ರೈತರ ವಿನಾಕಾರಣ ಅಲೆದಾಡಿಸಬೇಡಿ
ಅಧಿಕಾರಿಗಳಿಗೆ ಡಿಸಿಎಂ ಪರಮೇಶ್ವರ್ ಖಡಕ್ ಸೂಚನೆ • ಚಿನ್ನಹಳ್ಳಿಯಲ್ಲಿ ಜನಸಂಪರ್ಕ ಸಭೆ
Team Udayavani, Jun 24, 2019, 12:34 PM IST
ಕೊರಟಗೆರೆ: ಕಚೇರಿಯಲ್ಲಿ ಕುಳಿತು ಏನು ಮಾಡುತ್ತಿದ್ದಿರಾ.. ಕಾಮಗಾರಿ ಮಾಡಿಸಲು ನಿರ್ಲಕ್ಷ್ಯವೇಕೆ?, ನೀವು ಕೆಲಸ ಮಾಡಿಸದಿದ್ದರೆ ನಾನೇ ಕ್ರಮಕ್ಕೆ ಮುಂದಾ ಗುತ್ತೇನೆ.. ಇದು ಲ್ಯಾಂಡ್ ಆರ್ಮಿಯ ಹಿರಿಯ ಇಂಜಿನಿಯರ್‌ಗಳ ವಿರುದ್ಧ ಡಿಸಿಎಂ ಡಾ.ಜಿ. ಪರಮೇಶ್ವರ್ ಆಕ್ರೋಶದ ನುಡಿಗಳು. ಕೋಳಾಲ ಹೋಬಳಿ ಚಿನ್ನಹಳ್ಳಿ ಗ್ರಾಮದಲ್ಲಿ ತಾಪಂ ಮತ್ತು ಜಿಲ್ಲಾಡಳಿತದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.
ರೈತರ ಅಲೆದಾಡಿಸಬೇಡಿ: ಬೆಸ್ಕಾಂ ಅಧಿಕಾರಿಗಳು ಕೋಳಾಲ ವ್ಯಾಪ್ತಿಯ ರೈತರಿಂದ ಟಿ.ಸಿ.ಬದಲಾವಣೆ ಹಾಗೂ ಸುಟ್ಟ ಟಿ.ಸಿ ಅಳವಡಿಸಲು 5ರಿಂದ 10 ಸಾವಿರ ರೂ. ಪಡೆದು ಕಾಮಗಾರಿ ವಿಳಂಬ ಮಾಡುತ್ತಿರುವ ದೂರುಗಳು ಬಂದಿದೆ. ರೈತರನ್ನು ವಿನಾಕಾರಣ ಅಲೆದಾಡಿಸಿದರೆ ಸಹಿಸುವುದಿಲ್ಲ. ವಿದ್ಯುತ್ ಸೌಲಭ್ಯ ಇಲ್ಲದಿರುವ ಗ್ರಾಮ ಅಥವಾ ಮನೆ ಗುರುತಿಸಿ ಮಾಹಿತಿ ನೀಡಬೇಕು. ಸರಕಾರದ ಯೋಜನೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿ ಎಂದು ಸೂಚಿಸಿದರು.ಆಡಳಿತ ಯಂತ್ರದ ಚುರುಕಿಗಾಗಿ ಸರಕಾರವೇ ಜನರ ಬಳಿ ಬಂದಿದೆ. ಮುಖ್ಯಮಂತ್ರಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ. ನಾನು ಜನಸಂಪರ್ಕ ಸಭೆ ನಡೆಸಿ ಜನರ ಅಹವಾಲು ಸ್ವೀಕರಿಸುತ್ತಿದ್ದೇನೆ. ಕ್ಷೇತ್ರದ ಒಟ್ಟು ಆರು ಕಡೆಯಲ್ಲಿ ಆಧಾರ್‌ಕೇಂದ್ರ ಸ್ಥಾಪಿಸಿ ಸಮಸ್ಯೆ ಸರಿಪಡಿಸಲು ಸೂಚಿಸಿದ್ದೇನೆ ಎಂದರು.
ಅನ್ಯಾಯ ಆಗಲು ಬಿಡೋಲ್ಲ: ಎತ್ತಿನಹೊಳೆ ಯೋಜ ನೆಯ ಅನುಷ್ಠಾನಕ್ಕೆ 13500 ಕೋಟಿ ಮೀಸ ಲಿಡಲಾಗಿದೆ. 300 ಕಿಮೀ ದೂರದಿಂದ ನೀರು ತರಲು ಈಗಾಗಲೇ 6 ಸಾವಿರ ಕೋಟಿ ಖರ್ಚಾಗಿದೆ. ಬಫರ್‌ಡ್ಯಾಂ ನಿರ್ಮಾಣಕ್ಕೆ 5 ಸಾವಿರ ಎಕರೆ ಭೂಮಿ ಸ್ವಾಧೀನ ಆಗಲಿದೆ. ರೈತರಿಗೆ ಅನ್ಯಾಯ ಆಗಲು ಬಿಡೋದಿಲ್ಲ. ನೀರಾವರಿ ಯೋಜನೆ ಅನುಷ್ಠಾನಕ್ಕೆ ರೈತರ ಸಹಕಾರ ಅಗತ್ಯ. ದೊಡ್ಡಬಳ್ಳಾಪುರದಲ್ಲಿ ಜಮೀನಿಗೆ ನೀಡುವಷ್ಟು ಪರಿಹಾರ ಇಲ್ಲೂ ನೀಡುವುದಾಗಿ ತಿಳಿಸಿದರು.
ರೈತರ ಆಕ್ರೋಶ: ಕ್ಷೇತ್ರದಲ್ಲಿ ಸರ್ಕಾರಿ ಅಧಿಕಾರಿಗಳು ರೈತರ ಯಾವ ಕೆಲಸವೂ ಮಾಡಿಕೊಡುತಿಲ್ಲ.ತಾಲೂಕು ಕಚೇರಿಗೆ ಹೋದರೆ ಸಬೂಬು ಹೇಳಿ ಕಳಿಸ್ತಾರೆ. ಡೀಸಿ ಕಚೇರಿಗೆ ಹೋದರೆ ಅವರೇ ಇರುವುದಿಲ್ಲ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುವಂತೆ ಕ್ರಮ ಕೈಗೊಳ್ಳಿ ಎಂದು ರೈತರು ಆಗ್ರಹಿಸಿದರು.
ಜನರಿಂದ ಅಹವಾಲು ಸ್ವೀಕಾರ: ಜನಸಂಪರ್ಕ ಸಭೆಗೆ ಅಹವಾಲು ನೀಡಲು ಜನಸಾಗರವೇ ಹರಿದು ಬಂದಿತ್ತು. ಕೆಲವರು ಸ್ವಂತ ಸಮಸ್ಯೆಗಳಿಗೆ ಪರಿಹಾರಕ್ಕೆ ಮನವಿ ಮಾಡಿದರೆ ಮತ್ತೆ ಕೆಲವರು ಗ್ರಾಮದ ಅಭಿವೃದ್ಧಿಗೆ ಸಹಕಾರ ನೀಡುವಂತೆ ಕೇಳಿಕೊಂಡರು. ಪಶು ಇಲಾಖೆ, ಸರಕಾರಿ ಶಾಲೆ ಮತ್ತು ಶಿಕ್ಷಕರ ನೇಮಕ್ಕಾಗಿ ಡಿಸಿಎಂ ಸ್ಥಳದಲ್ಲಿಯೇ ಪರಿಹಾರ ಸೂಚಿಸಿದರು. ಇನ್ನೂಳಿದ ರೈತರು ನಮಗೆ ನಮ್ಮ ಜಮೀನು ಉಳಿಸಿ ಕೊಡುವಂತೆ ಕೈ ಮುಗಿದ ಮನವಿ ಮಾಡಿದರು. ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್, ಎಸ್‌ಪಿ ಡಾ.ಕೋನ ವಂಶಿಕೃಷ್ಣ, ಪಿಡಬ್ಲ್ಯುಡಿ ಎಇಇ ಜಗದೀಶ್, ಜಿಪಂ ಸದಸ್ಯ ಶಿವರಾಮಯ್ಯ, ತಾಪಂ ಅಧ್ಯಕ್ಷ ಕೆಂಪರಾಮಯ್ಯ, ಜಿಪಂ ಅಧಿಕಾರಿ ಪ್ರೇಮಾ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೊಡ್ಲಹಳ್ಳಿ ಅಶ್ವತ್ಥನಾರಾಯಣ್, ಅರಕೆರೆ ಶಂಕರ್, ಜಿ.ವೆಂಕಟಾಚಲಯ್ಯ, ಗ್ರಾಪಂ ಅಧ್ಯಕ್ಷ ಸೀತರಾಮು ಇತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.