ಹೇಮೆ ನಾಲೆ ಆಧುನೀಕರಣಕ್ಕೆ ಭೂಮಿ ಪೂಜೆ
Team Udayavani, Jan 23, 2020, 3:00 AM IST
ತಿಪಟೂರು: ತುಮಕೂರು ಜಿಲ್ಲೆಗೆ ನಿಗದಿಯಾಗಿರುವ 25 ಟಿಎಂಸಿ ಹೇಮಾವತಿ ನೀರು ಜಿಲ್ಲೆಯ ಬಹುತೇಕ ಕೆರೆಗಳಿಗೆ ಹರಿಯುವ ಮೂಲಕ ಈ ಭಾಗದ ಜನರ ಕುಡಿಯುವ ನೀರಿನ ಬವಣೆ ಕೆಲವೇ ತಿಂಗಳಲ್ಲಿ ನೀಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ತಾಲೂಕಿನ ನೊಣವಿಕೆರೆ ಹೋಬಳಿ ಕನ್ನುಘಟ್ಟ ಗೇಟ್ ಹತ್ತಿರವಿರುವ ಹೇಮಾವತಿ ನಾಲೆ ಬಳಿ ಜಲ ಸಂಪನ್ಮೂಲ ಇಲಾಖೆ, ಕಾವೇರಿ ನೀರಾವರಿ ನಿಗಮ ನಿಯಮಿತದಿಂದ ಹೇಮಾವತಿ ಯೋಜನೆ ವೈ ನಾಲೆ 15.727 ರಿಂದ 21.175 ಕಿ.ಮೀವರೆಗೆ ಹಾಗೂ ತುಮಕೂರು ಶಾಖಾ ನಾಲೆ 0.00ಯಿಂದ 70ಕಿ.ಮೀವರೆಗೆ ರೂ. 475ಕೋಟಿ ವೆಚ್ಚದಲ್ಲಿ ನಾಲೆ ಆಧುನೀಕರಣಕ್ಕೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಹೇಮಾವತಿ ಡ್ಯಾಂ ಕಟ್ಟಿದ ಸಂದರ್ಭ ತುಮಕೂರು ಜಿಲ್ಲೆಗೆ 25 ಟಿಎಂಸಿ ನೀರು ನಿಗದಿಪಡಿಸಲಾಗಿತ್ತು. ಆದರೆ ಅಂದಿನಿಂದಲೂ ಈವರೆಗೂ 8-10ಟಿಎಂಸಿ ನೀರಿಗಿಂತ ಹೆಚ್ಚು ನೀರು ಹರಿದಿಲ್ಲ. ಇದಕ್ಕೆ ರಾಜಕೀಯ, ಕೆಲ ಅಧಿಕಾರಿಗಳ ನಿರ್ಲಕ್ಷ್ಯ, ತಾಂತ್ರಿಕ ಸಮಸ್ಯೆ, ಸೇರಿ ಈ ಭಾಗದ ಕೆಲ ಜನಪ್ರತಿನಿಧಿಗಳ ಅಸಹಾಯಕತೆ ಕಾರಣ.
ಹೀಗಾಗಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಮೊದಲ ದಿನದಿಂದಲೇ ಜಿಲ್ಲೆಗೆ ನಿಗದಿಯಾಗಿರುವ 25ಟಿಂಎಂಸಿ ನೀರು ಹರಿಸಬೇಕು ಎಂದು ಒತ್ತಾಯಿಸುತಿದ್ದೆ. ಸಂಸದ ಜಿ.ಎಸ್. ಬಸವರಾಜು ಸಹಕಾರವೂ ಇತ್ತು. ಎಲ್ಲಾ ಶಾಸಕರ ಬೆಂಬಲದಿಂದ ಮಾಡಿದ ಮನವಿಗೆ ಸಿಎಂ ಸ್ಪಂದಿಸಿ 475 ಕೋಟಿ ರೂ. ವೆಚ್ಚದಲ್ಲಿ ಕೇವಲ 3-4 ತಿಂಗಳಲ್ಲಿ ಅಗಲೀಕರಣಕ್ಕೆ ಅನುಮತಿ ನೀಡಿದ್ದಾರೆ.
ಈಗಾಗಲೇ 2 ಕಡೆ ಕಾಮಗಾರಿ ಆರಂಭಿಸಲು ಅವಶ್ಯವಿರುವ ಅತ್ಯಾಧುನಿಕ ಯಂತ್ರೋಪಕರಣ ಇಳಿಸಿದ್ದು, ಮುಂದಿನ ವಾರದಿಂದ ಇನ್ನೂ 4 ಕಡೆ ಇದೇ ರೀತಿಯ ಯಂತ್ರೋಪಕರಣ ಬಳಸಿ ಕಾಮಗಾರಿ ಮುಗಿಸಲಿದ್ದಾರೆ. ಮುಂದಿನ ಮಳೆಗಾಲದ ನಂತರ ಜಿಲ್ಲೆಗೆ ನಿಗದಿಯಾಗಿರುವ 25ಟಿಎಂಸಿ ನೀರು ಪೂರ್ಣ ಲಭ್ಯವಾಗಲಿದೆ ಎಂದು ಹೇಳಿದರು.
ನೀರು ಪೋಲಾಗದಂತೆ ಕ್ರಮ: ತುಮಕೂರು, ಶಿರಾದಂತ ದೂರದ ಭಾಗಗಳಿಗೆ ನೀರು ಹರಿಸಬೇಕೆಂಬ ಇಚ್ಛೆ ನಮ್ಮದಿದ್ದರೂ ವಿನಾಕಾರಣ ಕೆಲ ಭಾಗದಲ್ಲಿ ತುಂಬಿದ ಕೆರೆಗಳಿಗೆ ನೀರು ಹೋಗುತ್ತಿರುತ್ತದೆ. ಇನ್ನು ಕೆಲವೆಡೆ ನಾಲೆ ಒಡೆದು ನೀರು ಹಾಳಾಗುತ್ತಿರುತ್ತದೆ. ಇದನ್ನು ತಡೆಯಲು ಯೋಜನೆ ರೂಪಿಸಿದಲ್ಲಿ ನಮ್ಮ ಸಣ್ಣ ನೀರಾವರಿ ಇಲಾಖೆ ಕೈ ಜೋಡಿಸಿ ಅಂತಹ ನೀರು ಹತ್ತಿರದ ಸಣ್ಣ ಕೆರೆಗಳಿಗೆ ಹರಿಯುವಂತೆ ಮಾಡಲಾಗುತ್ತದೆ ಎಂದು ಸಲಹೆ ನೀಡಿದರು.
ಈ ವರ್ಷ ಶಿರಾ, ಚಿಕ್ಕನಾಯಕನಹಳ್ಳಿ, ಗುಬ್ಬಿ, ತುರುವೇಕೆರೆ, ತಿಪಟೂರು ತಾಲೂಕಿನ ಬಿಳಿಗೆರೆ, ಕಿಬ್ಬನಹಳ್ಳಿ, ಅರಳಗುಪ್ಪೆ ಭಾಗಳು ಸೇರಿ ಹೊನ್ನವಳ್ಳಿ ಏತ ನೀರಾವರಿ ಯೋಜನೆಗಳಲ್ಲಿ ತಾಂತ್ರಿಕ ಸಮಸ್ಯೆಯಿಂದ ನೀರು ಹರಿಸಲಾಗದ ನೋವು ನಮ್ಮಲ್ಲಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆ ಅವಕಾಶ ನೀಡದಂತೆ ನಾಲೆಯ ಕಟ್ಟಕಡೆಯ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಸಂಸದ ಜಿ.ಎಸ್. ಬಸವರಾಜು ಮಾತನಾಡಿ, ಅಕ್ಕಪಕ್ಕದ ಜಿಲ್ಲೆಯ ಪಟ್ಟಭದ್ರಹಿತಾಸಕ್ತಿ ಹಾಗೂ ಅವೈಜ್ಞಾನಿಕ ಕಾಮಗಾರಿಯಿಂದ ಜಿಲ್ಲೆಗೆ ಈವರೆಗೂ ನೀರು ಸರಿಯಾಗಿ ದೊರಕಲಿಲ್ಲ. ನಾಲೆ ಆಧುನೀಕರಣದಿಂದ 25ಟಿಎಂಸಿ ನೀರು ಸರಾಗವಾಗಿ ದೊರಕಲಿದೆ. ಮುಂದಿನ ದಿನಗಳಲ್ಲಿ ಎತ್ತಿನಹೊಳೆ ಸೇರಿ ನಾನಾ ಯೋಜನೆಗಳ ಮೂಲಕ ಜಿಲ್ಲೆಯ ಜನರ ನೀರಿನ ಬವಣೆ ನೀಗಿಸುವ ಯೋಜನೆಗಳಿಗೆ ಒತ್ತು ನೀಡುತ್ತಿದ್ದೇವೆ. ರೈತರು ಅಸೂಯೆ ಬಿಟ್ಟು ಕಡಿಮೆ ನೀರಿನಲ್ಲಿ ಉತ್ತಮ ಬೆಳೆ ತೆಗೆಯುವ ಬುದ್ಧಿವಂತಿಕೆ ಕಂಡುಕೊಳ್ಳಬೇಕು.
ಹೆಚ್ಚು ನೀರು ಕೃಷಿ ಜಮೀನಿಗೆ ಹರಿಸಿಕೊಂಡರೆ ನಾನಾ ಸಮಸ್ಯೆಗಳು ಬೆಳೆಗೆ ಬರುತ್ತವೆ. ಕಾಮಗಾರಿಯಲ್ಲಿ ಲೋಪವಾದರೆ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು. ತುರುವೇಕೆರೆ ಶಾಸಕ ಮಸಾಲೆ ಜಯರಾಂ ಮಾತನಾಡಿ, 1200 ಅಡಿ ಬೋರ್‌ವೆಲ್ ಕೊರೆದರೂ ತಾಲೂಕಿನಲ್ಲಿ ನೀರು ಸಿಗುತ್ತಿಲ್ಲ. ಮುಂದಿನ ದಿನಗಳಲ್ಲಿ ಸಿ.ಎಸ್. ಪುರ ಹೋಬಳಿ ಸೇರಿ ತಾಲೂಕಾದ್ಯಂತ ಹೆಚ್ಚು ಹೇಮಾವತಿ ನೀರು ಹರಿಸಿಕೊಳ್ಳಲು ಯೋಜನೆ ರೂಪಿಸಲಾಗಿದೆ ಎಂದರು.
ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ. ಜೈಪ್ರಕಾಶ್ ಯೋಜನೆ ಸಂಕ್ಷಿಪ್ತ ವರದಿ ನೀಡಿದರು. ಹೇಮಾವತಿ ವಲಯದ ಕೆ. ಬಾಲಕೃಷ್ಣ, ನಾಗರಘಟ್ಟ ಗ್ರಾಪಂ ಅಧ್ಯಕ್ಷೆ ನಾಗರತ್ನಮ್ಮ, ತಾಪಂ ಸದಸ್ಯೆ ಕಾವ್ಯಪ್ರಸನ್ನ, ಎಇಇ ಪಲ್ಲವಿ, ಗುಬ್ಬಿ ಬಿಜೆಪಿ ಮುಖಂಡ ದಿಲೀಪ್ ಮತ್ತಿತರರಿದ್ದರು.
ಗುಣಮಟ್ಟದ ಕಾಮಗಾರಿಗೆ ಆದ್ಯತೆ: ಜನತೆಯ ತೆರಿಗೆ ಹಣದ ಒಂದೊಂದು ಪೈಸೆ ಲೋಪವಾಗದಂತೆ ಗುಣಮಟ್ಟದಲ್ಲಿ ಕಾಮಗಾರಿ ಮುಗಿಸಬೇಕು. ನಾಲೆಯ ಪಕ್ಕದಲ್ಲಿ ಹಾದು ಹೋಗುವ ಸಣ್ಣಪುಟ್ಟಕೆರೆಗಳಿಗೂ ನೀರು ತುಂಬಿದರೆ ರೈತರ ಜೀವನ ಹಸನಾಗಲಿದೆ. ಜನರೂ ವಿನಾಕಾರಣ ನೀರು ಪೋಲಾಗದಂತೆ ಹನಿ ನೀರು ಉಪಯೋಗಿಸಿಕೊಕೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ತಿಪಟೂರು ತಾಲೂಕಿನಲ್ಲೇ ಹೇಮೆ ನಾಲೆ ಹೆಚ್ಚು ಉದ್ದ ಹಾದು ಹೋಗಿದ್ದರೂ ಹೇಮೆ ಪಾಲಿನಲ್ಲಿ ತಾಲೂಕಿಗೆ ಸರಿಯಾಗಿ ನೀರು ದೊರಕುತ್ತಿರಲಿಲ್ಲ. ಈಗ ಹೊನ್ನವಳ್ಳಿ ಏತ ನೀರಾವರಿ ಆಧುನೀಕರಣಗೊಳಿಸಲು 36 ಕೋಟಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಅಲ್ಲಿರುವ ಕೆಲ ಸಮಸ್ಯೆ ನೀಗಿಸಿ ಮುಂದಿನ ವರ್ಷದಿಂದ ಆ ಭಾಗದ ಎಲ್ಲಾ ಕೆರೆಗಳಿಗೆ ನೀರು ಹರಿಸಲಾಗುತ್ತದೆ. ಎತ್ತಿನಹೊಳೆ 57ಕಿ.ಮೀ ಈ ಭಾಗದಲ್ಲಿ ಹೋಗಿದ್ದರೂ ನೀರು ಸಿಕ್ಕಿರಲಿಲ್ಲ. ಈಗ ನೀರು ಲಭ್ಯವಾಗಿದ್ದು, ಅವಶ್ಯ ಕೆರೆಗಳಿಗೆ ಬಳಸಿಕೊಳ್ಳುತ್ತೇವೆ.
-ಬಿ.ಸಿ.ನಾಗೇಶ್, ಶಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.