ಒಂದೂವರೆ ವರ್ಷದಿಂದ ಸರಕಾರಿ ಆಸ್ಪತ್ರೆಗೆ ಆ್ಯಂಬುಲೆನ್ಸ್ ಇಲ್ಲ
ಬೆಳ್ತಂಗಡಿ: ರೋಗಿಗಳ ಸಂಬಂಧಿಕರ ಪರದಾಟ; ಖಾಸಗಿ ಆ್ಯಂಬುಲೆನ್ಸ್‌ನಲ್ಲಿ ಸಾಗಿಸಬೇಕಾದ ಸ್ಥಿತಿ
Team Udayavani, Apr 6, 2019, 10:53 AM IST
ಬೆಳ್ತಂಗಡಿ ತಾಲೂಕು ಕೇಂದ್ರದಲ್ಲಿರುವ ತಾಲೂಕು ಸಾರ್ವಜನಿಕ ಆಸ್ಪತ್ರೆ.
ಬೆಳ್ತಂಗಡಿ : ಸಾಮಾನ್ಯವಾಗಿ ಗ್ರಾಮೀಣ ಭಾಗಗಳಲ್ಲಿ ತುರ್ತು
ಸಂದರ್ಭ ರೋಗಿಗಳನ್ನು ಸಾಗಿಸಬೇಕಾದರೆ ಆ್ಯಂಬುಲೆನ್ಸ್‌ಗಳು ಲಭ್ಯ ವಿರುವುದಿಲ್ಲ. ಆದರೆ ಬೆಳ್ತಂಗಡಿ ತಾ| ಕೇಂದ್ರದಲ್ಲಿರುವ ತಾ| ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಆ್ಯಂಬುಲೆನ್ಸ್ ಇಲ್ಲದೆ ರೋಗಿಗಳನ್ನು ಖಾಸಗಿ ಆ್ಯಂಬುಲೆನ್ಸ್‌ಗಳಲ್ಲಿ
ಸಾಗಿಸಬೇಕಾದ ಸ್ಥಿತಿ ಇದೆ.
ಆಸ್ಪತ್ರೆಗೆ ಅಗತ್ಯವಾಗಿ ಆ್ಯಂಬುಲೆನ್ಸ್ ಬೇಕು ಎಂದು ಆಸ್ಪತ್ರೆಯ ಅಧಿಕಾರಿ ವರ್ಗ ಜಿಲ್ಲಾ ಆರೋಗ್ಯ ಇಲಾಖೆಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಬಂಧಪಟ್ಟವರಿಂದ ಭರವಸೆ ಲಭಿಸಿದೆಯೇ ವಿನಾ ಅನುಷ್ಠಾನಗೊಂಡಿಲ್ಲ. ಹೀಗಾಗಿ ಇಂದು ಬರುತ್ತದೆ, ನಾಳೆ ಬರುತ್ತದೆ ಎಂದು ಕಾಯಬೇಕಾದ ಸ್ಥಿತಿ ಇದೆ.
ಈ ಹಿಂದೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಆ್ಯಂಬುಲೆನ್ಸ್ ಕೆಟ್ಟು ಹೋದ ಪರಿಣಾಮ ಬಂಟ್ವಾಳದ ಆಸ್ಪತ್ರೆಯ ಆ್ಯಂಬುಲೆನ್ಸ್
ನೀಡಲಾಗಿತ್ತು. ಅದು ಸಮರ್ಪಕವಾಗಿ ಇಲ್ಲದಿದ್ದರೂ ರೋಗಿಗಳ ಸೇವೆ ದೃಷ್ಟಿಯಿಂದ ಅದನ್ನು ಚಲಾಯಿಸಲಾಗುತ್ತಿತ್ತು. ಆದರೆ ಈ ಆ್ಯಂಬುಲೆನ್ಸ್ ಒಂದೂವರೆ ವರ್ಷಗಳ ಹಿಂದೆ ಪಣಕಜೆಯಲ್ಲಿ ಅಪಘಾತವಾದ ಬಳಿಕ ಬೆಳ್ತಂಗಡಿ ಆಸ್ಪತ್ರೆಗೆ ಆ್ಯಂಬುಲೆನ್ಸ್ ಇಲ್ಲದಾಗಿದೆ.
ಪ್ರಸ್ತುತ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ನಗು – ಮಗು ಎಂಬ ಒಂದು ಆ್ಯಂಬುಲೆನ್ಸ್ ಮಾತ್ರ ಲಭ್ಯವಿದ್ದು, ಅದರಲ್ಲಿ ಗರ್ಭಿಣಿಯರು, ತಾಯಿ- ಮಗುವನ್ನು ಸಾಗಿಸುವುದಕ್ಕೆ ಮಾತ್ರ ಅವಕಾಶವಿದೆ. ಇತರ ರೋಗಿಗಳಿಗೆ ಅದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಜನತೆ ಆರೋಪಿಸುತ್ತಿದ್ದಾರೆ. ಈ ಕುರಿತು ಹಲವು ಬಾರಿ ಸಭೆಗಳಲ್ಲಿ ಚರ್ಚೆಯಾಗಿದ್ದರೂ ಏನೂ
ಪ್ರಯೋಜನವಾಗಿಲ್ಲ.
ಸ್ಥಳೀಯ 108 ತರಿಸಲಾಗುತ್ತದೆ
ಸರಕಾರಿ ಆಸ್ಪತ್ರೆಯಿಂದ ಮಂಗಳೂರಿಗೆ ರೋಗಿಗಳನ್ನು ಸಾಗಿಸಲು ಸ್ಥಳೀಯವಾಗಿ (ಉಜಿರೆ, ಕೊಕ್ಕಡ, ಪುಂಜಾಲಕಟ್ಟೆ, ವೇಣೂರು, ನಾರಾವಿ) ಲಭ್ಯವಿರುವ ಆ್ಯಂಬುಲೆನ್ಸ್‌ಗಳನ್ನು ತರಿಸಲಾಗುತ್ತದೆ ಎಂದು ಆಸ್ಪತ್ರೆಯವರು ಮಾಹಿತಿ ನೀಡುತ್ತಾರೆ. ಆದರೆ ಸರಕಾರಿ ಆಸ್ಪತ್ರೆಯಿಂದ ರೋಗಿಗಳನ್ನು ಮಂಗಳೂರಿಗೆ ಸಾಗಿಸಬೇಕಾದರೆ ದುಡ್ಡು ಕೊಟ್ಟು ಖಾಸಗಿ ಆ್ಯಂಬುಲೆನ್ಸ್‌ಗಳಲ್ಲಿ ಸಾಗಿಸಬೇಕಿದೆ ಎಂಬುದು ಬಡ ರೋಗಿಗಳ ಸಂಬಂಧಿಕರ ಆರೋಪ. ಅಂದರೆ ಸ್ಥಳೀಯವಾಗಿ ಲಭ್ಯವಿರುವ 108 ಆ್ಯಂಬುಲೆನ್ಸ್‌ಗಳು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ತಲುಪಬೇಕಾದರೆ ಕನಿಷ್ಠ ಅಂದರೂ ಅರ್ಧ ತಾಸು ಬೇಕಾಗುತ್ತದೆ. ಆದರೆ ತುರ್ತು ಸಂದರ್ಭಗಳಲ್ಲಿ ಕಾಯುವುದು ಅಪಾಯ ಎಂಬ ಹಿನ್ನೆಲೆಯಲ್ಲಿ ರೋಗಿಗಳು ಖಾಸಗಿ ಆ್ಯಂಬುಲೆನ್ಸ್‌ಗಳಲ್ಲೇ ರೋಗಿಗಳನ್ನು ಕರೆದೊಯ್ಯುತ್ತಾರೆ.
ಅಪರಿಚಿತರನ್ನು ಸಾಗಿಸುತ್ತಿಲ್ಲ
ಸರಕಾರಿ ಆಸ್ಪತ್ರೆಗೆ ಹೆಚ್ಚಾಗಿ ಅಪರಿಚಿತ ಅಸ್ವಸ್ಥರು ಆಗಮಿಸುತ್ತಿದ್ದು, 108 ಆ್ಯಂಬುಲೆನ್ಸ್‌ನವರು ಇಂತಹ ರೋಗಿಗಳನ್ನು ಸಾಗಿಸಲು ಹಿಂದೇಟು ಹಾಕುತ್ತಾರೆ. ಆದರೆ ಅವರನ್ನು ಜಿಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಸ್ವೀಕರಿಸಬೇಕಾದರೆ ಪೊಲೀಸರ ಅನುಮತಿ ಬೇಕು ಎಂದು ಅಪರಿಚಿತರನ್ನು ಸಾಗಿಸುತ್ತಿಲ್ಲ.ಈ ಕುರಿತು ಸಾಕಷ್ಟು ಬಾರಿ ಚರ್ಚೆಯಾದ ಘಟನೆಗಳೂ ಬೆಳ್ತಂಗಡಿ ಸರಕಾರಿ ಆಸ್ಪತ್ರೆ ಯಲ್ಲಿ ಸಂಭವಿಸಿದೆ.
ಮೇಯಲ್ಲಿ ಹೊಸ ಆ್ಯಂಬುಲೆನ್ಸ್ ?
ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಮೇ ತಿಂಗಳಲ್ಲಿ ಹೊಸ ಆ್ಯಂಬುಲೆನ್ಸ್
ನೀಡುವ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಯವರು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯವರಿಗೆ ಭರವಸೆ ನೀಡಿದ್ದಾರೆ. ಅಂದರೆ ಎಂಆರ್‌ಪಿಎಲ್ ಸಂಸ್ಥೆಯ ವತಿಯಿಂದ ಜಿಲ್ಲೆಯ ಎಲ್ಲ ಆಸ್ಪತ್ರೆಗಳಿಗೂ ಹೊಸ ಆ್ಯಂಬುಲೆನ್ಸ್ ಬರಲಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
108 ತರಿಸಲಾಗುತ್ತದೆ
ಕಳೆದ ಒಂದೂವರೆ ವರ್ಷಗಳಿಂದ ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್ ಇಲ್ಲ. ಸಾಕಷ್ಟು ಬಾರಿ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ತೀರಾ ಅಗತ್ಯವಿದ್ದರೆ ಸ್ಥಳೀಯ 108 ಆ್ಯಂಬುಲೆನ್ಸ್‌ಗಳನ್ನು ತರಿಸಲಾಗುತ್ತದೆ. ಆದರೆ ಕೆಲವೊಂದು ಅಪರಿಚಿತ ವ್ಯಕ್ತಿಗಳನ್ನು ಕರೆತಂದಾಗ ತೊಂದರೆಯಾಗುತ್ತದೆ. ಮೇ ತಿಂಗಳಲ್ಲಿ ಹೊಸ ಆ್ಯಂಬುಲೆನ್ಸ್‌ನ ಕುರಿತು ಡಿಎಚ್‌ಒ ಭರವಸೆ ನೀಡಿದ್ದಾರೆ.
– ಡಾ| ವಿದ್ಯಾವತಿ,
ಆಡಳಿತ ವೈದ್ಯಾಧಿಕಾರಿ,
ತಾಲೂಕು ಸಾರ್ವಜನಿಕ ಆಸ್ಪತ್ರೆ
ಕಿರಣ್ ಸರಪಾಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.