ರಾಜ್ಯಕ್ಕೆ ಪರಿಹಾರ ತರಲು ಸಂಸದರು ವಿಫಲ
Team Udayavani, Feb 20, 2020, 3:00 AM IST
ತುಮಕೂರು: ರಾಜ್ಯದಲ್ಲಿ ಭೀಕರ ಪ್ರವಾಹ ಬಂದು ಅಪಾರ ಹಾನಿಯುಂಟಾಗಿ, ಸಾವಿರಾರು ಜನ ಮನೆ, ಮಠ ಕಳೆದುಕೊಂಡು 35,500 ಕೋಟಿ ರೂ.ಗೂ ಹೆಚ್ಚು ನಷ್ಟ ಉಂಟಾಗಿದ್ದರೂ, ರಾಜ್ಯದಿಂದ ಗೆದ್ದಿರುವ 28 ಸಂಸತ್ ಸದಸ್ಯರು ಕೇಂದ್ರ ಸರ್ಕಾರದಿಂದ ಪರಿಹಾರ ತರುವಲ್ಲಿ ವಿಫಲರಾಗಿದ್ದಾರೆ ಎಂದು ರಾಜ್ಯಸಭೆ ಸದಸ್ಯ ಜಿ.ಸಿ ಚಂದ್ರಶೇಖರ್ ಆರೋಪಿಸಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಪ್ರವಾಹದಿಂದ ರಾಜ್ಯಕ್ಕೆ 35,500 ಕೋಟಿ ನಷ್ಟ ಉಂಟಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದರೂ, ಕೇಂದ್ರ ಸರ್ಕಾರ ಕೇವಲ 1,869 ಕೋಟಿ ರೂ.ಗಳನ್ನು ಮಾತ್ರ ನೀಡಿದೆ. ಆದರೆ ಪೂರ್ಣ ಪರಿಹಾರ ಸಿಗದೇ ಜನರು ಇಂದಿಗೂ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದರು.
ಕೇಂದ್ರದಿಂದ ರಾಜ್ಯಕ್ಕೆ ವಿವಿಧ ಯೋಜನೆಗಳ ಮೂಲಕ ನೀಡಬೆಕಾಗಿರುವ ಅನುದಾನ ಬಾಕಿಯಿದೆ. ಜಿಎಸ್‌ಟಿ 5,600 ಕೋಟಿ, ಕುಡಿಯುವ ನೀರಿನ ಯೋಜನೆಯಲ್ಲಿ 2,700 ಕೋಟಿ, 14ನೇ ಹಣಕಾಸು ಯೋಜನೆ ಸೇರಿದಂತೆ ವಿವಿಧ 26 ಯೋಜನೆಗಳ ಹಣ ಬಾಕಿ ಉಳಿದಿದೆ. ಎರಡು ಕಡೆ ಬಿಜೆಪಿ ಸರ್ಕಾರವಿದ್ದರೂ ಅನುದಾನ ತಡೆದು ಅಭಿವೃದ್ಧಿ ಸ್ಥಗಿತಗೊಳಿಸಿರುವುದೇಕೆ? ಎಂದು ಪ್ರಶ್ನಿಸಿದರು.
ದೇಶದಲ್ಲಿ 36 ಲಕ್ಷ ಮನೆ ನಿರ್ಮಾಣ ಮಾಡಲಾಗಿದೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಜನರಿಗೆ ಸುಳ್ಳು ಹೇಳಿ ಅಧಿಕಾರ ಗಿಟ್ಟಿಸಿರುವ ಅವರು ಧರ್ಮ, ಜಾತಿ ಹೆಸರಿನಲ್ಲಿ ಸಮಾಜ ಒಡೆಯುತ್ತಿದ್ದಾರೆ. ಬಿಜೆಪಿಯವರಿಗೆ ನೈತಿಕತೆಯಿದ್ದರೆ, ಧರ್ಮ, ಜಾತಿ ಹೆಸರನಲ್ಲಿ ರಾಜಕಾರಣ ಮಾಡುವುದು ಬಿಡಲಿ ಎಂದು ಸವಾಲು ಹಾಕಿದರು.
ತುಮಕೂರು ಜಿಲ್ಲೆಯಲ್ಲಿ ಫುಡ್‌ಪಾರ್ಕ್ ಪ್ರಾರಂಭಿಸಲು ಸ್ವತಃ ಪ್ರಧಾನಿಗಳೇ ಬದಿದ್ದರು. ಇದರಿಂದ ನಮ್ಮ ಜನರಿಗೆ ಉದ್ಯೋಗ ದೊರೆತಿಲ್ಲ, ಎಚ್‌ಎಎಲ್ ಇನ್ನೂ ಆರಂಭಗೊಂಡಿಲ್ಲ, ಪ್ರಧಾನಿಯವರೇ ಚಾಲನೆ ಮಾಡಿರುವ ಯೋಜನೆಗಳು ಕುಂಟುತ್ತಾಸಾಗಿವೆ, ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿರುವ ತುಮಕೂರಿಗೆ 800 ಕೋಟಿ ನೀಡಿದ್ದಾರೆ. ಅದರಲ್ಲಿ 20 ಕೋಟಿ ರೂ. ಮಾತ್ರ ಖರ್ಚಾಗಿದೆ ಎಂದರು.
ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ವರ್ಗಾವಣೆ ದಂಧೆಯಲ್ಲಿ ಸರ್ಕಾರ ಮುಳುಗಿದೆ. ಯೋಜನೆಗಳು ಸ್ಥಗಿತಗೊಂಡಿದ್ದು, ವಿದ್ಯಾರ್ಥಿ ವೇತನ ನೀಡಿಲ್ಲ, ಇಂದಿರಾ ಕ್ಯಾಂಟಿನ್ ಮುಚ್‌ಚುವ ಯತ್ನ ನಡೆಸುತ್ತಿದ್ದಾರೆ. ರೈತರಿಂದ ಬಲವಂತವಾಗಿ ಸಾಲ ವಸೂಲಿಗೆ ಮುಂದಾಗುತ್ತಿದ್ದಾರೆ, ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ದೂರಿದರು.
ಮಂಗಳೂರಿನಲ್ಲಿ ಗೋಲಿಬಾರ್, ಚಿಕ್ಕ ಮಗಳೂರು ಸಾಹಿತ್ಯ ಸಮ್ಮೇಳನಕ್ಕೆ ಬಾಂಬ್ ಬೆದರಿಕೆ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ, ಬೆಂಗಳೂರಿನಲ್ಲಿ ಚರ್ಚ್ ಮೇಲೆ ದಾಳಿ ಈ ಎಲ್ಲವೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿರುವುದಕ್ಕೆ ತಾಜಾ ಉದಾಹರಣೆಯಾಗಿದೆ ಎಂದರು.
ಈಗ ಅಧಿಕಾರ ನಡೆಸುತ್ತಿರುವ ಸರ್ಕಾರದ ಮಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಕೆಳಗಿಸಲು ಗುಪ್ತ ಸಭೆಗಳು, ಪತ್ರ ವ್ಯವಹಾರಗಳು ನಡೆಯುತ್ತಿವೆ, ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ಮರುಕ್ಷಣವೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಿದ್ದು ಹೋಗಲಿದೆ. ಇದು ಸುಭದ್ರವಿಲ್ಲದ ಸರ್ಕಾರವೆಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ರಾಜ್ಯ ಕಾಂಗ್ರೆಸ್ ವಕ್ತಾರ ಮುರುಳಿಧರ್ ಹಾಲಪ್ಪ, ಅಧ್ಯಕ್ಷ ಆರ್.ರಾಮಕೃಷ್ಣ, ಜಿಪಂ ಸದಸ್ಯ ಕೆಂಚಮಾರಯ್ಯ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ, ಮಾಜಿ ಮೇಯರ್ ಗೀತಾ ರುದ್ರೇಶ್, ಜಿಲ್ಲಾ ವಕ್ತಾರ ಕೆ.ಎಂ ಸುಜಾತಾ, ಮುಖಂಡ ಆರ್.ನಾರಾಯಣ್, ಪುಟ್ಟರಾಜು ಸೇರಿದಂತೆ ಇತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.