ಮರಳಿನ ಕಟ್ಟವೇ ಇಲ್ಲಿ ಆಧಾರ ಶಾಶ್ವತ ಯೋಜನೆ ಮರೀಚಿಕೆ
19 ವಾರ್ಡ್‌ಗಳಿಗೆ ನೀರೋದಗಿಸುವುದು 14ನೇ ವಾರ್ಡ್!
Team Udayavani, May 18, 2019, 11:58 AM IST
ನೀರಿನ ಶೇಖರಣೆಗಾಗಿ ಪಯಸ್ವಿನಿ ನದಿ ನೀರಿಗೆ ಅಡ್ಡಲಾಗಿ ಮರಳಿನ ಕಟ್ಟ ರಚಿಸಲಾಗಿದೆ.
ಸುಳ್ಯ: ನಗರದ 19 ವಾರ್ಡ್‌ಗೆ ನೀರೋದಗಿಸುವುದು 14ನೇ ವಾರ್ಡ್‌ನ ವಿಶೇಷತೆ.
ಪಯಸ್ವಿನಿ ನದಿ ಹರಿಯುವ ಇಲ್ಲಿ ಪ್ರತಿ ಬೇಸಗೆಗೆ ಮರಳಿನ ಕಟ್ಟವೇ ನೀರು ಪೂರೈಕೆಗಿರುವ ಆಧಾರ. ಬಹು ವರ್ಷದ ಬೇಡಿಕೆ ಆಗಿರುವ ಶಾಶ್ವತ ಕುಡಿಯುವ ನೀರಿನ ಯೋಜನೆ ಪ್ರಸ್ತಾವ ಕಡತದಲ್ಲೇ ಬಂಧಿ ಆಗಿರುವುದು ಕೂಡ ಇದೇ ವಾರ್ಡ್‌ನಲ್ಲೇ.
ಆಲೆಟ್ಟಿ ಗ್ರಾ.ಪಂ. ಮತ್ತು ಸುಳ್ಯ ನಗರದ ಸರಹದ್ದಿನ ಈ ವಾರ್ಡ್ ನಗರದ ಜನರ ಬಾಯಾರಿಕೆ ದಾಹ ನೀಗಿಸುವ ವಾರ್ಡ್. ಇಲ್ಲಿ 40 ವರ್ಷದ ಹಿಂದಿನ ಜನಸಂಖ್ಯೆ ಆಧರಿಸಿ ರಚಿಸಿದ ಶುದ್ಧೀಕರಣ ಘಟಕ ವೈಫಲ್ಯದ ಕಾರಣ ಬಹುತೇಕ ಮನೆಗಳಿಗೆ ಅಶುದ್ಧ ನೀರೇ ಪೂರೈಕೆಯಾಗುತ್ತಿರುವುದು ಇಲ್ಲಿನ ಮೈನಸ್ ಪಾಯಿಂಟ್.
ಏಕೈಕ ಸೆಲೆ!
ವರ್ಷದ 365 ದಿನವೂ 24 ತಾಸು ಇಲ್ಲಿಂದ ನಗರಕ್ಕೆ ನೀರು ಪೂರೈಸಲಾಗುತ್ತದೆ. ಬೇಸಗೆ ಕಾಲದಲ್ಲಿ ಇದರ ಪ್ರಮಾಣ ಹೆಚ್ಚು. ವಾರ್ಡ್‌ನ ಕಲ್ಲುಮಟ್ಲು ಪಂಪ್‌ಹೌಸ್ ಬಳಿಯಲ್ಲಿ 50 ಎಚ್ಪಿಯ 1 ಮತ್ತು 45 ಎಚ್ಪಿಯ 2 ಪಂಪ್‌ಗ್ಳಿವೆ. ಆ ಮೂಲಕ ನೀರನ್ನು ಸಂಗ್ರಹಿಸಿ ಪಂಪ್‌ಹೌಸ್ ಬಾವಿಗೆ, ಶುದ್ಧೀಕರಣ ಘಟಕಕ್ಕೆ ಪೂರೈಸಲಾಗು ತ್ತದೆ. ಕಲ್ಲುಮಟ್ಲು ನೀರು ಶುದ್ಧೀಕರಣ ಘಟಕದಿಂದ ಟ್ಯಾಂಕಿಗುಡ್ಡೆಯಲ್ಲಿನ 1 ಲಕ್ಷ ಗ್ಯಾಲನ್ ಮತ್ತು 50 ಸಾವಿರ ಗ್ಯಾಲನ್ ಟ್ಯಾಂಕ್‌ನ ಮೂಲಕ ನಗರಕ್ಕೆ ನೀರು ಹರಿದರೆ, ಇನ್ನೊಂದು ಪೈಪು ಮೂಲಕ ಕುರುಂಜಿಗುಡ್ಡೆಯ ಟ್ಯಾಂಕ್‌ಗೆ ಹರಿಸಲಾಗುತ್ತದೆ. ಅಲ್ಲಿಂದ ನಗರದ ಮನೆ ಹಾಗೂ ಗೃಹೇತರ ಕಟ್ಟಡಗಳಿಗೆ ನಳ್ಳಿ ಸಂಪರ್ಕದ ಮುಖಾಂತರ ನೀರು ಹರಿಸಲಾಗುತ್ತದೆ.
ಆರು ವರ್ಷದ ಹಿಂದೆ ನಗರದ ನೀರಿನ ಸಮಸ್ಯೆ ಪರಿಹಾರಕ್ಕೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸರಕಾರಕ್ಕೆ 65.5 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದೆ. ಕಲ್ಲುಮುಟ್ಲು ವಾರ್ಡ್‌ನ ನಾಗಪಟ್ಟಣದಲ್ಲಿ ಪಯಸ್ವಿನಿ ನದಿಗೆ ವೆಂಟೆಡ್ ಡ್ಯಾಂ, ಜಾಕ್‌ವೆಲ್ ಪಂಪ್‌ಹೌಸ್, ವಾಟರ್ ಟ್ರೀಟ್ ಪ್ಲಾಂಟ್ ರಚನೆ ಸೇರಿದಂತೆ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಕುರಿತು ಪ್ರಸ್ತಾವಿಸಲಾಗಿತ್ತು. ಅದು ಸರಕಾರದ ಹಂತದಲ್ಲಿದ್ದು, ಮಂಜೂರಾತಿ ಸಿಕ್ಕಿಲ್ಲ.
ಗರಿಷ್ಠ ಮತದಾರರಿರುವ ವಾರ್ಡ್
14ನೇ ವಾರ್ಡ್ ಕಲ್ಲುಮುಟ್ಲು, ಟಾಂಕಿಗುಡ್ಡೆ, ಗಾರ್ಡ್‌ಶೆಡ್- ಕಲ್ಲುಮುಟ್ಲು, ಪರಿವಾರ, ಪರಿವಾರಕಾನ ಪ್ರದೇಶಗಳನ್ನು ಒಳಗೊಂಡಿದೆ.
ನೀರಿನ ಕೊರತೆ
2011ರ ಜನಗಣತಿ ಆಧಾರದಲ್ಲಿ ನಗರದ ಜನಸಂಖ್ಯೆ 19,958. ಆ ಸಂಖ್ಯೆ ಈಗ 25 ಸಾವಿರ ದಾಟಿರಬಹುದು. ದಿನವೊಂದಕ್ಕೆ ನಗರಕ್ಕೆ ಬೇಕಾದ ನೀರಿನ ಪ್ರಮಾಣ 1.69 ಎಂ.ಎಲ್ಡಿ. ಓರ್ವ ವ್ಯಕ್ತಿಗೆ ನೀಡುತ್ತಿರುವ ನೀರಿನ ಪ್ರಮಾಣ 90 ಲೀ. ಅಗತ್ಯದ ಪ್ರಮಾಣ 135 ಲೀ. ಓರ್ವ ವ್ಯಕ್ತಿಗೆ ದಿನವೊಂದರಲ್ಲಿ 45 ಲೀಟರ್ ನೀರಿನ ಕೊರತೆಯಿದೆ. ಕೊರತೆಗೆ ಮುಖ್ಯ ಕಾರಣ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳ್ಳದಿರುವುದು.
ವಿಫಲ ಘಟಕ !
ನದಿಯಿಂದ ಸಂಗ್ರಹಿಸುವ ನೀರು ಶುದ್ಧೀಕರಣಗೊಂಡು ಮನೆಗಳಿಗೆ ಪೂರೈಸಬೇಕು. ಆದರೆ ಈಗಿನ ಬೇಡಿಕೆ ನಿರ್ವಹಿಸಲು ಘಟಕ ಸಾಮರ್ಥ್ಯ ಹೊಂದಿರದ ಕಾರಣ ಕೆಂಬಣ್ಣದ ನೀರು ಮನೆಗಳಿಗೆ ಹರಿಯುತ್ತಿದೆ. ಈ ಘಟಕ ಬದಲಾಯಿಸಿ ಹೊಸ ಘಟಕ ನಿರ್ಮಿಸಬೇಕು ಎನ್ನುವ ಬೇಡಿಕೆ ಹಲವು ಸಭೆಗಳಲ್ಲಿ ಪ್ರಸ್ತಾವಗೊಂಡಿದೆ.
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.