ಮಳೆ ನಿರೀಕ್ಷೆಯಲ್ಲಿ ಬಿತ್ತನೆ ಶುರು
ವರುಣ ದೇವನ ನಂಬಿ ಕೃಷಿ ಕಾರ್ಯಕ್ಕೆ ಮುಂದಾದ ಅನ್ನದಾತ
Team Udayavani, Jun 20, 2019, 10:45 AM IST
ತರೀಕೆರೆ: ಮಳೆ ನಿರೀಕ್ಷೆಯಲ್ಲಿ ಆಲೂಗಡ್ಡೆ ಬಿತ್ತನೆ ಕಾರ್ಯದಲ್ಲಿ ತೊಡಗಿರುವ ತರೀಕೆರೆ ತಾಲೂಕಿನ ಕೃಷ್ಣಾಪುರ ಗ್ರಾಮದ ರೈತರು.
ಶೇಖರ್ ವಿ.ಗೌಡ
ತರೀಕೆರೆ: ಕಳೆದ ವರ್ಷದ ಮುಂಗಾರು ಹಂಗಾಮಿನಲ್ಲಿ ಲಿಂಗದಹಳ್ಳಿ ಹೋಬಳಿಯಲ್ಲಿ ಉತ್ತಮ ಮಳೆಯಾಗಿದ್ದರಿಂದ ಆಲೂಗಡ್ಡೆ ಇನ್ನಿತರ ಬೆಳೆಗಳ ಬಿತ್ತನೆ ಕಾರ್ಯ ನಡೆದಿತ್ತು. ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ವಾಡಿಕೆ ಮಳೆ ಬಾರದ ಕಾರಣ ಬಿತ್ತನೆ ಕುಂಠಿತವಾಗಿದ್ದು, ಮಳೆ ನಿರೀಕ್ಷೆಯಲ್ಲಿರುವ ರೈತರು ಬಿತ್ತನೆ ಕಾರ್ಯ ಆರಂಭಿಸಿದ್ದಾರೆ.
ಮುಂಗಾರು ಬೆಳೆಯಾಗಿ ಆಲೂಗಡ್ಡೆ ಬೆಳೆಯನ್ನು ಹೆಚ್ಚಾಗಿ ಬೆಳೆಯುವ ರೈತರು ಮೇ ತಿಂಗಳ ಮಧ್ಯಭಾಗದಿಂದ ಜೂನ್ ತಿಂಗಳ ಮಧ್ಯಂತರದ ವರೆಗೆ ಬಿತ್ತನೆ ಕಾರ್ಯ ಕೈಗೊಳ್ಳುತ್ತಾರೆ. ಸರಿಯಾಗಿ ಮಳೆ ಬಾರದ ಕಾರಣ ಆಲೂಗಡ್ಡೆ ಬಿತ್ತನೆ ಬೀಜ ಖರೀದಿಸಿ ದಾಸ್ತಾನು ಮಾಡಿಕೊಂಡಿದ್ದಾರೆ. ಜೊತೆಗೆ ಭೂಮಿಯನ್ನು ಹದ ಮಾಡಿಕೊಂಡಿದ್ದಾರೆ.
ಆಲೂಗಡ್ಡೆ ಬೀಜ ದಾಸ್ತಾನು: ರೈತರು ತರಕಾರಿಗಾಗಿ ನಾಟಿ ಆಲೂಗಡ್ಡೆ ಬೀಜ ಬಿತ್ತನೇ ಮಾಡಿದರೆ. ಮತ್ತೆ ಕೆಲ ರೈತರು ಚಿಪ್ಸ್ ತಯಾರಿಕೆಗಾಗಿ ಬಳಸುವ ಪೆಪ್ಸಿ ಹಾಗೂ ಐಟಿಸಿ ಮತ್ತು ನೀಲಿ ಹೂವಿನ ಆಲೂಗಡ್ಡೆ ಬೀಜಗಳನ್ನು ಬಿತ್ತನೆ ಮಾಡುವ ಸಲುವಾಗಿ ಬೀಜಗಳನ್ನು ದಾಸ್ತಾನು ಮಾಡಿಕೊಂಡಿದ್ದಾರೆ. ತರಕಾರಿಗಾಗಿ ಬೆಳೆಯುವ ನಾಟಿ ಆಲೂಗಡ್ಡೆ ಬಿತ್ತನೆ ಬೀಜ ಪ್ರತಿ ಕ್ವಿಂಟಲ್ಗೆ 1,500 ರಿಂದ 1,700ರೂ. ಬೆಲೆ ಇದ್ದು, ಐಟಿಸಿ ಪೆಪ್ಸಿ ಮತ್ತು ನೀಲಿ ಹೂವಿನ ಆಲೂಗಡ್ಡೆ ಬೀಜದ ದರ 3,500 ರಿಂದ 3,700 ರೂ. ವರೆಗೆ ಇದೆ.
ಬಿತ್ತನೆ ಬೀಜದ ದರ ಹೆಚ್ಚಳ: ಒಂದು ಎಕರೆ ವಿಸ್ತೀರ್ಣದಲ್ಲಿ ಆಲೂಗಡ್ಡೆ ಬೆಳೆಯಲು ಬಿತ್ತನೆ ಬೀಜ ಸುಮಾರು 6ಕ್ವಿಂಟಲ್ ಬೇಕಾಗುತ್ತದೆ. ತರಕಾರಿಗಾಗಿ ಬಳಸುವ ಆಲೂಗಡ್ಡೆ 6ಕ್ವಿಂಟಲ್ ಬಿತ್ತನೇ ಬೀಜಕ್ಕೆ 10ರಿಂದ 11ಸಾವಿರ ರೂ. ವೆಚ್ಚ ತಗುಲುತ್ತದೆ. ಚಿಪ್ಸ್ ಕಂಪನಿಗಳ ಆಲೂಗಡ್ಡೆ ಬಿತ್ತನೆ ಬೀಜಕ್ಕೆ 16 ಸಾವಿರದಿಂದ 18 ಸಾವಿರ ರೂ. ಬೇಕಾಗುತ್ತದೆ.
ಒಂದು ಕ್ವಿಂಟಲ್ ಆಲೂಗಡ್ಡ ಬಿತ್ತನೇ ಬೀಜ ನಾಟಿ ಮಾಡುವ ಸಂದರ್ಭದಲ್ಲಿ ಕ್ವಿಂಟಲ್ ರಸಗೊಬ್ಬರವನ್ನು ತಳ ಗೊಬ್ಬರವಾಗಿ ನೀಡಬೇಕಾಗಿದೆ. 6 ಕ್ವಿಂಟಲ್ ರಸಗೊಬ್ಬರಕ್ಕೆ 7-8 ಸಾವಿರ ರೂ. ದರ ಇದೆ. ಭೂಮಿ ಹದ ಮಾಡುವುದು, ಬೀಜೋಪಚಾರ, ಕೊಟ್ಟಿಗೆ ಗೊಬ್ಬರ, ಕೆಲಸಗಾರರ ಸಂಬಳ ಸೇರಿ ಒಂದು ಎಕರೆ ಆಲೂಗಡ್ಡೆ ಬಿತ್ತನೆಗೆ ತರಕಾರಿಗಾಗಿ ಬಳಸುವ ನಾಟಿ ಆಲೂಗಡ್ಡೆಗೆ 33ರಿಂದ 35 ಸಾವಿರ ರೂ.ನಷ್ಟು ಖರ್ಚು ತಗುಲಿದರೆ, ಚಿಪ್ಸ್‌ಗಾಗಿ ಬೆಳೆಯುವ ಆಲೂಗಡ್ಡೆ ಎಕರೆಗೆ 42 ರಿಂದ 45 ಸಾವಿರ ರೂ. ಆಗುತ್ತದೆ.
ಬಿತ್ತನೆ ಸಂದರ್ಭದಿಂದ ಆಲೂಗಡ್ಡೆ ತೆಗೆಯುವವರೆಗೆ 50-60 ಸಾವಿರ ರೂ.ನಷ್ಟು ಹಣವನ್ನು ರೈತರು ವೆಚ್ಚ ಮಾಡಬೇಕಾಗಿದೆ. ಆಲೂಗಡ್ಡೆ ಬೆಳೆ ತೆಗೆದ ಸಂದರ್ಭದಲ್ಲಿ ಕ್ವಿಂಟಲ್ಗೆ 1,500 ರೂ. ಧಾರಣೆ ಸಿಕ್ಕು, ಉತ್ತಮ ಬೆಳೆಯಾಗಿ, 75ರಿಂದ 80ಕ್ವಿಂಟಲ್ ನಷ್ಟು ಆಲೂಗಡ್ಡೆ ಫಸಲು ಬಂದರೆ ಮಾತ್ರ ರೈತರಿಗೆ ಸ್ವಲ್ಪ ಮಟ್ಟಿಗಿನ ಆದಾಯ ಬರದಲಿದೆ.
ಮಳೆ ಬಾರದೇ ಅಥವಾ ಅತೀ ಹೆಚ್ಚು ಮಳೆ ಬಂದರೆ ಬೆಳೆಗೆ ಕೀಟ ರೋಗ ಬಾಧೆ ಉಂಟಾಗಿ, ಬೆಳೆ ನಾಶವಾದರೆ ರೈತರು ಹಾಕಿದ ಬಂಡವಾಳ ಬಾರದಂತಾಗಲಿದೆ. ಆಗ ಸರ್ಕಾರ ಬೆಂಬಲ ಬೆಲೆ ನೀಡಿ ಆಲೂಗಡ್ಡೆ ಖರೀದಿಸಬೇಕಾಗುತ್ತದೆ.