ಶೀಘ್ರದಲ್ಲೇ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ
Team Udayavani, Feb 17, 2019, 7:34 AM IST
ತುಮಕೂರು: ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿಯಿರುವ 870 ಎಂಜಿನಿಯರ್ ಹುದ್ದೆಗಳ ನೇಮಕಾತಿಗೆ ಈಗಾಗಲೇ ಅನುಮತಿ ನೀಡಲಾಗಿದ್ದು, ಶೀಘ್ರದಲ್ಲೇ ಕೆಪಿಎಸ್‌ಸಿಯಿಂದ ಅಧಿಸೂಚನೆ ಪ್ರಕಟವಾಗಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಗಳ ಸಹಯೋಗದಲ್ಲಿ ಶನಿವಾರ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಏರ್ಪಡಿಸಿರುವ 2 ದಿನಗಳ ತುಮಕೂರು-ಚಿತ್ರದುರ್ಗ ಜಿಲ್ಲೆಗಳ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಸುಮಾರು 12 ಲಕ್ಷ ಪದವೀಧರ ನಿರುದ್ಯೋಗಿಗಳಿದ್ದು, ನಿರುದ್ಯೋಗ ಸಮಸ್ಯೆ ನಿವಾರಿಸಲು ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆಗಳಲ್ಲಿ ಖಾಲಿಯಿರುವ ಸಾವಿರಾರು ಹುದ್ದೆ ಪಟ್ಟಿ ಮಾಡಲಾಗಿದೆ. ಶೀಘ್ರದಲ್ಲೇ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಉದ್ಯೋಗ ಮೇಳ ಅವಶ್ಯ: ರಾಜ್ಯದಲ್ಲಿ ವಿವಿಧ ಕೋರ್ಸ್ ಮುಗಿಸಿರುವ ಯುವಕ, ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡುವುದಕ್ಕೆ ಇಂಥ ಉದ್ಯೋಗ ಮೇಳಗಳು ಅತ್ಯಾವಶ್ಯ. ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡುವುದಕ್ಕಾಗಿ ರಾಜ್ಯ ಸರ್ಕಾರವು ಕೌಶಲ್ಯಾಭಿವೃದ್ಧಿ ಇಲಾಖೆಯನ್ನು ಹೊಸದಾಗಿ ಸೃಜಿಸಿ ಅರ್ಹ ಫಲಾನುಭವಿಗಳಿಗೆ ವಿದ್ಯಾಭ್ಯಾಸಕ್ಕೆ ತಕ್ಕಂತೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ರೈಲು ಸಂಚಾರಕ್ಕೆ ಚಿಂತನೆ: ಮುಂದಿನ 5 ವರ್ಷಗಳಲ್ಲಿ ಜಿಲ್ಲೆಯ ಚಿತ್ರಣ ಸಂಪೂರ್ಣ ಬದಲಾಗಲಿದೆ. ನೀರಿನ ಸಮಸ್ಯೆ ನಿವಾರಣೆಗೆ ಹೆಚ್ಚಿನ ಆದ್ಯತೆ ನೀಡಲು ಹೇಮಾವತಿ ನಾಲೆ ಆಧುನೀಕರಣ, 13500 ಕೋಟಿ ರೂ.ಗಳ ವೆಚ್ಚದಲ್ಲಿ ಎತ್ತಿನ ಹೊಳೆ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಇಡೀ ಏಷ್ಯಾ ಖಂಡದಲ್ಲೇ 2ನೇ ಅತಿ ದೊಡ್ಡ ಕೈಗಾರಿಕಾ ಕ್ಷೇತ್ರವಾಗಿ ಬೆಳೆಯುತ್ತಿರುವ ವಸಂತ ನರಸಾಪುರದಲ್ಲಿ ಕೈಗಾರಿಕಾ ಪ್ರದೇಶವು ವಿಶ್ವ ಭೂಪಟದಲ್ಲಿ ಗುರುತಿಸಿಕೊಳ್ಳಲಿದೆ.
ತುಮಕೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಹಂತ ಹಂತವಾಗಿ ಕಾಮಗಾರಿ ಕೈಗೊಳ್ಳಲಾಗಿದ್ದು, ಮುಂಬರುವ ದಿನಗಳಲ್ಲಿ ತುಮಕೂರು ಗಣನೀಯವಾಗಿ ಬದಲಾವಣೆ ಕಾಣಲಿದೆ. ಬೆಂಗಳೂರು-ಮುಂಬೈ ಸಬ್ ಅರ್ಬನ್ ರೈಲು ಮಾರ್ಗ ನಿರ್ಮಾಣ, ಬೆಂಗಳೂರು-ತುಮಕೂರು ಮೆಟ್ರೋ ರೈಲು ಸಂಚಾರ ಯೋಜನೆಗೆ ಚಿಂತನೆ ನಡೆಸಲಾಗಿದೆ ಎಂದರು.
ಸಾನ್ನಿಧ್ಯ ವಹಿಸಿ ಮಾತನಾಡಿದ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ, ತುಮಕೂರು-ಚಿತ್ರದುರ್ಗ ಜಿಲ್ಲೆಯ ಯುವಕ,ಯುವತಿಯರಿಗೆ ಈ ಮೇಳವು ಆಶಾಕಿರಣವಾಗಿದೆ.ಅಭ್ಯರ್ಥಿಗಳು ಯಾವುದೇ ಕೆಲಸ ಸಿಕ್ಕರೂ ನಿಷ್ಠೆಯಿಂದ ಮಾಡುವುದನ್ನು ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಮೇಳದ ಸದುಪಯೋಗ ಪಡಿಸಿಕೊಳ್ಳಿ: ಮುಜರಾಯಿ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಪಿ.ಟಿ.ಪರಮೇಶ್ವರ್ ನಾಯಕ್ ಮಾತನಾಡಿ, ಒಂದೇ ಸೂರಿನಡಿ ನೂರಾರು ಕಂಪನಿಗಳಿಂದ ಸಾವಿರಾರು ಯುವಕ,ಯುವತಿಯರಿಗೆ ಉದ್ಯೋಗ ಕಲ್ಪಿಸಲು ಮೇಳದಲ್ಲಿ ಆಯೋಜನೆ ಮಾಡಲಾಗಿದೆ. ಅರ್ಹ ಫಲಾನುಭವಿಗಳಿಗೆ ವಿದ್ಯಾರ್ಹತೆಗನುಗುಣವಾಗಿ ಕೆಲಸ ದೊರೆಯುತ್ತದೆ. ನಿರುದ್ಯೋಗಿ ಯುವಕರು ಇಂಥ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಅರ್ಹರಿಗೆ ಸೌಲಭ್ಯ: ಕಾರ್ಮಿಕ ಸಚಿವ ವೆಂಕಟರಮಣಪ್ಪ ಮಾತನಾಡಿ, ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವವರ ಮಕ್ಕಳಿಗೆ ವಿದ್ಯಾಭ್ಯಾಸ, ಮದುವೆ ಕೆಲಸಗಳಿಗೆ ಧನ ಸಹಾಯ ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ 20 ಲಕ್ಷ ಕಾರ್ಮಿಕರು ಇಲಾಖೆಯಲ್ಲಿ ನೋಂದಣಿಯಾಗಿದ್ದು, ಅರ್ಹರಿಗೆ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಸಂಸದರಾದ ಎಸ್.ಪಿ.ಮುದ್ದಹನುಮೇಗೌಡ, ಬಿ.ಎನ್.ಚಂದ್ರಪ್ಪ, ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿದರು. ಈ ವೇಳೆ ಕಟ್ಟಡ ಕಾರ್ಮಿಕರಿಗೆ ಕೆನರಾ ಬ್ಯಾಂಕ್‌ನ ಡೆಬಿಟ್ ಕಾರ್ಡ್ ವಿತರಿಸಲಾಯಿತು. ಅರ್ಹ ಫಲಾನುಭವಿಗಳಿಗೆ ವಿದ್ಯಾಭ್ಯಾಸ, ಮದುವೆ ಮುಂತಾದವುಗಳಿಗೆ ಉಪಯೋಗವಾಗುವಂತೆ ಪ್ರೋತ್ಸಾಹ ಧನದ ಚೆಕ್ ವಿತರಿಸಲಾಯಿತು. ಆಯ್ಕೆಯಾದ ಅಭ್ಯರ್ಥಿಗಳಿಗೆ ವಿವಿಧ ಕಂಪನಿಗಳಿಂದ ಸ್ಥಳದಲ್ಲಿಯೇ ನೇಮಕಾತಿ ಪತ್ರ ನೀಡಲಾಯಿತು.
ಈ ಮೇಳದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್, ಜಿಪಂ ಉಪಾಧ್ಯಕ್ಷೆ ಶಾರದಾ, ಜಿಪಂ ಸಿಇಒ ಶುಭಾಕಲ್ಯಾಣ್, ತಾಪಂ ಅಧ್ಯಕ್ಷ ಗಂಗಾಂಜನೇಯ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಆಯುಕ್ತೆ ಜಿ.ಸತ್ಯವತಿ, ಕಾರ್ಮಿಕ ಆಯುಕ್ತ ಪಾಲಯ್ಯ, ಮಹಾನಗರ ಪಾಲಿಕೆ ಆಯುಕ್ತ ಸಿ.ಭೂಪಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೋನ ವಂಶಿಕೃಷ್ಣ, ಚಿತ್ರದುರ್ಗ ಜಿಲ್ಲಾಧಿಕಾರಿ ವಿನೋತ್ ಪ್ರಿಯ, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಸೇರಿದಂತೆ ಮತ್ತಿತರ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗ: ಈ ಮೇಳದಲ್ಲಿ ಭಾಗವಹಿಸಲು 106 ವಿವಿಧ ಕಂಪನಿಗಳ ಉದ್ಯೋಗದಾತರು ಹಾಗೂ 20 ಸಾವಿರಕ್ಕೂ ಹೆಚ್ಚು ಉದ್ಯೋಗಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಮೇಳವನ್ನು ನಾಟಕೀಯವಾಗಿ ತೋರಿಕೆಗಾಗಿ ಆಯೋಜಿಸಿಲ್ಲ. ನೋಂದಾಯಿಸಿಕೊಂಡಿರುವ ಎಲ್ಲರಿಗೂ ಉದ್ಯೋಗ ದೊರೆಯದೆ ಇರಬಹುದು. ಉದ್ಯೋಗಾವಕಾಶಕ್ಕಾಗಿ ಬಂದ ಅರ್ಹ ಅಭ್ಯರ್ಥಿಗಳಿಗೆ ವಿದ್ಯಾರ್ಹತೆಗೆ ತಕ್ಕಂತೆ ಖಂಡಿತವಾಗಿ ಉದ್ಯೋಗ ದೊರೆಯುತ್ತದೆ ಎಂದು ಡಿಸಿಎಂ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ
ಮಧುಗಿರಿ: ಕಚೇರಿಯಲ್ಲೇ DYSP ರಾಸಲೀಲೆ!!: ವಿಡಿಯೋ ಸೆರೆ
Minister ಸೋಮಣ್ಣ, ಸಿ.ಎಸ್. ಹೆಸರಲ್ಲಿ ನಕಲಿ ಸಹಿ, ಲೆಟರ್‌ಹೆಡ್: ಬಂಧನ
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.