ಶ್ರೀ ಸಿದ್ದರಾಮೇಶ್ವರ ಜಯಂತ್ಯುತ್ಸವಕ್ಕೆ ಸರ್ವ ಸಿದ್ಧತೆ
ಜಯಂತ್ಯುತ್ಸವ ಪ್ರಚಾರ ಸಮಿತಿ ಅಧ್ಯಕ್ಷ ಎನ್.ರಾಜು ಮಾಹಿತಿ
Team Udayavani, Dec 14, 2019, 5:04 PM IST
ತರೀಕೆರೆ: ಜನವರಿ 14 ಮತ್ತು 15 ರಂದು ಅಜ್ಜಂಪುರ ತಾಲೂಕಿನ ಸೊಲ್ಲಾಪುರದ ಶ್ರೀ ಸಿದ್ದರಾಮೇಶ್ವರ ದೇವಾಲಯದ ಆವರಣದಲ್ಲಿ 847ನೇ ಶ್ರೀ ಸಿದ್ದರಾಮೇಶ್ವರರ ಜಯಂತ್ಯುತ್ಸವವನ್ನು ಆಚರಿಸಲು ಸರ್ವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಪ್ರಚಾರ ಸಮಿತಿ ಅಧ್ಯಕ್ಷ ಎನ್.ರಾಜು ಹೇಳಿದರು.
ಶ್ರೀ ಸಿದ್ದರಾಮೇಶ್ವರ ಜಯಂತಿಯ ಪೋಸ್ಟರ್ ಮತ್ತು ಫ್ಲೆಕ್ಸ್‌ಗಳನ್ನು ಅನಾವರಣಗೊಳಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
12ನೇ ಶತಮಾನದ ಕಾಯಕ ಯೋಗಿ ಶ್ರೀ ಸಿದ್ದರಾಮೇಶ್ವರರು ನೆಲೆಸಿದ್ದ ಕ್ಷೇತ್ರದಲ್ಲಿ ಅವರ ಜಯಂತಿ ಉತ್ಸವ ನಡೆಯುತ್ತಿರುವುದು ಜಿಲ್ಲೆಯಲ್ಲಿಯೇ ವಿಶೇಷ ಕಾರ್ಯಕ್ರಮವಾಗಲಿದೆ ಎಂದರು.
ಸೊಲ್ಲಾಪುರ ಒಂದು ಸಣ್ಣ ಹಳ್ಳಿ. ಸೊನ್ನಲಿಗೆಯ ಸಿದ್ದರಾಮರು ಇಲ್ಲಿ ನೆಲೆಸಿ ಹಲವಾರು ಪವಾಡಗಳನ್ನು ಮಾಡಿದ್ದಾರೆ. ಶ್ರೀ ಸಿದ್ದರಾಮೇಶ್ವರರಿಗೆ ಎಲ್ಲಾ ವರ್ಗದ ಜನರು ನಡೆದುಕೊಳ್ಳುತ್ತಾರೆ. 12 ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿ ಎಲ್ಲಾ ಸಮಾಜದವರಿಗೆ ಒಂದೊಂದು ಹೊಣೆ ನೀಡಲಾಗುತ್ತದೆ. ಅವುಗಳನ್ನು ಅತ್ಯಂತ ನಿಷ್ಠೆಯಿಂದ ನಿರ್ವಹಿಸುವುದು ವಿಶೇಷ ಎಂದರು.
ಶ್ರೀ ಸಿದ್ದರಾಮೇಶ್ವರರು ಯಾವುದೇ ತಾಂತ್ರಿಕತೆ ಇಲ್ಲದ ಕಾಲದಲ್ಲಿ ಕುಡಿಯುವ ನೀರು, ನೀರಾವರಿಗಾಗಿ ಕೆರೆಕಟ್ಟೆ, ಬಾವಿ ಮತ್ತು ಕಾಲುವೆಗಳನ್ನು ನಿರ್ಮಿಸಿ ರೈತರ ಉದ್ಧಾರ ಮಾಡಿ, ಭೂಮಿಯಲ್ಲಿ ಅಂತರ್ಜಲ ರಕ್ಷಣೆ ಮಾಡಿದ್ದರು. ಅಲ್ಲದೆ ನೀರಿನ ಜಾಗೃತಿಯನ್ನು ಜನರಲ್ಲಿ ಮೂಡಿಸಿದ್ದರು ಹಾಗೂ ಜಲಕ್ರಾಂತಿಯನ್ನು ಮಾಡಿದ ಪವಾಡ ಪುರಷ ಶ್ರೀ ಸಿದ್ದರಾಮರು ಎಂದರು.
ಸಂಕ್ರಾತಿಯಂದು ನಡೆಯಲಿರುವ ಜಯಂತ್ಯುತ್ಸವಕ್ಕೆ 8 ಲಕ್ಷಕ್ಕೂ ಹೆಚ್ಚು ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಸಮಾವೇಶಕ್ಕೆ ಬಂದು ಹೋಗುವ ಭಕ್ತರಿಗೆ ಗಣ್ಯರಿಗೆ ಹಾಗೂ ಗ್ರಾಮಸ್ಥರಿಗೆ ಸಕಲ ಸೌಕರ್ಯಗಳನ್ನು ಮಾಡಲಾಗಿದೆ. ಸಾರಿಗೆ, ವಸತಿ, ದಾಸೋಹ, ಕುಡಿಯುವ ನೀರು ಎಲ್ಲವೂ ಅಚ್ಚುಕಟ್ಟಾಗಿ ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ 3 ಲಕ್ಷ ಜನರು ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದೆ. ಇದರ ಪೂರ್ಣ ಜವಾಬ್ದಾರಿಯನ್ನು ಶಾಸಕ ಡಿ.ಎಸ್.ಸುರೇಶ್ ಹೊತ್ತುಕೊಂಡಿದ್ದಾರೆ. ಭಕ್ತಾದಿಗಳಿಗೆ ಊಟದ ವ್ಯವಸ್ಥೆಯನ್ನು ಶಾಸಕ ಬೆಳ್ಳಿಪ್ರಕಾಶ್ ನಿರ್ವಹಿಸುತ್ತಾರೆ. ಕಾರ್ಯಕ್ರಮದ ಉಸ್ತುವಾರಿಯನ್ನು ಸ್ವಾಗತ ಸಮಿತಿ ಅಧ್ಯಕ್ಷ ಬಿ.ರಾಜಪ್ಪ ನೋಡಿಕೊಳ್ಳಲಿದ್ದಾರೆ ಎಂದರು.
ಕನ್ನಡ- ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ 1 ಕೋಟಿ ರೂ. ವೆಚ್ಚದ ಯಾತ್ರಿ ನಿವಾಸ್ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದು, ಜನವರಿ 14ರಂದು ಕಟ್ಟಡ ಕಾಮಗಾರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಶಂಕುಸ್ಥಾಪನೆ ಮಾಡಲಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಸರಕಾರ 50 ಲಕ್ಷ ರೂ. ನೀಡಿದ್ದು, ಅಭಿವೃದ್ಧಿ
ಕಾರ್ಯಗಳು ನಡೆಯುತ್ತಿದೆ. ಸಿದ್ದರಾಮರಿಂದ ನಿರ್ಮಾಣಗೊಂಡಿದ್ದ ಕಲ್ಯಾಣಿಗೆ ಹೊಸ ರೂಪ ನೀಡಲಾಗುತ್ತಿದೆ ಎಂದರು.
ಜಯಂತ್ಯುತ್ಸವ ಸಮಿತಿಯನ್ನು ಜಾತ್ಯತೀತವಾಗಿ ಮಾಡಲಾಗಿದೆ. ಎಲ್ಲಾ ವರ್ಗದ ಮುಖಂಡರು ಸಮಿತಿಯಲ್ಲಿದ್ದು, ಅವರಿಗೆ ವಿಶೇಷ ಹೊಣೆಗಾರಿಕೆ ನೀಡಲಾಗಿದೆ. ಸಮಾವೇಶದಲ್ಲಿ ರೈತ, ಮಹಿಳೆಯರ ಮತ್ತು ಯುವಜನರ ಸಮಸ್ಯೆಗಳ ಬಗ್ಗೆ ವಿಚಾರ ಸಂಕಿರಣಗಳು ನಡೆಯಲಿವೆ. ಎಲ್ಲಾ ವರ್ಗದ ಮಠಾಧೀಶರು ಭಾಗವಹಿಸಲಿದ್ದಾರೆ. ಯಳನಾಡು ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಚ್.ಚಂದ್ರಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಎಲ್.ರಮೇಶ್, ಪುರಸಭಾ ಮಾಜಿ ಸದಸ್ಯ ಈರಣ್ಣ, ಸಮಿತಿ ಸದಸ್ಯ ಶಿವಣ್ಣ, ಲೋಹಿತ್ ಕೋಟಿ ಮತ್ತು ಹಾಲವಜ್ರಪ್ಪ ಇತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.