ಬಂಧನಗಳಿಂದ ದೂರವಿದ್ದೂ ಬಂಧುವಾದರು
Team Udayavani, Jan 23, 2019, 12:30 AM IST
“ಹುಡುಗಿ ಇನ್ನೂ ರೆಡಿ ಆಗಿಲ್ಲವಲ್ಲ’ ಅನ್ನುವ ಕಳವಳದ ಮಾತುಗಳು ಅಲ್ಲಿಂದ ಈ ಕಡೆಗೆ, ಇಲ್ಲಿಂದ ಆ ಕಡೆಗೆ ಓಡಾಡುವವರಿಂದ ಕೇಳಿಸಲಾರಂಭಿಸಿದವು. ಪಾದಪೂಜೆಯ ಸಮಯದಲ್ಲಿ ಹಾಜರಿರಬೇಕಿದ್ದ ಮದುಮಗಳ ಮೇಕಪ್ ಇನ್ನೂ ಮುಗಿದಿರಲಿಲ್ಲ! ಹೇಳಿ ಕೇಳಿ ಮದುವೆ, ತಾನು ಚೆನ್ನಾಗಿ ಕಾಣಬೇಕು ಅನ್ನುವ ಆಸೆ ಆ ಹೆಣ್ಣುಮಗಳದ್ದು…ಹಾಗಂತ ಸ್ವಾಮಿಗಳನ್ನು ಕಾಯಿಸಲು ಸಾಧ್ಯವೇ? ಈ ಗೊಂದಲದಲ್ಲಿಯೇ ಕುಟುಂಬದವರು ಇದ್ದಾಗ, ಶ್ರೀಗಳಿಗೆ ವಿಷಯ ತಿಳಿಯಿತು.
“ಸಿದ್ಧಗಂಗೆಗೆ ಹೋದವನು ಶಿಸ್ತು ಕಲೀತಾನೆ’, “ಸಿದ್ಧಗಂಗೇಲಿ ಉಳಿದವರನ್ನು ಶಿವ ಕಾಯ್ತಾನೆ..’ ನಾಡಿನ ತುಂಬಾ ಪ್ರಚಲಿತವಿರುವ ಮಾತುಗಳಿವು. ಅದರಲ್ಲೂ ತುಮಕೂರಿನ ನೆರೆಹೊರೆಯ ಜಿಲ್ಲೆಗಳಾದ ಮಂಡ್ಯ, ಚಿತ್ರದುರ್ಗ, ದಾವಣಗೆರೆ, ಹಾಸನಗಳಲ್ಲಿ-ಸಿದ್ಧಗಂಗಾ ಮಠ ಮತ್ತು ಶಿವಕುಮಾರ ಸ್ವಾಮೀಜಿಗೆ ಸಂಬಂಧಿಸಿದಂತೆ ಹಲವಾರು ಕಥೆಗಳು ಚಾಲ್ತಿಯಲ್ಲಿದ್ದವು. ಸ್ವಾರಸ್ಯವೆಂದರೆ, ಈ ಕಥೆಗಳೆಲ್ಲ ಹೆಚ್ಚಿನ ಸಂದರ್ಭದಲ್ಲಿ ನಿಜವಾಗಿಯೂ ನಡೆದವೇ ಆಗಿರುತ್ತಿದ್ದವು.
ಮಂಡ್ಯ, ಹಾಸನಗಳಲ್ಲಿ ಒಕ್ಕಲಿಗರು ಮತ್ತು ಹಿಂದುಳಿದ ವರ್ಗಗಳ ಜನರು ಜಾಸ್ತಿ. ಹಾಗೆಯೇ ಚಿತ್ರದುರ್ಗ-ದಾವಣಗೆರೆಯಲ್ಲಿ ಅಲ್ಪಸಂಖ್ಯಾತರು, ವೀರಶೈವರು, ಹಿಂದುಳಿದ ವರ್ಗದವರ ಪ್ರಾಬಲ್ಯ ಜಾಸ್ತಿ. ಹೆಚ್ಚಿನ ಕಡೆಗಳಲ್ಲಿ ಮಳೆ ಬಿದ್ದರಷ್ಟೇ ಬೆಳೆ ಎಂಬಂಥ ಪರಿಸ್ಥಿತಿ. ಒಂದು ಹೊತ್ತಿನ ಅನ್ನ ಸಂಪಾದನೆಯೇ ಕಷ್ಟ ಅನ್ನಿಸಿದಾಗ ಮಾಡುವುದೇನು? ಹೆಚ್ಚಿನ ಪೋಷಕರು ತಮ್ಮ ಮಕ್ಕಳನ್ನು ಸಮೀಪದ ಸರ್ಕಾರಿ ಶಾಲೆಗೆ ಸೇರಿಸಿ, ನಮ್ಮ ಕರ್ತವ್ಯ ಮುಗೀತು ಎಂದು ಸುಮ್ಮನಾಗುತ್ತಿದ್ದರು.
ಅದೇನು ಕಾರಣವೋ ತಿಳಿಯದು. ಬಯಲು ಸೀಮೆಯ ಈ ಹಳ್ಳಿ ಹುಡುಗರಲ್ಲಿ ಹೆಚ್ಚಿನ ಮಕ್ಕಳು ತುಂಟರಾಗಿರುತ್ತಿದ್ದರು. ಯಾವುದೋ ಸಮಾರಂಭದ ದಿನ ಅಥವಾ ಊರ ಜಾತ್ರೆಯ ದಿನ ಪೋಷಕರಿಗೆ ಎದುರಾಗುತ್ತಿದ್ದ ಸ್ಕೂಲ್‌ನ ಹೆಡ್‌ಮಾಸ್ಟರು-“ಯಜಮಾನೆÅ, ನಾವು ಹೇಳುವಷ್ಟು ಹೇಳ್ತಾ ಇದೀವಿ. ನಿಮ್ಮ ಹುಡುಗ ಏನೂ ಪ್ರಯೋಜನವಿಲ್ಲ. ಎಲ್ಲರ ಜೊತೇನೂ ಕುಸ್ತಿ ಮಾಡ್ತಾನೆ. ಎಷ್ಟು ಹೇಳಿಕೊಟ್ರೂ ವಿದ್ಯೆ ತಲೆಗೆ ಹೋಗಲ್ಲ…’ ಅಂದುಬಿಡುತ್ತಿದ್ದರು. ಈ ಮಾತು ಕೇಳಿದ ರೈತಾಪಿ ಜನರಿಗೆ, ತಮ್ಮ ಮಕ್ಕಳ ಬದುಕನ್ನು ನೇರ್ಪುಗೊಳಿಸುವ ತಾಣವಾಗಿ ಕಾಣಿಸುತ್ತಿದ್ದ ಸ್ಥಳವೇ ಸಿದ್ಧಗಂಗೆ.
ಅವರು ತಡ ಮಾಡುತ್ತಿರಲಿಲ್ಲ. ಒಂದು ಟ್ರಂಕ್‌ಗೆ ಮಕ್ಕಳ ಬಟ್ಟೆ ತುಂಬಿಕೊಂಡು, ಚಾಪೆಯೊಂದನ್ನು ಜೊತೆಗಿಟ್ಟುಕೊಂಡು ಸಿದ್ಧಗಂಗೆಗೆ ಬಂದುಬಿಡುತ್ತಿದ್ದರು. ಶ್ರೀಗಳ ಎದುರುನಿಂತು- “ಬುದ್ದೀ, ನಮ್ಮ ಹುಡುಗನಿಗೆ ಸೀಟು ಬೇಕು. ಹಾಸ್ಟೆಲಿನಲ್ಲಿ ಜಾಗಬೇಕು ಬುದ್ದೀ…!’ ಅನ್ನುತ್ತಿದ್ದರು. “ಯಾವ ಊರು ನಿಮ್ಮದು? ಮನೇಲಿ ಯಾರ್ಯಾರು ಇದ್ದೀರಿ? ಉಳಿದ ಮಕ್ಕಳು ಏನು ಮಾಡ್ತಾರೆ?’- ಎಂದೆಲ್ಲ ಶ್ರೀಗಳು ಕೇಳಿದರೆ- “ಇವ್ನು ಉಢಾಳನ ಥರ ಆಗಿದಾನೆ ಬುದ್ದೀ..ಇವನದ್ದೇ ಯೋಚನೆ ಆಗಿಹೋಗಿದೆ..’ ಎಂಬ ಮಾತು ಪೋಷಕರಿಂದ ಬರುತ್ತಿತ್ತು. ಆಮೇಲೆ ಶ್ರೀಗಳು ಮಾತಾಡುತ್ತಿರಲಿಲ್ಲ. ಚಿಕ್ಕ ಚೀಟಿಯೊಂದನ್ನು ಕೈಗೆತ್ತಿಕೊಂಡು- “ಇವನನ್ನು ಸೇರಿಸಿಕೊಳ್ಳಿ’ ಎಂದಷ್ಟೇ ಬರೆದುಕೊಡುತ್ತಿದ್ದರು. ನಂತರ, ಪ್ರಸಾದ ತಗೊಂಡು ನೀವು ಊರಿಗೆ ಹೋಗಿ ಅನ್ನುತ್ತಿದ್ದರು. ಅಲ್ಲಿಗೆ ಪೋಷಕರ ಕನಸು ಈಡೇರಿದಂತೆ ಆಗುತ್ತಿತ್ತು, ಹಳ್ಳಿಯಲ್ಲಿ ಪುಂಡ-ಉಢಾಳ ಅನ್ನಿಸಿಕೊಂಡಿದ್ದ ಹುಡುಗನಿಗೆ ಸಿದ್ಧಗಂಗೆಯಲ್ಲಿ ಆಶ್ರಯ ಸಿಕ್ಕಿಬಿಡುತ್ತಿತ್ತು. ಪವಾಡ ನಡೆಯುತ್ತಿದ್ದುದೇ ಆ ನಂತರದಲ್ಲಿ. ಮಠದಲ್ಲಿ ಇದ್ದ ಉಳಿದೆಲ್ಲ ಮಕ್ಕಳಂತೆ ಈ ಉಢಾಳ ಹುಡುಗನೂ ಶಿಸ್ತು ಕಲಿಯುತ್ತಿದ್ದ. ಎಲ್ಲಾ ಮಕ್ಕಳ ಅಭ್ಯಾಸದ ಬಗ್ಗೆ ಶ್ರೀಗಳೇ ಮುತುವರ್ಜಿ ವಹಿಸುತ್ತಿದ್ದ ಕಾರಣದಿಂದ ಓದುವುದರಲ್ಲೂ “ಇಂಪ್ರೂವ್’ ಆಗುತ್ತಿದ್ದ. ಮುಖ್ಯವಾಗಿ, ಹಿರಿಯರನ್ನು ಗೌರವದಿಂದ ಕಾಣುತ್ತಿದ್ದ. ಆರು ತಿಂಗಳ ನಂತರ ದಸರಾ ಅಥವಾ ಬೇಸಿಗೆ ರಜೆಗೆಂದು ಬಂದ ಮಗ ಹೀಗೆಲ್ಲಾ ಬದಲಾಗಿರುವುದನ್ನು ಕಂಡು ಆ ಹುಡುಗನ ಪೋಷಕರು ಹರ್ಷಿಸುತ್ತಿದ್ದರು. ತಮ್ಮ ಮಗನನ್ನು ಬದಲಿಸಿದ ಶ್ರೀಗಳಿಗೆ ಕೃತಜ್ಞತೆ ಅರ್ಪಿಸಬೇಡವೇ? ಅದಕ್ಕಾಗಿ ಅವರೇನು ಮಾಡುತ್ತಿದ್ದರು ಗೊತ್ತೇ? ವರ್ಷದ ಕೊನೆಗೆ 25 ಕ್ವಿಂಟಾಲ್ ರಾಗಿಯೋ, ಭತ್ತವೋ ಫಸಲು ಬಂದಾಗ, ಅದನ್ನು ಕಣದಿಂದ ಮನೆಗೆ ತರುತ್ತಿರಲಿಲ್ಲ. ಬದಲಾಗಿ, ತಾವು ಬೆಳೆದಿದ್ದರಲ್ಲಿ ಒಂದು ಕ್ವಿಂಟಾಲ್ ಬೆಳೆಯನ್ನು ಮಠಕ್ಕೆ ಒಯ್ಯುತ್ತಿದ್ದರು. “ಬುದ್ಧಿಯೋರು, ನಮ್ಮ ಮಗನನ್ನು ಉದ್ಧಾರ ಮಾಡಿದ್ರು’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಶ್ರೀಗಳ ಫೋಟೋವನ್ನು ದೇವರ ಫೋಟೋ ಪಕ್ಕ ಇಟ್ಟು ಕೈ ಮುಗಿಯುತ್ತಿದ್ದರು.
ಆ ನಂತರದಲ್ಲಿ ಆ ಹುಡುಗನೇನಾದರೂ ವ್ಯವಹಾರ ಆರಂಭಿಸಿದರೆ -ಶಿವ ಮೆಡಿಕಲ್ಸ್, ಹೋಟೆಲ್ ಶಿವ, ಶಿವಕುಮಾರ ಮೆಟಲ್ ಮಾರ್ಟ್ಸ್, ಸಿದ್ಧಗಂಗಾ ಪ್ರಾವಿಶನ್ ಸ್ಟೋರ್ಸ್ ಎಂದೇ ಹೆಸರು ಇಡುತ್ತಿದ್ದ. ಆ ಮೂಲಕ ಸಿದ್ಧಗಂಗೆಯನ್ನೂ, ಸ್ವಾಮೀಜಿಯನ್ನೂ ನೆನಪು ಮಾಡಿಕೊಳ್ಳುತ್ತಿದ್ದ.
“”ಸ್ವಾಮೀ, ನಾವು ಬಡವರು. ನಮಗೆ ಜಮೀನಿಲ್ಲ. ಕೂಲಿ ಮಾಡ್ತೇವೆ. ಸಿಗುವ ಕೂಲಿಯಿಂದ ಬದುಕಲು ಆಗ್ತಾ ಇಲ್ಲ. ಬರ ಬೇರೆ, ಕೆಲಸಕ್ಕೆ ಕರೆಯೋರೇ ಇಲ್ಲ. ನಾವು ಹೇಗೋ ಬದುಕ್ತೇವೆ ಬುದ್ಧೀ, ಆದ್ರೆ ಮಕ್ಕಳು ಉಪವಾಸ ಬೀಳ್ಳೋದನ್ನು ನೋಡಲಿಕ್ಕೆ ಆಗಲ್ಲ. ಇವರಿಗೆ ವಿದ್ಯೆ ಕಲಿಸಿ ಬುದ್ಧೀ” – ಹೀಗೆ ಕೇಳಿಕೊಂಡು ಬರುವವರೂ ಇದ್ದರು. ಶ್ರೀಗಳು ಅವರಿಗೂ “ಇಲ್ಲ’ ಅನ್ನುತ್ತಿರಲಿಲ್ಲ. ಒಮ್ಮೆ ಆ ಮಗುವಿನ ತಲೆ ಸವರಿ, “ನನ್ನ ಜೊತೆ ಇರ್ತೀಯ ಅಲ್ವಾ?’ ಎಂದು ಕೇಳಿ, ಮತ್ತದೇ ಸಣ್ಣ ಚೀಟಿಯಲ್ಲಿ, “ಇವನನ್ನು ಸೇರಿಸಿಕೊಳ್ಳಿ’ ಎಂದು ಬರೆದುಕೊಡುತ್ತಿದ್ದರು. ಹಾಗೆ ಒಂದು ಚೀಟಿ ಬರೆದುಕೊಟ್ಟರೆ, ಅಲ್ಲಿ ಉಳಿಯಲು ಮತ್ತು ಓದಲು ಅವಕಾಶ ಸಿಕ್ಕಿತು ಅಂತಾನೇ ಅರ್ಥ. ಹೀಗೆ ಚಿಕ್ಕ ವಯಸ್ಸಿನಲ್ಲೇ ಮಠ ಸೇರಿದ ಮಕ್ಕಳು ಆಗಾಗ ಹೆತ್ತವರನ್ನು ನೆನಪು ಮಾಡಿಕೊಂಡು ಅಳುತ್ತಿದ್ದವು. ಆಗೆಲ್ಲಾ ಶ್ರೀಗಳು ತಾವೇ ಮುಂದಾಗಿ ಬಂದು ಮಕ್ಕಳಿಗೆ ಸಮಾಧಾನ ಮಾಡುತ್ತಿದ್ದರು. “”ಊರಲ್ಲಿ ಮಳೆ ಆಗಿಲ್ಲವಂತೆ. ಅಲ್ಲಿ ಈಗ ತುಂಬಾ ಕಷ್ಟ ಇದೆ. ಚೆನ್ನಾಗಿ ಮಳೆ ಆಗುತ್ತಲ್ಲ…ಆಗ ಕಳಿಸಿಕೊಡ್ತೇನೆ. ಈಗ ಊಟ ಮಾಡಿ ಮಲ್ಕೋ” ಎಂದು ರಮಿಸುತ್ತಿದ್ದರು.
ಮುಖ್ಯವಾಗಿ, ಸಿದ್ಧಗಂಗೆಯಲ್ಲಿ ಎಲ್ಲ ಜಾತಿಯ ಮಕ್ಕಳಿಗೂ ಮುಕ್ತ ಪ್ರವೇಶ ಇತ್ತು. ಈಗಲೂ ಇದೆ. ನೀವು ಲಿಂಗಾಯತರಾ, ಬ್ರಾಹ್ಮಣರಾ, ಒಕ್ಕಲಿಗರಾ, ದಲಿತರಾ, ಮುಸ್ಲಿಮರಾ, ಕ್ರಿಶ್ಚಿಯನ್ನರಾ ಎಂದು ಯಾರನ್ನೂ ಕೇಳುವುದಿಲ್ಲ. ಅಲ್ಲಿ ಎಲ್ಲರನ್ನೂ “ಮಕ್ಕಳು’ ಅಂತ ಮಾತ್ರ ನೋಡಲಾಗುತ್ತದೆ. ಹಾಗಾಗಿ ಎಲ್ಲಾ ವರ್ಗದ ಮಕ್ಕಳೂ ಒಂದೇ ರೂಮ್ ನಲ್ಲಿ ಉಳಿಯಲು , ಒಟ್ಟಿಗೇ ಬೆಳೆಯಲು-ಬದುಕಲು ಶಾಂತಿ-ಸಹಬಾಳ್ವೆಯ ಪಾಠ ಕಲಿಯಲು ಸಾಧ್ಯವಾಗಿದೆ.
ಯಾರಾದರೂ ಶ್ರೀಗಳು ತಮ್ಮ ಮಠದಿಂದ ಹೊರಗೆ ಬರುತ್ತಾರೆ ಅಂದರೆ, ಆ ದಾರಿಯಲ್ಲಿ ಯಾವುದೇ ಪ್ರಾಣಿಗಳು ಬಾರದಂತೆ ಸಾಮಾನ್ಯವಾಗಿ ಎಚ್ಚರ ವಹಿಸಲಾಗುತ್ತದೆ. ಆದರೆ ಈ ಥರದ ನಿಯಮ ಇರಲೇಬಾರದು ಅನ್ನುತ್ತಿದ್ದರು ಶಿವಕುಮಾರ ಸ್ವಾಮೀಜಿ! ಅವರು ಮಠದಿಂದ ಆಚೆ ಬಂದರೆ ಸಾಕು, ಅಲ್ಲಿಯೇ ಅಡ್ಡಾಡುತ್ತಿದ್ದ ನಾಯಿಮರಿ ಓಡಿಬಂದು ಎದುರು ನಿಲ್ಲುತ್ತಿತ್ತು. ಅದನ್ನು ಕಂಡಾಗ ಶ್ರೀಗಳ ಮುಖ ಅರಳುತ್ತಿತ್ತು. “ಇದಕ್ಕೆ ಪ್ರಸಾದ ಬೇಕಿದೆ. ಅದನ್ನೇ ಕೇಳ್ತಾ ಇದೆ’ ಅನ್ನುತ್ತಿದ್ದರು. ಎಷ್ಟೇ ಅವಸರವಿದ್ದರೂ ಎದುರಾದ ನಾಯಿಗೆ, ಹಸುವಿಗೆ ಏನಾದರೂ ತಿನಿಸು ಕೊಟ್ಟ ನಂತರವೇ ಹೆಜ್ಜೆ ಮುಂದಿಡುತ್ತಿದ್ದರು.
ಸಿದ್ಧಗಂಗೇಲಿ ಕಲಿಯುವವರ ಪೈಕಿ ಹಳ್ಳಿಯ ಮಕ್ಕಳೇ ಜಾಸ್ತಿ. ಹೆಚ್ಚಿನವರು ಬಡವರ ಮನೆಯ ಮಕ್ಕಳು ಎಂದು ಬಿಡಿಸಿ ಹೇಳಬೇಕಿಲ್ಲ ತಾನೆ? ಇದನ್ನೆಲ್ಲ ಗಮನಿಸಿದ ಒಬ್ಬರು ಕೇಳಿದರಂತೆ, “ಬುದ್ದಿಯೋರೇ, ಬುದ್ಧಿವಂತರಾದ ಕೆಲವೇ ಮಕ್ಕಳನ್ನು ಹಾಸ್ಟೆಲ್‌ನಲ್ಲಿ ಓದಿಸಿದರೆ ಒಳ್ಳೆಯದಲ್ಲವೇ? ಭಾರೀ ಬುದ್ಧಿವಂತರಾದ ನೂರು ಜನರನ್ನು ಓದಿಸಿದರೆ ಸಂಸ್ಥೆಗೂ ಒಳ್ಳೆಯ ಹೆಸರಲ್ಲವೇ?’
ಆಗ ಸ್ವಾಮೀಜಿಯವರು ಹೇಳಿದ್ದು: ಸಾಹುಕಾರರ ಮಕ್ಕಳು ಓದಲು ಬೇರೆ ಶಾಲೆಗಳಿವೆ. ಆದರೆ ಬಡವರ ಮಕ್ಕಳನ್ನು ಮುಂದೆ ತರುವವರು ಯಾರು? ದಡ್ಡ ಮಕ್ಕಳಿಗೆ ಅನ್ನ-ಜ್ಞಾನ-ದಾಸೋಹ ನೀಡುವುದೇ ನಮ್ಮ ಉದ್ದೇಶ.
ಯಾವುದಾದರೂ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಹೋದಾಗ ಅಲ್ಲಿ ಯಾರಾದರೂ – “”ಗುರುಗಳೇ, ನಾವು ಸಿದ್ಧಗಂಗೆಯಲ್ಲಿ ಓದಿದವರು ಅಂದರೆ, ಶ್ರೀಗಳಿಗೆ ತುಂಬಾ ಖುಷಿಯಾಗುತ್ತಿತ್ತು. ಕಾರ್ಯಕ್ರಮ ಮುಗಿಸಿ ಬರುವಾಗ, ವಿವರ ದಾಖಲಿಸುವ ಪುಸ್ತಕ ಇದ್ದರೆ, “”ಶ್ರೀಮಠದಲ್ಲಿ ಕಲಿತವರು ಇಲ್ಲಿ ಕೆಲಸ ಮಾಡುತ್ತಾರೆ ಎಂದು ತಿಳಿದು ನಮಗೆ ಸಂತೋಷವಾಯಿತು. ಶಿವ ಅವರಿಗೆ ಸದಾ ಒಳ್ಳೆಯದು ಮಾಡಲಿ” ಎಂದು ತಪ್ಪದೇ ಬರೆಯುತ್ತಿದ್ದರು.
ಒಮ್ಮೆ ಹೀಗಾಯಿತು. ತಮ್ಮ ಮಗಳ ಮದುವೆಯ ದಿನ ಸ್ವಾಮೀಜಿಗಳ ಪಾದಪೂಜೆ ನೆರವೇರಿಸಬೇಕು. ಆ ನಂತರವೇ ಮುಹೂರ್ತ ಇಟ್ಟುಕೊಳ್ಳಬೇಕು ಎಂದು ಯಜಮಾನರೊಬ್ಬರು ನಿರ್ಧರಿಸಿದರು. ತಮ್ಮ ಮನದ ಆಸೆಯನ್ನು ಶ್ರೀಗಳ ಮುಂದೆ ಹೇಳಿಕೊಂಡರು. ಅದರಂತೆ, ಬೆಳಗಿನ ಜಾವ 6 ಗಂಟೆಗೆ ಪಾದಪೂಜೆ ಎಂದು ನಿರ್ಧಾರವಾಯಿತು. ನಿಗದಿತ ದಿನ ಬೆಳಗ್ಗೆ ಸರಿಯಾಗಿ ಆರು ಗಂಟೆಗೆ ಶ್ರೀಗಳು ಮದುವೆ ಮನೆಗೆ ಬಂದೇ ಬಿಟ್ಟರು. ಮದುವೆ ಮನೆಯ ಜನರೆಲ್ಲಾ ಗಾಬರಿಯಿಂದ ಓಡಾಡುತ್ತಿ¨ªಾರೆ. “ಹುಡುಗಿ ಇನ್ನೂ ರೆಡಿ ಆಗಿಲ್ಲವಲ್ಲ’ ಅನ್ನುವ ಕಳವಳದ ಮಾತುಗಳು ಅಲ್ಲಿಂದ ಈ ಕಡೆಗೆ, ಇಲ್ಲಿಂದ ಆ ಕಡೆಗೆ ಓಡಾಡುವವರಿಂದ ಕೇಳಿಸಲಾರಂಭಿಸಿದವು. ಪಾದಪೂಜೆಯ ಸಮಯದಲ್ಲಿ ಹಾಜರಿರಬೇಕಿದ್ದ ಮದುಮಗಳ ಮೇಕಪ್ ಇನ್ನೂ ಮುಗಿದಿರಲಿಲ್ಲ! ಹೇಳಿ ಕೇಳಿ ಮದುವೆ, ತಾನು ಚೆನ್ನಾಗಿ ಕಾಣಬೇಕು ಅನ್ನುವ ಆಸೆ ಆ ಹೆಣ್ಣುಮಗಳದ್ದು…ಹಾಗಂತ ಸ್ವಾಮಿಗಳನ್ನು ಕಾಯಿಸಲು ಸಾಧ್ಯವೇ? ಈ ಗೊಂದಲದಲ್ಲಿಯೇ ಕುಟುಂಬದವರು ಇದ್ದಾಗ, ವಿಷಯ ಶ್ರೀಗಳಿಗೆ ತಿಳಿಯಿತು. ಆಗ ಶ್ರೀಗಳು ಹೇಳಿದರಂತೆ: “”ಇವತ್ತು ಆ ತಾಯಿಯ ಬಾಳಿನ ಮಹತ್ವದ ದಿನ. ಆಕೆ ಚೆನ್ನಾಗಿ ಕಾಣಲಿ. ಹೇಗೆ ಬೇಕೋ ಹಾಗೇ ಅಲಂಕಾರ ಮಾಡಿಕೊಳ್ಳಲಿ. ಹೆಣ್ಣು ಮಕ್ಕಳು ಹಾಗೆ ಮಾಡಿಕೊಂಡರೇ ಚೆಂದ. ನಾವು ಏಳೂವರೆಗೆ ಬರುತ್ತೇವೆ. ಆ ಮಗುವಿಗೆ ಯಾರೂ ಗದರಬೇಡಿ. ಆಕೆ ನಿಧಾನಕ್ಕೆ ತಯಾರಾಗಲಿ…”
ಈ ಪ್ರಸಂಗವನ್ನು ನೆನಪು ಮಾಡಿಕೊಳ್ಳುವ ಜನ ಈಗಲೂ ಹೇಳುತ್ತಾರೆ: ಸನ್ಯಾಸಿಯಾಗಿದ್ದ ಶ್ರೀಗಳು ಒಂದು ಹೆಣ್ಣು ಮಗುವಿನ ಅಂತರಂಗವನ್ನು ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರಲ್ಲ, ಈ ಅರ್ಥದಲ್ಲಿ ಅವರು ಅಮ್ಮನೇ ಅಲ್ಲವೇ?
ಎ.ಆರ್. ಮಣಿಕಾಂತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.