ವರುಣನ ಆರ್ಭಟ: ಅಪಾರ ಬೆಳೆ ನಷ್ಟ
Team Udayavani, May 12, 2018, 3:52 PM IST
ತುಮಕೂರು: ಬರಗಾಲದಿಂದ ಬಸವಳಿದಿದ್ದ ಜಿಲ್ಲೆಯ ರೈತರಿಗೆ ಹರ್ಷ ನೀಡುವಂತೆ ಜಿಲ್ಲೆಯ 10 ತಾಲೂಕು ಗಳಲ್ಲೂ ಕಳೆದ ರಾತ್ರಿ ಗುಡುಗು, ಸಿಡಿಲು, ಮಿಂಚು, ಬಿರುಗಾಳಿ ಸಹಿತ ಮಳೆಯಾಗಿದ್ದು, ಗಾಳಿಯ ರಭಸಕ್ಕೆ ನೂರಾರು ತೆಂಗು, ಅಡಿಕೆ, ಬಾಳೆ ತೋಟಗಳು ನೆಲ ಕಚ್ಚಿದ್ದು, ರೈತರಿಗೆ ಲಕ್ಷಾಂತರ ರೂ. ನಷ್ಟ ಉಂಟಾಗಿದೆ.
ಇಳೆ ತಂಪಾಗಿಸಿದ ಮಳೆ: ಬೆಳಗ್ಗೆಯಿಂದಲೇ ಸುಡು ಬಿಸಿಲಿನ ಬೇಗೆ ತಾಳಲಾರದೇ ಇದ್ದ ನಾಗರಿಕರಿಗೆ ಸಂಜೆಯ ವೇಳೆಗೆ ಮೋಡ ಮುಸುಕಿದ ವಾತಾವರಣ ವಾಗಿ ಬಿರುಗಾಳಿ ಸಹಿತ ಮಳೆ ಜಿಲ್ಲೆಯಾದ್ಯಂತ ಪ್ರಾರಂಭವಾಯಿತು. ಇಡೀ ರಾತ್ರಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಹದ ಮಳೆಯಾಗಿದ್ದು, ಸುಡು ಬಿಸಿಲಿನ ಬೇಸಿಗೆಯಿಂದ ನೊಂದಿದ್ದ ನಾಗರಿಕರಿಗೆ ವರ್ಷಧಾರೆ ಹರ್ಷ ನೀಡಿ ಭೂಮಿಯನ್ನು ತಂಪಾಗಿರಿಸಿದೆ.
ಈಗಾಗಲೇ ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಕಾಣಿಸಿಕೊಳ್ಳುತ್ತಿರುವಂತೆಯೇ ಜಿಲ್ಲೆಯಲ್ಲೂ ಅಲ್ಲಲ್ಲಿ ಸಾಧಾರಣ ಮಳೆ ಸುರಿಯುತ್ತಿದ್ದು, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಕಳೆದ ರಾತ್ರಿ ಹದ ಮಳೆಯಾಗಿರುವುದು ವರದಿಯಾಗಿದೆ.
ಕಳೆದ ಒಂದು ವಾರದಿಂದಲೂ ಮಳೆ ಕಾಣದಿದ್ದ ಮಧುಗಿರಿ, ಪಾವಗಡ, ಶಿರಾ ತಾಲೂಕಿನಲ್ಲೂ ಕಳೆದ ರಾತ್ರಿ ಮಳೆಯಾಗಿದೆ. ಚಿಕ್ಕನಾಯಕನಹಳ್ಳಿ ಕೊರಟಗೆರೆ, ತಿಪಟೂರು, ತುರುವೇಕೆರೆ ತುಮಕೂರು ತಾಲೂಕಿನಲ್ಲಿ
ಸಾಧಾರಣ ಮಳೆಯಾಗಿದೆ.
ಕುಣಿಗಲ್ ನಲ್ಲಿ 288.3 ಮಿ.ಮೀ. ಮಳೆ: ಕಳೆದ ರಾತ್ರಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಿದ್ದು ಒಂದೇ ರಾತ್ರಿ ಕುಣಿಗಲ್ ತಾಲೂಕಿನಲ್ಲಿ 288.3 ಮಿಲಿ ಮೀಟರ್ ಮಳೆಯಾಗಿ ಅತಿ ಹೆಚ್ಚು ಮಳೆಯಾಗಿದೆ. ತಿಪಟೂರು ತಾಲೂಕಿನಲ್ಲಿ 14.4 ಮಿಲಿ ಮೀ ಮಳೆ ಬಿದ್ದು ಕಡಿಮೆ ಮಳೆಯಾಗಿದೆ.
ಉಳಿದಂತೆ ವಿವಿಧ ತಾಲೂಕುಗಳಲ್ಲಿ ಬಿದ್ದಿರುವ ಮಳೆ ಪ್ರಮಾಣ ಗಮನಿಸಿದರೆ ಚಿಕ್ಕನಾಯಕನಹಳ್ಳಿ 17.8 ಮಿ.ಮೀ, ಗುಬ್ಬಿ 82.2 ಮಿ. ಮೀ, ಕೊರಟಗೆರೆ 76.0 ಮಿ. ಮೀ, ಮಧುಗಿರಿ 49.2 ಮಿ. ಮೀ, ಪಾವಗಡ 67.4 ಮಿ. ಮೀ, ಶಿರಾ 158.5 ಮಿ. ಮೀ, ತಿಪಟೂರು 14.4 ಮಿ. ಮೀ, ತುಮಕೂರು 132.3ಮಿ. ಮೀ, ತುರುವೇಕೆರೆ 58.4 ಮಿ. ಮೀ, ಕುಣಿಗಲ್ 282.3 ಮಿ. ಮೀ, ಮಳೆ ಬಿದ್ದಿರುವ ಬಗ್ಗೆ ವರದಿಯಾಗಿದೆ.
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಎಲ್ಲಾ ಹೋಬಳಿಗಳಲ್ಲೂ ಮಳೆಯಾಗಿರುವುದು ಕಂಡು ಬಂದಿದೆ. ಇದರ ಜೊತೆಗೆ ಭಾರಿ ಬಿರುಗಾಳಿ ಸಹಿತ ಮಳೆ ಬಿದ್ದ ಪರಿಣಾಮ ಕೊರಟಗೆರೆ, ಗುಬ್ಬಿ, ಕುಣಿಗಲ್, ತುಮಕೂರು ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಗಾಳಿಯ ರಭಸಕ್ಕೆ ಹಲವಾರು ತೆಂಗು ಅಡಿಕೆ ಹಾಗೂ ಬಾಳೆ ಧರೆಗುರುಳಿವೆ, ನಷ್ಟದ ಬಗ್ಗೆ ನಿಖರಮಾಹಿತಿ ದೊರೆತ್ತಿಲ್ಲ.
ರಸ್ತೆಯಲ್ಲೆಲ್ಲಾ ಹರಿದ ನೀರು : ನಗರದಲ್ಲಿ ಸುರಿದ ಮಳೆಯಿಂದ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿ ಸಂಚಾರ ಅಸ್ತವ್ಯಸ್ತವಾಯಿತು. ರಸ್ತೆಯೂ ಕಾಣದ ರೀತಿಯಲ್ಲಿ ಮಳೆ ರಭಸವಾಗಿ ಬರುತ್ತಿದ್ದ ಹಿನ್ನಲೆಯಲ್ಲಿ ರಸ್ತೆ ಪಕ್ಕದ ಚರಂಡಿಗಳೆಲ್ಲಾ ತುಂಬಿ ರಸ್ತೆಯಲ್ಲೇ ನೀರು ಹರಿಯುತ್ತಿತ್ತು, ತಗ್ಗು ಪ್ರದೇಶಗಳಲ್ಲಿ ಮನೆಗಳಿಗೂ ನೀರು ನುಗ್ಗಿ ಜನ ಸಂಕಷ್ಟಪಟ್ಟರು.
ಗಾಣಧಾಳು ಗ್ರಾಪಂ ವ್ಯಾಪ್ತಿಯಲ್ಲಿ ಭಾರೀ ಮಳೆ
ಹುಳಿಯಾರು: ಹುಳಿಯಾರು ಹೋಬಳಿಯ ಗಾಣಧಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಗುರುವಾರ ಸಂಜೆ ಭಾರೀ ಬಿರುಗಾಳಿ ಸಹಿತ ಉತ್ತಮ ಮಳೆಯಾಗಿದೆ. ಭಾರೀ ಬಿರುಗಾಳಿ ಮಳೆಗೆ ಕುರಿಹಟ್ಟಿ ಸಮೀಪದ ಪಿಟ್ಟಿಕಟ್ಟೆಯ ಕೃಷ್ಣಮೂರ್ತಿ ಎನ್ನುವವರ ದನದ ಕೊಟ್ಟಿಗೆಯ ಚಾವಣಿಯ ಶೀಟುಗಳು ಹಾರಿ ಹೋಗಿವೆ. ಅದೃಷ್ಟವಶತ್ ದನಗಳ ಮೇಲೆ ಬೀಳದೆ ಮನೆಯ ಹೆಂಚಿನ ಮೇಲೆ ಬಿದ್ದ ಪರಿಣಾಮ ಸಾವು ನೋವುಗಳು ಸಂಭವಿಸಿಲ್ಲ.
ಅಲ್ಲದೇ ಕುರಿಹಟ್ಟಿ ಸುತ್ತಮುತ್ತ ತೋಟ ಹಾಗೂ ಹೊಲಗಳಲ್ಲಿ ನೀರು ನಿಲ್ಲುವಷ್ಟು ಮಳೆಯಾಗಿದ್ದು ಭಾರೀ ಗಾಳಿಗೆ ತೆಂಗಿನ ಕಾಯಿ, ಮಾವಿನ ಕಾಯಿಗಳು ಧರೆಗುರುಳಿವೆ. ಅಲ್ಲಲ್ಲಿ ಗುಂಡಿಗಳಲ್ಲಿ ನೀರು ನಿಂತಿದ್ದು ಇದೂವರೆವಿಗೂ ಬಿದ್ದ ಮಳೆಯಲ್ಲಿ ಇದು ಈ ಭಾಗದ ಉತ್ತಮ ಮಳೆಯಾಗಿದೆ.
ಮರ ಬಿದ್ದು ಮನೆಗಳು ಜಖಂ
ಚಿಕ್ಕನಾಯಕನಹಳ್ಳಿ : ಇಲ್ಲಿಗೆ ಸಮೀಪದ ತರಬೇನಹಳ್ಳಿಯಲ್ಲಿ ಶುಕ್ರವಾರ ಸಂಜೆ ಸುರಿದ ಮಳೆ ಹಾಗೂ ಭಾರೀ ಮರ
ಹಾಗೂ ವಿದ್ಯುತ್ ಕಂಬ ಮನೆಗಳ ಮೇಲೆ ಉರುಳಿವೆ. ಸಂಜೆ 5ಗಂಟೆಯಲ್ಲಿ ಬಾರಿ ಪ್ರಮಾಣದ ಗಾಳಿ ಬೀಸಿದ ಪರಿಣಾಮ ತರಬೇನಹಳ್ಳಿ ಗ್ರಾಮದ ಶಂಕರಯ್ಯ , ಮಲ್ಲಿಕಾರ್ಜುನ್ ರವರ ಮನೆ ಮೇಲೆ ಬಾರಿ ಪ್ರಮಾಣದ
ಮರ ಬಿದ್ದು ಮನೆಗಳ ಕೆಳ ಶೀಟ್‌ಗಳು ಮುರಿದಿವೆ. ದಕ್ಷಿಣಾಮೂರ್ತಿ ಎಂಬುವರ ಮನೆಯ ಮೇಲೆ ವಿದ್ಯುತ್ ಕಂಬ ಬಿದ್ದಿದೆ. ಬೆಸ್ಕಾಂ ನೌಕರರು ಸ್ಥಳಕ್ಕೆ ಅಗಮಿಸಿ ಮಿರಿದ ವಿದ್ಯುತ್ ಕಂಬ ತೆರವು ಮಾಡಿದ್ದಾರೆ.
ಬಿರುಗಾಳಿಗೆ ಛಾವಣಿ ಧ್ವಂಸ
ಮಧುಗಿರಿಯ ಚಿನಕವಜ್ರ ಗ್ರಾಪಂ ವ್ಯಾಪ್ತಿಯ ಹುಣಸೇಮರದಹಟ್ಟಿ ಯಲ್ಲಿ ಬೀಸಿದ ಭಾರೀ ಬಿರುಗಾಳಿಗೆ ಗ್ರಾಮದ ಜಯಮ್ಮ ಕೊಂ ಬಂಡೆಪ್ಪ ಎಂಬುವವರ ಮನೆಯ ಶೀಟುಗಳು ಹಾರಿಹೋಗಿದ್ದು, ಮನೆಯಲ್ಲಿದ್ದ ದವಸ ಧಾನ್ಯಗಳು ಹಾಳಾಗಿ 1.5 ಲಕ್ಷ ರೂ. ನಷ್ಟವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.