ನಕಲಿ ಚಿನ್ನ ಅಡವಿಟ್ಟು 29.94ಲಕ್ಷ ರೂ. ಮೋಸ ಮಾಡಿದ ದಂಪತಿ: ಓರ್ವ ಅರೆಸ್ಟ್
Team Udayavani, Feb 27, 2024, 10:01 PM IST
ಪಡುಬಿದ್ರಿ: ಕಳೆದ ಸುಮಾರು 2ವರ್ಷಗಳಿಂದ ತಾಮ್ರಕ್ಕೆ ಚಿನ್ನ ಲೇಪಿಸಿದ ನಕಲಿ ಚಿನ್ನದ ಆಭರಣಗಳನ್ನೇ ಪಡುಬಿದ್ರಿ ಆಸುಪಾಸಿನ ಮೂರು ವಿವಿಧ ಬ್ಯಾಂಕುಗಳಲ್ಲಿ ಅಡವಿಟ್ಟು 29.94ಲಕ್ಷರೂ. ಪಂಗನಾಮ ಹಾಕಿದ ಪಡುಬಿದ್ರಿ ಕಂಚಿನಡ್ಕ ರಾಘವೇಂದ್ರ ಮಠದ ಬಳಿಯ ಖತರ್‌ನಾಕ್ ದಂಪತಿ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ.
ಆರೋಪಿ ಗಂಡ ರಾಜೀವ್ ಎಂಬಾತನನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದು ಆತನಿಗೆ ಮಾ. 7ರವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ. ಆತನ ಪತ್ನಿ ಸ್ನೇಹಲತಾಳಿಗಾಗಿ ಪೊಲೀಸ್ ಬಲೆ ಬೀಸಲಾಗಿದೆ.
ಪಡುಬಿದ್ರಿಯ ಸೌತ್ ಕೆನರಾ ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ. ಆಪರೇಟಿವ್ ಬ್ಯಾಂಕ್‌ನ ಪಡುಬಿದ್ರಿ ಶಾಖೆಯಲ್ಲಿ 2022ಸೆ. 1ರಿಂದ ಫೆ. 26, 2024ರವರೆಗೆ ಈ ದಂಪತಿ 180ಗ್ರಾಂ ನಕಲಿ ಚಿನ್ನವನ್ನಿಟ್ಟು 8.08ಲಕ್ಷಗಳನ್ನು ಪಡೆದುಕೊಂಡಿದೆ. ಪಡುಬಿದ್ರಿ ವ್ಯವಸಾಯಿಕ ಸಹಕಾರಿ ಸಂಘದ ಹೆಜಮಾಡಿ ಶಾಖೆಯಿಂದ ಆರೋಪಿಗಳು ಇದೇ ಸುಮಾರು 2ವರ್ಷಗಳ ಅವಧಿಯಲ್ಲಿ 231ಗ್ರಾಂ ಹಾಗೂ 188ಗ್ರಾಂ ನಕಲಿ ಚಿನ್ನವನ್ನು ಅಡವಿಟ್ಟು 19ಲಕ್ಷ ರೂ. ಗಳನ್ನು ಸಾಲವಾಗಿ ಪಡೆದಿದ್ದಾರೆ. ಉಚ್ಚಿಲದ ಎಸ್‌ಸಿಡಿಸಿಸಿ ಬ್ಯಾಂಕ್ ಶಾಖೆಯಿಂದ ಮಾರ್ಚ್ 2023ರಿಂದ ಫೆ. 26, 2024ರ ಅವಧಿಯಲ್ಲಿ 72ಗ್ರಾಂ ಚಿನ್ನ ಅಡವಿಟ್ಟು 2.86ಲಕ್ಷ ರೂ. ಗಳನ್ನು ಪಡೆದಿದ್ದರು.
ಸಾಲ ಪಡೆದಿರುವ ಈ ದಂಪತಿ ಬಡ್ಡಿ ಕಟ್ಟಲೂ ಸಹಿತ ಬ್ಯಾಂಕುಗಳತ್ತ ಮುಖ ಮಾಡಿರಲಿಲ್ಲ. ಬಳಿಕ ಬ್ಯಾಂಕಿನವರು ಕೂಲಂಕುಷ ಪರಿಶೀಲನೆಗಳನ್ನು ನಡೆಸಿದಾಗ ಮೋಸದ ಬಗೆಗೆ ಅರಿವಾಗಿದ್ದು ಇದರ ಹಿಂದೆ ದೊಡ್ಡ ಜಾಲವೇ ಇರಬಹುದೆಂಬ ಶಂಕೆಯೂ ಸದ್ಯಕ್ಕಿದೆ. ಪೊಲೀಸರ ತನಿಖೆಯಿಂದಲೇ ಎಲ್ಲಾ ವಿಚಾರಗಳೂ ಬಹಿರಂಗವಾಗಬೇಕಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.