರಿಗಳ ತನಿಖೆಗೆ ಆಗ್ರಹಿಸಿ ಹೈದರಾಬಾದ್-ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಹಾಗೂ ರಾಜೀವ್ ನಗರದ ನಿವಾಸಿಗಳು ಬುಧವಾರ ಧರಣಿ ನಡೆಸಿ ಉಪ ತಹಶೀಲ್ದಾರ್ ಸಿದ್ಧನಗೌಡರಿಗೆ ಮನವಿ ಸಲ್ಲಿಸಿದರು.
ರಾಜೀವ್ ನಗರದಲ್ಲಿ ಕುಡಿಯುವ ನೀರಿನ ಕೊರತೆ, ಚರಂಡಿ ವ್ಯವಸ್ಥೆ, ಕೊಳವೆ ಬಾವಿ ನಿರ್ಮಾಣ, ಜೋಪಡಿಗಳಲ್ಲಿರುವ ಅಗತ್ಯ ಫಲಾನುಭವಿಗಳಿಗೆ ಮನೆ ನೀಡಬೇಕು. ಈಗಾಗಲೇ ನಿರ್ಮಿಸಿರುವ ಸಿಸಿ ರಸ್ತೆ ಕಾಮಗಾರಿ ಕಳಪೆಯಾಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕು. ಜಾಲಾಪುರ ಗ್ರಾಮದ ಮಹಾತ್ಮ ಗಾಂಧಿ ಶಾಲೆಯಿಂದ ಹಳ್ಳದವರೆಗೆ ನಿರ್ಮಿಸಿದ ರಸ್ತೆಯ ಡಾಂಬರ್ ಕಿತ್ತಿ ಹೋಗಿದ್ದು, ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರನ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಧರಣಿ ನಡೆಸಿದರು.
ಸ್ಥಳಕ್ಕೆ ಆಗಮಿಸಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುಜಾತಾ ಪಾಟೀಲ ಮತ್ತು ಉಪ ತಹಶೀಲ್ದಾರ್ ಸಿದ್ದನಗೌಡ, ವಾರದಲ್ಲಿ ಸಮಸ್ಯೆ ಪರಿಹರಿಸಲಾಗುವುದು. ಕಳಪೆ ಕಾಮಗಾರಿ ಕುರಿತು ಪರಿಶೀಲನೆ ನಡೆಸಿ ತನಿಖೆಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ ನಂತರ ಧರಣಿ ಹಿಂಪಡೆದರು.
ಸಂಘಟನೆ ತಾಲೂಕು ಅಧ್ಯಕ್ಷ ಆರ್.ನಾಗರಾಜ, ಜೆ.ಪ್ರಕಾಶ, ಕೆ.ಶ್ರೀನಿವಾಸ, ನಾಗರಾಜ ಬೊಮ್ಮನಾಳ, ಮಹಿಬೂಬ, ಸಂಪತ್ ಕುಮಾರಿ ಕಲ್ಲೂರು, ಗುರುನಾಥ, ಚಂದಮ್ಮ, ಹುಸೇನಪ್ಪ ಭಂಡಾರಿ, ಜಯರಾಜ, ದೇವರಾಜ, ಬಸವರಾಜ ಹಾಲಾಪುರ ಸೇರಿ ಇತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.