ಲಕ್ಷ್ಮೀಪುರ ಗ್ರಂಥಾಲಯಕ್ಕಿಲ್ಲ ಸ್ವಂತ ಕಟ್ಟಡ
ನಿರ್ವಹಣೆ ಕೊರತೆಕಿರಿದಾದ ಕೋಣೆಯಲ್ಲಿ ಓದು ಅಸಾಧ್ಯದಿನಪತ್ರಿಕೆ ಓದಲು ಬಯಲೇ ಆಸರೆ
Team Udayavani, Oct 30, 2019, 1:22 PM IST
ಸುರಪುರ: ಸರಕಾರದ ನಿರ್ಲಕ್ಷé ಹಾಗೂ ಅಧಿಕಾರಿಗಳ ಬೇಜವಾಬ್ದಾರಿ, ನಿರ್ವಹಣೆ ಕೊರತೆಯಿಂದ ಲಕ್ಷ್ಮೀಪುರ-ಕೃಷ್ಣಾಪುರ ಗ್ರಂಥಾಲಯಗಳು ಸೌಲಭ್ಯದಿಂದ ವಂಚಿತವಾಗಿವೆ. ಲಕ್ಷ್ಮೀಪುರ ಗ್ರಾಮದಲ್ಲಿ ಸಾಕಷ್ಟು ವಿದ್ಯಾವಂತ ಓದುಗರಿದ್ದಾರೆ. ಗ್ರಾಮದ ಯುವ ಸಮುದಾಯಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸರ್ಕಾರ 1996-97ರಲ್ಲಿ ಗ್ರಂಥಾಲಯ ಮಂಜೂರು ಮಾಡಿತ್ತು.
ನಂತರ ಗ್ರಂಥಾಲಯ ಸಹಾಯಕರುಹಾಗೂ ಕಟ್ಟಡ ಸೇರಿದಂತೆ ಮೂಲ ಸೌಕರ್ಯ ಒದಗಿಸುವುದನ್ನೇ ಮರೆತು ಬಿಟ್ಟಿತು. ಆರಂಭದಿಂದಲೂ ಗ್ರಂಥಾಲಯ ಸಹಾಯಕರಿಲ್ಲದೆ ಗ್ರಾಪಂ ಸಿಬ್ಬಂದಿಗಳೇ ನಿರ್ವಹಿಸುತ್ತಿದ್ದರು. ಓದುಗರ ಮನವಿ ಮೇರೆಗೆ 2006-07ರಲ್ಲಿ ಗ್ರಂಥಾಲಯ ಸಹಾಯಕರನ್ನು ನೇಮಿಸಲಾಯಿತು.
ಸ್ವಂತ ಕಟ್ಟಡವಿಲ್ಲ: ಗ್ರಂಥಾಲಯಕ್ಕೆ ಸ್ವಂತ ಕಟ್ಟಡವಿಲ್ಲ. ಗ್ರಾಪಂಗೆ ಒಳಪಡುವ ಹಳೆ ಕೊಠಡಿಯಲ್ಲಿ ಗ್ರಂಥಾಲಯ ನಿರ್ವಹಿಸಿಕೊಂಡು ಬರಲಾಗುತ್ತಿದೆ. ಕೊಠಡಿ ನಿರ್ಮಾಣ ಆದಾಗಿನಿಂದಲೂ ಇಲ್ಲವರೆಗೆ ಸುಣ್ಣ ಬಣ್ಣ ಕೂಡ ಕಂಡಿಲ್ಲ. ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ದುರಸ್ತಿ ಮಾಡಿಸಬೇಕಾದ ಅನಿವಾರ್ಯತೆ ಇದೆ.
ನೆಲವೇ ಪುಸ್ತಕದ ಅಲಮಾರಿ:ಗ್ರಂಥಾಲಯದಲ್ಲಿ ಸಾಕಷ್ಟು ಪುಸ್ತಕಗಳಿವೆ. ಕೊಠಡಿ ಚಿಕ್ಕದಾಗಿದ್ದು, ಪುಸ್ತಕಗಳನ್ನು ಸಾಲಾಗಿ ಹೊಂದಿಸಿಡಲು ರ್ಯಾಕ್‌ಗಳಿಲ್ಲ. ಹೀಗಾಗಿ ಪುಸ್ತಕಗಳನ್ನು ನೆಲೆದ ಮೇಲೆ ಇಡಲಾಗಿದೆ. ಮಳೆ ಬಂದರೆ ಪುಸ್ತಕ ನೆನೆದು ಹೋಗುವ ಸಾಧ್ಯತೆಯಿದೆ. ಗ್ರಂಥಾಲಯ ಸಹಾಯಕರು ಪುಸ್ತಕಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಸದ್ಯಕ್ಕೆ ಸಂರಕ್ಷಿಸಿಟ್ಟಿದ್ದಾರೆ.
ಬಯಲಲ್ಲೇ ಓದು: ಪ್ರಸಕ್ತ ಇರುವ ಗ್ರಂಥಾಲಯ ಏಕೈಕ ಕೊಠಡಿ ಹೊಂದಿದ್ದು, ಕಿರಿದಾಗಿದೆ. ಕುಳಿತು ಓದಲು ಸ್ಥಳ ಇಲ್ಲ. ಇರುವ ಒಂದಿಷ್ಟು ಜಾಗದಲ್ಲಿ ಗ್ರಂಥಾಲಯ ಸಹಾಯಕರು ಕೂರಲು ಕುರ್ಚಿ, ಟೇಬಲ್ ಹಾಕಲಾಗಿದೆ. ಹೀಗಾಗಿ ಓದುಗರು ಕುಳಿತು ಓದಲು ಸ್ಥಳವೇ ಇಲ್ಲ. ದಿನಪತ್ರಿಕೆಗಳನ್ನು ಓದುವವರು ಬಯಲನ್ನೇ ಆಶ್ರಯಿಸಬೇಕಿದೆ.
ಸುತ್ತಮುತ್ತ ಬೆಳೆದ ಜಾಲಿಕಂಟಿ: ಗ್ರಂಥಾಲಯ ಸುತ್ತಮುತ್ತ ಜಾಲಿಗಿಡ ಹಾಗೂ ಇತರೆ ಮುಳ್ಳುಕಂಟಿಗಳು ಆವರಿಸಿವೆ. ರಸ್ತೆಯಿಂದ ನಿಂತು ನೋಡಿದರೆ ಜಾಲಿಗಿಡ-ಮುಳ್ಳು ಕಂಟಿಗಳು ಕಾಣಿಸುತ್ತಿವೆ ಹೊರತು ಗ್ರಂಥಾಲಯ ಕಾಣಿಸಲ್ಲ. ಹೊಸದಾಗಿ ಬರುವ ಓದುಗರು ಗ್ರಂಥಾಲಯ ಎಲ್ಲಿದೆ ಎಂದು ಹುಡುಕಾಡುವಂತಹ ಸ್ಥಿತಿ ಇದೆ.
ಸೋರುತ್ತಿದೆ ಮಾಳಿಗೆ: ಕಟ್ಟಡ ತುಂಬ ಹಳೆದಾಗಿರುವುದರಿಂದ ದುರಸ್ತಿ ಕಾರ್ಯ ನಡೆದಿಲ್ಲ. ಕಟ್ಟಡದ ಆಯಸ್ಸು ಮುಗಿದಿರುವುದರಿಂದ ಛಾವಣಿ ಸಿಮೆಂಟ್ ಬೀಳುತ್ತಿದೆ. ಕಬ್ಬಿಣದ ರಾಡ್ ಗೋಚರಿಸುತ್ತಿವೆ. ಮಳೆ ಬಂದರೆ ಛಾವಣಿ ಸೋರುತ್ತಿದ್ದು, ಪುಸ್ತಕಗಳು ನೆನೆದು ಹೋಗುತ್ತಿವೆ.
3 ಸಾವಿರಕ್ಕೂ ಹೆಚ್ಚು ಪುಸ್ತಕ: 2500 ಸದಸ್ಯರಿದ್ದು, 3000ಕ್ಕೂ ಮೇಲ್ಪಟ್ಟು ಪುಸ್ತಕಗಳಿವೆ. ವಿವಿಧ ಪತ್ರಿಕೆಗಳನ್ನು ತರಿಸಲಾಗುತ್ತಿದೆ. ದಿನಕ್ಕೆ 10ರಿಂದ 15 ಜನ ಮಾತ್ರ ಪುಸ್ತಕ ಎರವಲು ತೆಗೆದುಕೊಂಡು ಹೋಗುತ್ತಾರೆ. ತಿಂಗಳಿಗೆ 400 ರೂ.ಗಳನ್ನು ಪತ್ರಿಕೆ ಅನುದಾನ ನೀಡುತ್ತಾರೆ. ಹೆಚ್ಚಿನ ಪತ್ರಿಕೆಗಳನ್ನು ತರಿಸಲು ಆಗುತ್ತಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.