ಜನನ ಮತ್ತು ಮರಣ ನೋಂದಣಿ ಕಾಯ್ದೆಗೆ ತಿದ್ದುಪಡಿ: ವಕೀಲರ ಸಂಘದಿಂದ ಪ್ರತಿಭಟನೆ
ರಾಜ್ಯ ಸರಕಾರದ ವಿರುದ್ದ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ ವಕೀಲರ ಸಂಘ
Team Udayavani, Jul 25, 2022, 5:14 PM IST
ಕೊರಟಗೆರೆ: ಜನನ ಮತ್ತು ಮರಣ ನೋಂದಣಿ ಕಾಯ್ದೆಯನ್ನು ತಿದ್ದುಪಡಿ ಮಾಡಿ ಕೊರಟಗೆರೆ ಜೆಎಂಎಫ್‌ಸಿ ನ್ಯಾಯಾಲಯದ ಬದಲಾಗಿ ಮಧುಗಿರಿ ಎಸಿ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿರುವ ಆದೇಶದ ವಿರುದ್ದ ಕೊರಟಗೆರೆ ವಕೀಲರ ಸಂಘ ರಾಜ್ಯ ಸರಕಾರದ ವಿರುದ್ದ ಸೋಮವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದೆ.
ಕೊರಟಗೆರೆ ಪಟ್ಟಣದ ಸಿವಿಲ್ ನ್ಯಾಯಾಲಯದ ಕಚೇರಿಯಿಂದ ಮುಖ್ಯರಸ್ತೆಯ ಮೂಲಕ ಕಾಲ್ನಡಿಗೆಯಲ್ಲಿ ಕಂದಾಯ ಕಚೇರಿಗೆ ವಕೀಲರ ಸಂಘದ ಪದಾಧಿಕಾರಿಗಳು ಆಗಮಿಸಿ ತಹಶೀಲ್ದಾರ್ ನಾಹೀದಾರವರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿ ಗ್ರಾಮೀಣ ಪ್ರದೇಶದ ಜನವಿರೋಧಿ ಆದೇಶವನ್ನು ತಕ್ಷಣ ರದ್ದುಪಡಿಸುವಂತೆ ಆಗ್ರಹಿಸಿದರು.
ಕೊರಟಗೆರೆ ವಕೀಲರ ಸಂಘದ ಅಧ್ಯಕ್ಷ ಬಿ.ಎಲ್.ನಾಗರಾಜು ಮಾತನಾಡಿ ಜನನ ಮತ್ತು ಮರಣ ನೋಂದಣಿ ಕಾಯ್ದೆಯ ತಿದ್ದುಪಡಿ ಆದೇಶದಿಂದ ಜನಸಾಮಾನ್ಯರಿಗೆ ಸಾಕಷ್ಟು ಸಮಸ್ಯೆ ಆಗಲಿದೆ. ಸರಕಾರದ ಏಕಾಏಕಿ ಆದೇಶದಿಂದ ಜನಸಾಮಾನ್ಯ, ಕಕ್ಷಿದಾರ ಮತ್ತು ವಕೀಲರಿಗೆ ಜನನ ಮತ್ತು ಮರಣ ಧೃಡೀಕರಣ ಪತ್ರ ಪಡೆಯಲು ತೊಂದರೆ ಮತ್ತು ದುಬಾರಿ ಆಗಲಿದೆ. ಸರಕಾರ ಮಾಡಿರುವ ಆದೇಶವನ್ನು ತಕ್ಷಣ ರದ್ದುಪಡಿಸುವಂತೆ ವಕೀಲರ ಸಂಘದ ಆಗ್ರಹಿಸಿದರು.
ಹಿರಿಯ ವಕೀಲರಾದ ಟಿ.ಕೃಷ್ಣಮೂರ್ತಿ ಮಾತನಾಡಿ, ಗ್ರಾಮೀಣ ಪ್ರದೇಶದ ಗಡಿಭಾಗದ ಜನತೆ ವಾಹನದ ಸೌಲಭ್ಯವಿಲ್ಲದೆ ಕೊರಟಗೆರೆ ಪಟ್ಟಣಕ್ಕೆ ಬರುವುದೇ ಕಷ್ಟಸಾಧ್ಯ. ಈಗ ಮಧುಗಿರಿಗೆ ಹೇಗೆ ಹೋಗುವುದು, ಯಾರನ್ನು ಭೇಟಿ ಆಗುವುದು ಎಂಬುದೇ ಯಕ್ಷಪ್ರಶ್ನೆ. ಈಗಾಗಲೇ ಕಂದಾಯ ಇಲಾಖೆಯಲ್ಲಿ ನೂರಾರು ಕಡತಗಳು ವಿಲೇವಾರಿ ಆಗದ ಪರಿಣಾಮ ನ್ಯಾಯಾಲಯಕ್ಕೆ ಬರುತ್ತಿವೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಸರಕಾರ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕೊರಟಗೆರೆ ವಕೀಲರ ಸಂಘದ ಉಪಾಧ್ಯಕ್ಷ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ, ಜಂಟಿಕಾರ್ಯದರ್ಶಿ ಹುಸೇನ್ ಪಾಷ, ಖಜಾಂಚಿ ಸಂತೋಷಲಕ್ಷ್ಮೀ , ವಕೀಲರ ಸಂಘದ ಮಾಜಿ ಅಧ್ಯಕ್ಷ ದೇವರಾಜು, ವಕೀಲರಾದ ಶಿವರಾಮಯ್ಯ, ಕೃಷ್ಣಮೂರ್ತಿ, ಅನಿಲ್‌ಕುಮಾರ್, ಸಂತೋಷ್, ನರಸಿಂಹರಾಜು, ಮಂಜುನಾಥ, ಕೃಷ್ಣಪ್ಪ, ಅನಂತರಾಜು, ನಾಗರಾಜು, ಅರುಂಧತಿ, ಕೆಂಪರಾಜಮ್ಮ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.