ನಿರಂತರ ಬರದಿಂದ ತೆಂಗಿನ ಬೆಳೆಗೆ ಆಪತ್ತು
ಯಾವ ಕೆರೆಕಟ್ಟೆಗಳಲ್ಲೂ ನೀರಿಲ್ಲ • ತೆಂಗಿನ ಮರಗಳಿಗೆ ರೋಗ • ಕೊಬ್ಬರಿಗೆ ಲಾಭದಾಯಕ ಬೆಲೆ ಇಲ್ಲ
Team Udayavani, May 28, 2019, 9:14 AM IST
ತಿಪಟೂರಲ್ಲಿ ಕುಡಿವ ನೀರಿಗಾಗಿ ಬಿಂದಿಗೆ ಹಿಡಿದುಕೊಂಡು ಕಾಯುತ್ತಿರುವ ಜನರು.
ತಿಪಟೂರು: ಕಲ್ಪತರು ನಾಡು, ಕೊಬ್ಬರಿ ನಗರ ಎಂದೇ ಪ್ರಸಿದ್ಧಿಯಾಗಿರುವ ತಿಪಟೂರು ತಾಲೂಕಿನಲ್ಲಿ ಕಳೆದ ಹತ್ತಾರು ವರ್ಷಗಳಿಂದ ಮಳೆ ಇಳಿಮುಖವಾಗಿದೆ. ಇದರಿಂದ ನಿರಂತರ ಬರ ಪೀಡಿತ ನಾಡು ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಈಗ ಬರದ ನಾಡಾಗಿಯೇ ಪರಿವರ್ತನೆಯಾಗಿದ್ದು, ಹತ್ತು ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದೆ. ಮಳೆಗಾಲದ ಆರಂಭದಲ್ಲೂ ಬಿಸಿಲಿನ ತಾಪ ಹೆಚ್ಚಾಗಿದ್ದು, ಯಾವ ಕೆರೆಕಟ್ಟೆಗಳಲ್ಲೂ ನೀರಿಲ್ಲದೇ ಜನ-ಜಾನುವಾರುಗಳು ಜಲಕ್ಕಾಗಿ ಪರ ದಾಡುತ್ತಿರುವ ಭಯಾನಕ ಸನ್ನಿವೇಶ ಸೃಷ್ಟಿಯಾಗಿದೆ.
ಕೈಕೊಟ್ಟ ಪೂರ್ವ ಮುಂಗಾರು: ಪ್ರತಿ ವರ್ಷ ಏಪ್ರಿಲ್ 15ರಿಂದ ಮೇ ಮೊದಲ ವಾರ ಪೂರ್ವ ಮುಂಗಾರು ಮಳೆ ಅಲ್ಪಸ್ವಲ್ಪವಾದರೂ ಬರುತ್ತಿತ್ತು. ಇದರ ಪರಿ ಣಾಮ ಪೂರ್ವ ಮುಂಗಾರು ವಾಣಿಜ್ಯ ಬೆಳೆಗಳಾದ ಹೆಸರು, ಉದ್ದು, ಎಳ್ಳು, ಅಲಸಂದಿ, ಹರಳು ಸೇರಿದಂತೆ ವಿವಿಧ ಬೆಳೆಗಳನ್ನು ಬಿತ್ತಿ ಬೆಳೆದು, ಸ್ವಲ್ಪ ಆದಾಯ ವನ್ನು ರೈತರು ಕಾಣುತ್ತಿದ್ದರು. ಈ ವರ್ಷ ಪೂರ್ವ ಮುಂಗಾರು ಸಂಪೂರ್ಣ ಕೈಕೊಟ್ಟ ಪರಿಣಾಮ ತಲೆ ಮೇಲೆ ಕೈಹೊರುವಂತಾಗಿದೆ. ಅಲ್ಲದೆ, ಈ ಮಳೆ ಬಂದಿದ್ದರೆ ಬದುಗಳಲ್ಲಿ ದನಕರುಗಳಿಗೆ ಹಸಿರು ಮೇವು ಬೆಳೆದು ಮೇವಿನ ಕೊರತೆ ನೀಗುತ್ತಿತ್ತು.
ತಾಲೂಕಿನ 90ಕ್ಕಿಂತ ಹೆಚ್ಚು ಭಾಗದಲ್ಲಿ ನೀರಿಲ್ಲ: ತಾಲೂಕಿನ 90ಕ್ಕಿಂತ ಹೆಚ್ಚು ಭಾಗದಲ್ಲಿ ಯಾವುದೇ ನೀರಾವರಿ ಇಲ್ಲದ್ದ ರಿಂದ ಕೆರೆಕಟ್ಟೆಗಳಲ್ಲಿ ಹನಿ ನೀರಿಲ್ಲ. ಕಳೆದ ಹಲವು ವರ್ಷಗಳಿಂದ ತಾಲೂಕಿಗೆ ಉತ್ತಮ ಮಳೆ ಇಲ್ಲ. ಮಳೆಗಾಲದಲ್ಲಿ ಮಳೆ ಬಂದು ಹೋಗುವುದು ಬಿಟ್ಟರೆ, ಕೆರೆಕಟ್ಟೆಗಳಿಗೆ ನೀರು ಹರಿ ಯುವಂತ ಮಳೆಯಾಗಿ ಎಷ್ಟೋ ವರ್ಷಗಳಾಗಿವೆ. ಮಳೆಯನ್ನೇ ನೆಚ್ಚಿ ಬದುಕುತ್ತಿರುವ ರೈತರ ಸಂಕಷ್ಟ ಒಂದೆಡೆಯಾದರೆ, ನಗರ ಪ್ರದೇಶದಲ್ಲಿಯೂ ನೀರಿ ಲ್ಲದೆ ಪರದಾಡು ವಂತಹ ಪರಿಸ್ಥಿತಿ ಇನ್ನೊಂದು ಕಡೆ. ಸಾಕಷ್ಟು ಗ್ರಾಮ ಗಳಲ್ಲಿ ಹಾಗೂ ನಗರದ ಹಲವೆಡೆ ನೀರಿಗಾಗಿ ಮಹಿಳೆ ಯರು ಮತ್ತು ಮಕ್ಕಳು ಪ್ರತಿನಿತ್ಯ ಪರದಾಡು ವಂತಾಗಿದೆ. ಹಲವು ಗ್ರಾಮಗ ಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡ ಲಾಗುತ್ತಿದ್ದರೂ ಸಾಕಾಗುವಷ್ಟು ನೀರು ಸಿಗುತ್ತಿಲ್ಲ.
ಗ್ರಾಪಂಗಳ ನಿರ್ಲಕ್ಷ್ಯ: ತಾಲೂಕಿನ ಬಹುತೇಕ ಗ್ರಾಪಂ ಅಧಿಕಾರಿಗಳು ಜನ-ಜಾನುವಾರುಗಳ ನೀರಿನ ಪೂರೈ ಕೆಗೆ ತೀವ್ರ ನಿರ್ಲಕ್ಷ್ಯ ವಹಿಸಿದ್ದರಿಂದ ನೀರಿನ ಸಮಸ್ಯೆ ಹೆಚ್ಚಾಗಿದೆ. ಕಣ್ಣಮುಚ್ಚಾಲೆಯಾಡುವ ವಿದ್ಯುತ್ ಮತ್ತು ಪದೇ ಪದೆ ಸುಟ್ಟುಹೋಗುವ ಮೋಟರ್‌ಗಳನ್ನು ರಿಪೇರಿ ಮಾಡಿ, ಅಳವಡಿಸಲು ವಹಿಸುವ ನಿರ್ಲಕ್ಷ್ಯವಂತೂ ಹೇಳ ತೀರದಾಗಿದೆ. ಪ್ರತಿ ಪಂಚಾ ಯ್ತಿಗಳಲ್ಲಿ ಸ್ಪೇರ್ ಮೋಟರ್‌ಗಳನ್ನು ಇಟ್ಟು ಕೊಳ್ಳುವ ಬದಲು ರಿಪೇರಿಗೆ ಬಂದಾಗ ಸಮಸ್ಯೆ ಬಗ ೆ ಹರಿಸಲು ಮುಂದಾಗುತ್ತಿರುವುದೂ ಸಹ ಜೀವಜಲದ ಸಮಸ್ಯಗೆ ಕಾರಣವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಹಣಾಧಿ ಕಾರಿಗಳು ಖಡಕ್ ಸೂಚನೆ ನೀಡಿ ಗಮನ ಹರಿಸಬೇಕಿದೆ.
ಅಂತರ್ಜಲ ಕೊರತೆ: ತಾಲೂಕಿನ ಕೆರೆಕಟ್ಟೆಗಳು ತುಂಬಿ ಅದೆಷ್ಟೋ ವರ್ಷಗಳಾಗಿರುವುದರಿಂದ ಸಹಜ ವಾಗಿಯೇ ಅಂತರ್ಜಲ ಕೊರತೆ ಎದುರಾಗಿದೆ. ತಾಲೂಕಿನಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಏಕೈಕ ಆಸರೆ ಎಂದರೆ ಬೋರ್‌ವೆಲ್ಗಳು. ಬಹುತೇಕ ಗ್ರಾಮಗಳ ಬೋರ್‌ವೆಲ್ಗಳಲ್ಲಿ ಅಂತರ್ಜಲ ಕೊರತೆ ತೀವ್ರವಾಗಿದೆ. ಸಾವಿರಾರು ಅಡಿ ಕೊರೆಸಿದರೂ ನೀರು ಸಿಗದ ಕಾರಣ ಗ್ರಾಮೀಣ ಜನರ ಬದುಕು ಬೆಂಕಿಯಿಂದ ಬಾಣಲೆಗೆ ಎಸೆದಂತಾಗಿದೆ. ಒಂದೇ ಒಂದು ದಿನ ವಿದ್ಯುತ್ ಕೈಕೊಟ್ಟರೆ ಹಳ್ಳಿಗಳಲ್ಲಿ ಜೀವ ಜಲಕ್ಕಾಗಿ ಅಕ್ಕಪಕ್ಕದ ಗ್ರಾಮಗಳಿಗೆ ಹೋಗ ಬೇಕಾಗುತ್ತದೆ. ತಾಲೂಕಿನಲ್ಲಿ ಕುಡಿಯುವ ನೀರಿನಲ್ಲಿ ಫ್ಲೋರೈಡ್ ಪ್ರಮಾಣ ಹತ್ತಾರು ಪಟ್ಟು ಹೆಚ್ಚಿದ್ದು, ಕುಡಿಯಲು ಅಶುದ್ಧವಾಗಿದೆ. ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಹೆಚ್ಚು ಸ್ಥಾಪಿಸಬೇಕಾಗಿದೆ.
ಮಳೆ ಬಾರದಿದ್ದರೆ ಮತ್ತಷ್ಟು ಭೀಕರ: ಮುಂದಿನ ಕೆಲವೇ ದಿನಗಳಲ್ಲಿ ಮಳೆರಾಯ ಕೃಪೆ ತೋರದಿದ್ದರೆ, ನೂರಾರು ಹಳ್ಳಿಗಳಲ್ಲಿ ನೀರಿಗಾಗಿ ಮತ್ತೂಷ್ಟು ಪರದಾಟ ಹೆಚ್ಚಾಗುವುವು ನಿಶ್ಚಿತ. ಸದ್ಯ ಕೆಲವೇ ಬೋರ್‌ವೆಲ್ಗಳಲ್ಲಿ ಒಂದೆರಡು ಗಂಟೆ ಮಾತ್ರ ನೀರು ಬರುತ್ತಿದ್ದು, ಬಿಸಿಲ ಬೇಗೆ ಹೆಚ್ಚಾದಂತೆ ಅಂತರ್ಜಲ ಪಾತಾಳ ಸೇರಿ ಕಲ್ಪತರು ನಾಡಿನಲ್ಲಿ ನೀರಿಗಾಗಿ ಹಾಹಾಕಾರ ಉಂಟಾ ಗುವುದನ್ನು ಜನರು ಊಹಿಸಿಕೊಂಡೇ ಆತಂಕಕ್ಕೀಡಾಗಿದ್ದಾರೆ.
ನೀರಿದ್ದರೂ ನಗರವಾಸಿಗಳಿಗೆ ಸಿಗುತ್ತಿಲ್ಲ: ತಿಪಟೂರು ನಗರಕ್ಕೆ ನೀರು ಸರಬರಾಜು ಮಾಡುವ ಈಚನೂರು ಕೆರೆಯಲ್ಲಿ ಅಲ್ಪಸ್ವಲ್ಪ ನೀರಿದ್ದರೂ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ 10ರಿಂದ 15 ದಿನಕ್ಕೊಮ್ಮೆ ನೀರು ಬಿಡುತ್ತಿದ್ದು, ನಾಗರಿಕರು ಹಣ ನೀಡಿ ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳುವಂತಾಗಿದೆ. ನಗರದ ಜನತೆಗೆ ನೀರು ಸರಬರಾಜು ಮಾಡುವಲ್ಲಿ ನಗರಸಭೆ ಎಂಜಿನಿಯರಿಂಗ್ ವಿಭಾಗ ಸಂಪೂರ್ಣ ವಿಫಲ ವಾಗಿದೆ. ನಗರದಲ್ಲಿ ಸಾಕಷ್ಟು ಬೋರ್‌ವೆಲ್ಗಳಿದ್ದರೂ ಅನಧಿಕೃತನಲ್ಲಿ ಕನೆಕ್ಷನ್‌ಗಳು ಮಾರಾಟಕ್ಕಿದ್ದು, ನಿರ್ವಹಣೆ ಇಲ್ಲದಿರುವುದರಿಂದ ನಗರದಲ್ಲಿ ಜನರು ನೀರು ತುಂಬಿಸಿಕೊಳ್ಳಲು ಇಡೀ ದಿನವನ್ನೇ ವ್ಯರ್ಥಮಾಡಿಕೊಳ್ಳುವಂತಾಗಿದೆ.
ವಿನಾಶದಂಚಿನಲ್ಲಿ ತೆಂಗಿನ ತೋಟಗಳು: ರೈತರ ಪ್ರಮುಖ ವಾಣಿಜ್ಯ ಬೆಳೆ ಎಂದರೆ ಅದು ತೆಂಗು ಮಾತ್ರ. ಸರಿಯಾದ ಮಳೆ ಇಲ್ಲದೇ ಅರ್ಧಕ್ಕೂ ಹೆಚ್ಚು ತೆಂಗಿನ ಮರಗಳು ಒಣಗಿ ಹೋಗಿವೆ. ಬೋರ್‌ವೆಲ್ ನೀರನ್ನೇ ಆಶ್ರಯಿಸಿ, ತೆಂಗು ಬದುಕಿಸಿಕೊಂಡಿರುವ ಶೇ.40ರಷ್ಟು ರೈತರಿಗೆ ಅಂತರ್ಜಲದ ಕೊರತೆ ಜೊತೆಗೆ ತೆಂಗಿನ ಮರಗಳಿಗೆ ವಿವಿಧ ರೋಗಗಳು ಬಂದಿದ್ದು, ಚೇತರಿಸಿಕೊಳ್ಳಲು ಮಳೆರಾಯನ ಕೃಪೆ ಅಗತ್ಯವಿದೆ. ಒಂದು ಕಡೆ ತೆಂಗಿನ ಮರಗಳು ಒಣಗಿ ಹೋಗಿದ್ದರೆ, ಮತ್ತೂಂದೆಡೆ ಕೊಬ್ಬರಿಗೆ ಲಾಬದಾಯಿಕ ಬೆಲೆಯೂ ಇಲ್ಲ. ಇದರಿಂದ ಬೆಳೆಗಾರನ ಸ್ಥಿತಿ ಅತಂತ್ರವಾಗಿದ್ದು, ಅಡಿಕೆ ಬೆಳೆಗಾರರ ಪರಿಸ್ಥಿತಿ ಇದಕ್ಕಿಂತಲೂ ಕೆಟ್ಟದ್ದಾಗಿದೆ.
ಸಂಕಷ್ಟದಲ್ಲಿದೆ ಪಶುಸಂಗೋಪನೆ: ತಾಲೂಕಿನಲ್ಲಿ ಪ್ರಮುಖ ವಾಣಿಜ್ಯ ಬೆಳೆ ತೆಂಗು ಬಿಟ್ಟರೆ, ಇಲ್ಲಿನ ರೈತರ ಪ್ರಮುಖ ಆದಾಯದ ಉಪ ಕಸುಬು ಎಂದರೆ ಪಶುಸಂಗೋಪನೆ. ಆದರೆ, ಪಶುಸಂಗೋಪನೆಗೆ ಪ್ರಮುಖವಾಗಿ ಮೇವು ಮತ್ತು ನೀರು ಅಗತ್ಯವಾಗಿದೆ. ನೀರು ಸಿಗದಿದ್ದರಿಂದ ಬದುಕಿಗೆ ಆಶ್ರಯ ವಾಗಿರುವ ಪಶುಸಂಗೋಪನೆ ಹೇಗಪ್ಪಾ ಎಂಬ ಚಿಂತೆ ರೈತರಲ್ಲಿ ಕಾಡುತ್ತಿದೆ.
● ಬಿ.ರಂಗಸ್ವಾಮಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.