ಕರ್ನಾಟಕ ದರ್ಶನ ಪ್ರವಾಸಕ್ಕೆ ಚಾಲನೆ
ಪ್ರವಾಸೋದ್ಯಮ ಇಲಾಖೆ ಹೋಟೆಲ್‌ಗಳಲ್ಲಿ ನಾಲ್ಕು ದಿನ ಊಟ-ವಸತಿ ವ್ಯವಸ್ಥೆ
Team Udayavani, Nov 13, 2019, 4:55 PM IST
ಸುರಪುರ: ಪ್ರವಾಸೋದ್ಯಮ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸಕ್ಕೆ ತಾಪಂ ಅಧ್ಯಕ್ಷೆ ಶಾರದಾ ಭೀಮಣ್ಣ ಬೇವಿನಾಳ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಶೈಕ್ಷಣಿಕ ಪ್ರವಾಸದಿಂದ ವಿದ್ಯಾರ್ಥಿಗಳಿಗೆ ಇತಿಹಾಸ ಅರಿವು ಮೂಡಲಿದೆ. ಇತಿಹಾಸ ಬಲ್ಲವರು ದೇಶ ಆಳಬಲ್ಲರು. ಹಾಗಾಗಿ ಕರ್ನಾಟಕದ ಇತಿಹಾಸವನ್ನು ಓದುವುದು ಅಗತ್ಯವಾಗಿದೆ. ಇದಲ್ಲದೆ ಸ್ವ ಅನುಭವ ಹಾಗೂ ನೋಡುವುದರಿಂದ ನಮ್ಮ ರಾಜ್ಯದ ಇತಿಹಾಸ ತಿಳಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಬೆಂಗಳೂರಿನ ಪ್ರವಾಸಿ ಮಾರ್ಗದರ್ಶಕ ಉಮೇಶ ರಾಥೋಡ ಮಾತನಾಡಿ, ನಾಲ್ಕು ದಿನಗಳ ಕಾಲ ಬಳ್ಳಾರಿ, ವಿಜಯಪುರ ಸೇರಿದಂತೆ ವಿವಿಧ ಐತಿಹಾಸಿಕ ಪ್ರೇಕ್ಷಣೀಯ ಸ್ಥಳಗಳಿಗೆ ದ್ಯಾರ್ಥಿಗಳೊಂದಿಗೆ ಭೇಟಿ ನೀಡಲಾಗುವುದು. ಪ್ರವಾಸೋದ್ಯಮ ಇಲಾಖೆ ಹೋಟೆಲ್‌ಗಳಲ್ಲಿ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ವಿದ್ಯಾರ್ಥಿಗಳ ರಕ್ಷಣೆಗಾಗಿ ಜೀವವಿಮೆ ಕೂಡ ಮಾಡಿಸಲಾಗಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆ ಸಹಾಯಕ ವ್ಯವಸ್ಥಾಪಕ ನಾಗರಾಜ ಮೂರ್ತಿ ಮಾತನಾಡಿ, ಯಾದಗಿರಿ ಜಿಲ್ಲೆಯಿಂದ 706 ವಿದ್ಯಾರ್ಥಿಗಳು ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸದಲ್ಲಿ ಪಾಲ್ಗೊಳ್ಳಲಿದ್ದಾರೆ. ಶಿಕ್ಷಣ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಪ್ರವಾಸ ಕಾರ್ಯಕ್ರಮ ನಡೆಯಲಿದೆ. ಈ ಮೂಲಕ ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳ ಮಾಹಿತಿ ಯುವ ಪೀಳಿಗೆಗೆ ದೊರೆಯಲಿದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿ ಕಾರಿ ನಾಗರತ್ನ ಓಲಿಕಾರ ಮಾತನಾಡಿ, ತಾಲೂಕಿನ ಕೆಂಭಾವಿ, ಕೊಡೇಕಲ್, ಹುಣಸಗಿ, ಸುರಪುರ ಸೇರಿದಂತೆ 4 ವಲಯಗಳಿಂದ ಒಟ್ಟು 250 ವಿದ್ಯಾರ್ಥಿಗಳು 5 ಬಸ್‌ಗಳಲ್ಲಿ ಪ್ರವಾಸಕ್ಕೆ ತೆರಳಲಿದ್ದಾರೆ. ಉಸ್ತುವಾರಿಗಾಗಿ 15 ಶಿಕ್ಷಕರು ಪ್ರವಾಸದಲ್ಲಿ ಪಾಲ್ಗೊಳ್ಳಲಿದ್ದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಬಳ್ಳಾರಿ ಹಂಪಿ, ತುಂಗಭದ್ರಾ ಜಲಾಶಯ, ಬಾಗಲಕೋಟೆ ಜಿಲ್ಲೆ ಪಟ್ಟದಕಲ್ಲು, ಬಾದಾಮಿ, ಐಹೊಳೆ, ಜಯಪುರ, ಕೂಡಲಸಂಗಮ, ಆಲಮಟ್ಟಿ ಸೇರಿದಂತೆ ಕೆಲ ಐತಿಹಾಸಕ ಸ್ಮಾರಕಗಳಿಗೆ ಭೇಟಿ ನೀಡುವರು
ಎಂದು ಹೇಳಿದರು.
ನೌಕರರ ಸಂಘದ ತಾಲೂಕು ಅಧ್ಯಕ್ಷ ಸಂಜೀವ ದರಬಾರಿ, ಬಿಜೆಪಿ ಮುಖಂಡ ಶ್ರೀನಿವಾಸ ದರಬಾರಿ, ಭೀಮಣ್ಣ ಬೇವಿನಾಳ, ಸಿಆರ್‌ಪಿ ಬಸವರಾಜ, ಸಣ್ಣ ಹನುಮಪ್ಪ, ಶರಣಬಸವ ಗಚ್ಚಿ ಇದ್ದರು.