ಗುರಿ ತಲುಪದ ಕಿಸಾನ್ ಸಮ್ಮಾನ್ ಯೋಜನೆ
ಜಾಗೃತಿ ಮೂಡಿಸುವಲ್ಲಿ ಅಧಿಕಾರಿಗಳ ಬೇಜವಾಬ್ದಾರಿ
Team Udayavani, Jul 12, 2019, 11:26 AM IST
ಸುರಪುರ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಮಾಹಿತಿ ಸಲ್ಲಿಸಲು ತಹಶೀಲ್ದಾರ್ ಕಚೇರಿಯಲ್ಲಿ ಸೇರಿದ್ದ ರೈತರು.
ಸುರಪುರ: ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು ಕೇಂದ್ರ ಸರಕಾರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಜಾರಿಗೆ ತಂದಿದೆ. ಆದರೆ ತಾಲೂಕಿನಲ್ಲಿ ಯೋಜನೆ ನಿರೀಕ್ಷಿತ ಗುರಿ ತಲುಪದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಭೆ ನಡೆಸಿ ಅಧಿಕಾರಿಗಳಿಗೆ ವಾರದ ಗಡುವು ನೀಡಿದೆ.
ಯೋಜನೆ ಅನುಷ್ಠಾನಕ್ಕೆ ರೈತರಿಂದ ಸಮಗ್ರ ಮಾಹಿತಿ ಸಂಗ್ರಹಿಸಿ ಆನ್‌ಲೈನ್‌ನಲ್ಲಿ ದಾಖಲಿಸುವಂತೆ ಸೂಚಿಸಲಾಗಿತ್ತು. ಕೃಷಿ, ಕಂದಾಯ, ತಾಪಂ, ಪಿಡಿಒ, ಕಾರ್ಯದರ್ಶಿ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಜು. 20ರಿಂದ ಕಾರ್ಯ ಯೋಜನೆ ಆರಂಭವಾಗಿದ್ದು, ಹುಣಸಗಿ-ಸುರಪುರ ಸೇರಿ ಒಟ್ಟು 1,50,910 ರೈತ ಕುಟುಂಬಗಳನ್ನು ಯೋಜನೆಗೆ ಗುರುತಿಸಲಾಗಿದೆ.
ಮಾಹಿತಿ ಸಂಗ್ರಹ: ಇದುವರೆಗೂ 52,396 (ಶೇ. 47) ರೈತರಿಂದ ಮಾತ್ರ ಮಾಹಿತಿ ಸಂಗ್ರಹಿಸಲಾಗಿದೆ. ಇನ್ನೂ 98,514 ರೈತರ (ಶೇ. 53) ಮಾಹಿತಿ ಸಂಗ್ರಹಿಸಬೇಕಾಗಿದೆ. ಸುರಪುರ 22,511, ಹುಣಸಗಿ 15,511 ಸೇರಿ ಕೇವಲ 38,022 ರೈತರ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ಇನ್ನು 14,374 ರೈತರ ಮಾಹಿತಿ ಅಪ್‌ಲೋಡ್ ಮಾಡಬೇಕಿದೆ.
ಅವಧಿ ವಿಸ್ತರಣೆ: ಮಾಹಿತಿ ಸಂಗ್ರಹಿಸಿ ಅಪ್‌ಲೋಡ್ ಮಾಡಲು ಜಿಲ್ಲಾಡಳಿತ ಜು. 10ರ ವರೆಗೆ ಅವಧಿ ನೀಡಿತ್ತು. ಆದರೆ, ನಿರೀಕ್ಷಿತ ಗುರಿ ಸಾಧಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಅವರು ಸಭೆ ನಡೆಸಿ ಜುಲೈ 17ರೊಳಗೆ ಪ್ರತಿಶತ ಗುರಿ ತಲುಪಬೇಕು. ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಶಿಸ್ತು ಕ್ರಮ ಕೊಳ್ಳಲಾಗುವುದು ಎಂದು ಕಟ್ಟಪ್ಪಣೆ ಮಾಡಿದ್ದಾರೆ.
ಯೋಜನೆ ಅನಷ್ಠಾನಕ್ಕೆ 23 ದಿನ ಕಾಲಾವಕಾಶ ನೀಡಿದ್ದರೂ ತಾಲೂಕು ಆಡಳಿತ ಕೇವಲ ಶೇ. 47ರಷ್ಟು ಗುರಿ ಸಾಧನೆ ಮಾಡಿ ಜಿಲ್ಲಾಡಳಿತದ ಕೆಂಗಣ್ಣಿಗೆ ಗುರಿಯಾಗಿತ್ತು. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಚಾಟಿ ಬೀಸಿದ ಜಿಲ್ಲಾಡಳಿತ, ಯುದ್ಧೋಪಾದಿಯಲ್ಲಿ ಕೆಲಸ ಮಾಡಲು ಮತ್ತೆ ಏಳು ದಿನಗಳ ಹೆಚ್ಚಿನ ಕಾಲಾವಧಿ ನೀಡಿದೆ. ದೀರ್ಘಾವಧಿ ಸಮಯ ನೀಡಿದ್ದರೂ ಗುರಿ ಸಾಧಿಸಿದ ತಾಲೂಕು ಆಡಳಿತ ಒಂದು ವಾರದ ಅವಧಿಯಲ್ಲಿ ಪ್ರತಶತ ತಲುಪುವುದೇ ಎಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ. ಸದ್ಯದ ಪರಿಸ್ಥಿತಿ ಅವಲೋಕಿಸಿದರೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಎಷ್ಟೇ ಪ್ರಯತ್ನಪಟ್ಟರೂ ರೈತರನ್ನು ಸಂಪೂರ್ಣವಾಗಿ ಯೋಜನೆಗೆ ಒಳಪಡಿಸುವುದು ಅಸಾಧ್ಯ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಕರ್ತವ್ಯಕ್ಕೆ ನಿಯೋಜನೆಯಾದ ಅಧಿಕಾರಿಗಳು ಆದೇಶವನ್ನು ಅಕ್ಷರಶಃ ಪಾಲಿಸಲೇ ಇಲ್ಲ. ಗ್ರಾಮಗಳಲ್ಲಿ ಡಂಗುರ ಹಾಕಿಸಲಿಲ್ಲ ಗ್ರಾಮಗಳಿಗೆ ತೆರಳಿ ಮಾಹಿತಿ ಸಂಗ್ರಹಿಸಲಿಲ್ಲ. ಹೀಗಾಗಿ ಯೋಜನೆ ವಿಫಲತೆಗೆ ಇದು ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಮಾಹಿತಿ ಕೊರತೆ: ಮಹತ್ವಕಾಂಕ್ಷಿ ಯೋಜನೆ ಕುರಿತು ರೈತರಿಗೆ ಮಾಹಿತಿ ಒದಗಿಸುವಲ್ಲಿ ಜಿಲ್ಲಾ ಮತ್ತು ತಾಲೂಕು ಆಡಳಿತ ವಿಫಲವಾಗಿದೆ. ಈ ಕುರಿತು ಒಂದು ಬಾರಿಯೂ ಜಾಗೃತಿ ಕಾರ್ಯಕ್ರಮ ಆಯೋಜಿಸಲಿಲ್ಲ. ಸರಿಯಾದ ಮಾಹಿತಿ ನೀಡಲಿಲ್ಲ. ಫಸಲ್ ಬಿಮಾ ಯೋಜನೆಯಂತೆ ಇದು ಕೂಡ ಇರಬಹುದು ಎಂದು ಭಾವಿಸದ ರೈತರು ಯೋಜನೆಗೆ ಆಸಕ್ತಿ ತೋರಿಲ್ಲ ಎಂಬು ಹೇಳಲಾಗುತ್ತಿದೆ.
ಜಾಗೃತಿಗೆ ಒತ್ತು: ಯೋಜನೆ ಕುರಿತು ರೈತರಿಗೆ ಮಾಹಿತಿ ತಲುಪಿಸಲು ಪ್ರತಿ ಗ್ರಾಮಗಳಲ್ಲಿ ಡಂಗುರ ಹಾಕಿಸಬೇಕು. ಪ್ರತಿ ಹಳ್ಳಿಗೆ ಹೋಗಿ ಬೆಳಗಿನಿಂದ ಸಂಜೆವರೆಗೆ ಗ್ರಾಮದಲ್ಲಿ ಕುಳಿತು ಪ್ರತಿ ರೈತರಿಂದ ಮಾಹಿತಿ ಸಂಗ್ರಹಿಸಬೇಕು. ಯಾವೊಬ್ಬ ರೈತ ಯೋಜನೆಯಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸಬೇಕು. ಹಗಲು ರಾತ್ರಿ ಶ್ರಮವಹಿಸಿ ಕೆಲಸ ಮಾಡಬೇಕು ಎಂದು ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಸೂಚಿಸಿದೆ.
ಯೋಜನೆ ಲಾಭ ಪಡೆಯಲು ರೈತರು ಆಧಾರ್ ನಂಬರ್, ಬ್ಯಾಂಕ್ ಪಾಸ್‌ಬುಕ್ ಮತ್ತಿತರೆ ದಾಖಲಾತಿ ನೀಡಬೇಕಾಗಿದೆ. ಆದರೆ, ಈ ಬಗ್ಗೆ ಸರಿಯಾದ ಮಾಹಿತಿ ಸಿಗದೆ ರೈತರಲ್ಲಿ ಹಲವು ರೀತಿಯ ಗೊಂದಲಗಳು ಸೃಷ್ಟಿಯಾಗಿವೆ. ಪಹಣಿ ಸರಿಯಿದ್ದರೆ, ಆಧಾರ್ ಸರಿ ಇಲ್ಲ. ಎರಡು ಸರಿಯಿದ್ದರೆ ಬ್ಯಾಂಕ್ ಖಾತೆಗೆ ಹೊಂದಾಣಿಕೆಯಾಗುತ್ತಿಲ್ಲ. ಹೀಗಾಗಿ ಮಾಹಿತಿ ಅಪ್‌ಲೋಡ್ ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎನ್ನುವುದು ಅಧಿಕಾರಿಗಳ ದೂರು.
ಪಹಣಿ ಪತ್ರಿಕೆಯಲ್ಲಿ ಹೆಸರಿರುವ ಪ್ರತಿಯೊಬ್ಬರು ಯೋಜನೆಗೆ ಒಳಪಡುತ್ತಾರೆ. ಹೆಸರಿದ್ದ ವ್ಯಕ್ತಿ ಮೃತಪಟ್ಟಿದ್ದರೆ ಅವರ ಪತ್ನಿ. ಅವರು ಮೃತಪಟ್ಟಲ್ಲಿ ಮಕ್ಕಳ ದಾಖಲೆ ಪಡೆದುಕೊಳ್ಳಲಾಗುತ್ತದೆ. ಈಗಾಗಲೇ ಶೇ.60ರಷ್ಟು ಮಾಹಿತಿ ಸಂಗ್ರಹಿಸಲಾಗಿದೆ. ಉಳಿದ ಮಾಹಿತಿ ಸಂಗ್ರಹ ಕಾರ್ಯ ನಡೆದಿದೆ. ಹಗಲು ರಾತ್ರಿ ಶ್ರಮವಹಿಸಿ ಕೆಲಸ ಮಾಡುತ್ತೇವೆ.
•ಗುರುಬಸಪ್ಪ,
ಕಂದಾಯ ನಿರೀಕ್ಷಕ
ಜಿಲ್ಲಾಧಿಕಾರಿಗಳ ಸೂಚನೆ ಮೇರಿಗೆ ಸಮಾರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಗ್ರಾಮಗಳಲ್ಲಿ ಡಂಗುರು ಹಾಕಿಸಿ ಜಾಗೃತಿ ಮೂಡಿಸಲಾಗಿದೆ. ಕ್ಷಣಕ್ಷಣಕ್ಕೂ ಮಾಹಿತಿ ಪಡೆಯುತ್ತಿದ್ದೇನೆ. ದಾಖಲೆ ನೀಡಲು ರೈತರು ಉತ್ಸಹದಿಂದ ಮುಂದೆ ಬರುತ್ತಿದ್ದಾರೆ. ನಿಗದಿತ ಅವಧಿಯೊಳಗೆ ಗುರಿ ತಲುಪುವ ವಿಶ್ವಾಸವಿದೆ.
•ಸುರೇಶ ಅಂಕಲಗಿ,ತಹಶೀಲ್ದಾರ್
ನಿಯೋಜಿತ ಎಲ್ಲ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡುತ್ತಿದ್ದಾರೆ. ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಕಾರ್ಯ ಭರದಿಂದ ನಡೆಯುತ್ತಿದೆ. ಎನ್‌ಎ, ಸರಕಾರಿ ಭೂಮಿ, ಗೈರಾಣ, ಗಾಂವಠಾಣಾ, ಜನಪ್ರತಿನಿಧಿಗಳು ಸೇರಿದಂತೆ ಯೋಜನೆಯಿಂದ ಹೊರತುಪಡಿಸಲಾದ ಮಾಹಿತಿ ತೆಗೆದುಹಾಕುವ ಕೆಲಸ ನಡೆದಿದೆ. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಪ್ರತಿಶತ ಗುರಿ ಸಾಧಿಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ.
•ಮಹಾದೇವಪ್ಪ, ಸಹಾಯಕ ಕೃಷಿ ನಿರ್ದೇಶಕರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.