ಟ್ಯೂಬ್‌ಗಳಲ್ಲೂ ಸಿಗಲಿದೆ ಜೈವಿಕ ಅನಿಲ
Team Udayavani, Nov 21, 2019, 12:14 PM IST
ಸಿದ್ದಯ್ಯ ಪಾಟೀಲ
ಸುರಪುರ: ಕೃಷಿಕರ ಮನೆಗಳಿಗೆ ಸೀಮಿತವಾಗದೆ ಅವರ ಉಪಕಸುಬಗಳಿಗಾಗಿ ಬೇರೊಂದು ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ನೆಲೆ ನಿಲ್ಲುವ ಕುಟುಂಬಗಳ ಕೈಹಿಡಿದಿರುವ ಬಯೋಗ್ಯಾಸ್ (ಜೈವಿಕ ಇಂಧನ) ವರದಾನವಾಗಿದೆ.
ರೈತರ ಕಟುಂಬಗಳು ನೆಲೆ ನಿಲ್ಲುವ ಪ್ರದೇಶಗಳಲ್ಲಿ ಅಡುಗೆ ಮಾಡಿಕೊಳ್ಳಲು ಟ್ರ್ಯಾಕ್ಟ್ರ್‌ರ್ , ಬಸ್ ಅಥವಾ ಜೆಸಿಬಿ ಟ್ಯೂಬ್ ಗಳಲ್ಲಿ ಇಂಧನ ತುಂಬಿಕೊಂಡು ಹೋಗಿ ಸರಳ ವಿಧಾನದಲ್ಲಿ ಬೇಕಾದ ಅಡುಗೆ ಮಾಡಿಕೊಳ್ಳಬಹುದಾಗಿದೆ. ಜೈವಿಕ ಇಂಧನ ನೇರವಾಗಿ ಗ್ಯಾಸ್ ಒಲೆಗೆ ಸಂಪರ್ಕ ಹೊಂದಿರುತ್ತದೆ. ಹೆಚ್ಚುವರಿಯಾಗಿ ಉತ್ಪತ್ತಿಯಾಗುವ ಇಂಧನವನ್ನು ಹೇಗೆ ಸಂಗ್ರಹಿಸಿಕೊಟ್ಟಕೊಳ್ಳಬೇಕು ಎಂಬ ಚಿಂತನೆಗೆ ಜೈವಿಕ ಇಂಧನ ಪರಿಹಾರೋಪಾಯ ನೀಡಿದೆ. ದೊಡ್ಡ ದೊಡ್ಡ ಗಾತ್ರದ ಟ್ಯೂಬ್‌ಗಳಲ್ಲಿ ಸುಲಭವಾಗಿ ಇಂಧನ ಸಂಗ್ರಹಿಸಿಟ್ಟುಕೊಳ್ಳ ಬಹುದಾಗಿದೆ. ಹೊಸ ವಿಧಾನಕ್ಕೆ ರೈತರು ಮೊರೆ ಹೋಗಿದ್ದಾರೆ.
ಕುರಿಗಾಹಿಗಳಿಗೆ ಅನುಕೂಲ: ಬಯೋಗ್ಯಾಸ್ ಕುರಿಗಾಹಿಗಳಿಗೆ ಹೆಚ್ಚು ಅನುಕೂಲಕರವಾಗಿದೆ. ತಮಗೆ ಬೇಕಾದ ಟ್ಯೂಬ್‌ನಲ್ಲಿ ಇಂಧನ ತುಂಬಿಕೊಂಡು ಕುದುರೆ, ಕತ್ತೆ, ಬೈಕ್ ಮೇಲೆ ಸರಳವಾಗಿ ತೆಗೆದುಕೊಂಡು ಹೋಗಬಹುದು. ಒಂದು ಬಾರಿ ತುಂಬಿದ ಇಂಧನದಿಂದ ಪತಿ, ಪತ್ನಿ, ಇಬ್ಬರು ಮಕ್ಕಳ 4 ಜನರಿಗೆ 15 ದಿನ ನಿರಂತರವಾಗಿ ಅಡುಗೆ ಮಾಡಿಕೊಳ್ಳಬಹುದು.
ಕಟ್ಟಿಗೆ ತಾಪತ್ರೆಯಿಲ್ಲ: ನೆಲೆ ನಿಂತ ಪ್ರದೇಶದಲ್ಲಿ ಕುರಿಗಾಹಿಗಳು ಅಡುಗೆ ಮಾಡಿಕೊಳ್ಳಲು ಸೌದೆಗಾಗಿ ಹುಡುಕಾಟ ನಡೆಸುವುದು ದೊಡ್ಡ ತಲೆ ನೋವಾಗಿತ್ತು. ಹೀಗಾಗಿ ಮನೆಯಿಂದಲೇ ಬುತ್ತಿ ತರಿಸಿಕೊಳ್ಳುತ್ತಿದ್ದರು. ಇದಕ್ಕೆ ಬಯೋಗ್ಯಾಸ್ ಪರಿಹಾರ ನೀಡಿದೆ. ನೆಲೆ ನಿಂತ ಪ್ರದೇಶಗಳಲ್ಲಿ ಸುಲಭವಾಗಿ ಅಡುಗೆ ಮಾಡಿಕೊಳ್ಳಬಹುದು.
ಮಳೆ ಬಂದರೂ ತೊಂದರೆಯಿಲ್ಲ: ಮಳೆಗಾಲದಲ್ಲಿ ಇದು ಹೆಚ್ಚು ನಮ್ಮ ನೆರವಿಗೆ ಬರುತ್ತದೆ. ಅಡುಗೆ ಮಾಡಿಕೊಳ್ಳಲು ಕಟ್ಟಿಗೆಗಳು ಹಸಿಯಾಗಿದ್ದರಿಂದ ಸರಿಯಾಗಿ ಒಲೆ ಉರಿಯುವುದಿಲ್ಲ. ಅಂತಹ ಸಂದರ್ಭದಲ್ಲಿ ಬಯೋಗ್ಯಾಸ್ ಅತ್ಯುತ್ತಮ ಸಾಧನವಾಗಿದೆ.
ಟ್ಯೂಬ್ ಸುರಕ್ಷತೆಗೆ ಕ್ರಮ: ಇಂಧನ ತುಂಬಿದ ಟ್ಯೂಬ್ ಸುರಕ್ಷತೆ ಅಗತ್ಯವಾಗಿದೆ. ಒಲೆ ಉರಿಸುವ ಸ್ಟೌವ್ ಪಕ್ಕದಲ್ಲಿ ಇಂಧನ ಟ್ಯೂಬ್ ಇಡುವಂತಿಲ್ಲ. ಕನಿಷ್ಠ 10 ಅಡಿ ದೂರ ಇರಿಸಬೇಕು. ಅಡುಗೆ ಮುಗಿದ ನಂತರ ಮಕ್ಕಳ ಕೈಗೆ ನಿಲುಕದಂತೆ ಎಲ್ಲಾದರೂ ನೇತು ಹಾಕಬೇಕು.
ಜಾತ್ರೆಗಳಲ್ಲಿ ಉಪಯೋಗ: ಇದು ರೈತರನ್ನು ಹೊರತು ಪಡಿಸಿ ಇತರರಿಗೂ ಉಪಯೋಗವಾಗುತ್ತದೆ. ಜಾತ್ರೆಗಳಲ್ಲಿ ರಸ್ತೆ ಬದಿ ಸಣ್ಣ ಪುಟ್ಟ ವ್ಯಾಪಾರ ಮಾಡುವ ಕುಟುಂಬದವರಿಗೆ ಬಯೋಗ್ಯಾಸ್ ನೆರವಾಗುತ್ತಿದೆ. ಸಂಬಂಧಿಕರ ಮನೆಯಿಂದ ಟ್ಯೂಬ್‌ನಲ್ಲಿ ಇಂಧನ ತುಂಬಿಕೊಂಡು ಬಂದರೆ ಅಡುಗೆ ಮಾಡಿಕೊಳ್ಳಲು ತೊಂದರೆಯಿಲ್ಲ. ಸಣ್ಣಪುಟ್ಟ ಸಮಾರಂಭಗಳಲ್ಲಿ ಅಡುಗೆ ಮಾಡಿಕೊಳ್ಳಲು ನೆರವಾಗುತ್ತಿದೆ.
ಅಪಾಯ ಇಲ್ಲ: ಗ್ಯಾಸ್ ಸಿಲಿಂಡರ್ ನಂತೆ(ಎಲ್‌ಪಿಜಿ) ಇದು ಅಪಾಯಕಾರಿ ಯಲ್ಲ. ಇಂಧನ ಸೋರಿಕೆಯಾದರೂ ಯಾವುದೇ ಅಪಾಯವಿಲ್ಲ. ಮನೆಯಿಂದ ಕನಿಷ್ಠ 10 ಅಡಿ ಅಂತರದಲ್ಲಿ ಗ್ಯಾಸ್ ಗುಂಡಿಯಿದ್ದು, ವಾಲ್ಟ್ ಕೂಡ ಅಲ್ಲಿಯೇ ಅಳವಡಿಸಲಾಗಿರುತ್ತದೆ. ಇಂಧನ ಪೈಪ್‌ನ್ನು ನೇರವಾಗಿ ಸ್ಟೌವ್‌ಗೆ ಜೋಡಿಸಲಾಗಿರುತ್ತದೆ. ಗುಂಡಿ ಬಳಿಯೇ ಗ್ಯಾಸ್ ಆರಂಭಿಸುವ ವಾಲ್ಟ್ ಸಂಪರ್ಕ ಕಲ್ಪಿಸಲಾಗಿರುತ್ತದೆ.
ಇಂಧನ ಸಂಗ್ರಹ: ಗಾತ್ರಕ್ಕೆ ಅನುಸಾರವಾಗಿ ಇಂಧನ ತುಂಬಲಾಗುತ್ತದೆ. ಸಾಮಾನ್ಯವಾಗಿ ಟ್ರ್ಯಾಕ್ಟರ್ ಟ್ಯೂಬ್ 150 ಪೌಂಡ್, ಜೆಸಿಬಿ ಟ್ಯೂಬ್ ಕನಿಷ್ಠ 220 ಪೌಂಡ್ ತೂಕದ ಇಂಧನ ತುಂಬಿಕೊಳ್ಳಬಹುದು.
ಇಂಧನ ಉತ್ಪಾದನೆ ಮಾರ್ಗ: ದಿನಕ್ಕೆ ನಿಯಮಿತವಾಗಿ ಎರಡು ಬುಟ್ಟಿ ಸಗಣಿ, ಎರಡು ಕೊಡ ನೀರು ಸೇರಿಸಿ ಗುಂಡಿಗೆ ಹಾಕಿದರೆ ಸಾಕು ಕುಟುಂಬಕ್ಕೆ ಬೇಕಾಗುವಷ್ಟು ಇಂಧನ ಉತ್ಪತ್ತಿಯಾಗುತ್ತದೆ. ಇದರಲ್ಲಿ ಜಾನುವಾರುಗಳ ಗೋ ಮೂತ್ರ ಸೇರಿಸಿದಲ್ಲಿ ಶಕ್ತಿಯುತ ಇಂಧನ ಉತ್ಪತ್ತಿಯಾಗುತ್ತದೆ. ಹಾಕಿದ್ದ ಎರಡು ಬುಟ್ಟಿ ಸೆಗಣಿಯಿಂದ ಮರು ದಿನ 2 ಬುಟ್ಟಿಯಷ್ಟು ಹರ್ಬಲ್ ಯೂರಿಯಾ ಗೊಬ್ಬರ ಹೊರ ಬರುತ್ತದೆ.