ಅಂತರ್ಜಲ ಉಳಿವಿಗೆ ಅಟಲ್ ಭೂಜಲ ಯೋಜನೆ
Team Udayavani, Mar 3, 2020, 3:00 AM IST
ತುಮಕೂರು: ಸದಾ ಬರಗಾಲ ಎದುರಿಸುತ್ತಿರುವ ಕಲ್ಪತರು ನಾಡಿನ 6 ತಾಲೂಕುಗಳಲ್ಲಿ ದಿನೇ-ದಿನೆ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಈ ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಸುಧಾರಿಸಲು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅಟಲ್ ಭುಜಲ್ ಯೋಜನೆ ಜಾರಿಗೆ ಕ್ರಮ ಕೈಗೊಳ್ಳಲಾಗಿದೆ.
ಮನುಷ್ಯ ಸೇರಿದಂತೆ ಜಗತ್ತಿನ ಎಲ್ಲಾ ಜೀವ ಸಂಕುಲಗಳ ಇರುವಿಕೆಗೆ ಜೀವ ಜಲವಾದ ನೀರು ಅತ್ಯಾವಶ್ಯ ಭೂಮಿಯ ಮುಕ್ಕಾಲು ಭಾಗ ನೀರಿನಿಂದ ಆವೃತವಾಗಿದ್ದರೂ ಇದರಲ್ಲಿ ಕೇವಲ ಶೇ.2.50ರಷ್ಟು ಮಾತ್ರ ಬಳಕೆಗೆ ಯೋಗ್ಯ ಸಿಹಿ ನೀರು ದೊರಕುತ್ತದೆ. ಉಳಿದಂತೆ ಶೇ.97.50ರಷ್ಟು ನೀರು ಉಪ್ಪಿನಿಂದ ಕೂಡಿದ್ದು, ಬಳಕೆಗೆ ಯೋಗ್ಯವಿರುವುದಿಲ್ಲ.
ಸಮಾಜಕ್ಕೆ ದೊಡ್ಡ ಸವಾಲು: ನಾಗರಿಕತೆ ಬೆಳೆದು ನಗರೀಕರಣ ಹೆಚ್ಚಿದಂತೆ ಅತಿಯಾದ ಅಂತರ್ಜಲ ಬಳಕೆಯಾಗುತ್ತಿರುವುದರಿಂದ ಬಳಕೆಗೆ ಯೋಗ್ಯವಾದ ನೀರಿನ ಅಭಾವ ಹೆಚ್ಚುತ್ತಿದೆ. ನೀರಿನ ಅಭಾವವು ಮುಂದಿನ ದಿನಗಳಲ್ಲಿ ಸಮಾಜದ ದೊಡ್ಡ ಸವಾಲಾಗಿ ಪರಿಣಮಿಸಲಿದೆ. ಈ ಸವಾಲನ್ನು ಎದುರಿಸಲು ಅಂತರ್ಜಲ ಅಭಿವೃದ್ಧಿ, ಮಳೆ ನೀರು ಕೊಯ್ಲು, ಮತ್ತಿತರ ಜಲಸಂರಕ್ಷಣಾ ಕ್ರಮಗಳನ್ನು ಅನುಸರಿಸುವುದೊಂದೆ ಉತ್ತಮ ಮಾರ್ಗೋಪಾಯವಾಗಿದೆ.
ಅಟಲ್ ಭೂಜಲ ಯೋಜನೆ ಜಾರಿ: ಜಲ ಸಂರಕ್ಷಣಾ ಕ್ರಮಗಳನ್ನು ಅನುಸರಿಸುವುದರಿಂದ ಉಪಯುಕ್ತ ನೀರಿನ ಬಳಕೆಯ ಅಭಾವವನ್ನು ಪೂರ್ಣ ಪ್ರಮಾಣದಲ್ಲಿ ನಿವಾರಣೆ ಮಾಡಲು ಸಾಧ್ಯವಿಲ್ಲದಿದ್ದರೂ, ನೀರಿನ ಕೊರತೆ ನೀಗಿಸುವ ಪ್ರಯತ್ನ ಮಾಡಬಹುದಾಗಿದೆ. ನೀರಿನ ಕೊರತೆಯನ್ನು ನೀಗಿಸುವ ಸಲುವಾಗಿ ಅತಿಯಾದ ಅಂತರ್ಜಲ ಬಳಕೆಯನ್ನು ತಗ್ಗಿಸಿ ಭೂಜಲ ಅಭಿವೃದ್ಧಿಗೊಳಿಸಲು ಕೇಂದ್ರ ಸರ್ಕಾರವು ಮಹತ್ವಾಕಾಂಕ್ಷಿಯಾದ ಅಟಲ್ ಭೂಜಲ ಯೋಜನೆ ಜಾರಿಗೆ ತಂದಿದೆ.
ಯೋಜನೆ ಉದ್ದೇಶಗಳು: ವಿವಿಧ ಕಾರ್ಯ ಯೋಜನೆಗಳನ್ನು ಹಮ್ಮಿಕೊಂಡು ಅತಿಯಾದ ಅಂತರ್ಜಲ ಬಳಕೆ ಕಡಿಮೆಗೊಳಿಸಿ ಭೂ ಜಲ ಅಭಿವೃದ್ಧಿ ಗೊಳಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಅಲ್ಲದೆ ಈ ಯೋಜನೆಯಡಿ ಅಂತರ್ಜಲವನ್ನು ಅತಿಯಾಗಿ ಬಳಕೆ ಮಾಡುವ ಪ್ರದೇಶಗಳಲ್ಲಿ ಭೂಜಲ ಅಭಿವೃದ್ಧಿಗೊಳಿಸಲು ಬಾವಿ, ಕೊಳವೆ ಬಾವಿ, ನದಿ, ಕೆರೆ, ಕೃಷಿ ಹೊಂಡ, ಚೆಕ್ ಡ್ಯಾಂ ನಿರ್ಮಾಣ, ಮಳೆ ನೀರು ಸಂಗ್ರಹಣೆ ಮತ್ತು ಸಂರಕ್ಷಣೆ, ಸುಸ್ಥಿರ ಅಂತರ್ಜಲ ನಿರ್ವಹಣೆ, ನೀರಿನ ಮಿತವ್ಯಯ ಬಳಕೆ ಬಗ್ಗೆ ಜನ ಜಾಗೃತಿ, ಜನ-ಜಾನುವಾರುಗಳಿಗೆ ಗುಣಮಟ್ಟದ ನೀರು ಒದಗಿಸುವ, ನೀರಿನ ಮೂಲಗಳನ್ನು ಅಭಿವೃದ್ಧಿಪಡಿಸುವ, ಅಂತರ್ಜಲ ಮರುಪೂರೈಕೆ ಮಾಡುವ ಯೋಜನೆ ರೂಪಿಸಿ ಕಾರ್ಯಗತಗೊಳಿಸಲಾಗುವುದು.
ಅಂತರ್ಜಲ ಮೌಲೀಕರಣ: ಕೇಂದ್ರ ಸರ್ಕಾರದ ಮಾರ್ಗ ಸೂಚಿಯಂತೆ ಪ್ರತಿ 2 ವರ್ಷಗಳಿಗೊಮ್ಮೆ ರಾಜ್ಯದ ಅಂತರ್ಜಲ ಸಂಪನ್ಮೂಲದ ಮೌಲೀಕರಣ ಮಾಡಲಾಗುತ್ತಿದೆ. ಮೌಲೀಕರಣವನ್ನು “ಅಂತರ್ಜಲ ಅತಿಬಳಕೆ’ (ಅಂತರ್ಜಲ ಬಳಕೆಯು ವಾರ್ಷಿಕ ಮರುಪೂರಣ ಪ್ರಮಾಣದ ಶೇ. 100 ಕ್ಕಿಂತ ಹೆಚ್ಚು ಬಳಕೆ), “ಕ್ಲಿಷ್ಟಕರ’ (ಅಂತರ್ಜಲ ಬಳಕೆ ಪ್ರಮಾಣ ಶೇ.90 ರಿಂದ 100), ‘ಅರೆಕ್ಲಿಷ್ಟಕರ’ (ಅಂತರ್ಜಲ ಬಳಕೆ ಪ್ರಮಾಣ ಶೇ.70 ರಿಂದ 90), “ಸುರಕ್ಷಿತ’ (ಬಳಕೆ ಪ್ರಮಾಣ ಶೇ.70 ಕ್ಕಿಂತ ಕಡಿಮೆ)ವೆಂದು ವರ್ಗಿಕರಿಸಲಾಗಿದೆ.
ಅದರಂತೆ ಕಳೆದ 2017ರಲ್ಲಿ ಕೈಗೊಂಡಿರುವ ಅಂತರ್ಜಲ ಮೌಲೀಕರಣದನ್ವಯ ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಕೊರಟಗೆರೆ, ಮಧುಗಿರಿ, ತಿಪಟೂರು, ತುಮಕೂರು ತಾಲೂಕುಗಳನ್ನು ಅಂತರ್ಜಲ ಅತಿ ಬಳಕೆ, ಶಿರಾ ತಾಲೂಕನ್ನು ಕ್ಲಿಷ್ಟಕರ, ಪಾವಗಡ ತಾಲೂಕನ್ನು ಅರೆ ಕ್ಲಿಷ್ಟಕರ ಹಾಗೂ ಗುಬ್ಬಿ, ಕುಣಿಗಲ್, ತುರುವೇಕೆರೆ ತಾಲೂಕುಗಳನ್ನು ಸುರಕ್ಷಿತವೆಂದು ವರ್ಗೀಕರಿಸಲಾಗಿದೆ.
ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಕ್ರಮ: ಅಂತರ್ಜಲ ಅತಿ ಬಳಕೆ ಹಾಗೂ ಕ್ಲಿಷ್ಟಕರವೆಂದು ವರ್ಗೀಕರಿಸಲಾಗಿರುವ ತಾಲೂಕುಗಳಲ್ಲಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಜಿಲ್ಲೆಯ ನೀರಿನ ಲಭ್ಯತೆಯನ್ನಾಧರಿಸಿ ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿ ನೀರನ್ನು ಒದಗಿಸಲು ಪ್ರತಿ ಗ್ರಾಪಂ ಮಟ್ಟದಲ್ಲಿರುವ ಬಾವಿ, ಕೊಳವೆ ಬಾವಿ, ನದಿ, ಕೆರೆ, ಕೃಷಿಹೊಂಡ, ಚೆಕ್ ಡ್ಯಾಂ ಮತ್ತು ಇತ್ಯಾದಿಗಳನ್ನಾಧರಿಸಿ ನೀರಿನ ಆಯವ್ಯಯವನ್ನು ತಯಾರಿಸಲಾಗುತ್ತಿದೆ. ನಂತರ ಕೃಷಿ, ಜನ-ಜಾನುವಾರುಗಳಿಗೆ ಕುಡಿಯಲು, ದೈನಂದಿನ ಬಳಕೆಯ ಬೇಡಿಕೆ ಗನುಗುಣವಾಗಿ ಸಮಗ್ರ ನೀರಿನ ಭದ್ರತಾ ಯೋಜನೆ ರೂಪಿಸಲಾಗುವುದು.
ಅಂತರ್ಜಲ ಮರು ಪೂರೈಕೆಗೆ ಆದ್ಯತೆ: ಯೋಜನೆಯಡಿ ಸಮರ್ಪಕ ಅಂತರ್ಜಲ ಬಳಕೆಗೆ ಎಷ್ಟು ಪ್ರಾಮುಖ್ಯ ನೀಡಲಾಗುವುದೋ ಅದರ ಮರು ಪೂರೈಕೆಗೆ ಅಷ್ಟೇ ಆದ್ಯತೆ ನೀಡಲಾಗುವುದು. ಮರು ಪೂರೈಕೆಯಾಗದಿದ್ದಲ್ಲಿ ನೈಸರ್ಗಿಕವಾಗಿ ಕಾಲಕಾಲಕ್ಕೆ ಸರಿಯಾಗಿ ಮಳೆ ಆಗದೆ ಮಳೆ ಪ್ರಮಾಣದಲ್ಲಿ ಏರುಪೇರು ಉಂಟಾಗುತ್ತದೆ. ಇದರಿಂದ ಅಂತರ್ಜಲ ಪೂರೈಕೆಗಿಂತ ಬಳಕೆ ಹೆಚ್ಚಾಗಿ ಅಸಮತೋಲನ ಉಂಟಾಗಲಿದೆ. ಇದನ್ನು ಸರಿಪಡಿಸಬೇಕಾದಲ್ಲಿ ಅಂತರ್ಜಲ ಕೃತಕ ಮರುಪೂರೈಕೆ ರಚನೆಗಳನ್ನು ನಿರ್ಮಿಸುವುದು ಅತಿ ಅವಶ್ಯಕ.
ನೀರಿನ ಗುಣಮಟ್ಟ ತಿಳಿಯಿರಿ: ನೀರಿನ ಗುಣಮಟ್ಟ ಅರಿಯದೆ ಅಂತರ್ಜಲ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಯಿರುತ್ತದೆ. ಕುಡಿಯುವ ನೀರಾಗಲೀ, ವ್ಯವಸಾಯದ ಉಪಯೋಗಕ್ಕಾಗಲೀ ನೀರನ್ನು ಮೊದಲು ವಿಶ್ಲೇಷಿಸಿ ಅದರ ಗುಣಧರ್ಮವನ್ನು ಅರಿತು ಬಳಸುವುದು ಸೂಕ್ತ. ಭಾರತೀಯ ಮಾಸಿಕ 10500:2012ರಂತೆ ನೀರಿನಲ್ಲಿ ಕ್ಯಾಲ್ಸಿಯಂ, ಮೆಗ್ನಿಷಿಯಂ, ಕಬ್ಬಿಣ, ಕ್ಲೋರೈಡ್, ನೈಟ್ರೇಟ್, ಸಲ್ಫೆಟ್, ಪ್ಲೋರೈಡ್, ಟಿ.ಡಿ.ಎಸ್., ಗಡಸುತನ, ಪಿ.ಎಚ್. ಪ್ರಮಾಣವು ಪರಿಮಿತಿಗಿಂತ ಅಧಿಕವಾಗಿದ್ದರೆ ಮೂತ್ರಜನಕಾಂಗ, ಕರುಳು, ಕ್ಯಾನ್ಸರ್, ಮೂಳೆ, ಜಠರ, ದಂತ ಸಮಸ್ಯೆಗಳುಂಟಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ನೀರನ್ನು ವಿಶ್ಲೇಷಣೆಗೊಳಿಪಡಿಸಿ ಗುಣಮಟ್ಟ ತಿಳಿದು ಬಳಸಬೇಕು.
6 ತಾಲೂಕುಗಳಲ್ಲಿ ಯೋಜನೆ ಅನುಷ್ಠಾನ: ಜಿಲ್ಲೆಯ ಅಂತರ್ಜಲ ಮಟ್ಟ ಅಧ್ಯಯನ ಹಾಗೂ ಮೌಲೀಕರಣದಿಂದ ಅಂತರ್ಜಲ ಶೋಷಿತ ತಾಲೂಕುಗಳೆಂದು ಗುರುತಿಸಲಾದ ಜಿಲ್ಲೆಯ ತುಮಕೂರು, ಕೊರಟಗೆರೆ, ಮಧುಗಿರಿ, ತಿಪಟೂರು, ಚಿಕ್ಕನಾಯಕನಹಳ್ಳಿ ಹಾಗೂ ಶಿರಾ ತಾಲೂಕುಗಳಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಜಿಲ್ಲೆಯ ಅಂತರ್ಜಲ ಮಟ್ಟ: ಅಂತರ್ಜಲ ಮಟ್ಟವನ್ನು ತಿಳಿಯಲು ಜಿಲ್ಲೆಯಲ್ಲಿ 74 ಅಧ್ಯಯನ ಕೊಳವೆ ಬಾವಿಗಳನ್ನು ಗುರುತಿಸಲಾಗಿದ್ದು, ಈ ಕೊಳವೆ ಬಾವಿಗಳ ನೆರವಿನಿಂದ ಪ್ರತಿ ಮಾಹೆಯಲ್ಲಿಯು ಅಂತರ್ಜಲ ಮಟ್ಟವನ್ನು ದಾಖಲಿಸಲಾಗುತ್ತಿದೆ. ಈ ದಾಖಲೆಯನ್ವಯ 2019ರಲ್ಲಿ ಸ್ಥಿರ ಜಲ ಮಟ್ಟವು (ಭೂಮಟ್ಟದಿಂದ ಕೆಳಗೆ) ಸರಾಸರಿ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 20.81 ಮೀ., ಗುಬ್ಬಿ-34.32 ಮೀ., ಕೊರಟಗೆರೆ-29.64 ಮೀ., ಕುಣಿಗಲ್-25.85 ಮೀ., ಮಧುಗಿರಿ-18.35 ಮೀ., ಪಾವಗಡ-29.48., ಶಿರಾ-20.69 ಮೀ., ತಿಪಟೂರು-36.05 ಮೀ., ತುಮಕೂರು-26 ಮೀ., ಹಾಗೂ ತುರುವೇಕೆರೆ ತಾಲೂಕಿನಲ್ಲಿ 21.20 ಮೀ.ನಷ್ಟಿರುತ್ತದೆ.
ನೀರಿದ್ದರೆ ಮಾತ್ರ ದೇಶದ ಪ್ರಗತಿ. ಇಲ್ಲದಿದ್ದರೆ ನಿರ್ಗತಿ. ಜೀವಕ್ಕಾಗಿ ಜೀವಜಲ ಅತ್ಯಾವಶ್ಯ. ಮಿತವಾಗಿ ನೀರನ್ನು ಬಳಸಿ ನೆಲ-ಜಲ ಬಾಳಿಕೆಗೆ ಎಲ್ಲರೂ ಕೈಜೋಡಿಸಬೇಕು. ಸುಸ್ಥಿರವಾಗಿ ಅಂತರ್ಜಲ ನಿರ್ವಹಣೆ ಮಾಡುವುದರಿಂದ ರೈತರೂ ಆರ್ಥಿಕವಾಗಿ ಸಬಲರಾಗುತ್ತಾರೆ. ಈ ನಿಟ್ಟಿನಲ್ಲಿ ಭೂ ಜಲ ಅಭಿವೃದ್ಧಿ ಪಡಿಸಲು ಹರಿವ ನೀರನ್ನು ನಿಲ್ಲಿಸಿ-ನಿಂತ ನೀರನ್ನು ಇಂಗಿಸುವ ಮೂಲಕ ಅಟಲ್ ಭೂ ಜಲ ಯೋಜನೆ ಯಶಸ್ವಿಗೆ ನಾವೆಲ್ಲ ಮನಸು ಮಾಡಬೇಕು.
-ಕೆ.ಗುರು, ಕಾರ್ಯಪಾಲಕ ಎಂಜಿನಿಯರ್, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.