ಕುಂದಾಪುರ ಪುರಸಭೆ: 13 ಗೂಡಂಗಡಿ ತೆರವು
Team Udayavani, Mar 16, 2018, 10:00 AM IST
ಕುಂದಾಪುರ: ಪುರಸಭೆ ವ್ಯಾಪ್ತಿಯ ಶಾಸ್ತ್ರಿ ಸರ್ಕಲ್ ಬಳಿ, ಇಂದಿರಾ ಕ್ಯಾಂಟೀನ್‌ಗೆ ರಸ್ತೆ ಮಾಡುವ ಉದ್ದೇಶದಿಂದ ಅಲ್ಲಿದ್ದ 13 ಗೂಡಂಗಡಿಗಳನ್ನು ಗುರುವಾರ ತೆರವು ಮಾಡುವ ಪ್ರಕ್ರಿಯೆ ಮುಖ್ಯಾಧಿಕಾರಿ ಕೆ. ಗೋಪಾಲಕೃಷ್ಣ ಅವರ ನೇತೃತ್ವದಲ್ಲಿ ನಡೆಯಿತು. ಪಶು ವೈದ್ಯಕೀಯ ಆಸ್ಪತ್ರೆಯಿರುವ ಸರಕಾರಿ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣವಾಗುತ್ತಿದ್ದು, ಅಲ್ಲಿಗೆ ಹೋಗಲು ಸರಿಯಾದ ದಾರಿ ಇಲ್ಲದ ಕಾರಣ ಅದಕ್ಕೆ ರಸ್ತೆ ನಿರ್ಮಿಸಿ ಕೊಡುವ ಉದ್ದೇಶದಿಂದ ಶಾಸ್ತ್ರಿ ಸರ್ಕಲ್ ಬಳಿಯ ಗೂಡಂಗಡಿಗಳನ್ನು ತೆರವು ಮಾಡಲಾಗಿದ್ದು, ಇನ್ನು 10 ದಿನಗಳಲ್ಲಿ ರಸ್ತೆ ನಿರ್ಮಿಸಿ, ಬಾಕಿ ಉಳಿದ ಜಾಗವನ್ನು ಸಮತಟ್ಟು ಮಾಡಿಸಿ, ಅಲ್ಲಿ ಶಾಶ್ವತ ಕಟ್ಟಡಗಳನ್ನು ನಿರ್ಮಿಸಿ, ಅದನ್ನು ಈಗ ತೆರವು ಮಾಡಿರುವ 13 ಗೂಡಂಗಡಿ ಮಾಲಕರಿಗೆ ನೀಡಲಿದ್ದಾರೆ.
ಬದಲಿ ವ್ಯವಸ್ಥೆ ಎಂದು?
ಪುರಸಭೆಯ ಈ ನಡೆಯಿಂದ ಅಲ್ಲಿನ ಕೆಲ ಗೂಡಂಗಡಿ ವ್ಯಾಪಾರಸ್ಥರು ಅಸಮಾಧಾನಗೊಂಡಿದ್ದು, ನಾವು ಕಳೆದ 25 ವರ್ಷಗಳಿಂದ ಇಲ್ಲಿ ವ್ಯಾಪಾರ ನಡೆಸುತ್ತಿದ್ದು, ಈ ಹಿಂದೆ ಇಲ್ಲಿದ್ದ ಹೂವಿನ ವ್ಯಾಪಾರಸ್ಥರನ್ನು ಇಲ್ಲಿಂದ ಪಾರಿಜಾತ ಸರ್ಕಲ್ ಬಳಿಯ ಹೂವಿನ ಮಾರುಕಟ್ಟೆಗೆ ಸ್ಥಳಾಂತರ ಮಾಡುವಾಗ ಅಲ್ಲಿ ವ್ಯವಸ್ಥೆ ಮಾಡಿದ ಬಳಿಕ ಸ್ಥಳಾಂತರ ಮಾಡಲಾಗಿತ್ತು. ಆದರೆ ಈಗ ನಮ್ಮ ಗೂಡಂಗಡಿಗಳನ್ನೆಲ್ಲ ತೆರವು ಮಾಡಿದ್ದಾರೆ. ಇನ್ನು ಬದಲಿ ವ್ಯವಸ್ಥೆ ಮಾಡಿಕೊಡಲು ಎಷ್ಟು ದಿನ ಆಗುತ್ತೆ ಅಂತಾ ಗೊತ್ತಿಲ್ಲ ಎನ್ನುವುದು ಅವರ ಅಳಲು.
ತಡವಾದರೆ ಕುಟುಂಬ ಬೀದಿಪಾಲು
ನಾವು ಬ್ಯಾಂಕಿನಿಂದ ಸಾಲ ಮಾಡಿ ವಿನಿಯೋಗಿಸಿದ್ದೇವೆ. ಬೇರೆ ಶಾಶ್ವತ ಕಟ್ಟಡ ಕಟ್ಟಿ ಕೊಡುತ್ತಾರೆ ಎಂದು ನಮ್ಮಿಂದ ಮೊದಲಿಗೆ 50 ಸಾವಿರ ರೂ.ಕೇಳಿದ್ದು, ಕಷ್ಟಪಟ್ಟು 25 ಸಾವಿರ ರೂ. ಕೊಟ್ಟಿದ್ದೇವೆ. ತಡವಾದರೆ ನಮ್ಮ ಕುಟುಂಬಗಳು ಬೀದಿಪಾಲಾಗಲಿವೆ. ಆದಷ್ಟು ಬೇಗ ಮತ್ತೆ ಅಂಗಡಿ ತೆರೆಯಲು ಅವಕಾಶ ಕಲ್ಪಿಸಲಿ.
– ಲಕ್ಷ್ಮಣ್ ಮೊಗವೀರ, ವ್ಯಾಪಾರಸ್ಥ
ಶೀಘ್ರ ಜಾಗ
ತೆರವಾಗಿರುವ ಗೂಡಂಗಡಿಗಳ ವ್ಯಾಪಾರಸ್ಥರಿಗೆ ಶೀಘ್ರ ಅದೇ ಜಾಗವನ್ನು ಸಮತಟ್ಟು ಮಾಡಿಕೊಡಲಾಗುವುದು. ಮತ್ತೆ ಅವರೇ ಕಟ್ಟಡ ನಿರ್ಮಿಸಿಕೊಳ್ಳಬಹುದು. ನೀರು ಹಾಗೂ ವಿದ್ಯುತ್ ಸಂಪರ್ಕವನ್ನು ಪುರಸಭೆ ಕಲ್ಪಿಸಲಿದೆ. ಇನ್ನು ಮುಂದೆ ಪ್ರತಿ ತಿಂಗಳು ಪುರಸಭೆ ಬಾಡಿಗೆ ವಸೂಲು ಮಾಡಲಿದೆ.
-ಕೆ. ಗೋಪಾಲಕೃಷ್ಣ, ಮುಖ್ಯಾಧಿಕಾರಿ ಪುರಸಭೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.