ಪುರಸಭೆ ಹಣಾಹಣಿಗೆ ಪ್ರತಿಷ್ಠೆ ಪಣಕ್ಕಿಟ್ಟ ನಾಡಗೌಡ-ನಡಹಳ್ಳಿ
ಕಾಂಗ್ರೆಸ್-ಬಿಜೆಪಿಯೊಂದಿಗೆ ಪಕ್ಷೇತರರ ಪೈಪೋಟಿ
Team Udayavani, May 22, 2019, 2:52 PM IST
ತಾಳಿಕೋಟೆ: ಪಟ್ಟಣದ ಪುರಸಭೆ 23 ವಾರ್ಡ್‌ಗೆ ಸಂಬಂಧಿಸಿ ನಡೆಯುತ್ತಿರುವ ಚುನಾವಣೆಯಲ್ಲಿ ಈಗಾಗಲೇ 4 ವಾರ್ಡ್‌ಗಳಲ್ಲಿ ಮತದಾರರು ಅವಿರೋಧ ಆಯ್ಕೆಗೆ ಮನ್ನಣೆ ನೀಡಿದ್ದು ಇನ್ನುಳಿದ 19 ವಾರ್ಡ್‌ಗಳಲ್ಲಿ ಬಿಜೆಪಿ,ಕಾಂಗ್ರೆಸ್ ಹಾಗೂ ಪಕ್ಷೇತರ ಮಧ್ಯ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ.
19 ವಾರ್ಡ್‌ಗಳಿಗೆ 64 ಜನ ಕಣದಲ್ಲಿ ಉಳಿದಿದ್ದು ಅದರಲ್ಲಿ ಬಿಜೆಪಿಯಿಂದ 8 ಜನರು, ಕಾಂಗ್ರೆಸ್ ಪಕ್ಷದಿಂದ 9 ಜನರು, ಕೇವಲ ಎರಡು ವಾರ್ಡ್‌ಗಳಲ್ಲಿ ಜೆಡಿಎಸ್ ಪಕ್ಷ ಅಭ್ಯರ್ಥಿಗಳನ್ನು ಹಾಕುವುದರೊಂದಿಗೆ ಸ್ಪರ್ಧಾ ಕಣದಲ್ಲಿ ಚುರುಕು ಮೂಡಿಸಿದ್ದಾರೆ. ಇದರಲ್ಲಿ 44 ಪಕ್ಷೇತರ ಅಭ್ಯರ್ಥಿಗಳು ಕೆಲವು ವಾರ್ಡ್‌ಗಳಲ್ಲಿ ಪಕ್ಷದ ಅಭ್ಯರ್ಥಿಗೆ ಠಕ್ಕರ್ ನೀಡಲು ಜಾತಿ ಲೆಕ್ಕಾಚಾರದ ಮೇಲೆ ಹಾಗೂ ಎರಡೂ ಪಕ್ಷದ ಕಾರ್ಯಕರ್ತರನ್ನು ಸೆಳೆದುಕೊಳ್ಳುವುದರೊಂದಿಗೆ ಜಾಣ್ಮೆಯೊಂದಿಗೆ ತಮ್ಮದೇ ರೀತಿಯಲ್ಲಿ ಪೈಪೋಟಿ ನೀಡುತ್ತಿದ್ದಾರೆ.
ಪುರಸಭೆಯ 60 ವರ್ಷಗಳ ಆಡಳಿತ ಅವಧಿಯಲ್ಲಿ ಪಕ್ಷೇತರರೇ ಪಾರುಪತ್ಯ ಮೇರೆದು ಅಧಿಕಾರ ಅನುಭವಿಸುತ್ತ ಬಂದಿದ್ದಾರೆ. ಆದರೆ ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರು ಪಕ್ಷವನ್ನು ಅಧಿಕಾರದ ಗದ್ದುಗೆ ಏರಿಸಲು ಇನ್ನಿಲ್ಲದ ಕಸರತ್ತನ್ನು ನಡೆಸಿದ್ದಾರೆ.
ಪುರಸಭೆ ಚುನಾವಣೆಗೆ ಸಂಬಂಧಿಸಿ ಅವಿರೋಧ ಆಯ್ಕೆಗೊಂಡ ನಾಲ್ವರಲ್ಲಿ ವಾರ್ಡ್ ನಂ. 19ರಿಂದ ಅಕ್ಕಮಹಾದೇವಿ ಕಟ್ಟಿಮನಿ ಕಾಂಗ್ರೆಸ್ ಪಕ್ಷದಿಂದ ಗುರುತಿಸಿಕೊಂಡಿದ್ದರೆ, ವಾರ್ಡ್ ನಂ. 22ರಿಂದ ಅವಿರೋಧ ಆಯ್ಕೆಯಾದ ಮೋಹನ ಬಡಿಗೇರ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಗುರುತಿಸಿಕೊಂಡಿದ್ದಾರೆ. ಇನ್ನೂ ವಾರ್ಡ ನಂ. 9ಕ್ಕೆ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ವಾರ್ಡ್ ನಂ. 20ಕ್ಕೆ ಜುಬೇರಾ ಜಮಾದಾರ ಪಕ್ಷೇತರರಾಗಿ ಅವಿರೋಧ ಆಯ್ಕೆಯಾಗಿ ಎರಡೂ ಪಕ್ಷದ ಮುಖಂಡರಿಗೆ ಎಚ್ಚರಿಕೆ ಘಂಟೆ ಬಾರಿಸಿದ್ದಾರೆ.
ಇನ್ನೂ ಕೆಲವು ವಾರ್ಡ್‌ಗಳಲ್ಲಿ ಬಿಜೆಪಿ ಬೆಂಬಲಿತರೇ ಸ್ಪರ್ಧಾ ಕಣದಲ್ಲಿ ಉಳಿದು ಪೈಪೋಟಿ ನಡೆಸಿದ್ದರೆ, ಇನ್ನೂ ಕೆಲ ವಾರ್ಡ್‌ಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೇ ಕಣದಲ್ಲಿ ಪೈಪೋಟಿ ನಡೆಸಿದ್ದಾರೆ. ಇಂತಹ ವಾರ್ಡ್‌ಗಳಲ್ಲಿ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಮತ್ತು ಮಾಜಿ ಶಾಸಕ ಸಿ.ಎಸ್. ನಾಡಗೌಡ ಅವರು ಟಿಕೆಟ್ ಹಂಚಿಕೆ ಮಾಡಿಲ್ಲ. ಇದರಲ್ಲಿ ಯಾರೇ ಗೆದ್ದರೂ ನಮ್ಮ ಪಕ್ಷದ ಕಾರ್ಯಕರ್ತರೇ ಆಗಿದ್ದಾರೆ ಎಂಬ ಕಾರಣದಿಂದ ಸಮನ್ವಯತೆ ಕಾಪಾಡಿಕೊಂಡು ಜಾಣ್ಮೆ ತೋರಿದ್ದಾರೆ.
ನಾಡಗೌಡ-ನಡಹಳ್ಳಿ ಪ್ರತಿಷ್ಠೆ ಪ್ರಶ್ನೆ: ಮಾಜಿ ಶಾಸಕ ಸಿ.ಎಸ್. ನಾಡಗೌಡ ಹಾಗೂ ಹಾಲಿ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಪ್ರತಿಷ್ಠೆಯಾಗಿ ಗುರುತಿಸಿಕೊಂಡಿರುವ ವಾರ್ಡ್ ನಂ. 3ರಲ್ಲಿ ನಾಡಗೌಡರ ಆಪ್ತ ಪ್ರಭುಗೌಡ ಮದರಕಲ್ಲ ಹ್ಯಾಟ್ರಿಕ್ ಗೆಲುವು ಸಾಧಿಸಿ ನಾಡಗೌಡರ ಕೈ ಬಲಪಡಿಸಲು ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದಾರೆ. ಇವರ ಪ್ರತಿಸ್ಪರ್ಧಿಯಾಗಿ ನಡಹಳ್ಳಿ ಅವರ ಆಪ್ತ ವಾಸುದೇವ ಹೆಬಸೂರ ಪ್ರಥಮ ಬಾರಿಗೆ ಪುರಸಭಾ ಚುನಾವಣೆಗೆ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಈ ಕಾರಣದಿಂದ ಈ ವಾರ್ಡ್‌ನಲ್ಲಿ ಕೈಗೊಳ್ಳುವ ಪ್ರಚಾರ , ಯಾರು ಗೆಲ್ಲುತ್ತಾರೆ ಎಂಬ ಲೆಕ್ಕಾಚಾರದ ಮೇಲೆ ಬೆಟ್ಟಿಂಗ್ ಶುರುವಾಗಿದೆ. ಇನ್ನೊಂದೆಡೆ ಈ ವಾರ್ಡ್ ಮತದಾರು ಅತಿ ಸುಶಿಕ್ಷೀತರ ಕುಟುಂಬಕ್ಕೆ ಸೇರಿದವರಲ್ಲದೇ ಹೆಚ್ಚು ವಿದ್ಯಾವಂತ ಸರ್ಕಾರಿ ನೌಕರರು ಮತ್ತು ದೊಡ್ಡ ದೊಡ್ಡ ವ್ಯಾಪಾರಸ್ಥರು ಕುಟುಂಬದವರೇ ಹೆಚ್ಚು ವಾಸಿಸುವಂತಹ ಸ್ಥಳವಾಗಿದ್ದು ಮತದಾರರ ಓಲೈಕೆಗೆ ಇನ್ನಿಲ್ಲದ ಕಸರತ್ತು ನಡೆಸಿರುವುದು ಕಾಣುತ್ತಿದೆ.
ತಾಳಿಕೋಟೆ ಪುರಸಭೆ ಚುನಾವಣೆಯಲ್ಲಿ ಈಗಾಗಲೇ ಬಿಜೆಪಿ ಬೆಂಬಲಿತ ಓರ್ವ ಸದಸ್ಯ ಅವಿರೋಧ ಆಯ್ಕೆಗೊಂಡಿದ್ದಾರೆ. ಪುರಸಭೆ ಗದ್ದುಗೆಗೆ ಅವಶ್ಯವಿರುವ ಸ್ಥಾನಕ್ಕಿಂತಲೂ ಹೆಚ್ಚಿನ ಸ್ಥಾನ ನಾವು ಗೆಲ್ಲುತ್ತೇವೆ. ಕೆಲವು ವಾರ್ಡ್‌ಗಳಲ್ಲಿ ಟಿಕೆಟ್ ಮೂಲಕ ಸ್ಪರ್ಧೆಗಿಳಿಸಿದ್ದರೆ ಇನ್ನೂ ಕೆಲವೆಡೆ ಬೆಂಬಲಿತ ಅಭ್ಯರ್ಥಿಗಳಾಗಿ ಕಣಕ್ಕಿಳಿಸಿದ್ದೇವೆ.
•ರಾಘವೇಂದ್ರ ಚವ್ಹಾಣ
ಬಿಜೆಪಿ ತಾಲೂಕಾಧ್ಯಕ್ಷ
ಪ್ರತಿ ಪುರಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಬೆಂಬಲಿತ ಸದಸ್ಯರುಗಳೇ ಅತಿ ಹೆಚ್ಚು ಆಯ್ಕೆಗೊಳ್ಳುತ್ತ ಬಂದಿದ್ದಾರೆ. ಅದರಂತೆ ಈ ಬಾರಿಯೂ ಕೂಡಾ ಹೆಚ್ಚಿನ ಸದಸ್ಯರು ಆಯ್ಕೆಗೊಳ್ಳುವದರೊಂದಿಗೆ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಹಿಡಿಯಲಿದೆ.
•ಎಸ್.ಎನ್. ಪಾಟೀಲ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
•ಜಿ.ಟಿ. ಘೋರ್ಪಡೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.