ಜಿಲ್ಲೆಯ ರೈತರನ್ನು ಕಾಡುತ್ತಿರುವ ಕೊರೊನಾ
Team Udayavani, Mar 17, 2020, 3:00 AM IST
ವಿಶ್ವವನ್ನೇ ನಡುಗಿಸುತ್ತಿರುವ ಕೊರೊನಾ ವೈರಸ್ ಮಹಾಮಾರಿಯಿಂದ ರೈತರು ಕಂಗಾಲಾಗುತ್ತಿದ್ದಾರೆ, ಬರದಲ್ಲಿಯೂ ಬೆಳೆದ ಬೆಳೆಗಳ ಬೆಲೆ ಕುಸಿತ ಉಂಟಾಗಿದೆ. ಈ ವೇಳೆಯಲ್ಲಿ ಅಧಿಕ ಬೆಲೆಗೆ ಮಾರಾಟವಾಗುತ್ತಿದ್ದ ಸೊಪ್ಪು, ತರಕಾರಿ ಬೆಲೆ ಕುಸಿತ ದಿಂದ ಕಂಗಾಲಾಗಿ ಕಲ್ಪತರು ನಾಡಿನಲ್ಲಿ ಕೊಬ್ಬರಿಯಂತೆಯೇ ಹೆಚ್ಚು ಪ್ರಸಿದ್ಧಿ ಪಡೆದಿರುವ ಹುಣಸೆಹಣ್ಣನ್ನು ತುಮಕೂರು ಎಪಿಎಂಸಿಯಲ್ಲಿ ರೈತರಿಂದ ಕೊಳ್ಳುವ ಖರೀದಿದಾರರಿಲ್ಲದೇ ಬೆಲೆ ಕುಸಿತ ಉಂಟಾಗಿ ಉತ್ತಮ ಬೆಲೆ ನೀಡಿ ಎಂದು ಬೆಳೆಗಾರರು ಪ್ರತಿಭಟಿಸಿದ್ದಾರೆ.
ತುಮಕೂರು: ರಾಜ್ಯದಲ್ಲಿಯೇ ಹೆಚ್ಚು ಹುಣಸೇ ಬೆಳೆಯುವ ಪ್ರದೇಶ ಎಂದೇ ಪ್ರಸಿದ್ಧಿ ಪಡೆದಿರುವ ಕಲ್ಪತರು ನಾಡಿನ ಹುಣಸೇ ಹಣ್ಣು ಎಂದರೆ ಹೊರರಾಜ್ಯದಲ್ಲಿ ಪ್ರಸಿದ್ಧಿ ಆದರೆ ಈ ಹುಣಸೆ ಹಣ್ಣಿಗೆ ಕೊರೊನಾ ವೈರಸ್ ನಿಂದ ಬೆಲೆ ಕುಸಿತ ಎದುರಾಗಿ ರೈತರು ಕಂಗಾಲಾಗಿದ್ದಾರೆ.
ಯುಗಾದಿ ಹಬ್ಬ ಬರುತ್ತಿದೆ ಹುಣಸೆ ಹಣ್ಣಿಗೆ ಒಳ್ಳೆಯ ಬೆಲೆ ಬರುತ್ತದೆ ಎಂದು ಜಿಲ್ಲೆಯ ಹುಣಸೇ ಬೆಳೆಗಾರರು ಸೋಮವಾರ ತುಮಕೂರು ಎಪಿಎಂಸಿ ಮಾರುಕಟ್ಟೆಗೆ ಜಿಲ್ಲೆಯ ವಿವಿಧ ಭಾಗಗಳಿಂದ ಹೆಚ್ಚಿನ ಸಂಖೆಯಲ್ಲಿ ಬಂದಿದ್ದರು ಆದರೆ ಮಾರುಕಟ್ಟೆಯಲ್ಲಿ ಹುಣಸೆ ಹಣ್ಣು ಖರೀದಿಸುವ ಖರೀದಿದಾರರಿಲ್ಲದೇ ಹುಣಸೇ ಬೆಲೆ ದಿಢೀರ್ ಕುಸಿತ ಕಂಡಿದೆ. ಹುಣಸೆ ಹಣ್ಣಿನ ಬೆಲೆ ದಿಢೀರ್ ಕುಸಿತವಾದ ಹಿನ್ನೆಲೆಯಲ್ಲಿ ಹುಣಸೆ ಬೆಳೆಗಾರರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿದರು.
ರೈತರ ಒತ್ತಾಯ: ಕಳೆದ ಹದಿನೈದು ದಿನದ ಹಿಂದೆ ಒಂದು ಕ್ವಿಂಟಲ್ ಹುಣಸೆ ಹಣ್ಣಿಗೆ 20 ರಿಂದ ಪ್ರಾರಂಭವಾಗಿ 35 ಸಾವಿರದವರೆಗೂ ಬೆಲೆ ಇತ್ತು ಆದರೆ ಈಗ ದಿಢೀರನೆ ಕ್ವಿಂಟಲ್ ಹುಣಸೆ ಹಣ್ಣಿನ ಬೆಲೆ 10 ರಿಂದ 15 ಸಾವಿರ ರೂ.ಗೆ ಇಳಿಕೆಯಾಗಿದೆ. ಇದರಿಂದ ರೈತರು ನಷ್ಟ ಎದುರಿಸುವಂತಾಗಿದೆ. ಹಾಗಾಗಿ ಕಳೆದ ಎರಡು ವಾರಗಳ ಹಿಂದೆ ಇದ್ದ ಬೆಲೆಯನ್ನೇ ನೀಡಬೇಕು ಎಂದು ರೈತರು ಒತ್ತಾಯಿಸಿದರು.
ವಾರದ ಹಿಂದೆನ ಬೆಲೆ ನೀಡಿ: ಕಳೆದ ಎರಡು ವಾರಗಳ ಹಿಂದಿನ ಬೆಲೆಯಂತೆಯೇ ಕೊಳ್ಳಬೇಕು. ಇಲ್ಲದಿದ್ದಲ್ಲಿ ಹುಣಸೆ ಹಣ್ಣು ಕೊಡುವುದೇ ಇಲ್ಲ ಈ ತರ ಏಕಾಏಕಿ ಬೆಲೆ ಕಡಿಮೆ ಮಾಡುವುದಕ್ಕಿಂತ ಒಂದಿಷ್ಟು ವಿಷ ಕೊಟ್ಟುಬಿಡಿ. ಹುಣಸೆ ಹಣ್ಣನ್ನು ಮಾರುಕಟ್ಟೆಗೆ ತರುವುದೇ ಇಲ್ಲ ಎಂದು ರೈತ ಗುಬ್ಬಿಯ ರಂಗಯ್ಯ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಲಾಭವಿರಲಿ ಅಸಲು ದಂಕ್ಕದಂತಾ ಪರಿಸ್ಥಿತಿ: ಹುಣಸೆಹಣ್ಣಿಗೆ ಉತ್ತಮ ಬೆಲೆ ಇದೆ ಎನ್ನುವ ಕಾರಣಕ್ಕೆ ಮರದಲ್ಲಿಯೇ 10 ಸಾವಿರ ಬೆಲೆ ನೀಡಿ ಕೊಂಡಿದ್ದೇನೆ. ಹುಣಸೆ ಹಣ್ಣು ಬಡಿಯುವುದಕ್ಕೆ ಹಾಗೂ ಅದನ್ನು ಕುಟ್ಟಿ ನಾರು, ಬೀಜ ತೆಗೆದು ಹೂಹಣ್ಣು ಮಾಡುವುದಕ್ಕೆ ಮೂರರಿಂದ ನಾಲ್ಕು ಸಾವಿರ ಖರ್ಚಾಗುತ್ತದೆ. ಒಂದು ಕ್ವಿಂಟಲ್ ಹಣ್ಣನ್ನು ಮಾರುಕಟ್ಟೆ ತರುವಷ್ಟರಲ್ಲಿ ಸುಮಾರು 12ರಿಂದ15 ಸಾವಿರ ಖರ್ಚಾಗುತ್ತದೆ. ಆದರೆ, ಈಗ ಏಕಾಏಕಿ ದರ 10 ಸಾವಿರಕ್ಕೆ ಕುಸಿತವಾಗಿದೆ. ಲಾಭವಿರಲಿ, ಅಸಲು ದಕ್ಕದಂತಾಗಿದೆ. ಹಾಗಾಗಿ ಈ ಹಿಂದೆ ನಿಗದಿ ಮಾಡಲಾಗುತ್ತಿದ್ದ ಬೆಲೆಯನ್ನೇ ನಿಗದಿ ಮಾಡಬೇಕು ಎಂದು ವ್ಯಾಪಾರಸ್ಥ ಶಿರಾ ನಿಂಬೆ ಮೆದಹಳ್ಳಿಯ ಕುಮಾರ್ ಒತ್ತಾಯಿಸಿದರು.
ಜಿಲ್ಲೆಯ ಹುಣಸೆಹಣ್ಣಿಗೆ ವಿದೇಋಶದಲ್ಲೂ ಬೇಡಿಕೆ: ತುಮಕೂರು ಜಿಲ್ಲೆ ತೆಂಗು ಬೆಳೆಗೆ ಪ್ರಸಿದ್ಧಿ ಪಡೆದಿರುವಂತೆಯೇ ಮಾವು, ಹಲಸು,ಹುಣಸೇ ಹಣ್ಣಿಗೂ ಪ್ರಸಿದ್ಧಿ ಇಲ್ಲಿಯ ಹುಣಸೆ ಹಣ್ಣಿಗೆ ಹೊರ ರಾಜ್ಯಗಳಲ್ಲಿ ಹಾಗೂ ವಿದೇಶ ದಲ್ಲಿಯೂ ಭಾರೀ ಬೇಡಿಕೆ ಇದೆ. ಇಲ್ಲಿಯ ಕೃಷಿಉತ್ಪನ್ನ ಮಾರುಕಟ್ಟೆಯ ಹುಣಸೆ ಹಣ್ಣು ಕೇರಳ, ತಮಿಳುನಾಡು, ಹೈದರಾಬಾದ್, ಹರಿಯಾಣ, ಮಹರಾಷ್ಟ್ರ, ದೆಹಲಿ ಸೇರಿದಂತೆ ಹೊರದೇಶಕ್ಕೂ ರಫ್ತಾಗುತ್ತದೆ.
ತುಮಕೂರು ಮಾರುಕಟ್ಟೆಗೆ ಜಿಲ್ಲೆಯ ಗುಬ್ಬಿ, ಚಿಕ್ಕನಾಯಕನಹಳ್ಳಿ, ಶಿರಾ, ಮಧುಗಿರಿ, ಪಾವಗಡ, ಕೊರಟಗೆರೆ, ತಿಪಟೂರು, ತುರುವೇಕೆರೆ, ಕುಣಿಗಲ್ ಸೇರಿದಂತೆ ವಿವಿಧ ಕಡೆಗಳಿಂದ ಸಾವಿರಾರು ಕ್ವಿಂಟಲ್ ಹಣ್ಣು ಮಾರುಕಟ್ಟೆ ಬರುತ್ತದೆ. ಬರದಲ್ಲಿ ಬಸವಳಿದಿದ್ದ ರೈತರಿಗೆ ಈ ಬಾರಿ ಹುಣಸೆ ಪ್ರಾರಂಭದಲ್ಲಿ ಕೈ ಹಿಡಿದು ಉತ್ತಮ ಬೆಲೆ ಬಂದಿತ್ತು, 35 ಸಾವಿರದಿಂದ 40 ಸಾವಿರದ ವರೆಗೆ ಇತ್ತು ಇದರಿಂದ ಬೆಳೆಗಾರರಲ್ಲಿ ಮಂದಹಾಸ ಮೂಡಿತ್ತು.
ಅತ್ಯುತ್ತಮ ಗುಣಮಟ್ಟದ ಒಂದು ಕ್ವಿಂಟಲ್ ಸ್ಪೆಷಲ್ ಹುಣಸೆ ಹಣ್ಣಿನ ದರವೂ 35 ರಿಂದ 40 ಸಾವಿರ ರೂ. ಇತ್ತು, ಒಂದು ಕ್ವಿಂಟಲ್ ಹುಣಸೆ ಹಣ್ಣಿನ ದರ ಈಗ 10 ರಿಂದ 15 ಸಾವಿರದವರೆಗೂ ಇದೆ. ಗುಣಮಟ್ಟದ ಆಧಾರದ ಮೇಲೆ ಹುಣಸೆ ಹಣ್ಣಿನ ಬೆಲೆ ನಿಗದಿಯಾಗಲಿದೆ. ತುಮಕೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ವಾರದಲ್ಲಿ ಸೋಮವಾರ ಮತ್ತು ಗುರುವಾರ ವ್ಯಾಪಾರ ವಹಿವಾಟು ನಡೆಯುತ್ತದೆ,
ಏಕಾಏಕಿ ಬೆಲೆ ಕಡಿಮೆ ಮಾಡಬಾರದು: ಯುಗಾದಿ ಹಬ್ಬ ಮಾಡಲು ನಾವು ತುಮಕೂರು ಎಪಿಎಂಸಿಗೆ ಹುಣಸೆಹಣ್ಣು ತಂದರೆ ದಿಢೀರನೆ ಬೆಲೆ ಕುಸಿತ ಮಾಡಿದ್ದಾರೆ ಕಾರಣ ಕೇಳಿದರೆ ಮೋಡ ಮುಸುಕಿದ ವಾತಾವರಣ ಮತ್ತು ಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ ಎಂದೆಲ್ಲಾ ಹೇಳುತ್ತಿದ್ದಾರೆ. ಚಳ್ಳಕೆರೆಯಲ್ಲಿ ಕಡಿಮೆ ಇದೆ ನೋಡಿ ಎನ್ನುತ್ತಾರೆ, ಆದರೆ ಹಿಂದೂಪುರ ಮಾರುಕಟ್ಟೆಯಲ್ಲಿ ಇಲ್ಲಿನ ಬೆಲೆಗಿಂತಲೂ ಹೆಚ್ಚಿದೆ. ಅಲ್ಲಿ ನಿಗದಿಯಾಗುವ ಬೆಲೆಯಂತೆಯೇ ಇಲ್ಲಿಯೂ ನಿಗದಿ ಮಾಡಲಿ. ಯಾವ ಕಾರಣಕ್ಕೆ ಬೆಲೆ ಕುಸಿತ ಮಾಡಬೇಕು. ಈ ಬೆಲೆ ಕುಸಿತದಿಂದ ಮಾರುಕಟ್ಟೆಗೆ ಹುಣಸೆ ತಂದು ನಾವು ನಷ್ಟ ಎದುರಿಸುತ್ತಿದ್ದೇವೆ ಎನ್ನುತ್ತಾರೆ ರೈತರು.
ಸೋಮವಾರ ಎಪಿಎಂಸಿಯಲ್ಲಿ ಹುಣಸೆ ಬೆಲೆಯಲ್ಲಿ ಬೆಲೆ ಕಡಿಮೆಯಾಗಿದೆ. ಹುಣಸೆ ಖರೀದಿದಾರರು ನಿರೀಕ್ಷೆಯಂತೆ ಬಂದಿಲ್ಲ ಹೆಚ್ಚು ಕೊಳ್ಳುವವರು ಬಂದರೆ ಬೆಲೆ ಹೆಚ್ಚಾಗುತ್ತದೆ. ಕಳೆದ ವಾರ ಬೆಲೆ ಇತ್ತು ಸೋಮವಾರ ಹೆಚ್ಚು ಹುಣಸೆ ಮಾರುಕಟ್ಟೆಗೆ ಬಂದಿದೆ. ಆದರೆ ಕೊಳ್ಳುವವರು ಇಲ್ಲ ಇದಕ್ಕೆ ರೈತರು ಪ್ರತಿಭಟಿಸಿದರು. ಖರೀದಿ ದಾರರನ್ನು ಕರೆದು ಮಾತನಾಡಿದ್ದೇನೆ ರೈತರಿಗೆ ತೊಂದರೆ ಆಗದಂತೆ ಖರೀದಿಸಲು ಸೂಚಿಸಿದ್ದೇನೆ.
-ಟಿ.ಆರ್.ಪುಷ್ಪಾ, ಎಪಿಎಂಸಿ, ಕಾರ್ಯದರ್ಶಿ
* ಚಿ.ನಿ.ಪುರುಷೋತ್ತಮ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.