ಭಾವೈಕ್ಯಕ್ಕೆ ಸಾಕ್ಷಿಯಾದ ಹಿರೂರ
ಹಿಂದೂ-ಮುಸ್ಲಿಮರಿಂದ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ
Team Udayavani, Sep 4, 2019, 11:46 AM IST
ತಾಳಿಕೋಟೆ: ಹಿರೂರ ಗ್ರಾಮದ ಸೋಮನಾಥೇಶ್ವರ ದೇವಸ್ಥಾನ ಕಟ್ಟೆ ಮೇಲೆ ಪ್ರತಿಷ್ಠಾಪಿಸಿದ ಗಣಪತಿ ಮೂರ್ತಿಗೆ ಹಿಂದೂ ಹಾಗೂ ಮುಸ್ಲಿಂ ಮುಖಂಡರು ಆರತಿ ಬೆಳಗಿದರು.
ಜಿ.ಟಿ. ಘೋರ್ಪಡೆ
ತಾಳಿಕೋಟೆ: ತಾಳಿಕೋಟೆ ತಾಲೂಕಿನ ಹಿರೂರು ಗ್ರಾಮದಲ್ಲಿ ಹಿಂದೂಗಳ ಜೊತೆಗೂಡಿ ಮುಸ್ಲಿಮರು ವಿಘ್ನೇಶ್ವರನಿಗೆ ಮುಂಚೂಣಿಯಲ್ಲಿ ನಿಂತು ಪೂಜೆ ಸಲ್ಲಿಸುವುದರೊಂದಿಗೆ ಜಾತಿ ಹಾಗೂ ಧರ್ಮದ ವಿಷ ಬೀಜ ಕಿತ್ತೂಗೆಯಲು ಮುಂದಾಗಿದ್ದಾರೆ. ಮುಸ್ಲಿಂ ಸಮಾಜದ ಹಿರಿಯರೇ ಕರ್ಪೂರ, ಕಾಯಿ ಹಿಡಿದು, ಅಗರಬತ್ತಿ ಹಚ್ಚಿ ಗಣಪತಿ ಮೂರ್ತಿಗೆ ಆರತಿ ಬೆಳಗಿ ಕೋಮು ಸಾಮರಸ್ಯದ ಮೂಲಕ ಭಾವೈಕ್ಯ ಸಾಕ್ಷೀಕರಿಸಿದ್ದಾರೆ.
ಕಳೆದ 17 ವರ್ಷದಿಂದ ಗ್ರಾಮದ ಸೋಮನಾಥೇಶ್ವರ ದೇವಸ್ಥಾನ ಕಟ್ಟೆ ಮೇಲೆ ಗಣಪತಿ ಮೂರ್ತಿಯನ್ನು ತಂದು ಹಿಂದೂ-ಮುಸ್ಲಿಮರು ಒಗ್ಗೂಡಿ ಪ್ರತಿಷ್ಠಾಪಿಸುತ್ತಿದ್ದಾರೆ. ಗ್ರಾಮದಲ್ಲಿ ಸುಮಾರು 20 ಮುಸ್ಲಿಮರ ಮನೆಗಳು ಇದ್ದು ಒಂಬತ್ತು ದಿನ ಗಣಪತಿ ಪ್ರತಿಷ್ಠಾಪಿಸಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತಾರೆ.
ಹಿರೂರ ಗ್ರಾಮದ ಮುಸ್ಲಿಂ ಸಮಾಜದ ಪ್ರಮುಖರಾದ ಕಾಸಿಂಸಾಬ ಮನಿಯಾರ, ಹಾಜಿಸಾಬ ಬಳವಾಟ,ಇಬ್ರಾಹಿಂಸಾಬ ಬಳವಾಟ, ಲಾಲ್ಸಾಬ ಪಠಾಣ, ಇಬ್ರಾಹಿಂಸಾಬ ಬಳವಾಟ, ತೌಸಿಫ್ ಇಂಡಿಕರ್, ಖಾಜೇಸಾಬ ಮಕಾನದಾರ, ಖಾಜೇಸಾ ನದಾಫ್, ಇಸ್ಮಾಯಿಲ್ ತಾಳಿಕೋಟಿ, ಹಿಂದೂ ಸಮಾಜದ ಪ್ರಮುಖರಾದ ರಾಮನಗೌಡ ಚೌಧರಿ, ನಿಂಗಣ್ಣ ಬ್ಯಾಕೋಡ, ಮಹೇಶ ಪೂಜಾರಿ, ಚಿದಾನಂದ ಪೂಜಾರಿ, ನಾಗಣ್ಣ ಭಂಗಿ, ಶರಣಗೌಡ ಭಂಗಿ, ರಾಜು ಹಡಪದ, ಶಿವಾನಂದ ಧನ್ನೂರ, ರೇವಣಸಿದ್ದ ಚಲವಾದಿ, ಮಹೇಶ ಪೂಜಾರಿ ಗಣೇಶೋತ್ಸವ ನೇತೃತ್ವ ವಹಿಸಿಕೊಂಡಿದ್ದಾರೆ.
ಸೋಮನಾಥೇಶ್ವರ ದೇವರ ಮೂರ್ತಿ ಎದುರು ಚಿಕ್ಕ ಗೋರಿ (ಮಜಾರ) ಇದೆ. ಇಲ್ಲಿ ಹಿಂದೂ ಸಮಾಜದ ವ್ಯಕ್ತಿ ಪೂಜಾರಿಕೆ ಮಾಡುತ್ತಾರೆ. ಮುಸ್ಲಿಮರು ಈ ದೇವರಿಗೆ ಕಾಯಿ ಕರ್ಪೂರ ಅರ್ಪಿಸುವುದು ವಿಶೇಷ. ಇದೀಗ ಇದೇ ದೇವಸ್ಥಾನ ಮುಂದೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.
ಗಣಪತಿ ಉತ್ಸವವನ್ನು ಎರಡೂ ಧರ್ಮೀಯರು ಸೇರಿಯೇ ನಡೆಸುತ್ತಿದ್ದೇವೆ. ನಮ್ಮೂರಿನ ಗಣೇಶೋತ್ಸವ ಆಚರಣೆ ಕಂಡು ಈ ಹಿಂದೆ ತಾಳಿಕೋಟೆ ಪಿಎಸೈ ಬ್ರಿಜೇಶ ಮ್ಯಾಥ್ಯೂ ಎಂಬುವರು ಗಜಾನನ ವಿಸರ್ಜನೆ ಸಮಯದಲ್ಲಿ ಭದ್ರತೆ ನೀಡಲು ಬಂದಾಗ ಮೆರವಣಿಗೆಯಲ್ಲಿ ಮುಸ್ಲಿಮರೇ ಇರುವುದನ್ನು ತಿಳಿದು ಅಲ್ಲಿಂದ ಮರು ಮಾತನಾಡದೇ ನಿರ್ಗಮಿಸಿದರು. ಅಂತಹ ಸಾಮರಸ್ಯದ ಊರು ನಮ್ಮದು.
•ಮುಸ್ಲಿಂ ಸಮಾಜ ಮುಖಂಡರು
ಹಿಂದೂ ಹಾಗೂ ಮುಸ್ಲಿಮರು ಸೇರಿಯೇ ಗಣಪತಿ ಕೂಡಿಸುತ್ತೇವೆ. ಪೂಜೆ ಆರಂಭದಲ್ಲಿ ಬಂದು ನಾವು ಮತ್ತೆ ಬೇರೆ ಬೇರೆ ಕಡೆ ಹೋಗುತ್ತೇವೆ. ಆದರೆ ಒಂಬತ್ತು ದಿನವೂ ಮುಸ್ಲಿಮ ಸಹೋದರರೇ ಗಣಪತಿಯ ಉಸ್ತುವಾರಿ ನೋಡಿಕೊಳ್ಳುತ್ತಾರೆ. ನಾವೆಲ್ಲ ಪರಸ್ಪರ ಅಣ್ಣ ತಮ್ಮಂದಿರಂತೆ ಜೀವನ ನಡೆಸುತ್ತಿದ್ದೇವೆ.
•ಹಿಂದೂ ಸಮಾಜ ಮುಖಂಡರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.