ಗಬ್ಬೆದ್ದು ನಾರುತ್ತಿದೆ ಬಸ್ ನಿಲ್ದಾಣ
ಖಾಸಗಿ ವಾಹನ ನಿಯಂತ್ರಣಕ್ಕಿಲ್ಲ ಕ್ರಮ ಸರಿಯಾಗಿಲ್ಲ ಶೌಚಾಲಯ ನಿರ್ವಹಣೆ
Team Udayavani, Nov 23, 2019, 4:10 PM IST
ಸಿದ್ದಯ್ಯ ಪಾಟೀಲ
ಸುರಪುರ: ನಗರದಲ್ಲಿ ಕೋಟೆ ಮಾದರಿಯಲ್ಲಿ ನಿರ್ಮಿಸಲಾದ ಬಸ್ ನಿಲ್ದಾಣ ಅವ್ಯವಸ್ಥೆ ಆಗರವಾಗಿದ್ದು, ಗಬ್ಬೆದ್ದು ನಾರುತ್ತಿದೆ. ಕಳೆದ 2017ರಲ್ಲಿ 1.10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಬಸ್ ನಿಲ್ದಾಣವನ್ನು ತರಾತುರಿಯಲ್ಲಿ ಉದ್ಘಾಟಿಸಲಾಗಿದೆ. ಆದರೆ ಸ್ವಚ್ಛತೆ ಇಲ್ಲ. ಶೌಚಾಲಯಗಳ ನಿರ್ವಹಣೆ ಸರಿಯಾಗಿಲ್ಲ. ಕುಡಿಯುವ ನೀರಿಗೂ ಪರದಾಡುವುದು ತಪ್ಪಿಲ. ಬಿಡಾಡಿ ದನಗಳ ಹಾವಳಿ ಇದೆ. ಇನ್ನೂ ಖಾಸಗಿ ವಾಹನ ಉಪಟಳವೂ ಹೆಚ್ಚಾಗಿದೆ.
ಉದ್ಘಾಟನೆಯಾದ ಮೂರು ವರ್ಷಗಳಲ್ಲಿ ನಿಲ್ದಾಣ ಸಾಕಷ್ಟು ಅವಾಂತರಗಳಿಗೆ ಕಾರಣವಾಗಿದೆ. ಮುಖ್ಯದ್ವಾರದ ಬಳಿ ತೆಗ್ಗುಗಳು ಬಿದ್ದಿವೆ. ಜನರು ಎಚ್ಚರ ತಪ್ಪಿ ಕಾಲಿಟ್ಟರೆ ಗಾಯಮಾಡಿಕೊಳ್ಳುವುದು ಖಚಿತ. ಈಗಾಗಲೇ ಹಲವು ಬಾರಿ ಮಕ್ಕಳು, ವೃದ್ಧರು ಬಿದ್ದು ಗಾಯಗೊಂಡಿರುವ ಘಟನೆಗಳು ನಡೆದಿವೆ.
ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಡಿಯುವ ಶುದ್ಧ ನೀರು ಸಿಗುತ್ತಿಲ್ಲ. ಹಾಗಾಗಿ ಬಾಟಲ್, ಹೋಟೆಲ್‌ಗೆ ಆಶ್ರಯಿಸುವುದು ಅನಿವಾರ್ಯವಾಗಿದೆ. ಸಮರ್ಪಕ ನೀರಿಲ್ಲದ ಕಾರಣ ಶೌಚಾಲಯಗಳು ದುರ್ವಾಸನೆ ಬೀರುತ್ತಿವೆ. ಇದರಿಂದ ಪ್ರಯಾಣಿಕರು ನಿಲ್ದಾಣದಲ್ಲಿ ಕೂಡಲಾಗದೆ ಬಸ್ ಬಳಿಹೋಗಿ ನಿಲ್ಲುತ್ತಾರೆ. ಸಾರಿಗೆ ಸಂಸ್ಥೆ ಶೌಚಾಲಯ ಸ್ವಚ್ಛಗೊಳಿಸುವ ಗೋಜಿಗೆ ಹೋಗುತ್ತಿಲ್ಲ. ಹೀಗಾಗಿ ಪ್ರಯಾಣಿಕರು ನರಕಯಾತನೆ ಅನುಭವಿಸುವಂತಾಗಿದೆ, ಬ್ಲೀಚಿಂಗ್ ಪೌಡರ್, ಪಿನಾಯಲ್ ಸಿಂಪರಣೆ ಮಾಡುತ್ತಿಲ್ಲ. ಹೀಗಾಗಿ ಶೌಚಾಲಯಗಳು ಗಬ್ಬೆದ್ದು ನಾರುತ್ತಿವೆ ಪ್ರಯಾಣಿಕರನ್ನು ಹೊತ್ತು ಸಾಗಿಸುವ ಜೀಪ್,. ಅಟೋ, ಟಂಟಂಗಳು ನಿಲ್ದಾಣದಲ್ಲಿಯೇ ನಿಲ್ಲುತ್ತವೆ.
ಪ್ರಯಾಣಿಕರನ್ನು ಕೂಗಿ ಕರೆದು ತಮ್ಮ ವಾಹನದಲ್ಲಿ ತುಂಬಿಸಿಕೊಳ್ಳುತ್ತಾರೆ. ಹೀಗಾಗಿ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನ ಉಪಟಳ ಹೇಳತೀರದಾಗಿ. ಖಾಸಗಿ ವಾಹನ ಚಾಲಕರಿಗೆ ಎಚ್ಚರಿಕೆ ನೀಡಲು ಹೋದರೆ ಜಗಳ ಗ್ಯಾರಂಟಿ. ನಗರ ಪ್ರವೇಶಕ್ಕೆ ಬೇರೆ ಮಾರ್ಗದಿಂದ ರಸ್ತೆ ಇದೆ.ಅದನ್ನು ಸುತ್ತುವರಿದು ಬರಬೇಕಾಗಿರುವುದನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಬೈಕ್, ಕಾರ್, ಜೀಪ್, ಅಟೋ, ಟಂಟಂ ಸೇರಿದಂತೆ ಪ್ರತಿಯೊಂದು ಖಾಸಗಿ ವಾಹನಗಳು ನಿಲ್ದಾಣದ ಒಳಗಡೆಯಿಂದಲೆ ಹಾದು ಹೋಗುತ್ತಿವೆ. ಇದರಿಂದ ಬಸ್ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಪ್ಲಾಟ್ ಫಾರಂನಿಂದ ಬಸ್ ಹೊರ ತೆಗೆಯಲು ಚಾಲಕರು ಹರಸಾಹಸಪಡಬೇಕು.
ಇಂದರಿಂದ ಕೆಲ ವೇಳೆ ಬಸ್‌ಗಳು ನಿಲ್ದಾಣಕ್ಕೆ ಬರದೆ ಬೈಪಾಸ್ ಮೂಲಕವೇ ಹಾಯ್ದು ಹೋಗುತ್ತವೆ. ನಿಲ್ದಾಣದ ಒಳಗಡೆ ಎಲ್ಲಿ ನೋಡಿದರಲ್ಲಿ ಗೋಡೆಗಳಿಗೆ, ಪ್ರವೇಶ ದ್ವಾರದ ಎರಡು ಬದಿಯಲ್ಲಿ ಗುಟುಕಾ ಉಗುಳಿದ ದೃಶ್ಯ ಅಸಹ್ಯಪಡುವಂತೆ ಕಾಣುತ್ತದೆ. ಬಿಡಾಡಿಗಳ ದನಗಳು ನಿಲ್ದಾಣಕ್ಕೆ ಎಗ್ಗಿಲ್ಲದಂತೆ ಹೋಗುತ್ತವೆ.
ನಿಲ್ದಾಣದ ಒಳಗೆ ಎಲ್ಲೆಂದರಲ್ಲಿ ಅಡ್ಡಲಾಗಿ ನಿಂತು ಬಸ್ ಸಂಚಾರಕ್ಕೆ ತಡೆಯೊಡ್ಡುತ್ತಿವೆ. ರಾತ್ರಿ ವೇಳೆ ನಿಲ್ದಾಣದಲ್ಲಿಯೇ ಮಲಗುತ್ತವೆ. ಸೆಗಣಿ ಮೂತ್ರ ವಿಸರ್ಜನೆ ಮಾಡಿ ನಿಲ್ದಾಣ ಹೊಲಸು ಮಾಡುತ್ತಿವೆ. ಇವುಗಳ ನಿಯಂತ್ರಣಕ್ಕೆ ಯಾರೊಬ್ಬರೂ ಕ್ರಮ ಕೈಗೊಳ್ಳದಿರುವುದು ಇಲ್ಲಿನ ಅಧಿಕಾರಿಗಳ ನಿರ್ಲಕ್ಷಕ್ಕೆ ಹಿಡಿದ ಕೈ ಗನ್ನಡಿಯಾಗಿದೆ. ಬಸ್ ನಿಲ್ದಾಣಕ್ಕೆ ತೆರಳುವ ರಸ್ತೆ ಎರಡು ಬದಿಗಳಲ್ಲಿ ಹಣ್ಣು, ತರಕಾರಿ ಮಾರುವವರ ಸಂಖ್ಯೆ ಹೆಚ್ಚಾಗಿದೆ. ರಸ್ತೆ ಬದಿಗಳಲ್ಲಿ ಹಣ್ಣಿನ ತಳ್ಳು ಬಂಡಿಗಳನ್ನು ನಿಲ್ಲಿಸುವುದರಿಂದ ನಿಲ್ದಾಣಕ್ಕೆ ತರಳುವ ಬಸ್ ಚಾಲಕರು ಹರಸಹಾಸ ಪಡುತ್ತಾರೆ. ವಾಹನ ಸವಾರು ಗೋಳಿಡುತ್ತಾರೆ. ಪ್ರತಿದಿನ ಟ್ರಾಫಿಕ್ ಜಾಮ್ ಆಗಿ ಸಂಚಾರ ಅಸ್ತವ್ಯಸ್ತಗೊಳ್ಳುವುದು ಸಾಮಾನ್ಯ.ಇದನ್ನು ಯಂತ್ರಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.