ಸೊರಬದಲ್ಲಿ ಬಿಡಾಡಿ ದನಗಳ ಹಾವಳಿ
•ವಿದ್ಯಾರ್ಥಿಗಳು- ಜನರಲ್ಲಿ ಆತಂಕದ ಸ್ಥಿತಿ •ದನಗಳ ಹಾವಳಿ ನಿಯಂತ್ರಿಸಲು ಆಡಳಿತದ ನಿರ್ಲಕ್ಷ್ಯ
Team Udayavani, Jul 14, 2019, 11:50 AM IST
ಸೊರಬ: ಪಟ್ಟಣದ ಮುಖ್ಯ ರಸ್ತೆಯಲ್ಲೇ ಮಲಗಿರುವ ಬಿಡಾಡಿ ದನಗಳು.
ಸೊರಬ: ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ಶಾಲಾ-ಕಾಲೇಜು ವಿದ್ಯಾರ್ಥಿಗಳ ಸಂಚರಿಸಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ.
ಎಲ್ಲೆಂದರಲ್ಲಿ ತಿರುಗಾಡುವ ದನಗಳು: ಹಗಲು ರಾತ್ರಿ ಎನ್ನದೇ ಬಿಡಾಡಿ ದನಗಳು ಬಸ್ ನಿಲ್ದಾಣ, ಪಪಂ ಮುಂಭಾಗದ ವೃತ್ತ, ಮುಖ್ಯ ರಸ್ತೆ, ಶ್ರೀ ರಂಗನಾಥ ದೇವಸ್ಥಾನ ಸಮೀಪ, ಶ್ರೀ ವಿನಾಯಕ ದೇವಸ್ಥಾನದ ಮುಂಭಾಗ ಸೇರಿದಂತೆ ಪಟ್ಟಣದ ಹೊರವಲಯದ ಹೊಸಪೇಟೆ ಬಡಾವಣೆಯಲ್ಲಿ ಎಲ್ಲೆಂದರಲ್ಲಿ ಬಿಡಾಡಿ ದನಗಳು ತಿರುಗಾಟ ನಡೆಸುತ್ತವೆ. ಇದರಿಂದ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ. ಬೈಕ್ ಸವಾರರು ಇಲ್ಲಿನ ಪಪಂಗೆ ಹಿಡಿ ಶಾಪ ಹಾಕುತ್ತಲೇ ಸಂಚಾರ ಮಾಡುತ್ತಿದ್ದಾರೆ. ಕೆಲವರು ಬಿದ್ದು ಗಾಯ ಮಾಡಿಕೊಂಡಿರುವ ಉದಾಹರಣೆಗಳೂ ಇವೆ.
ಮಾಲೀಕರು ಯಾರು?: ಜಾನುವಾರುಗಳನ್ನು ಸಾಕಿರುವವರು ನಿಯಮಗಳನ್ನು ಗಾಳಿಗೆ ತೂರಿ, ದನ, ಕರುಗಳನ್ನು ಎಲ್ಲೆಂದರಲ್ಲಿ ಮೇಯಲು ಬಿಡುತ್ತಿದ್ದಾರೆ. ಬಸ್ ನಿಲ್ದಾಣಕ್ಕೆ ಆಗಮಿಸುವ ಪ್ರಾಣಿಗಳು ಯಾರ ನಿಯಂತ್ರಣಕ್ಕೂ ಸಿಗುತ್ತಿಲ್ಲ. ಅಂಗಡಿ- ಮಳಿಗೆಗಳಲ್ಲಿ ಸಿಕ್ಕ ವಸ್ತುಗಳನ್ನು ತಿನ್ನುತ್ತಾ ಓಡಾಡುತ್ತಿರುವ ಬಿಡಾಡಿ ದನಗಳು ಬಸ್ ನಿಲ್ದಾಣ, ಕೆಲ ದೇವಸ್ಥಾನ ಹಾಗೂ ಮುಖ್ಯ ರಸ್ತೆಯಲ್ಲಿಯೇ ಮಲಗುತ್ತಿವೆ. ಇದರಿಂದ ರಾತ್ರಿ ವೇಳೆ ಸಂಚರಿಸುವವರಿಗೂ ತೊಂದರೆಯಾಗುತ್ತಿದೆ.
ಪಪಂ ಮುಖ್ಯಾಧಿಕಾರಿ ಮೌನ!: ಈ ಹಿಂದೆ ಪಟ್ಟಣದ ಅಂಬೇಡ್ಕರ್ ಬಡಾವಣೆಯಲ್ಲಿ ದನದ ದೊಡ್ಡಿಯೊಂದು ಕಾರ್ಯ ನಿರ್ವಹಿಸುತ್ತಿತ್ತು. ಕೆಲ ವರ್ಷಗಳ ತರುವಾಯ ಪಾಳು ಬಿದ್ದ ದೊಡ್ಡಿಯನ್ನು ತೆರವುಗೊಳಿಸಿ, ಸಮುದಾಯ ಭವನ ನಿರ್ಮಾಣವಾಗಿದೆ. ಕಳೆದ ವರ್ಷ ಬಿಡಾಡಿ ದನಗಳ ಹಾವಳಿ ಹೆಚ್ಚಾದ ಸಂದರ್ಭದಲ್ಲಿ ಅಂದಿನ ಮುಖ್ಯಾಧಿಕಾರಿ ತಾತ್ಕಾಲಿಕವಾಗಿ ಪಪಂ ಹಿಂಭಾಗದಲ್ಲಿ ದನದ ದೊಡ್ಡಿಯನ್ನು ನಿರ್ಮಿಸಿದ್ದರು. ಆದರೆ, ಪ್ರಸ್ತುತ ಮುಖ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವವರು ಇದೆಲ್ಲದರ ಅರಿವಿದ್ದರೂ, ಜಾಣ ಕುರುಡುತನದಿಂದ ವರ್ತಿಸುತ್ತಿದ್ದಾರೆ. ಚುನಾಯಿತ ಜನಪ್ರತಿನಿಧಿಗಳು ಇದುವರೆಗೂ ಪಪಂ ಗದ್ದುಗೆ ಏರುವಲ್ಲಿ ತಾಂತ್ರಿಕವಾಗಿ ವಿಳಂಬವಾಗಿರುವುದನ್ನೇ ದುರ್ಬಳಕೆ ಮಾಡಿಕೊಂಡ ಮುಖ್ಯಾಧಿಕಾರಿ ಆಡಿದ್ದೇ ಆಟ ಎನ್ನುವಂತಾಗಿದೆ ಎನ್ನುವ ಗಂಭೀರ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಗೋಶಾಲೆಗೆ ರವಾನಿಸಿ: ಪಟ್ಟಣದಲ್ಲಿ ಮಿತಿ ಮೀರಿರುವ ಬಿಡಾಡಿ ದನಗಳ ಹಾವಳಿಗೆ ತಡೆ ಹಾಕುವಲ್ಲಿ ಸ್ಥಳೀಯ ಪಪಂ ಸಂಪೂರ್ಣ ವಿಫಲವಾಗಿದೆ. ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳಲು ಜೀವ ಕೈಯಲ್ಲಿ ಹಿಡಿದಿಟ್ಟುಕೊಳ್ಳುವಂತಾಗಿದ್ದು, ಬಿಡಾಡಿ ದನಗಳ ಹಾವಳಿ ತಡೆಗಟ್ಟಲು ಸಮೀಪದ ಗೋಶಾಲೆಗಳಿಗೆ ರವಾನಿಸಬೇಕು ಎಂಬುದು ಪ್ರಜ್ಞಾವಂತರ ಒತ್ತಾಯವಾಗಿದೆ.
ಎಲ್ಲಿಂದ ಬಂದವು ಕುದುರೆಗಳು?: ಬಿಡಾಡಿ ದನಗಳ ಜೊತೆಗೆ ಪಟ್ಟಣದಲ್ಲಿ ಕುದುರೆಗಳ ಹಾವಳಿಯೂ ಹೆಚ್ಚಾಗಿದೆ. ಉತ್ತರ ಕರ್ನಾಟಕ ಭಾಗದಿಂದ ಕುರಿಗಳನ್ನು ಮೇಯಿಸಲು ಆಗಮಿಸಿದ ಕೆಲವರು ತಮ್ಮ ಹಿಂಡುಗಳೊಂದಿಗೆ ಕುದುರೆಗಳನ್ನು ಕರೆತಂದಿದ್ದರೂ, ನಂತರ ಮಳೆಗಾಲ ಆರಂಭವಾಗುತ್ತಲೇ ಕುರಿ ಹಿಂಡು ತಂದವರು ತಮ್ಮ ಕುದುರೆಗಳನ್ನು ಪಟ್ಟಣದಲ್ಲಿಯೇ ಬಿಟ್ಟು ಹೋಗಿದ್ದಾರೆ. ಅಲ್ಲದೆ ಇವುಗಳಲ್ಲಿ ಕೆಲವು ಅನಾರೋಗ್ಯದಿಂದ ಬಳಲುತ್ತಾ ಪಟ್ಟಣದಲ್ಲಿ ಎಲ್ಲೆಂದಲ್ಲಿ ಸಂಚರಿಸುತ್ತಿವೆ. ನಡು ರಸ್ತೆಯಲ್ಲಿ ಮಲಗುತ್ತಿವೆ. ಪಟ್ಟಣದಲ್ಲಿ ಮಿತಿ ಮೀರಿರುವ ಬಿಡಾಡಿ ದನ ಮತ್ತು ಕುದುರೆಗಳ ಹಾವಳಿಗೆ ತಡೆ ಹಾಕುವ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ಮುಂದಾಗಬೇಕಾದ ತುರ್ತು ಅಗತ್ಯವಿದೆ.
ನಿತ್ಯ ಅಂಗಡಿ ಮುಂಗಟ್ಟುಗಳನ್ನು ತೆರೆಯುವುದಕ್ಕೂ ಮುಂಚೆ ಅಂಗಡಿಗಳ ಮುಂಭಾಗದಲ್ಲಿ ಬಿಡಾಡಿ ದನಗಳ ಸಗಣಿಯನ್ನು ಸ್ವಚ್ಛಗೊಳಿಸುವುದೇ ಮೊದಲ ಕೆಲಸವಾಗಿದೆ. ಬಿಡಾಡಿ ದನಗಳಿಂದಾಗುವ ತೊಂದರೆ ಕುರಿತು ಹಲವು ಬಾರಿ ಪಪಂ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.
• ವರ್ತಕರು, ಸೊರಬ.
ಶಾಲೆಗೆ ಹೋಗುವಾಗ ದನಗಳು ರಸ್ತೆಯಲ್ಲೇ ನಿಂತಿರುತ್ತವೆ. ಅವುಗಳು ಕಾದಾಡುತ್ತಿರುವಾಗ ರಸ್ತೆ ಬದಿಯಲ್ಲಿ ನಿಲ್ಲುವುದಕ್ಕೂ ಹೆದರಿಕೆಯಾಗುತ್ತದೆ. ದಯವಿಟ್ಟು ಅಧಿಕಾರಿಗಳು ಬಿಡಾಡಿ ದನಗಳಿಂದ ರಕ್ಷಣೆ ನೀಡಬೇಕು.
•ಅರ್ಪಿತಾ, ವಿದ್ಯಾರ್ಥಿನಿ.
ಎಚ್.ಕೆ.ಬಿ. ಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.