ಪ್ರಧಾನಮಂತ್ರಿ ಮಾತೃವಂದನಾ ಅನುಷ್ಠಾನದಲ್ಲಿ ಜಿಲ್ಲೆ ಪ್ರಥಮ
Team Udayavani, Jan 11, 2020, 3:00 AM IST
ತುಮಕೂರು: ಗರ್ಭಿಣಿ, ಬಾಣಂತಿಯರ ಆರೋಗ್ಯ ದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜಾರಿಗೆ ತಂದಿರುವ ಪ್ರಧಾನಮಂತ್ರಿ ಮಾತೃವಂದನಾ ಯೋಜನೆ ಅನುಷ್ಠಾನದಲ್ಲಿ ತುಮಕೂರು ಜಿಲ್ಲೆ ರಾಜ್ಯಕ್ಕೆ ನಂಬರ್ 1 ಸ್ಥಾನ ಪಡೆದಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ ಅನುಷ್ಠಾನವಾಗಿರುವ ಯೋಜನೆ ಪ್ರಯೋಜನ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜಿಲ್ಲೆಯ 1965 ಪರಿಶಿಷ್ಟ ಜಾತಿ, 954 ಪರಿಶಿಷ್ಟ ಪಂಗಡ ಹಾಗೂ 8225 ಇತರೆ ವರ್ಗದ ಫಲಾಭವಿಗಳು ಸೇರಿ 11,144 ಮಂದಿ ಪಡೆದಿದ್ದಾರೆ.
ಚಿಕ್ಕನಾಯಕನಹಳ್ಳಿ ತಾಲೂಕಿನ 856, ಗುಬ್ಬಿ-1197, ಕೊರಟಗೆರೆ-655, ಕುಣಿಗಲ್-998, ಮಧುಗಿರಿ-1313, ಪಾವಗಡ-1066, ಶಿರಾ-1241, ತಿಪಟೂರು-853, ತುಮಕೂರು ಗ್ರಾಮಾಂತರ-1068, ತುಮಕೂರು ನಗರ-1197 ಹಾಗೂ ತುರುವೇಕೆರೆ ತಾಲೂಕಿನ 700 ಫಲಾನುಭವಿಗಳು ಒಳಗೊಂಡಿದ್ದಾರೆ. ಮಾತೃವಂದನಾ ಯೋಜನೆ 2017ರ ಜ.1ರಿಂದ ಜಾರಿಗೆ ತರಲಾಗಿದೆ. ಈವರೆಗೂ ಜಿಲ್ಲೆಯ 36,797 ಫಲಾನುಭವಿಗಳಿಗೆ ಒಟ್ಟು 15.07 ಕೋಟಿ ರೂ. ಖಾತೆಗೆ ಜಮೆ ಮಾಡಲಾಗಿದೆ.
ಏನಿದು ಮಾತೃವಂದನಾ?: ಗರ್ಭಿಣಿ, ಬಾಣಂತಿಯರ ಆರೋಗ್ಯ ಸುಧಾರಣೆ, ಆಂಶಿಕ ವಿಶ್ರಾಂತಿ, ವೇತನ ಅಥವಾ ಕೂಲಿ ನಷ್ಟ, ತಪಾಸಣೆ, ಚಿಕಿತ್ಸೆ, ಸಾಂದರ್ಭಿಕ ವಿಶ್ರಾಂತಿ ಸದುದ್ದೇಶದಿಂದ ಸರ್ಕಾರ ಮಾತೃವಂದನಾ ಯೋಜನೆ ಜಾರಿಗೆ ತಂದಿದೆ. ಗರ್ಭಧಾರಣೆ ಹಾಗೂ ಬಾಣಂತಿ ಸಂದರ್ಭ ಕೂಲಿ-ನಾಲಿ ಮಾಡಲು ದೇಹ ಸ್ಪಂದಿಸದಿರುವುದರಿಂದ ಬಡತನದ ಬೇಗೆಯಲ್ಲಿರುವ ಹಾಗೂ ಹೊಟ್ಟೆ ಪಾಡಿಗೆ ಕೂಲಿ ಮಾಡುವ ಗರ್ಭಿಣಿ, ಬಾಣಂತಿಯರಿಗೆ ಯೋಜನೆ ವರದಾನವಾಗಿದೆ. ಹೆರಿಗೆ ಸಮಯದಲ್ಲಿ ಉಂಟಾಗುವ ರಕ್ತ ಹೀನತೆ, ಅಪೌಷ್ಟಿಕತೆ ನಿಯಂತ್ರಿಸಲು, ತಾಯಿ ಮತ್ತು ಮಗುವಿನ ಮರಣ ಪ್ರಮಾಣ ತಪ್ಪಿಸುವುದು, ಚುಚ್ಚುಮದ್ದು ಕಡ್ಡಾಯ, ಮಕ್ಕಳ ತೂಕ ಹೆಚ್ಚಿಸುವುದು, ಪೌಷ್ಟಿಕ ಆಹಾರ ಒದಗಿಸುವುದು ಯೋಜನೆ ಮುಖ್ಯ ಉದ್ದೇಶವಾಗಿದೆ.
5 ಸಾವಿರ ಪ್ರೋತ್ಸಾಹ ಧನ: ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ 3 ಕಂತುಗಳಲ್ಲಿ ಒಟ್ಟು 5 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುತ್ತದೆ. ಕೇಂದ್ರ, ರಾಜ್ಯ ಸರ್ಕಾರಿ, ಸಾರ್ವಜನಿಕ ಉದ್ದಿಮೆಗಳ ನೌಕರರ ಹೊರತುಪಡಿಸಿ ಮೊದಲ ಬಾರಿ ಗರ್ಭಿಣಿ ಯಾದವರು ಹಾಗೂ ಬಾಣಂತಿಯರಿಗೆ ಮೂರು ಕಂತುಗಳ ಪ್ರೋತ್ಸಾಹ ಧನ ನೀಡಲಾಗುವುದು. ಪ್ರೋತ್ಸಾಹಧನಕ್ಕೆ ಫಲಾನುಭವಿಗಳು 3 ಬಾರಿ ಅರ್ಜಿ ಸಲ್ಲಿಸಬೇಕು. ಮೊದಲ, 2ನೇ ಹಾಗೂ 3ನೇ ಕಂತಿನ ಹಣ ಕ್ರಮವಾಗಿ ನಿಗದಿತ ನಮೂನೆ 1ಎ, 1ಬಿ ಹಾಗೂ 1ಸಿ ಮೂಲಕ ಪ್ರತ್ಯೇಕ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯಬಹುದು.
ಗರ್ಭಿಣಿ ಎಂದು ಅಂಗನವಾಡಿ ಕೇಂದ್ರಗಳಲ್ಲಿ 150 ದಿನಗಳೊಳಗೆ ನೋಂದಣಿಯಾಗಿದ್ದವರಿಗೆ ಮೊದಲ ಕಂತಿನ ಹಣ 1000 ರೂ., ಗರ್ಭಿಣಿಯಾದ 180 ದಿನಗಳ ನಂತರ ನಿಯಮಿತ ಆರೋಗ್ಯ ತಪಾಸಣೆಗೊಳಗಾಗಿದ್ದಲ್ಲಿ 2ನೇ ಕಂತಿನ ಹಣ 2000 ರೂ. ಹಾಗೂ ಮಗು ಜನನವಾಗಿ ಜನನ ನೋಂದಣಿಯಾಗಿ ಮೊದಲ ಹಂತದ ಚುಚ್ಚುಮದ್ದು ಹಾಕಿಸುವ ಸಂದರ್ಭ (ಮಗುವಿಗೆ ಮೂರುವರೆ ತಿಂಗಳು ತುಂಬಿರಬೇಕು) ಮೂರನೇ ಕಂತಿನ ಹಣ 2000 ರೂ. ಸೇರಿ ಒಟ್ಟು 5000 ರೂ. ಫಲಾನುಭವಿ ಖಾತೆಗೆ ವರ್ಗಾವಣೆಯಾಗಲಿದೆ.
ಯೋಜನೆಯಿಂದ ವಂಚಿತರಾದವರೂ ಒಂದೇ ಬಾರಿ 3 ಪ್ರತ್ಯೇಕ ಅರ್ಜಿ ಸಲ್ಲಿಸುವ ಮೂಲಕ ಒಟ್ಟಿಗೆ 5000 ರೂ. ಪಡೆಯಬಹುದು. ಇಂತಹ ಫಲಾನುಭವಿಯ ಕಡೆಯ ಮುಟ್ಟಿನ ದಿನಾಂಕದಿಂದ 730 ದಿನಗಳೊಳಗಾಗಿ ಅರ್ಜಿ ಸಲ್ಲಿಸಿದಲ್ಲಿ ಮಾತ್ರ ಯೋಜನೆಯ ಲಾಭ ಪಡೆಯಬಹುದು. ಅರ್ಜಿಯೊಂದಿಗೆ ಆಧಾರ್, ಪತಿಯ ಆಧಾರ್, ತಾಯಿ ಕಾರ್ಡ್, ಉಳಿತಾಯ ಖಾತೆ (ಆಧಾರ್ ಜೋಡಣೆ ಹೊಂದಿರುವ) ಪುಸ್ತಕ ಒದಗಿಸಬೇಕು.
ಹೆಚ್ಚಿನ ಮಾಹಿತಿಗೆ ಅಂಗನವಾಡಿ ಕೇಂದ್ರ ಅಥವಾ ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಕಚೇರಿ (0816-2272590) ಸಂಪರ್ಕಿಸಬಹುದು. ಪ್ರತಿ ತಿಂಗಳಿಗೆ 1033 ಫಲಾನುಭವಿಗಳಿಗೆ ಯೋಜನೆ ತಲುಪಿಸುವ ಗುರಿಯಿದೆ. ಆದರೆ ಪ್ರತಿ ತಿಂಗಳೂ 1300ಕ್ಕೂ ಹೆಚ್ಚು ಫಲಾನುಭವಿಗಳಿಗೆ ತಲುಪಿಸುವ ಮೂಲಕ ಗುರಿ ಮೀರಿ ಸಾಧನೆ ಮಾಡಿರುವುದರಿಂದ 4 ತಿಂಗಳಿಂದ ಜಿಲ್ಲೆ ಪ್ರಥಮ ಸ್ಥಾನ ಕಾಯ್ದುಕೊಂಡಿದೆ.
8 ದಿನ ನಡೆದಿತ್ತು ಸಪ್ತಾಹ: ಜಿಲ್ಲಾದ್ಯಂತ 2019ರ ಡಿ.2ರಿಂದ 9ರವರೆಗೆ ನಡೆದ ಸಪ್ತಾಹದಲ್ಲಿ ಮೊದಲ ದಿನ 3667 ಗರ್ಭಿಣಿ, ಬಾಣಂತಿಯರ ಸೆಲ್ಫಿ ಕಾರ್ಯಕ್ರಮ, 2ನೇ ದಿನ ಮಕ್ಕಳ ಗ್ರಾಮ ಸಭೆ, 3ನೇ ದಿನ ಮನೆ-ಮನೆ ಭೇಟಿ ನೀಡಿ 1062 ಅರ್ಜಿಗಳ ಸಂಗ್ರಹ, 4ನೇ ದಿನ ಬ್ಯಾಂಕ್, ಅಂಚೆ ಕಚೇರಿಗಳಲ್ಲಿ ಫಲಾನುಭವಿಗಳ ಆಧಾರ್ ತಿದ್ದುಪಡಿಗೆ ಕ್ರಮ, 5ನೇ ದಿನ 1679 ಜಾಗೃತಿ ಆಂದೋಲನ, 6ನೇ ದಿನ ಸ್ವತ್ಛತೆ, ಆಹಾರ ಪ್ರಾತ್ಯಕ್ಷಿಕೆ ಹಾಗೂ 7ನೇ ಹಾಗೂ ಕಡೆಯ ದಿನ ಅತಿ ಹೆಚ್ಚು ಫಲಾನುಭವಿಗಳಿಂದ ಅರ್ಜಿ ಸಂಗ್ರಹಿಸಿದ ಜಿಲ್ಲೆಯ ಎಲ್ಲ ತಾಲೂಕಿನ ಅಂಗನವಾಡಿ ಕೇಂದ್ರದ ತಲಾ ಒಬ್ಬರು ಕಾರ್ಯಕರ್ತೆ ಗುರುತಿಸಿ ಜಿಲ್ಲಾಮಟ್ಟದಲ್ಲಿ ಅಭಿನಂದನಾ ಪತ್ರ ವಿತರಿಸಲಾಗಿತ್ತು ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್. ನಟರಾಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.