ಸಂಖ್ಯೆ ಗಣ್ಯ, ಮತದಾನ ನಗಣ್ಯ
ಸುದ್ದಿ ಸುತ್ತಾಟ
Team Udayavani, Mar 25, 2019, 12:15 PM IST
ನಗರದಲ್ಲಿ ಅಪಾರ್ಟ್‌ಮೆಂಟ್ ಸಂಸ್ಕೃತಿ ಬೇರೂರಿ ದಶಕ ಕಳೆಯುತ್ತಾ ಬಂದಿದೆ. ಹೊರ ಪ್ರಪಂಚಕ್ಕೂ ತಮಗೂ ನಂಟೇ ಇಲ್ಲದಂತೆ ಬಹುಕುವ ಅಲ್ಲಿನ ನಿವಾಸಿಗಳು, ಮತದಾನದಂತಹ ಮಹತ್ತರ ಹಕ್ಕು ಚಲಾವಣೆಗೆ ಮನಸು ಮಾಡುವುದು ಕೂಡ ವಿರಳ. ಆದರೆ ಈ ವಸತಿ ಸಮುಚ್ಚಯಗಳ ನಿವಾಸಿಗಳೇನಾದರೂ ಪೂರ್ಣ ಪ್ರಮಾಣದಲ್ಲಿ ಮತದಾನ ಮಾಡಿದ್ದೇ ಆದರೆ ಚುನಾವಣಾ ಫಲಿತಾಂಶದ ಚಿತ್ರಣವೇ ಬದಲಾಗುತ್ತದೆ. ಅಷ್ಟರಮಟ್ಟಿಗೆ ಈ ಮತದಾರರು ನಿರ್ಣಾಯಕರೆನಿಸಿದ್ದಾರೆ. ಆದರೆ ಬಹುತೇಕರಿಗೆ ತಮ್ಮ ಹಕ್ಕು ಚಲಾಯಿಸುವ ಕುರಿತು ಆಸಕ್ತಿಯೇ ಇಲ್ಲ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ.
ಬೆಂಗಳೂರು: ಇವರೆಲ್ಲಾ ಬಹುತೇಕ ವಲಸೆ ಬಂದ ಜನ. ನಗರದ ಬಹುಮಹಡಿ ಕಟ್ಟಡಗಳಲ್ಲೇ ವಾಸ. ಇವರಲ್ಲಿ ಕೇವಲ ಅರ್ಧದಷ್ಟು ಜನ ಮನಸ್ಸು ಮಾಡಿದರೂ ಸಾಕು, ಬೆಂಗಳೂರಿನ ನಾಲ್ಕೂ ಲೋಕಸಭಾ ಕ್ಷೇತ್ರಗಳ ಚಿತ್ರಣ ಬದಲಾಗುತ್ತದೆ. ಆದರೂ ಪ್ರತಿ ಚುನಾವಣೆಯಲ್ಲಿ ಇವರ ಪಾತ್ರ ನಗಣ್ಯ!
ಬೆಂಗಳೂರಿನಲ್ಲಿ ಐಟಿ-ಬಿಟಿ ಕ್ಷೇತ್ರದಷ್ಟೇ ವೇಗದಲ್ಲಿ ಬೆಳೆದಿರುವುದು ವಲಸಿಗರ ಸಂಖ್ಯೆ. ಹೀಗೆ ಬರುವವರಿಗಾಗಿ ಇಲ್ಲಿ ಸಾವಿರಾರು ಅಪಾರ್ಟ್‌ಮೆಂಟ್‌ಗಳು ನಿರ್ಮಾಣವಾಗಿ “ಅಪಾರ್ಟ್‌ಮೆಂಟ್ ಸಂಸ್ಕೃತಿ’ ತಲೆಯೆತ್ತಿತು. ಇಂದು ಎಷ್ಟರಮಟ್ಟಿಗೆ ಇವು ಆಕರ್ಷಿಸಿವೆ ಎಂದರೆ ನಗರದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.20ರಷ್ಟು ಅಂದರೆ ಸುಮಾರು 20-25 ಲಕ್ಷ ಜನ ಈ ಅಪಾರ್ಟ್‌ಮೆಂಟ್‌ಗಳಲ್ಲೇ ವಾಸವಿದ್ದಾರೆ. ಆದರೆ, ಅವರೆಲ್ಲಾ ಚುನಾವಣೆಗಳಿಂದ ತುಸು ದೂರ ಉಳಿದಿದ್ದಾರೆ. ಹಾಗೊಂದು ವೇಳೆ ಇದರಲ್ಲಿ ಶೇ.50ರಷ್ಟು ಜನ ತಮ್ಮ ಹಕ್ಕು ಚಲಾಯಿಸಲು ಮುಂದೆಬಂದರೂ, ಚುನಾವಣೆ ಚಿತ್ರಣ ಬದಲಾಗಲಿದೆ.
ಲೆಕ್ಕಾಚಾರ ಹೀಗೆ: “2014ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ವ್ಯಾಪ್ತಿಯಲ್ಲಿ ಬರುವ ನಾಲ್ಕೂ ಕ್ಷೇತ್ರಗಳಲ್ಲಿನ ಗೆಲುವಿನ ಅಂತರ 1.38 ಲಕ್ಷದಿಂದ 2.50 ಲಕ್ಷ ಮತಗಳು. ಹಾಗೊಂದು ವೇಳೆ, ನಾವೆಲ್ಲರೂ ಸಂಘಟಿತರಾಗಿ ಮತ ಚಲಾಯಿಸಿದರೆ, ನಿರ್ಣಾಯಕ ಮತದಾರರಾಗುವುದರಲ್ಲಿ ಎರಡು ಮಾತಿಲ್ಲ. ಆದರೆ, ನಗರದಲ್ಲಿ ಹರಿದುಹಂಚಿ ಹೋಗಿರುವ ಅಪಾರ್ಟ್‌ಮೆಂಟ್ ನಿವಾಸಿಗಳ ಮತದಾನ ಪ್ರಮಾಣ ಸರಾಸರಿ ಶೇ.20-30ರಷ್ಟೂ ಇಲ್ಲ.
ವಿಧಾನಸಭಾ ಚುನಾವಣೆಗಳಲ್ಲಿ ಈ ಪ್ರಮಾಣ ಇನ್ನೂ ಕಡಿಮೆ ಇರುತ್ತದೆ. ಈ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಇದಕ್ಕೆ ಪೂರಕ ಸ್ಪಂದನೆಯೂ ದೊರೆಯುತ್ತಿದೆ’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಅಪಾರ್ಟ್‌ಮೆಂಟ್ ನಿವಾಸಿಗಳ ಫೆಡರೇಷನ್ ಪದಾಧಿಕಾರಿಗಳು.
“ನಗರದಲ್ಲಿ 100ಕ್ಕೂ ಅಧಿಕ ಫ್ಲ್ಯಾಟ್‌ಗಳಿರುವ 3-4 ಸಾವಿರ ಅಪಾರ್ಟ್‌ಮೆಂಟ್‌ಗಳೂ ಸೇರಿ ಒಟ್ಟಾರೆ 6ರಿಂದ 7 ಸಾವಿರಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳಿವೆ. ಅದರಲ್ಲಿ ಸುಮಾರು 20 ಲಕ್ಷ ಜನ ಇದ್ದಾರೆ. ಈ ಪೈಕಿ ಶೇ.50ರಷ್ಟು ಮಾಲೀಕರು (ಫ್ಲ್ಯಾಟ್ ಖರೀದಿಸಿದವರು) ಹಾಗೂ ಉಳಿದ ಶೇ.50ರಷ್ಟು ಬಾಡಿಗೆಗೆ ಇದ್ದಾರೆ. ಬಹುತೇಕ ಮಾಲಿಕರು ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ. ಇವರಲ್ಲಿ ಎಲ್ಲರೂ ಮತ ಚಲಾಯಿಸುವುದಿಲ್ಲ.
ಇನ್ನು ಬಾಡಿಗೆದಾರರು “ಹೇಗಿದ್ದರೂ ಊರಿಗೆ ವಾಪಸ್ ಹೋಗುತ್ತೇವೆ. ನಮಗ್ಯಾಕೆ ಮತದಾರರ ಗುರುತಿನ ಚೀಟಿ’ ಎಂಬ ಮನೋಭಾವದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಅಪಾರ್ಟ್‌ಮೆಂಟ್ ನಿವಾಸಿಗಳ ಬಗ್ಗೆ ಈ ರೀತಿಯ ಆರೋಪ ಆಗಾಗ್ಗೆ ಕೇಳಿಬರುತ್ತದೆ’ ಎಂದು ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಷನ್ ಕಾರ್ಯದರ್ಶಿ ಶ್ರೀಕಾಂತ್ ನರಸಿಂಹನ್ ತಿಳಿಸುತ್ತಾರೆ.
ಹೆಚ್ಚುತ್ತಿದೆ ಮತದಾನ ಪ್ರಮಾಣ: ಈಗ ಈ ಚಿತ್ರಣ ಬದಲಾಗುತ್ತಿದೆ. ನಿಧಾನವಾಗಿ ಜಾಗೃತಿ ಮೂಡುತ್ತಿದ್ದು, 2013ರ ವಿಧಾನಸಭಾ ಚುನಾವಣೆಯಲ್ಲಿ ಅಪಾರ್ಟ್‌ಮೆಂಟ್ ನಿವಾಸಿಗಳ ಪ್ರದೇಶಗಳಲ್ಲಿ ಮತದಾನ ಪ್ರಮಾಣ ಕೇವಲ ಶೇ. 10ರಿಂದ 20ರಷ್ಟಿತ್ತು. ಆದರೆ, 2018ರ ವಿಧಾನಸಭಾ ಚುನಾವಣೆಯಲ್ಲಿ ಇದೇ ಪ್ರದೇಶಗಳಲ್ಲಿ ಶೇ. 50ರಿಂದ 60ರಷ್ಟಾಗಿದೆ. ಇದೆಲ್ಲವೂ ಫೆಡರೇಷನ್ ನಡೆಸಿದ ಜಾಗೃತಿ ಅಭಿಯಾನದ ಫಲ. ಇದನ್ನು ಶೇ. 80ಕ್ಕೆ ಹೆಚ್ಚಿಸುವ ಗುರಿ ಇದೆ’ ಎನ್ನುತ್ತಾರೆ ಶ್ರೀಕಾಂತ್ ನರಸಿಂಹನ್.
ಕಳೆದ ಚುನಾವಣೆಗಳಿಗೆ ಹೋಲಿಸಿದರೆ, ಈ ಬಾರಿ ಅಪಾರ್ಟ್‌ಮೆಂಟ್‌ಗಳು ಮತ್ತು ವಿವಿಧ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳಿಂದ ಸಾಕಷ್ಟು ಜಾಗೃತಿ ಅಭಿಯಾನಗಳು ನಡೆಯುತ್ತಿವೆ. ಇದಲ್ಲದೆ, ಕೆಲವು ಸಂಘಟನೆಗಳೂ ಆಸಕ್ತಿ ತೋರಿಸುತ್ತಿವೆ. ಹಾಗಾಗಿ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಬಯಸಿ ಸಾಕಷ್ಟು ಅರ್ಜಿಗಳು ಬರುತ್ತಿವೆ. ಆದರೆ, ಇಂತಿಷ್ಟೇ ಎಂದು ನಿಖರವಾಗಿ ಹೇಳುವುದು ಕಷ್ಟ ಎಂದು ವಿಶೇಷ ಆಯುಕ್ತ (ಚುನಾವಣೆ) ಮನೋಜ್ ಕುಮಾರ್ ಮೀನಾ ಸ್ಪಷ್ಟಪಡಿಸಿದರು.
ಎಲ್ಲಿ ಹೆಚ್ಚಿವೆ?: ನಗರದಲ್ಲಿ ಮುಖ್ಯವಾಗಿ ಬನ್ನೇರುಘಟ್ಟ, ವೈಟ್‌ಫೀಲ್ಡ್, ಪೀಣ್ಯ, ಬೊಮ್ಮನಹಳ್ಳಿ, ಹೆಬ್ಟಾಳ, ಸಿ.ವಿ. ರಾಮನ್‌ನಗರ, ಮಹದೇವಪುರ, ಥಣಿಸಂದ್ರ ಮತ್ತಿತರ ಕಡೆಗಳಲ್ಲಿ ಅಪಾರ್ಟ್‌ಮೆಂಟ್‌ಗಳು ಹೆಚ್ಚಿನ ಸಂಖ್ಯೆಯಲ್ಲಿವೆ.ಒಟ್ಟಾರೆ ಜನಸಂಖ್ಯೆಯಲ್ಲಿ ಸುಮಾರು 20ರಿಂದ 25 ಲಕ್ಷ ಜನ ಈ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸವಾಗಿದ್ದಾರೆ ಎಂದು ಕಾನ್ಫಿಡರೇಷನ್ ರಿಯಲ್ ಎಸ್ಟೇಟ್ ಡೆವಲಪರ್ ಅಸೋಸಿಯೇಷನ್ ಆಫ್ ಇಂಡಿಯಾ (ಕ್ರೆಡಾಯ್)ದ ಬೆಂಗಳೂರು ನಗರ ವಿಭಾಗದ ಜಂಟಿ ಕಾರ್ಯದರ್ಶಿ ಭಾಸ್ಕರ್ ಟಿ. ನಾಗೇಂದ್ರಪ್ಪ ತಿಳಿಸುತ್ತಾರೆ.
ಪಟ್ಟಿಯಿಂದ ಹೆಸರೇ ಡಿಲೀಟ್!: ಅಪಾರ್ಟ್‌ಮೆಂಟ್ ನಿವಾಸಿಗಳು ಮತದಾನಕ್ಕೆ ಉತ್ಸುಕರಾಗಿದ್ದು, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಹೆಸರು ನೋಂದಾಯಿಸುತ್ತಿದ್ದಾರೆ. ಆದರೆ, ವಿನಾಕಾರಣ ಹೆಸರನ್ನು “ಡಿಲೀಟ್’ ಮಾಡಲಾಗುತ್ತಿದೆ ಎಂದು ಶ್ರೀಕಾಂತ್ ನರಸಿಂಹನ್ ಬೇಸರ ವ್ಯಕ್ತಪಡಿಸಿದರು.
ಮಹದೇವಪುರ ವಲಯ ಒಂದರಲ್ಲೇ ಇತ್ತೀಚೆಗೆ 3,400ಕ್ಕೂ ಅಧಿಕ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ. ಇದಲ್ಲದೆ, ಹೆಸರು ನೋಂದಾಯಿಸಿದವರ ದಾಖಲೆಗಳ ಪರಿಶೀಲನೆ, ವಿಳಾಸ ಖಾತ್ರಿಪಡಿಸಿಕೊಳ್ಳಲು ಬೂತ್‌ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಬರುವುದೇ ಇಲ್ಲ. ಅನೇಕ ಬಾರಿ ಫೋನ್ ಮಾಡಿದರೂ, ತಾವು ಬೂತ್ ಮಟ್ಟದ ಅಧಿಕಾರಿ ಅಲ್ಲ ಅಥವಾ ನಮಗೆ ಗೌರವಧನವನ್ನೇ ನೀಡಿಲ್ಲ ಎಂಬ ಉತ್ತರ ಬರುತ್ತದೆ ಎಂದು ತಿಳಿಸಿದರು.
ಒಳಗೇ ಬಿಡಲ್ಲ; ಅಧಿಕಾರಿಗಳ ಅಸಹಾಯಕತೆ: ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಂಡ ಅಪಾರ್ಟ್‌ಮೆಂಟ್ ನಿವಾಸಿಗಳ ದಾಖಲೆಗಳ ಪರಿಶೀಲನೆ ಮತ್ತು ಅವರಿಗೆ ವೋಟರ್ ಸ್ಲಿಪ್ ನೀಡುವುದೇ ದೊಡ್ಡ ಸವಾಲು ಎಂದು ಮನೋಜ್ ಕುಮಾರ್ ಮೀನಾ ತಿಳಿಸುತ್ತಾರೆ.
ಅಪಾರ್ಟ್‌ಮೆಂಟ್‌ಗಳಲ್ಲಿ ನಮ್ಮ ಬೂತ್ ಮಟ್ಟದ ಅಧಿಕಾರಿಗಳನ್ನು ಒಳಗೆ ಬಿಟ್ಟುಕೊಳ್ಳುವುದೇ ಇಲ್ಲ. ಒಳಗೆ ಬಿಟ್ಟರೂ ಕೆಲಸಕ್ಕೆ ತೆರಳಿರುತ್ತಾರೆ. ಹಾಗಾಗಿ, ಮೊಬೈಲ್ ಸಂಖ್ಯೆ ನಮೂದಿಸುವಂತೆಯೂ ಕೋರಲಾಗಿದೆ. ಇದರಿಂದ ಮುಂಚಿತವಾಗಿಯೇ ಕರೆ ಮಾಡಿ, ಪರಿಶೀಲನೆಗೆ ತೆರಳಲು ಅನುಕೂಲ ಆಗುತ್ತದೆ. ಅಷ್ಟೇ ಅಲ್ಲ, ವಿವಿಧ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ಅಪಾರ್ಟ್‌ಮೆಂಟ್ ನಿವಾಸಿಗಳ ಸಂಘಗಳೊಂದಿಗೂ ಮಾತುಕತೆ ನಡೆಸಿದ್ದೇವೆ ಎಂದರು.
ಹೆಸರು ನೋಂದಣಿಗೆ ಕೂಪನ್!: ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಸಿದವರಿಗೆ 250 ರೂ. ಗಿಫ್ಟ್ ಕೂಪನ್! ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಸಲು ಜನರನ್ನು ಸೆಳೆಯಲು ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಷನ್ ಈಚೆಗೆ ಇಂತಹದ್ದೊಂದು ಅಭಿಯಾನ ನಡೆಸಿತು. ರಿಲಾಯನ್ಸ್ ಟ್ರೆಂಡ್ ಜತೆ ಕೈಜೋಡಿಸಿ, ಹೆಸರು ನೋಂದಾಯಿಸಿದವರಿಗೆ ಕೂಪನ್ ನೀಡಲಾಗುತ್ತಿತ್ತು. ಈ ಕೂಪನ್ ಕೊಟ್ಟು, ರಿಲಾಯನ್ಸ್ ಮಳಿಗೆಯಲ್ಲಿ ಯಾವುದೇ ಉತ್ಪನ್ನಗಳ ಬೆಲೆಯ ಮೇಲೆ 250 ರೂ. ರಿಯಾಯ್ತಿ ಪಡೆಯುವ ಸೌಲಭ್ಯ ಕಲ್ಪಿಸಲಾಗಿತ್ತು.
ನಿಮ್ಮ ಅಭಿ”ಮತ’: ಮತ್ತೂಂದು ಸಾರ್ವತ್ರಿಕ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಆದರೆ, ಎಂದಿನಂತೆ ಈಗಲೂ ನಗರದ ಕೆಲವು ವರ್ಗಗಳು ಮತದಾನ ಪ್ರಕ್ರಿಯೆಯಿಂದ ದೂರವೇ ಉಳಿದಿವೆ. ಅವರನ್ನು ಮತಗಟ್ಟೆಗಳಿಗೆ ತರುವ ಪ್ರಯತ್ನವನ್ನು ವಿವಿಧ ಸಂಘಟನೆಗಳು ಸದ್ದಿಲ್ಲದೆ ನಡೆಸುತ್ತಿವೆ. ಮತದಾರರ ಪಟ್ಟಿಗೆ ಸೇರಿಸುವ, ಮತದಾನಕ್ಕೆ ಪ್ರೇರೇಪಿಸುವ, ಅದರ ಮಹತ್ವವನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ವಿನೂತನ ಮಾದರಿಯ ಜಾಗೃತಿ ಅಭಿಯಾನಗಳು ನಡೆಯುತ್ತಿವೆ.
ಆ ಪ್ರಯತ್ನಗಳಿಗೆ “ಉದಯವಾಣಿ’ ಪೂರಕ ವೇದಿಕೆ ಕಲ್ಪಿಸುತ್ತಿದೆ. ವಿನೂತನ ಜಾಗೃತಿ ಅಭಿಯಾನಗಳು, ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವಲ್ಲಿ ಇರುವ ಸಮಸ್ಯೆಗಳು, ಮತದಾರರ ಬೇಡಿಕೆಗಳು ಸೇರಿದಂತೆ ಯಾವುದೇ ಅಂಶಗಳನ್ನು ಓದುಗರು ವಾಟ್ಸ್‌ಆ್ಯಪ್ ಸಂಖ್ಯೆ 88611 96369 ಅಥವಾ ಇ-ಮೇಲ್: [email protected] ಇಲ್ಲಿಗೆ ಕಳುಹಿಸಬಹುದು. ಅವುಗಳನ್ನು ಉದಯವಾಣಿ ಪ್ರಕಟಿಸಲಿದೆ.
* ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.