7 ಜಿಲ್ಲೆಗಳಿಗೆ 20ನೇ ವರ್ಷ: ಹುಂಡೇಕರರಿಗೆ ಹರ್ಷ
Team Udayavani, Aug 24, 2017, 7:50 AM IST
ಉಡುಪಿ: ಉಡುಪಿಯೂ ಸೇರಿದಂತೆ ಏಳು ಜಿಲ್ಲೆಗಳ ಉದಯವಾದದ್ದು 1997ರಲ್ಲಿ. ಈಗ ಈ ಏಳು ಜಿಲ್ಲೆಗಳಿಗೆ 20ನೆಯ ವರ್ಷದ ಸಂಭ್ರಮ. ಏಳು ಹೊಸ ಜಿಲ್ಲೆಗಳನ್ನು ರಚಿಸಲು ಕಾರಣರಾದ ಹುಂಡೇಕರ್ ಜಿಲ್ಲಾ ಪುನರ್ವಿಂಗಡನಾ ಸಮಿತಿಯ ಅಧ್ಯಕ್ಷರಾಗಿದ್ದ ಬಾಗಲಕೋಟೆಯ ಹಿರಿಯ ರಾಜಕಾರಣಿ ಟಿ.ಎಂ.ಹುಂಡೇಕರ್ ಅವರಿಗೂ ಹರ್ಷದ ಕಾಲ.
1984ರಲ್ಲಿ ರಾಜ್ಯದಲ್ಲಿ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದರು. ಆಗ ಉಡುಪಿ ವಿಧಾನಸಭಾ ಸದಸ್ಯರಾಗಿದ್ದ ಡಾ|ವಿ.ಎಸ್.ಆಚಾರ್ಯ ಬಿಜೆಪಿ ಶಾಸಕಾಂಗ ನಾಯಕರೂ ಆಗಿದ್ದರು. ದೊಡ್ಡ ದೊಡ್ಡ ಜಿಲ್ಲೆಗಳನ್ನು ವಿಭಜಿಸಿ ಚಿಕ್ಕ ಜಿಲ್ಲೆಗಳನ್ನಾಗಿ ಮಾಡಬೇಕೆಂದು ಡಾ| ಆಚಾರ್ಯರು ರಾಮಕೃಷ್ಣ ಹೆಗಡೆಯವರಿಗೆ ಹೇಳಿದಾಗ ಒಂದು ತಿಂಗಳೊಳಗೆ ಇದಕ್ಕಾಗಿ ಸಮಿತಿ ರಚಿಸುವುದಾಗಿ ಭರವಸೆ ನೀಡಿದ್ದರು. ಒಂದು ದಿನ ಹೆಗಡೆಯವರು ಟಿ.ಎಂ.ಹುಂಡೇಕರ್ ಅವರನ್ನು ಕರೆದರು. ಆಗ ಡಾ|ಆಚಾರ್ಯ, ಜೀವರಾಜ ಆಳ್ವ, ದೇವೇಗೌಡ ಇದ್ದರು. “ನೀವು ಸೀನಿಯರ್ ಇದ್ದೀರಿ. ಜಿಲ್ಲಾ ಪುನರ್ವಿಂಗಡನಾ ಸಮಿತಿ ನೇತೃತ್ವ ವಹಿಸಿರಿ’ ಎಂದು ಹೆಗಡೆ ಹೇಳಿದ್ದರು. ಅದಕ್ಕಿಂತ ಮೊದಲು ಬೀಜ ನಿಗಮದ ಅಧ್ಯಕ್ಷರಾಗಿ ಹುಂಡೇಕರ್ ಅವರನ್ನು ನೇಮಿಸಿದ್ದರೂ ಅಧಿಕಾರ ಸ್ವೀಕರಿಸಿರಲಿಲ್ಲ. “ಇದೊಂದು ಮೋನ್ಯುಮೆಂಟಲ್ ವರ್ಕ್. ಇದನ್ನು ನಿರ್ವಹಿಸುತ್ತೇನೆ’ ಎಂದು ಹೇಳಿದರು.
ಏಳು ಸದಸ್ಯರಿರುವ ಸಮಿತಿಯ ಅವಧಿ 1987ರ ಆಗಸ್ಟ್ 2ರಂದು ಮುಗಿಯುವುದಿತ್ತು. ಜುಲೈನಲ್ಲಿ ವರದಿಯನ್ನು ಕೊಡಲಾಯಿತು. ಮತ್ತೆ ಕಾಂಗ್ರೆಸ್ ಸರಕಾರ ಬಂತು. ಜೆ.ಎಚ್.ಪಟೇಲ್ ಸರಕಾರ ಬಂದಾಗ ಗಟ್ಟಿ ನಿಲುವು ತಳೆದು ಗದಗ, ಹಾವೇರಿ, ಬಾಗಲಕೋಟೆ, ಕೊಪ್ಪಳ, ದಾವಣಗೆರೆ, ಉಡುಪಿ, ಚಾಮರಾಜನಗರ ಈ ಏಳು ಜಿಲ್ಲೆಗಳನ್ನು 1997ರಲ್ಲಿ ಉದ್ಘಾಟಿಸಿದರು. “ಯಾದಗಿರಿಯನ್ನು ನಾನು ಶಿಫಾರಸು ಮಾಡಿದ್ದೆ. ಆದರೆ ರಾಜಕೀಯದಿಂದ ಅದು ಜಾರಿಗೊಳ್ಳಲಿಲ್ಲ. ಮತ್ತೆ ಯಡಿಯೂರಪ್ಪನವರ ಸರಕಾರದ ವೇಳೆ ಇದು ಆಯಿತು’ ಎನ್ನುತ್ತಾರೆ ಹುಂಡೇಕರ್ ಅವರು.
“ಜನ ಸಂತೋಷ ಪಟ್ಟಿದ್ದಾರೆ. ಜನ ಸಂತೋಷ ಪಟ್ಟ ಮೇಲೆ ಇನ್ನೇನು ಬೇಕು? ನನ್ನ ಇಡೀ ವರದಿ ಜಾರಿಯಾಗಿದೆ. ಸಾರ್ಥಕ ಕೆಲಸ ಮಾಡಿದ್ದೇನೆ ಎಂದೆನಿಸುತ್ತಿದೆ. ಅನಂತರದ ವರ್ಷಗಳಲ್ಲಿ ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಸೃಷ್ಟಿಸಿದರೂ ಇದು ರಾಜಕೀಯಪ್ರೇರಿತವಾಗಿದ್ದವು. ಬೆಳಗಾವಿ ಜಿಲ್ಲೆಯನ್ನು ವಿಭಜಿಸ ಬೇಕಾಗಿದೆ ಎಂದು ನಾನು ವರದಿಯಲ್ಲಿ ತಿಳಿಸಿದ್ದೇನೆ. ಆದರೆ ಮಹಾಜನ ವರದಿಯನ್ನು ಒಪ್ಪಿಕೊಳ್ಳಬೇಕೆಂದು ಕರ್ನಾಟಕದವರು ಒತ್ತಾಯಿಸುತ್ತಿರುವಾಗ ಜಿಲ್ಲೆಯನ್ನು ವಿಭಜಿಸುವ ಹಾಗಿಲ್ಲ. ಹಾಗಾದರೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಮಹಾರಾಷ್ಟ್ರಕ್ಕೆ ಹೋಗುತ್ತದೆ. ಈಗ ವಿಭಜಿಸಿದರೆ ಅದರ ಲಾಭ ಮಹಾರಾಷ್ಟ್ರಕ್ಕೆ ಹೋಗುತ್ತದೆ. ಆದ್ದರಿಂದ ಯಾವುದೇ ಖಚಿತ ನಿರ್ಧಾರ ಆಗುವವರೆಗೆ ಸದ್ಯ ಬೇಡ ಎಂಬ ತೀರ್ಮಾನದಲ್ಲಿ ಸರಕಾರ ಇದೆ ಎಂದು ಹುಂಡೇಕರ್ ಹೇಳುತ್ತಾರೆ.
ಯಾರೂ ಹಸ್ತಕ್ಷೇಪ ಮಾಡಲಿಲ್ಲ
ನನಗೆ ತೃಪ್ತಿಕೊಟ್ಟ ಕೆಲಸ ಇದು. ನನ್ನ ವರದಿಗೆ ಒಂದೇ ಒಂದು ಕಡೆ ಸಾರ್ವಜನಿಕರ ಪ್ರತಿಭಟನೆ ನಡೆಯಲಿಲ್ಲ. ಎಲ್ಲರೂ ಮನಸಾರೆ ಒಪ್ಪಿಕೊಂಡರು. ಯಾವ ಪಕ್ಷದವರ ತಕರಾರೂ ಇರಲಿಲ್ಲ. ಗದಗವನ್ನು ನಾನು ಶಿಫಾರಸು ಮಾಡುತ್ತೇನೋ ಇಲ್ಲವೋ ಎಂಬ ಸಂಶಯ ಕೆಲವರಿಗೆ ಇತ್ತು. ಇನ್ನೊಂದು ವಿಶೇಷವೆಂದರೆ ಯಾವ ಪಕ್ಷದವರೂ, ಶಾಸಕರೂ ನನ್ನ ಮೇಲೆ ಒತ್ತಡ ತರಲಿಲ್ಲ. ನನ್ ಜೋಡಿ ಮಾತಾಡ್ತಿದ್ರು. ಸಲಹೆ ಕೊಡ್ತಿದ್ರು. ಜೆ.ಎಚ್. ಪಟೇಲರ ಸ್ವಕ್ಷೇತ್ರ ಚನ್ನಗಿರಿಯನ್ನು ತಾಲೂಕು ಮಾಡಬೇಕೆಂಬ ಒತ್ತಡವಿತ್ತು. ನಾನು ಅಲ್ಲಿಗೆ ಭೇಟಿ ನೀಡಿದೆ. ಅದನ್ನು ತಾಲೂಕು ಕೇಂದ್ರವಾಗಿ ಮಾಡುವ ಅರ್ಹತೆ ಇರಲಿಲ್ಲ. ನಾನು ಪಟೇಲರಲ್ಲಿ ಅದನ್ನು ತಾಲೂಕಾಗಿ ಮಾಡೋಕೆ ಬರೋದಿಲ್ಲ ಎಂದಾಗ ಬಿಟ್‌ಬಿಡ್ರೀ ಎಂದರು. ರಾಮಕೃಷ್ಣ ಹೆಗಡೆಯವರೂ ಇದೇ ರೀತಿ ನಡೆದುಕೊಂಡಿದ್ರು.
– ಟಿ.ಎಂ.ಹುಂಡೇಕರ್
ಸಮಿತಿ ರಚನೆಯಾಗಿ 13 ವರ್ಷ, ವರದಿ ಸಲ್ಲಿಸಿದ 10 ವರ್ಷಗಳ ಬಳಿಕ ಜಿಲ್ಲೆಗಳ ಉದ್ಘಾಟನೆಯಾಯಿತು. ಉಡುಪಿ ಜಿಲ್ಲೆಯ ಉದ್ಘಾಟನೆಯಾಗುವಾಗ (25-8-2017) ಡಾ|ವಿ.ಎಸ್.ಆಚಾರ್ಯ ಬರಲು ಒತ್ತಾಯಿಸಿದ್ದರಿಂದ ಬಂದಿದ್ದೆ. ಅನಂತರ ಹಾವೇರಿಗೆ ಹೋಗಿದ್ದೆ. ನನ್ನದೇ ಊರಾದ ಕಾರಣ ಬಾಗಲಕೋಟೆ ಜಿಲ್ಲೆಯ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದೆ.
– ಟಿ.ಎಂ.ಹುಂಡೇಕರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.