ಚುನಾವಣೆಗೆ ವರ್ಷಕ್ಕೂ ಮೊದಲೇ ಪಕ್ಷಾಂತರ ಪರ್ವ
Team Udayavani, May 7, 2022, 4:53 PM IST
ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕು ಅಬ್ಬರ ಪೂರ್ಣ ಕಡಿಮೆಯಾಗಿದೆ. ಸುಡು ಬಿಸಿಲಿನ ಕಾವು ಹೆಚ್ಚಾಗುತ್ತಿದೆ. ಇದರ ನಡುವೆ ರಾಜ್ಯದಲ್ಲಿ ಮಹಾ ಚುನಾವಣೆಗೆ ಇನ್ನೂ ಒಂದು ವರ್ಷ ಇರು ವಾಗಲೇ ಕಲ್ಪತರು ನಾಡಿನಲ್ಲಿಯೂ ರಾಜಕೀಯ ಚಟುವಟಿಕೆ ಗರಿಗೆದರಿದೆ.
ರಾಜಕೀಯ ಚಟುವಟಿಕೆ ಬಿರುಸು: ಜೆಡಿಎಸ್‌ನ ಇಬ್ಬರು ಪ್ರಭಾವಿ ಮುಖಂಡರು ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಕೆಲವು ವಿಧಾನ ಸಭಾ ಕ್ಷೇತ್ರಗಳಲ್ಲಿ ಹೊಸಬರು ರಾಜಕೀಯ ಪ್ರವೇಶಿಸಲು ರಂಗ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆಡಳಿತಾರೂಢ ಬಿಜೆಪಿ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಡುವೆ ಈಗಾಗಲೇ ಪಕ್ಷಾಂತರ ಪರ್ವ ಆರಂಭಗೊಂಡಿದೆ.
ಚುನಾವಣೆ ಎದುರಿಸಲು ಮೂರು ಪಕ್ಷಗಳಲ್ಲೂ ರಾಜಕೀಯ ಚಟುವಟಿಕೆ ಬಿರುಸುಗೊಂಡಿವೆ. ತುಮಕೂರು ಜಿಲ್ಲೆಯಲ್ಲಿ ಇರುವ 11 ವಿಧಾನಸಭಾ ಕ್ಷೇತ್ರಗಳಲ್ಲಿ ಈಗ ಹಾಲಿ ಇರುವ ಶಾಸಕರು ಮತ್ತೆ ತಮ್ಮ ಅದೃಷ್ಟ ಪರೀಕ್ಷೆಗೆ ತಮ್ಮ ಕ್ಷೇತ್ರವಾರು ಪ್ರವಾಸ ಚುರುಕು ಗೊಳಿಸಿದ್ದಾರೆ. ಅದೇ ರೀತಿ ಕಳೆದ ಚುನಾವಣೆಯಲ್ಲಿ ಪರಾಭವಗೊಂಡವರು ಈ ಬಾರಿಯೂ ತಮ್ಮ ಅದೃಷ್ಟ ಪರೀಕ್ಷೆಗಾಗಿ ಸಂಘಟನೆಯಲ್ಲಿ ತೊಡಗಿದ್ದಾರೆ.
ಕ್ಷೇತ್ರ ಭದ್ರಕ್ಕೆ ತಯಾರಿ: ತುಮಕೂರು ನಗರ ಕ್ಷೇತ್ರದ ಬಿಜೆಪಿ ಶಾಸಕ ಜಿ.ಬಿ.ಜ್ಯೋತಿಗಣೇಶ್, ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕ ಡಿ.ಸಿ. ಗೌರಿಶಂಕರ್, ಪಾವ ಗಡ ಕ್ಷೇತ್ರದ ಕಾಂಗ್ರೆಸ್ ಶಾಸಕ ವೆಂಕಟರಮಣಪ್ಪ, ಮಧುಗಿರಿ ಕ್ಷೇತ್ರದ ಜೆಡಿಎಸ್ ಶಾಸಕ ಎಂ.ವೀರ ಭದ್ರಯ್ಯ, ಕೊರಟಗೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ. ಜಿ.ಪರಮೇಶ್ವರ್, ಶಿರಾ ಕ್ಷೇತ್ರದ ಬಿಜೆಪಿ ಶಾಸಕ ಡಾ.ಸಿ. ಎಂ.ರಾಜೇಶ್ ಗೌಡ, ಚಿಕ್ಕನಾಯಕನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಸಚಿವ ಜೆ.ಸಿ. ಮಾಧುಸ್ವಾಮಿ, ತಿಪ ಟೂರು ಕ್ಷೇತ್ರದ ಬಿಜೆಪಿ ಶಾಸಕ ಸಚಿವ ಬಿ.ಸಿ.ನಾಗೇಶ್, ತುರುವೇಕೆರೆ ಕ್ಷೇತ್ರದ ಬಿಜೆಪಿ ಶಾಸಕ ಮಸಾಲೆ ಜಯರಾಮ್, ಕುಣಿಗಲ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ. ರಂಗನಾಥ್, ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಮತ್ತೆ ತಮ್ಮ ಕ್ಷೇತ್ರವನ್ನು ಭದ್ರ ಮಾಡಿಕೊಳ್ಳಲು ಈಗಾಗಲೇ ಕಾರ್ಯತಂತ್ರ ಆರಂಭಿಸಿದ್ದಾರೆ. ಇವರ ಎದುರಾಳಿ ಪಕ್ಷದ ಮುಖಂಡರು ಕೂಡ ಈ ಬಾರಿ ಕ್ಷೇತ್ರವನ್ನು ತಮ್ಮದಾಗಿಸಿಕೊಳ್ಳಬೇಕು ಎನ್ನುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ.
ಪಕ್ಷಾಂತರ ಪರ್ವ ಆರಂಭ: ಪ್ರತಿ ವಿಧಾನಸಭಾ ಚುನಾ ವಣೆ ವೇಳೆಯಲ್ಲಿ ವಿವಿಧ ಪಕ್ಷಗಳಿಂದ ಪಕ್ಷದ ಮುಖಂಡರು ಪಕ್ಷಾಂತರ ಮಾಡುವುದು ಸಾಮಾನ್ಯ. ಅದರಂತೆ ಇನ್ನು ಚುನಾವಣೆ ಒಂದು ವರ್ಷ ಮೊದಲೇ ಜಿಲ್ಲೆಯಲ್ಲಿ ಪಕ್ಷಾಂತರ ಪರ್ವ ಆರಂಭಿಸಿದ್ದಾರೆ.
ಜೆಡಿ ಎಸ್, ಕಾಂಗ್ರೆಸ್ ಪಕ್ಷಗಳಿಂದ ಬಿಜೆಪಿ ಪಕ್ಷಕ್ಕೆ ಮತ್ತು ಬಿಜೆಪಿ ಪಕ್ಷದಿಂದ ಜೆಡಿಎಸ್ ಹಾಗೂ ಕಾಂಗ್ರೆಸ್‌ಗೆ ಜಿಗಿಯುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ತುಮಕೂರು ನಗರ ಕ್ಷೇತ್ರದಲ್ಲಿ ಹಾಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್ ಇದ್ದರೂ ಆಡಳಿತರೂಢ ಬಿಜೆಪಿಯಲ್ಲಿ ಒಂದು ಗುಂಪಿನಿಂದ ಆಂತರಿಕ ಬೇಗುದಿ ಎದ್ದಿದೆ. ಕುಣಿಗಲ್ ಹಾಲಿ ಕಾಂಗ್ರೆಸ್ ಶಾಸಕ ಡಾ. ರಂಗನಾಥ್ ಇದ್ದರೂ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇ ಗೌಡ ಕಾಂಗ್ರೆಸ್ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಶಿರಾದಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಯಾಗಿದ್ದರೂ ಸಾಸಲು ಸತೀಶ್ ಪಕ್ಷದ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಚಿಕ್ಕನಾಯಕನಹಳ್ಳಿಯಲ್ಲಿ ಹಾಲಿ ಸಚಿವ ಜೆ.ಸಿ ಮಾಧು ಸ್ವಾಮಿ ಇದ್ದರೂ ಮಾಜಿ ಶಾಸಕ ಕೆ.ಎಸ್. ಕಿರಣ್ ಕುಮಾರ್ ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಈ ರೀತಿ ಜಿಲ್ಲೆಯ ಹನ್ನೊಂದು ವಿಧಾನಸಭಾ ಕ್ಷೇತ್ರ ದಲ್ಲಿಯೂ ರಾಜಕೀಯ ಚದುರಂಗದಾಟಗಳು ಆರಂಭಗೊಂಡಿವೆ.
ಕಾಂತರಾಜು ಕಾಂಗ್ರೆಸ್ ಅಭ್ಯರ್ಥಿ? : ಜೆಡಿಎಸ್‌ನಿಂದ ಸ್ಪರ್ಧಿಸಿ ವಿಧಾನಪರಿಷತ್ ಸದಸ್ಯರಾಗಿದ್ದ ಬೆಮೆಲ್ ಕಾಂತರಾಜು ಜೆಡಿಎಸ್ ತೊರೆದು ಕೈ ಹಿಡಿದಿದ್ದಾರೆ. ತುರುವೇಕೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಎಲ್ಲಾ ರೀತಿಯ ತಯಾರಿ ನಡೆಸುತ್ತಿದ್ದಾರೆ. ಗುಬ್ಬಿ ಕ್ಷೇತ್ರದ ಶಾಸಕರೂ, ಮಾಜಿ ಸಚಿವರಾದ ಎಸ್.ಆರ್.ಶ್ರೀನಿವಾಸ್ ಈಗಾಗಲೇ ಜೆಡಿಎಸ್‌ನಿಂದ ದೂರ ಇದ್ದಾರೆ. ಅವರೂ ಕೂಡ ಕಾಂಗ್ರೆಸ್ ಸೇರ್ಪಡೆಗೆ ತಯಾರಿಯಲ್ಲಿದ್ದು, ಈಗಾಗಲೇ ಕಾಂಗ್ರೆಸ್ ಮುಖಂಡರನ್ನು ಕರೆಸಿ ಸಭೆ ಮಾಡಿದ್ದು, ಅಧಿಕೃತವಾಗಿ ಘೋಷಣೆ ಮಾತ್ರ ಬಾಕಿ ಇದೆ. ಜಿಲ್ಲೆಯ ಹಲವು ಮುಖಂಡರು ಒಂದು ಪಕ್ಷದಿಂದ ಮತ್ತೂಂದು ಪಕ್ಷಕ್ಕೆ ಜಿಗಿಯಲು ತಯಾರಿಯಲ್ಲಿದ್ದಾರೆ. ಈ ಬಾರಿ ಹಲವು ಹೊಸ ಮುಖಗಳು ರಾಜಕೀಯ ಪ್ರವೇಶಿಸಲು ರಂಗಸಜ್ಜು ಮಾಡಿಕೊಳ್ಳುತ್ತಿದ್ದಾರೆ.
ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ : ರಾಜ್ಯದಲ್ಲಿಯೇ ಎರಡನೇ ಅತಿ ದೊಡ್ಡ ಜಿಲ್ಲೆಯಾಗಿರುವ ಕಲ್ಪತರು ನಾಡಿನಲ್ಲಿ ಮೂರು ರಾಜಕೀಯ ಪಕ್ಷಗಳು ಒಂದಲ್ಲಾ ಒಂದು ರೀತಿಯಲ್ಲಿ ಸಭೆ ಸಮಾರಂಭಗಳನ್ನು ಮಾಡಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಇದರ ಜೊತೆಗೆ ಆಡಳಿತ ವಿರೋಧಿ ಅಲೆಯ ಅನುಕೂಲ ಪಡೆಯಲು ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ರಣತಂತ್ರ ಎಣೆಯುತ್ತಿವೆ. ಆಡಳಿತಾರೂಢ ಬಿಜೆಪಿ ಆಂತರಿಕ ಕಚ್ಚಾಟದಲ್ಲಿ ತೊಡಗಿದ್ದು, ಮುಖಂಡರಲ್ಲಿಯೇ ವಿರಸ ಹೆಚ್ಚಾಗಿ ಕಂಡು ಬರುತ್ತಿದೆ. ಒಬ್ಬರನ್ನು ಕಂಡರೆ ಮತ್ತೂಬ್ಬರಿಗೆ ಆಗದ ಪರಿಸ್ಥಿತಿ ಜಿಲ್ಲೆಯಲ್ಲಿ ಇದೆ.
– ಚಿ.ನಿ.ಪುರುಷೋತ್ತಮ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.