ವಯೋವೃದ್ಧ ಅತ್ತೆಗೆ ಕಿರುಕುಳ ನೀಡಿ ಮನೆಯಿಂದ ಹೊರ ಹಾಕಿದ ಸೊಸೆ
ಬೀಗ ಒಡೆಸಿ ಮನೆಯಲ್ಲಿ ಉಳಿಯುವಂತೆ ಹೇಳಿದ ಕೊರಟಗೆರೆ ತಹಶೀಲ್ದಾರ್, ಅಧಿಕಾರಿಗಳು
Team Udayavani, Jul 27, 2022, 3:13 PM IST
ಕೊರಟಗೆರೆ: ತಾಲೂಕಿನ ಹೊಳವನಹಳ್ಳಿ ಹೋಬಳಿಯ ಕ್ಯಾಮೇನಹಳ್ಳಿ ಗ್ರಾಮ ಪಂಚಾಯಿತಿಯ ಬುಡ್ಡಯ್ಯನ ಪಾಳ್ಯ ಗ್ರಾಮದಲ್ಲಿ ತನ್ನ ಸ್ವಂತ ಅತ್ತೆಯನ್ನು ಮನೆಯಿಂದ ಹೊರಹಾಕಿರುವ ಘಟನೆ ನಡೆದಿದೆ.
ಬುಡ್ಡಯ್ಯನ ಪಾಳ್ಯ ಗ್ರಾಮದ ರಂಗಹನುಮಕ್ಕ ಮನೆಗೆ ಕೋವಿಡ್ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ವಾಸವಾಗಿದ್ದ ತನ್ನ ಮೂರನೇ ಮಗ ಹಾಗೂ ಸೊಸೆ ವಾಪಸ್ ಊರಿಗೆ ಬರುತ್ತಾರೆ. ನನಗೆ ಆಸರೆಯಾಗಿ ಇರುತ್ತಾರೆ ಎಂದು ನಂಬಿಕೊಂಡ ಅಜ್ಜಿ ರಂಗ ಹನುಮಕ್ಕನಿಗೆ ಊಟ ತಿಂಡಿ ನೀಡದೆ ಪ್ರತಿನಿತ್ಯ ಕಿರುಕುಳ ನೀಡಿ ಮನೆಯಿಂದ ಹೊರ ಹಾಕಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ನಾಹಿದಾ ಜಮ್ ಜಮ್ ಮಾತನಾಡಿ,ಕೆಲವು ದಿನಗಳ ಹಿಂದೆ ಸುಮಾರು ಎಪ್ಪತ್ತು ವರ್ಷದ ವೃದ್ಧೆ ರಂಗಹನುಮಕ್ಕ ಅವರ ಮಗ ಹಾಗೂ ಸೊಸೆ ತುಂಬಾ ಕಿರುಕುಳ ಕೊಡುತ್ತಿದ್ದಾರೆಂದು ನಮ್ಮ ಮೇಲಾಧಿಕಾರಿಗಳಿಗೆ ದೂರು ಬಂದಿರುತ್ತದೆ. ಅದರ ಅನ್ವಯ ಅವರ ಮಗನಿಗೆ 5 ದಿನಗಳ ಹಿಂದೆ ವಿಷಯ ತಿಳಿಸಿ ಸರಿಪಡಿಸಿಕೊಳ್ಳುವಂತೆ ತಿಳಿಸಿದ್ದೆವು. ಆದರೂ ಕೂಡ ಯಾವುದೇ ರೀತಿ ಸ್ಪಂದಿಸದ ಕಾರಣ ಇಂದು ಗ್ರಾಮಕ್ಕೆ ಭೇಟಿ ನೀಡಿದಾಗ ವೃದ್ಧೆಯ ಮನೆಗೆ ಬೀಗ ಹಾಕಲಾಗಿತ್ತು.ಬೀಗವನ್ನು ಒಡೆದು ಅವರಿಗೆ ಮನೆಯನ್ನು ನೋಡಿಕೊಳ್ಳುವಂತೆ ಹಾಗೂ ಅವರಿಗೆ ಆಸರೆಯಾಗಿರುವಂತೆ ಅವರ ಮೊಮ್ಮಗನಿಗೆ ತಿಳಿಸಿ ಬಂದಿದ್ದೇವೆ ಎಂದು ತಿಳಿಸಿದರು
ವೃದ್ದೆ ರಂಗ ಹನುಮಕ್ಕ ಮಾತನಾಡಿ, ನನ್ನ ಮೂರನೇ ಮಗ ಹಾಗೂ ಸೊಸೆ ನನಗೆ ತುಂಬಾ ನೋವು ಕೊಟ್ಟಿದ್ದಾರೆ, ಅನ್ನ-ನೀರು ಕೊಡದೆ ಮನೆಯಿಂದ ಹೊರ ಹಾಕಿದ್ದಾರೆ ಈ ಸಂಬಂಧ ನಾನು ಎಸಿ ಅವರಿಗೆ ದೂರು ನೀಡಿದ್ದೆ ಅದರಂತೆ ತಹಶೀಲ್ದಾರ್ ನಮ್ಮ ಗ್ರಾಮಕ್ಕೆ ಭೇಟಿ ನೀಡಿ ನನ್ನ ಸೊಸೆ ಹಾಕಿಕೊಂಡು ಹೋಗಿದ್ದ ಬೀಗವನ್ನು ಒಡೆದು ನನಗೆ ಮನೆಯಲ್ಲಿರಲು ಸೂಚಿಸಿದ್ದಾರೆ.ಮತ್ತು ನನ್ನ ಜತೆ ನನ್ನ ಮೊಮ್ಮಗನಿಗೆ ಇರಲು ಸೂಚಿಸಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಇನ್ನೂ ವೃದ್ದೆಗೆ ನ್ಯಾಯ ದೊರಕಿಸಿಕೊಟ್ಟ ಹಿನ್ನೆಲೆಯಲ್ಲಿ ಮಧುಗಿರಿಯ ಉಪವಿಭಾಗಾಧಿಕಾರಿ ಸೋಮಪ್ಪಕಡಕೋಳ ,ಕೊರಟಗೆರೆಯ ದಂಡಾಧಿಕಾರಿಗಳಾದ ನಹೀದಾ ಜಮ್ ಜಮ್ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಗ್ರಾಮದ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.
ನೊಂದ ವೃದ್ಧೆಗೆ ಮನೆಯನ್ನು ಹಸ್ತಾಂತರಿಸುವ ಸಂದರ್ಭದಲ್ಲಿ ತಹಶೀಲ್ದಾರ್ ನಾಹಿದಾ ಜಮ್ ಜಮ್ , ಪೊಲೀಸ್ ಇಲಾಖೆಯ ಸಿಪಿಐ ಸಿದ್ಧರಾಮೇಶ್ವರ,ಪಿಎಸ್ಐ ಮಂಜುಳಾ ,ಎಎಸ್ಐ ಮಂಜುನಾಥ್ ,ಕಂದಾಯ ಇಲಾಖೆಯ ಅಧಿಕಾರಿಗಳಾದ ಜಯಪ್ರಕಾಶ್ , ಗ್ರಾಮ ಲೆಕ್ಕಾಧಿಕಾರಿಗಳಾದ ಮುರುಳಿ, ಸಲ್ಮಾನ್ ,ಮುರಳಿ ಸೇರಿದಂತೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಸ್ಥಳದಲ್ಲಿ ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.