ಕಾಡುಗೊಲ್ಲರ ಮನೆಯಲ್ಲಿ ಶಾಸಕರ ಗ್ರಾಮವಾಸ್ಥವ್ಯ
ಅಕ್ರಮ ತಡೆಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಅಧಿಕಾರಿಗಳಿಗೆ ಶಾಸಕ ಡಾ.ಎಚ್.ಡಿ.ರಂಗನಾಥ್ ಸೂಚನೆ
Team Udayavani, Oct 17, 2021, 6:26 PM IST
ಕುಣಿಗಲ್: ಗ್ರಾಮೀಣ ಭಾಗದಲ್ಲಿನ ಕಾಡುಗೊಲ್ಲರ ಸಮಸ್ಯೆಯನ್ನು ಆಲಿಸಿ, ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ಶಾಸಕ ಡಾ.ಎಚ್ .ಡಿ.ರಂಗನಾಥ್ ತಾಲೂಕಿನ ನಡೆಮಾವಿನಪುರ ಕಾಡುಗೊಲ್ಲರ ಮನೆಯಲ್ಲಿ ಗ್ರಾಮ ವಾಸ್ತವ್ಯ ಹೂಡಿ ಜನರ ಸಮಸ್ಯೆ ಆಲಿಸಿದರು.
ಶುಕ್ರವಾರ ರಾತ್ರಿ ಶಾಸಕ ಡಾ.ಎಚ್.ಡಿ.ರಂಗ ನಾಥ್, ತಹಶೀಲ್ದಾರ್ ಮಹಾಬಲೇಶ್ವರ, ತಾಪಂ ಇಒ ಜೋಸೆಫ್ ಗೊಲ್ಲರಹಟ್ಟಿಗೆ ಗ್ರಾಮವಾಸ್ತವ್ಯಕ್ಕೆ ಆಗಮಿಸುತ್ತಿದಂತೆ ಮಕ್ಕಳು, ಮಹಿಳೆಯರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸೇರಿದ ಕಾಡುಗೊಲ್ಲ ಸಮುದಾಯದ ಜನರು ತಮ್ಮ ಬುಡಕಟ್ಟು ಸಂಪ್ರದಾಯದಂತೆ ಸೋಬಾನೆ ಪದ ಹಾಡಿ ಆರತಿ ಬೆಳಗಿ ಸ್ವಾಗತಿಸಿದರು.
ಗೊಲ್ಲರಹಟ್ಟಿ ಗ್ರಾಮದ ಜಯಮ್ಮ ಅವರ ಮನೆಯಲ್ಲಿ ತಂಗುವ ಜೊತೆಗೆ ಅವರು ಮಾಡಿದ್ದ ಹುಳ್ಳಿಕಾಳು ಬಸ್ಸಾರು, ರಾಗಿ ಮುದ್ದೆ, ಅಪ್ಪಳ ಭೋಜನ ಸವಿದರು. ಮನೆಯ ಪಡಸಾಲೆಯ ಮೇಲೆ ಕುಳಿತು ಮಧ್ಯ ರಾತ್ರಿ 12 ಗಂಟೆಯವರೆಗೂ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು.
ನಾಳೆ ಗ್ರಾಮದಲ್ಲಿ ನಡೆಯುವ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಜನರ ಸಮಸ್ಯೆ ಸಾಧ್ಯವಾದಷ್ಟು ಪರಿಹರಿಸ ಬೇಕೆಂದು ಜೊತೆಯಲ್ಲಿದ್ದ ತಾಲೂಕಿನ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಪಶು, ಆರೋಗ್ಯ ತಪಾಸಣಾ ಶಿಬಿರ, ಕೊರೊನಾ ಲಸಿಕೆ, ಸಸಿ ವಿತರಣೆ, ಮಾಸಾಶನ, ಆಧಾರ್ ಕಾರ್ಡ್, ನರೇಗಾ ಜಾಬ್ ಕಾರ್ಡ್ ಮೊದಲಾದ ಸೌಲಭ್ಯಗಳನ್ನು ಸ್ಥಳದಲ್ಲೇ ವಿತರಿಸಿಲಾಯಿತು. ಸರ್ಕಾರಿ ಇಲಾಖೆಗಳಿಂದ ಸಿಗುವ ಸೌಲಭ್ಯದ ಬಗ್ಗೆ ಜನ ಜಾಗೃತಿ ಮೂಡಿಸಲಾಯಿತು.
ಇದನ್ನೂ ಓದಿ;- ಮಟ್ಕಾ ದಂಧೆ ಭೇದಿಸಲು ಪೊಲೀಸರು ಸಜ್ಜು
ಕ್ಯಾಮೆರಾ ಅಳವಡಿಕೆಗೆ ಸೂಚನೆ: ನಿತ್ಯ ನ್ಯಾಯಬೆಲೆ ಅಂಗಡಿ ತೆರೆಯುತ್ತಿಲ್ಲ. ಅವರಿಗೆ ಇಷ್ಟ ಬಂದ ಹಾಗೆ ಅಂಗಡಿ ತೆರೆದು ಪಡಿತರ ಸಾಮಗ್ರಿ ನೀಡುತ್ತಿದ್ದಾರೆ. ಅದರಲ್ಲೂ ತೂಕದಲ್ಲಿ ಮೋಸ ಮಾಡಲಾಗುತ್ತಿದೆ. ಕಾರ್ಡ್‌ದಾರರಿಂದ 20 ರೂ. ಹಣ ವಸೂಲಿ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ದೂರಿದರು. ಇದರಿಂದ ಕೆಂಡಾಮಂಡಲರಾದ ಶಾಸಕ ಡಾ.ರಂಗನಾಥ್ ಆಹಾರ ಶಿರಸ್ತೇದಾರ್ ಮಲ್ಲಿಕಾರ್ಜುನ್ ಅವರನ್ನು ತರಾಟೆ ತೆಗೆದುಕೊಂಡರು.
ನ್ಯಾಯ ಬೆಲೆ ಅಂಗಡಿಗಳಲ್ಲಿನ ಅವ್ಯವಹಾರ ಅಕ್ರಮ ತಡೆಯಲು ತಾಲೂಕಿನ ಎಲ್ಲ ನ್ಯಾಯ ಬೆಲೆ ಅಂಗಡಿಗಳಿಗೆ ಸಿಸಿ ಕ್ಯಾಮೆರಾ ಅಳವಡಿಸುವಂತೆ ಸೂಚಿಸಿದರು. ವಾರದೊಳಗೆ ಸಿಸಿ ಕ್ಯಾಮೆರಾ ಅಳವಡಿಸುವುದ್ದಾಗಿ ಅಧಿಕಾರಿಗಳು ತಿಳಿಸಿದರು. ಅಮಾನತು ಎಚ್ಚರಿಕೆ: ಡಿ.ಹೊಸಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ 70 ಕುರಿ, 2 ಹಸು ಮೇಕೆಗಳಿಗೆ ರೋಗ ತಗಲಿ ಕೋಮಾ ಸ್ಥಿತಿಯಲ್ಲಿ ಇವೆ.
ಅಲ್ಲಿನ ಪಶು ವೈದ್ಯರು ಏನು ಮಾಡುತ್ತಿದ್ದಾರೆ ಎಂದು ಪಶು ಸಂಗೋಪ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ಅವರನ್ನು ಪ್ರಶ್ನಿಸಿದ ಶಾಸಕರು, ಕೂಡಲೇ ಅವರಿಗೆ ನೋಟಿಸ್ ನೀಡಿ, ಅಮಾನತಿಗೆ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ನಿಮ್ಮ ಅಮಾ ನತ್ತಿಗೆ ಶಿಫಾರಸು ಮಾಡುವುದ್ದಾಗಿ ಎಚ್ಚರಿಸಿದರು.
ರೈತರಿಗೆ ಅರಣ್ಯ ಇಲಾಖೆಯಿಂದ ತೊಂದರೆ: ತಾಲೂಕಿನ ವಿವಿಧ ಭಾಗಗಳಲ್ಲಿ ರೈತರು ಉಳುಮೆ ಮಾಡುತ್ತಿರುವ ಜಮೀನು ಆರಣ್ಯ ಇಲಾಖೆಗೆ ಸೇರಿದ್ದು ಎಂದು ಅನಾವಶ್ಯಕವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ರೈತರಿಗೆ ತೊಂದರೆ ನೀಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಏಕೆ ರೈತರಿಗೆ ತೊಂದರೆ ನೀಡುತ್ತೀರಾ ಎಂದು ವೇದಿಕೆ ಮೇಲೆ ಕುಳಿತಿದ್ದ ಆರ್‌ಎಫ್‌ಒ ಮಹಮದ್ ಮನ್ಸೂರ್ ಅವರನ್ನು ಪ್ರಶ್ನಿಸಿದರು. ಸರ್ವೆ ಮಾಡಿಸಿ ನಿಮ್ಮ ಗಡಿ ನೀವು ಗುರುತಿಸಿಕೊಳ್ಳಿ ಎಂದು ಸೂಚಿಸಿದರು. ಗ್ರಾಪಂ ಅಧ್ಯಕ್ಷೆ ಯಶೋಧಾ, ಉಪಾಧ್ಯಕ್ಷ ಜಬೀಉಲ್ಲಾ, ಸದಸ್ಯರಾದ ಜಯದೀಪ್‌ಕುಮಾರ್, ಗಂಗಾ ಧರಯ್ಯ, ಇಮ್ರಾನ್‌ಪಾಷ, ಸ್ವಾಮಿ ಹಾಲು ವಾಗಿಲು, ಕೇಬಲ್ ಗಿರೀಶ್, ಮುಖಂಡ ಗೋವಿಂ ದರಾಜು, ರಂಗಣ್ಣಗೌಡ ಮತ್ತಿತರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.