ಕರ್ನಾಟಕದಲ್ಲೂ ಬದಲಾವಣೆಯ ಗಾಳಿ
Team Udayavani, Mar 5, 2018, 6:00 AM IST
ತುಮಕೂರು: ಈಶಾನ್ಯ ರಾಜ್ಯಗಳಲ್ಲಿ ನಡೆದ ಚುನಾವಣೆಯ ನಂತರ ದೇಶದಲ್ಲಿ ಹೊಸದೊಂದು ವಾತಾವರಣ ಸೃಷ್ಠಿಯಾಗಿದ್ದು, ಕರ್ನಾಟಕದಲ್ಲೂ ಜನ ಬದಲಾವಣೆ ಬಯಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಲ್ಲಿನ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಭಾನುವಾರ ರಾಮಕೃಷ್ಣ ಆಶ್ರಮದಿಂದ ಏರ್ಪಡಿಸಿದ್ದ ರಾಜ್ಯಮಟ್ಟದ ಯುವ ಸಮ್ಮೇಳನ, ಯುವ ಶಕ್ತಿ ಆಸ್ಫೋಟನ ಆಂದೋಲನ ಹಾಗೂ ಸಾಧು ಭಕ್ತ ಸಮಾಗಮ ಕಾರ್ಯಕ್ರಮದಲ್ಲಿ ದೆಹಲಿಯಿಂದ ವಿಡಿಯೋ ಕಾನೆ#ರೆನ್ಸ್ ಮೂಲಕ ಯುವಕರನ್ನು ಉದ್ದೇಶಿಸಿ ಮಾತನಾಡಿದರು.
ನಮ್ಮ ಸರ್ಕಾರ ದೇಶದ ಯಾವುದೇ ಜನರನ್ನೂ ಮೂಲೆ ಗುಂಪು ಮಾಡಲು ಬಯಸುವುದಿಲ್ಲ. ಹಿಂದಿನ ಸರ್ಕಾರಗಳ ಕೆಟ್ಟ ರಾಜಕೀಯದಿಂದ ಬೇಸತ್ತು ಜನ ಬಿಜೆಪಿಗೆ ಮತ ಹಾಕಿದ್ದಾರೆ. ಇದೇ ವಾತಾವರಣ ಕರ್ನಾಟಕಲ್ಲೂ ಕಾಣಿಸುತ್ತಿದೆ. ಜನ ಬದಲಾವಣೆ ಬಯಸುತ್ತಿದ್ದಾರೆ ಎಂದು ಹೇಳಿದರು.
ತುಮಕೂರಿನ ಬಗ್ಗೆ ಖುಷಿ
ತುಮಕೂರಿನಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವುದು ಸಂತಸ ತಂದಿದೆ. ಇಂದಿನ ಕಾರ್ಯಕ್ರಮದ ಕೇಂದ್ರ ಬಿಂದು ಸ್ವಾಮಿ ವಿವೇಕಾನಂದರು. ಕರ್ನಾಟಕಕ್ಕೂ ವಿವೇಕಾನಂದರಿಗೂ ಸಂಬಂಧವಿದೆ, ಸಾಧು ¸ಕ್ತರ ಸಮ್ಮೇಳನ ಖುಷಿ ತಂದಿದೆ. ನಿಮ್ಮ ಯುವ ಸಮಾವೇಶ ತ್ರಿವೇಣಿ ಸಂಗಮ ಎಂದರು.
ಯುವ ಪೀಳಿಗೆಯೊಂದಿಗೆ ಯಾವುದೇ ಸಂವಾದ ನಡೆದರೂ, ಅವರಿಂದ ಕಲಿಯುವುದಕ್ಕೆ ಅವಕಾಶ ದೊರೆಯುತ್ತದೆ. ನಾನು ಯುವಕರನ್ನು ಭೇಟಿ ಮಾಡಲು ಮಾತನಾಡಲು ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಈಗ ಕರ್ನಾಟಕದಲ್ಲೂ ಯುವಸಂಕಲ್ಪದ ಪ್ರವಾಹ ಸಾಗಿದೆ. ರಾಮಕೃಷ್ಣ ಮಿಷನ್ನಿನ ಸಾವಿರಾರು ಸಾಧು- ಸಂತರು, ಕಾರ್ಯಕರ್ತರು ಉತ್ತರ ಪೂರ್ವ ಭಾರತ ದೇಶಗಳಲ್ಲಿ ಜನಕಲ್ಯಾಣ ಕಾರ್ಯದಲ್ಲಿ ತೊಡಗಿದ್ದಾರೆ. ವಿಶ್ವದಲ್ಲಿಯೇ ಭಾರತ ಯುವ ವ್ಯವಸ್ಥೆಯ ಅತ್ಯಂತ ಶ್ರೇಷ್ಠ ರಾಷ್ಟ್ರವಾಗಿದೆ. ದೇಶದ ಯುವಶಕ್ತಿ ಅಪಾರ ಶಕ್ತಿಯಾಗಿದೆ. ಈ ಯುವ ಶಕ್ತಿಯ ಬಲವೇ ದೇಶವನ್ನು ನೂತನ ಎತ್ತರಗಳಿಗೆ ಕೊಂಡೊಯ್ಯುತ್ತದೆ ಎಂದು ಅಭಿಪ್ರಾಯಪಟ್ಟರು.
ಕನ್ನಡದಲ್ಲಿ ಭಾಷಣ ಆರಂಭ: ಶ್ರೀ ರಾಮಕೃಷ್ಣ ವಿವೇಕಾನಂದ ಡಾ. ಶ್ರೀ ವಿರೇಶಾನಂದ ಸರಸ್ವತಿ ಸ್ವಾಮಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಸ್ವಾಗತ ಕೋರಿದರು. ಸರಿಯಾಗಿ 11.17 ಕ್ಕೆ ಮೋದಿ ಅವರು ಭಾಷಣ ಪ್ರಾರಂಭಿಸಿ ಎಲ್ಲರಿಗೂ ಕನ್ನಡದಲ್ಲಿ ನಮಸ್ಕಾರ ಎಂದು ಹೇಳಿದಾಗ ನೆರೆದಿದ್ದ ಸಾವಿರಾರು ವಿದ್ಯಾರ್ಥಿಗಳು ಮೋದಿ ಮೋದಿ ಎಂದು ಘೋಷಣೆ ಕೂಗಿದರು.
ನರೇಂದ್ರ ಮೋದಿಯವರು ಸ್ವಾಮಿ ವಿವೇಕಾನಂದರಿಗೆ,ಶ್ರೀ ಸಿದ್ದಗಂಗಾ ಮಠದ ಹಿರಿಯ ಶ್ರೀಗಳಾದ ಡಾ. ಶ್ರೀ ಶಿವಕುಮಾರ ಸ್ವಾಮಿಗಳಿಗೆ ಮತ್ತು ರಾಮಕೃಷ್ಣ ಆಶ್ರಮದ ವಿರೇಶಾನಂದ ಸರಸ್ವತಿ ಸ್ವಾಮಿಗಳಿಗೆ ನಮಸ್ಕಾರ ಸಲ್ಲಿಸಿದರು. ಇಲ್ಲಿ ಮೂರು ಮಹಾನ್ ಸಮ್ಮೇಳನಗಳು ಒಟ್ಟೊಟ್ಟಿಗೆ ಆಚರಿಸಲ್ಪಡುವುದು ಬಹಳ ಅಪರೂಪವಾಗಿದೆ. ತುಮಕೂರಿನಲ್ಲಿ ಈ ಅಪೂರ್ವ ದಿವ್ಯ ಸಂಯೋಗವಾಗಿರುವುದು ಅನನ್ಯವಾದುದು ಎಂದು ಹೇಳಿದರು.
ಶತಾಯುಶಿ ಡಾ. ಶ್ರೀ ಶಿವಕುಮಾರಸ್ವಾಮೀಜಿಗೆ ನಮನ ಸಲ್ಲಿಸಿ, ಸ್ವಾಮೀಜಿಯವರನ್ನು ಹಿಂದೆ ಭೇಟಿ ಮಾಡಲು ಬಂದ ದಿನ ಇನ್ನೂ ಅವಿಸ್ಮರಣೀಯವಾಗಿದೆ. ಬಸವೇಶ್ವರರು ಹಾಗೂ ಸ್ವಾಮಿ ವಿವೇಕಾನಂದರ ಆಶಿರ್ವಾದದಿಂದ ಶಿವಕುಮಾರ ಸ್ವಾಮೀಜಿಯವರು ರಾಷ್ಟ್ರ ನಿರ್ಮಾಣದಲ್ಲಿ ತೊಡಗಿದ್ದಾರೆ. ಅವರಿಗೆ ಆರೋಗ್ಯ ದೀರ್ಘಾಯುಷ್ಯ ಪ್ರಾಪ್ತವಾಗಲಿ ಎಂದು ಆಶಿಸಿದರು.