ಏಳು ಮಂದಿ ಬಾಲ ಕಾರ್ಮಿಕರ ರಕ್ಷಣೆ
Team Udayavani, Jul 19, 2019, 5:06 PM IST
ಪಟ್ಟಣದ ಗ್ಯಾರೇಜ್ ಹಾಗೂ ಬೇಕರಿ, ಹೋಟೆಲ್ಗಳ ಮೇಲೆ ಬಿಇಒ ನೇತೃತ್ವದ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ ಏಳು ಮಂದಿ ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಿದರು.
ಕುಣಿಗಲ್: ಪಟ್ಟಣದ ಹೋಟೆಲ್, ಬೇಕರಿ, ಗ್ಯಾರೇಜ್ ಸೇರಿದಂತೆ ಫುಟ್ಪಾತ್ ಅಂಗಡಿಗಳ ಮೇಲೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ ಏಳು ಮಂದಿ ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಿದರು.
ಮುಚ್ಚಳಿಕೆ ಪತ್ರ ಬರೆಸಿ ಎಚ್ಚರಿಕೆ: ಶಾಲೆ ತೊರೆದು ಬಹುತೇಕ ಅಂಗಡಿ ಮುಂಗಟ್ಟುಗಳಲ್ಲಿ ಬಾಲ ಕಾರ್ಮಿಕರಿಂದ ದುಡಿಸಿಕೊಳ್ಳಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಬಿಇಒ ತಿಮ್ಮರಾಜು, ಕಾರ್ಮಿಕ ನಿರೀಕ್ಷಕಿ ಅನುಪಮಾ, ಎಎಸ್‌ಐ ಗಂಗಣ್ಣ, ರಾಜಸ್ವ ನಿರೀಕ್ಷಕ ಕೊದಂಡ ರಾಮ, ಅಧಿಕಾರಿಗಳ ತಂಡ ಫುಟ್ಪಾತ್ ಅಂಗಡಿ, ಹೋಟೆಲ್, ಬೇಕರಿ ಹಾಗೂ ಗ್ಯಾರೇಜ್‌ಗಳ ಮೇಲೆ ಮಿಂಚಿನ ದಾಳಿ ನಡೆಸಿದರು. ಬಾಲ ಕಾರ್ಮಿಕರ ಪೋಷಕರನ್ನು ಕರೆಸಿ ದುಡಿಮೆಗೆ ಕಳುಹಿಸದೆ ಶಾಲೆಗೆ ಕಳಿಸಿ ಇಲ್ಲವಾದಲ್ಲಿ ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪೋಷಕರಿಂದ ಮುಚ್ಚಳಿಕೆ ಪತ್ರ ಬರೆಸಿ ಎಚ್ಚರಿಕೆ ನೀಡಿದರು. ಮಕ್ಕಳಿಂದ ದುಡಿಸಿಕೊಳ್ಳುತ್ತಿದ್ದ ಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದರು.
ತಾಲೂಕಿನಲ್ಲಿ ಶಾಲೆ ಬಿಟ್ಟು ಹೊರಗುಳಿದಿರುವ ಮಕ್ಕಳ ಪಟ್ಟಿ ತಯಾರಿಸಲಾಗಿದೆ. ಈ ಸಂಬಂಧ ಕಾರ್ಮಿಕ ಇಲಾಖೆ ಸಹಯೋಗದೊಂದಿಗೆ ತಾಲೂಕಿನ ಎಲ್ಲಾ ಕಡೆಯೂ ದಾಳಿ ನಡೆಸಿ ಮಕ್ಕಳನ್ನು ರಕ್ಷಿಸಿ ಮತ್ತೆ ಶಾಲೆಗೆ ಸೇರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನೂ ಮುಂದೆ ಪ್ರತಿ ತಿಂಗಳೂ ದಾಳಿ ನಿರಂತರವಾಗಿ ನಡೆಯುತ್ತದೆ ಎಂದು ಬಿಇಒ ತಿಮ್ಮರಾಜು ಹೇಳಿದರು.
ಶಿಕ್ಷೆ ಅನುಭವಿಸಲು ಸಿದ್ಧರಾಗಿ: ಬಾಲ ಕಾರ್ಮಿಕರಿಂದ ದುಡಿಸಿಕೊಳ್ಳುವುದು ಕಾನೂನಿಗೆ ಅಪರಾಧ ಎಂದು ಗೊತ್ತಿದ್ದರೂ ಅಂಗಡಿ ಮಾಲೀಕರು ದುಡಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಸಾಕಷ್ಟು ಬಾರಿಯೂ ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದರೂ, ಅಂಗಡಿ ಮಾಲಿಕರು ಮತ್ತೆ ಮಕ್ಕಳನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದಾರೆ. 14 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಸೇರಿಸಿಕೊಂಡು ದುಡಿಸಿಕೊಂಡರೆ 2 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ.ದಂಡ ಕಟ್ಟಬೇಕಾಗುತ್ತದೆ. ಈ ಸಂಬಂಧ ತಾಲೂಕಿನ ಎಲ್ಲಾ ಅಂಗಡಿ ಮಾಲೀಕರು ಬಾಲ ಕಾರ್ಮಿಕರಿಂದ ದುಡಿಸಿಕೊಳ್ಳುವುದನ್ನು ಕೈ ಬಿಡಬೇಕು. ಇಲ್ಲಾವಾದರೆ ಶಿಕ್ಷೆ ಅನುಭವಿಸಲು ಸಿದ್ಧರಾಗಬೇಕೆಂದು ಕಾರ್ಮಿಕ ನಿರೀಕ್ಷಕಿ ಅನುಪಮಾ ಎಚ್ಚರಿಕೆ ನೀಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.