ಪ್ರಗತಿ ಸಾಧಿಸದವರ ಮೇಲೆ ಸೂಕ್ತ ಕ್ರಮ
•ರೈತರಿಂದ ದಾಖಲೆ ಸಂಗ್ರಹಿಸಲು ಜುಲೈ 17ರವರೆಗೆ ಕಾಲಾವಕಾಶ: ಡಿಸಿ ಕೂರ್ಮಾರಾವ್
Team Udayavani, Jul 10, 2019, 11:00 AM IST
ಸುರಪುರ: ಕಿಸಾನ್ ಸಮ್ಮಾನ್ ಯೋಜನೆ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು.
ಸುರಪುರ: ಕಿಸಾನ್ ಸಮ್ಮಾನ್ ಯೋಜನೆಗೆ ರೈತರಿಂದ ದಾಖಲೆಗಳನ್ನು ಸಂಗ್ರಹಿಸಲು ಜುಲೈ 17ರ ವರೆಗೆ ಕಾಲಾವಕಾಶ ನೀಡಲಾಗಿದೆ. ಈ ಯೋಜನೆಗೆ ನಿಯೋಜನೆಗೊಂಡಿರುವ ಅಧಿಕಾರಿಗಳು ಈ ಅವಕಾಶ ಬಳಸಿಕೊಂಡು ಪ್ರತಿಶತ ಗುರಿ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಸೂಚಿಸಿದರು.
ಕಿಸಾನ್ ಸಮ್ಮಾನ್ ಯೋಜನೆ ಕುರಿತು ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಸಭೆ ನಡೆಸಿ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡಿದ ಅವರು, ಯೋಜನೆಗೆ ಬಹಳಷ್ಟು ಕಾಲವಕಾಶ ನೀಡಿದರೂ ಸಮರ್ಪಕ ಕೆಲಸ ಮಾಡದಿರುವುದು ಬೇಜವಾಬ್ದಾರಿ. ಕೆಲಸದಲ್ಲಿ ನಿರ್ಲಕ್ಷ್ಯ ಸಹಿಸಲಾಗುವುದಿಲ್ಲ. ನೀಡಿರುವ ಅವಕಾಶ ಬಳಸಿಕೊಂಡು ದಾಖಲಾತಿಗಳನ್ನು ಸಂಗ್ರಹಿಸುವ ಕೆಲಸ ಸಂಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ಇಂದಿನಿಂದ ಮೂರು ದಿನಗಳವರೆಗೆ ಟಂಟಂ, ಆಟೋ ಇನ್ನಿತರ ಸೌಕರ್ಯ ಬಳಸಿಕೊಂಡು ಪ್ರತಿ ಗ್ರಾಮಗಳಲ್ಲಿ ಡಂಗುರ ಹಾಕಿಸಬೇಕು. ದಾಖಲಾತಿ ನೀಡದವರ ಪಟ್ಟಿ ಪಡೆದು ಅವರನ್ನು ಸಂಪರ್ಕಿಸಿ ದಾಖಲಾತಿಗಳನ್ನು ಸಂಗ್ರಹಿಸಿಕೊಳ್ಳಬೇಕು ಎಂದರು.
ಗ್ರಾಪಂ ಕಚೇರಿ, ರೇಶನ್ ಅಂಗಡಿ, ದೇವಸ್ಥಾನ, ಸಾರ್ವಜನಿಕ ಸ್ಥಳಗಳಲ್ಲಿ ಕುಳಿತು ಬೆಳಗಿನ 7:00 ಗಂಟೆಯಿಂದ ಸಂಜೆ 5:00 ಗಂಟೆವರೆಗೆ ದಾಖಲಾತಿ ಸಂಗ್ರಹಿಸುವ ಕೆಲಸ ಮಾಡಬೇಕು. ಪ್ರಗತಿ ಸಾಧಿಸದವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಕಂದಾಯ ನಿರೀಕ್ಷಕರು ನಿಮ್ಮ ವ್ಯಾಪ್ತಿಯ ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ, ಕೆಲಸದ ಪ್ರಗತಿ ಬಗ್ಗೆ ನಿಗಾ ವಹಿಸಬೇಕು. ತಹಶೀಲ್ದಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಸಹಾಯಕ ಕೃಷಿ ನಿರ್ದೇಶಕರು ಮೇಲುಸ್ತುವಾರಿ ಮಾಡಬೇಕು. ನಿಧಾನಗತಿಯಲ್ಲಿ ಕೆಲಸ ಮಾಡುವವರನ್ನು ಕರೆದು ತಾಕೀತು ಮಾಡಬೇಕು ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ, ಉಪ ವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ಕೃಷಿ ಜಂಟಿ ನಿರ್ದೇಶಕಿ ದೇವಿಕಾ ಆರ್, ತಹಶೀಲ್ದಾರ್ ಸುರೇಶ ಅಂಕಲಗಿ, ಹುಣಸಗಿ ತಹಶೀಲ್ದಾರ್ ಶ್ರೀಧರ ಮುಂದಲಮನಿ, ಸುರೇಶ ಚವಲಕರ್, ತಾಲೂಕು ಪಂಚಾಯಿತಿ ಇಓ ಜಗದೇವಪ್ಪ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.