ಕೊರೊನಾ ಭಯ ಬೇಡ ಆದ್ರೆ ನಿರ್ಲಕ್ಷ್ಯ ವಹಿಸದಿರಿ
Team Udayavani, Mar 10, 2020, 3:00 AM IST
ಚೀನಾದ ವುಹಾನ್‌ನಿಂದ ಸೃಷ್ಟಿಯಾದ ಕೊರೊನಾ ವೈರಸ್ ಜಗತ್ತಿಗೆ ಆತಂಕ ತದ್ದೊಡಿರುವುದರಿಂದ ಕಲ್ಪತರು ನಾಡಿನ ಜನರಲ್ಲೂ ಆತಂಕ ಮೂಡಿಸಿದೆ. ಜ್ವರ, ನೆಗಡಿ, ಕೆಮ್ಮು, ತಲೆನೋವು ಶುರುವಾದರೆ ಸಾಕು ಜನರಲ್ಲಿ ಭಯದಿಂದ ಆಸ್ಪತ್ರೆಗಳಿಗೆ ದಾವಿಸುತ್ತಿದ್ದಾರೆ. ಕೊರೊನಾ ತಡೆ ಮತ್ತು ವೈರಸ್ ಪತ್ತೆಯಾದರೆ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಸಕಲ ರೀತಿಯಲ್ಲಿ ಮುಂಜಾಗ್ರತೆ ವಹಿಸಿದೆ…
ತುಮಕೂರು: ಬೇಸಿಗೆಯ ಸುಡುಬಿಸಿಲು ದಿನದಿಂದ ದಿನಕ್ಕೆ ಏರುತ್ತಿದೆ. ಸಾಂಕ್ರಾಮಿಕ ರೋಗಗಳಿಂದ ತತ್ತರಿಸುವ ಜನರು ಈಗ ಕೊರೊನಾ ವೈರಸ್ ಭಯದಿಂದ ದಿನದೂಡುವಂತಾಗಿದೆ. ವಿಶ್ವದೆಲ್ಲೆಡೆ ಕೊರೊನಾ ವೈರಸ್ ಕಬಂಧ ಬಾಹು ವಿಸ್ತರಿಸುತ್ತಿದ್ದು, ಇದರಿಂದ ರಾಜ್ಯದಲ್ಲೂ ಆತಂಕ ಸೃಷ್ಟಿಯಾಗಿದ್ದು, ಜ್ವರ, ನೆಗಡಿ, ಕೆಮ್ಮು, ತಲೆನೋವು ಶುರುವಾದರೆ ಸಾಕು ಜಿಲ್ಲೆಯ ಜನರು ಭಯದಿಂದ ಆಸ್ಪತ್ರೆಗಳಿಗೆ ಧಾವಿಸುತ್ತಿದ್ದಾರೆ. 2009ರಲ್ಲಿ ಎಚ್1ಎನ್1 ಮಹಾಮ್ಮಾರಿಗೆ ಬೆಚ್ಚಿ ಬಿದ್ದಿದ್ದ ಜನರು ಜನ ನಿಭಿಡ ಪ್ರದೇಶ, ಸಭೆ-ಸಮಾರಂಭ, ಜಾತ್ರೋತ್ಸವಗಳಿಗೆ ಹೋಗಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
13 ಮಂದಿಯ ಆರೋಗ್ಯ ತಪಾಸಣೆ: ವಿದೇಶದಿಂದ ಸ್ವಗ್ರಾಮಕ್ಕೆ ಮರಳಿರುವ ಜನರ ಮೇಲೆ ತೀವ್ರ ನಿಗಾವಹಿಸಿರುವ ಜಿಲ್ಲಾಡಳಿತ ಈವರೆಗೆ 13 ಜನರ ಆರೋಗ್ಯ ತಪಾಸಣೆ ನಡೆಸಿದೆ. ಇದರಲ್ಲಿ 5 ಜನ ಚೀನಾದಿಂದ ಬಂದಿದ್ದು, ಅವರಲ್ಲಿ ಯಾರಿಗೂ ವೈರಸ್ ಪತ್ತೆಯಾಗಿಲ್ಲ. ಆದರೂ, ಅವರ ಮೇಲೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯಾಧಿಕಾರಿಗಳು ನಿಗಾವಹಿಸಿದ್ದಾರೆ.
ಜಾಗೃತಿ: ಜಿಲ್ಲಾಡಳಿತ ಭಯ ಬೇಡ, ಆದರೆ ನಿರ್ಲಕ್ಷ್ಯ ವಹಿಸದಿರಿ ಎಂದು ಅಭಯ ನೀಡುತ್ತಿದ್ದು, ಮಾರಕ ಕೊರೊನಾದಿಂದ ಭಯಭೀತರಾದ ಜಿಲ್ಲೆಯ ಜನರಿಗೆ ಸಾರ್ವಜನಿಕ ಸ್ಥಳ, ರೈಲ್ವೆ ಸ್ಟೇಷನ್, ಬಸ್ ನಿಲ್ದಾಣ, ಸಂತೆ, ಮಾರುಕಟ್ಟೆಗಳಲ್ಲಿ ಕೊರೊನಾ ಬಗ್ಗೆ ಪೋಸ್ಟರ್ ಅಂಟಿಸಿ ಜಾಗೃತಿ ಮೂಡಿಸುತ್ತಿದೆ. ಈಗಾಗಲೇ ಎಲ್ಲೆಡೆ ಜಾತ್ರಾ ಕಾರ್ಯಕ್ರಮಗಳು ಆರಂಭವಾಗಿದ್ದು, ಜಾತ್ರೆಗೆ, ಸಂತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಾರೆ. ಆದ್ದರಿಂದ ಜಾತ್ರೆಯ ಸಂಯೋಜಕರೊಂದಿಗೆ ಚರ್ಚಿಸಿ ಜಾತ್ರೆಗೆ ಬರುವ ಜನರಿಗೆ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಬೇಕು. ಶೀತ, ಕೆಮ್ಮಿನಿಂದ ಬಳಲುತ್ತಿರುವವರು ಜಾತ್ರೆಗೆ ಹೋಗದಂತೆ ಮನೆಯಲ್ಲಿಯೇ ಇರಬೇಕು ಎಂದು ತಿಳಿಸಲಾಗಿದೆ.
ಚಿಕಿತ್ಸಾ ವ್ಯವಸ್ಥೆ: ಜಿಲ್ಲಾಸ್ಪತ್ರೆಯಲ್ಲಿ ಈಗಾಗಲೇ ಪ್ರತ್ಯೇಕವಾಗಿ 5 ಹಾಸಿಗೆಗಳುಳ್ಳ ವಿಶೇಷ ವಾರ್ಡ್ ತೆರೆದು, ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಲಾಗಿದೆ. ಅದೇ ರೀತಿ ಖಾಸಗಿ ಆಸ್ಪತ್ರೆಗಳಲ್ಲಿ ಹಾಗೂ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ಮಾಡಲಾಗಿದ್ದು, ವಿದೇಶದಿಂದ ಬರುವವರು ಏರ್‌ಪೋರ್ಟ್‌ಗಳಲ್ಲಿ ಸ್ವವಿವರ ನೀಡಲು ಅರ್ಜಿ ನಮೂನೆ ಭರ್ತಿ ಮಾಡಿಕೊಳ್ಳುತ್ತಾರೆ. ಆ ಮಾಹಿತಿ ಸಂಬಂಧಿಸಿದ ಜಿಲ್ಲೆಗೆ ತಿಳಿಸಲಾಗುತ್ತಿದೆ. ಆದ್ದರಿಂದ ಕೊರೊನಾ ವೈರಸ್‌ನ ಲಕ್ಷಣ ಕಂಡು ಬಂದಲ್ಲಿ ಕೂಡಲೇ ಅವರನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.
ಸರ್ಕಾರಿ ಅಧಿಕಾರಿಗಳಿಗೆ ರಜೆ ರದ್ದು: ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿರುವ ಸಿಬ್ಬಂದಿ, ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೊರೊನಾ ವೈರಸ್ ಚಿಕಿತ್ಸೆ ನೀಡುವ ಕುರಿತು, ಬಸ್ ಪ್ರಯಾಣಿಕರಿಗೆ, ಬಸ್ ಕಂಡಕ್ಟರ್‌ಗಳಿಗೆ ತರಬೇತಿ ನೀಡಲು ಜಿಲ್ಲಾಡಳಿತ ಸೂಚಿಸಿದೆ. ಅಲ್ಲದೇ ಸರ್ಕಾರಿ ವೈದ್ಯರು ಹಾಗೂ ಸಿಬ್ಬಂದಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಅನುಮತಿ ಪಡೆಯದೆ ರಜೆ ತೆಗೆದುಕೊಳ್ಳುವ ಆಗಿಲ್ಲ ಎಂದು ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ಹೊರಡಿಸಿದೆ.
ವದಂತಿಗೆ ಕಿವಿಗೊಡದಿರಿ: ಜಿಲ್ಲೆಯ 13 ಜನರು ವಿದೇಶಗಳಿಂದ ಬಂದಿದ್ದು, ಯಾರಿಗೂ ಕೊರೊನಾ ವೈರಸ್ ಸೋಂಕು ಕಂಡು ಬಂದಿರುವುದಿಲ್ಲ. ಮುಂಜಾಗ್ರತಾ ಕ್ರಮವಾಗಿ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಸಾರ್ವಜನಿಕರು ಕೈಕಾಲು ಸೋಪು, ನೀರಿನಿಂದ ತೊಳೆದುಕೊಳ್ಳಬೇಕು. ಕಣ್ಣು, ಮೂಗು, ಬಾಯಿ ಕೈನಿಂದ ಮುಟ್ಟಿಕೊಳ್ಳುವುದನ್ನು ಕಡಿಮೆ ಮಾಡಬೇಕು. ಕೆಮ್ಮು-ಶೀತ ಇರುವವರು ಮಾಸ್ಕ್ ಬಳಸಬೇಕು. ಯಾವುದೇ ವದಂತಿಗಳಿಗೆ ಕಿವಿಗೊಡದಿರಿ ಎಂದು ಕೂಡ ಸೂಚಿಸಿದೆ.
ಮಾನಿಟರಿಂಗ್ ಟೀಮ್ ರಚನೆ: ತಜ್ಞ ವೈದ್ಯರನ್ನೊಳಗೊಂಡ ಮಾನಿಟರಿಂಗ್ ಟೀಮ್ ಮಾಡಲಾಗಿದೆ. ಈ ಟೀಮ್‌ನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ಜಿಲ್ಲಾ ಶಸ್ತ್ರ ಚಿಕಿತ್ಸಕರು, ಹೃದ್ರೋಗ ತಜ್ಞರನ್ನೊಳಗೊಂಡ ಮೂರು ಟೀಮ್ ಇದ್ದು, ಇದರಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಎರಡು ಟೀಮ್‌ಗಳಿವೆ. ಹಾಗೂ ತಾಲೂಕು ಮಟ್ಟದಲ್ಲಿಯೂ ಟೀಮ್‌ಗಳು ಕಾರ್ಯಪ್ರವೃತ್ತಿಯಾಗಿವೆ. ವೈರಸ್ ಮಾಹಿತಿಗೆ ಜಿಲ್ಲಾಸ್ಪತ್ರೆ 0816-2252935 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.
ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಸೋಂಕು ಕಂಡುಬಂದಿಲ್ಲ. ಜನರು ಭಯ ಪಡುವ ಅಗತ್ಯವಿಲ್ಲ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಸ್ಪತ್ರೆಯಲ್ಲಿ ವಿಶೇಷ ವಾರ್ಡ್ ತೆರೆಯಲಾಗಿದೆ.
-ಡಾ.ಕೆ.ರಾಕೇಶ್ ಕುಮಾರ್, ಜಿಲ್ಲಾಧಿಕಾರಿ
ಜಿಲ್ಲಾದ್ಯಂತ ಕೊರೊನಾ ವೈರಸ್ ಕುರಿತಂತೆ ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗಿದೆ. ಆ ರೋಗದ ಲಕ್ಷಣಗಳು ಕಂಡು ಬಂದಲ್ಲಿ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಂಡಿದ್ದೇವೆ. ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ.
-ಡಾ.ಬಿ.ಆರ್.ಚಂದ್ರಿಕಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ಜಿಲ್ಲೆಯಲ್ಲಿ ಜನರು ಆತಂಕ ಪಡುವ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಸಂಶಯಾತ್ಮಕ ಸೋಂಕು ಕಂಡು ಬಂದ ರೋಗಿಗಳಿಗೆ ಚಿಕಿತ್ಸೆ ನೀಡಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೇ ವೈರಸ್‌ನ ಲಕ್ಷಣ ಇರುವವರು ಕೂಡಲೇ ಆಸ್ಪತ್ರೆಗೆ ಭೇಟಿ ನೀಡಬೇಕು.
-ಡಾ. ವೀರಭದ್ರಯ್ಯ, ಜಿಲ್ಲಾ ಶಸ್ತ್ರ ಚಿಕಿತ್ಸಕ
* ಚಿ.ನಿ.ಪುರುಷೋತ್ತಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.