ದ್ವಿ.ಪಿಯು ಪರೀಕ್ಷೆಗೆ ಸಿದ್ಧತೆ: 28 ಪರೀಕ್ಷಾ ಕೇಂದ್ರಗಳು
Team Udayavani, Apr 14, 2022, 12:31 PM IST
ಉಡುಪಿ: ದ್ವಿತೀಯ ಪಿಯು ಪರೀಕ್ಷೆಗಳು ಎ. 22ರಿಂದ ಮೇ 18ರ ವರೆಗೆ ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರ ವರೆಗೆ ಜಿಲ್ಲೆಯ 28 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಹೊಸದಾಗಿ 14,597, ಖಾಸಗಿ 326 ಹಾಗೂ 349 ಮರು ಪರೀಕ್ಷೆ ಬರೆಯುವವರು ಸೇರಿದಂತೆ ಒಟ್ಟು 15,272 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 2,203 ವಿದ್ಯಾರ್ಥಿಗಳು, 2,589 ವಿದ್ಯಾರ್ಥಿನಿಯರು ಒಟ್ಟು 4,792, ವಾಣಿಜ್ಯ ವಿಭಾಗದಲ್ಲಿ 3,935 ವಿದ್ಯಾರ್ಥಿಗಳು ಹಾಗೂ 3,915 ವಿದ್ಯಾರ್ಥಿನಿಯರು ಸೇರಿ ಒಟ್ಟು 7,850 ಮತ್ತು ಕಲಾ ವಿಭಾಗದಲ್ಲಿ 796 ವಿದ್ಯಾರ್ಥಿಗಳು ಹಾಗೂ 728 ವಿದ್ಯಾರ್ಥಿನಿಯರು ಸೇರಿ ಒಟ್ಟು 1,524 ವಿದ್ಯಾರ್ಥಿಗಳು ಇದ್ದಾರೆ.
ಪರೀಕ್ಷಾ ಪಾವಿತ್ರ್ಯ ಕಾಪಾಡಲು, ಯಶಸ್ವಿಯಾಗಿ ಪರೀಕ್ಷೆ ನಡೆಸಲು ಎಲ್ಲ ರೀತಿಯ ಅಗತ್ಯ ಪೂರ್ವಸಿದ್ಧತೆಗಳನ್ನು ಮಾಡಿ ಕೊಳ್ಳಲಾಗಿದೆ. ಪ್ರಶ್ನೆ ಪತ್ರಿಕೆ ವಿತರಿಸುವ ತಂಡ, ಪರೀಕ್ಷಾ ಕೇಂದ್ರಕ್ಕೆ ವೀಕ್ಷಕರ ನೇಮಕ, ಪ್ರಶ್ನೆ ಪತ್ರಿಕೆ ಪಾಲಕರ ತಂಡ, ಜಿಲ್ಲೆಯ ಮಾರ್ಗಾಧಿಕಾರಿಗಳ ತಂಡ, ಪರೀಕ್ಷೆಯ ಪರಿವೀಕ್ಷಣೆಯ ಸಂಚಾರಿ ಜಾಗೃತ ದಳ ಮತ್ತಿತರ ತಂಡಗಳನ್ನು ನೇಮಿಸಲಾಗಿದೆ.
ಪರೀಕ್ಷಾ ಕೇಂದ್ರಗಳಿಗೆ ಗೌಪ್ಯ ವಸ್ತುಗಳನ್ನು ಜಿಲ್ಲಾ ಖಜಾನೆಗಳಿಂದ ಪಡೆದು, ಪರೀಕ್ಷಾ ಕೇಂದ್ರಗಳಿಗೆ ಸಕಾಲದಲ್ಲಿ ಯಾವುದೇ ಗೊಂದಲಗಳಿಲ್ಲದೆ ವಿತರಿಸಬೇಕೆಂದು ರಜತಾದ್ರಿಯಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ತಿಳಿಸಿ ದ್ದಾರೆ. ಪರೀಕ್ಷಾ ಕೇಂದ್ರದಲ್ಲಿ ಪ್ರಶ್ನೆ ಪತ್ರಿಕೆಯ ಬಂಡಲ್ ತೆರೆಯುವಾಗ ಹಾಗೂ ಉತ್ತರ ಪತ್ರಿಕೆ ಸ್ವೀಕರಿಸಿ, ಬಂಡಲ್ ಮಾಡುವಾಗ ಸಿ.ಸಿ.ಟಿ.ವಿ. ವೀಕ್ಷಣೆಯಲ್ಲಿ ನಿರ್ವಹಿಸಬೇಕೆಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳಿಗೆ ಉತ್ತೇಜನ ನೀಡುವ ವ್ಯಕ್ತಿಗಳ ವಿರುದ್ಧ ದಂಡ ಪ್ರಕ್ರಿಯ ಸಂಹಿತೆ ಕಲಂ 107 ಮತ್ತು 108ರ ಅಡಿಯಲ್ಲಿ ಅಗತ್ಯ ಮುಂಜಾಗೃತ ಕ್ರಮಗಳನ್ನು ತಾಲೂಕು ದಂಡಾಧಿಕಾರಿಗಳು ಕೈಗೊಳ್ಳಬೇಕೆಂದು ಸೂಚನೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವಾಟ್ಸ್ ಆ್ಯಪ್ ಗ್ರೂಪ್‌ಗ್ಳಲ್ಲಿ ಈ ಹಿಂದೆ ಪರೀಕ್ಷೆಗಳಲ್ಲಿ ಬಳಸಿರುವ ಪ್ರಶ್ನೆ ಪತ್ರಿಕೆಗಳು, ಕೈ ಬರಹ ಪ್ರಶ್ನೆ ಪತ್ರಿಕೆಗಳನ್ನು ರವಾನಿಸಿ, ವದಂತಿಗಳನ್ನು ಹಬ್ಬಿಸಿ, ವಿದ್ಯಾರ್ಥಿ, ಪೋಷಕರು ಹಾಗೂ ಸಾರ್ವಜನಿಕರಿಗೆ ವಿನಾಕಾರಣ ಗೊಂದಲ ಸೃಷ್ಟಿಸಿದ್ದಲ್ಲಿ ಅಂತಹವರ ವಿರುದ್ಧ ಸೈಬರ್ ಕ್ರೈಂ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್., ಡಿಡಿಪಿಯು ಮಾರುತಿ, ಡಿಡಿಪಿಐ ಗೋವಿಂದ ಮಡಿವಾಳ ಉಪಸ್ಥಿತರಿದ್ದರು.
ಅಕ್ರಮಗಳು: ಗರಿಷ್ಠ ಶಿಕ್ಷೆಯ ಎಚ್ಚರಿಕೆ
ಪರೀಕ್ಷೆ ಅಕ್ರಮಗಳಾದ ಪ್ರಶ್ನೆ ಪತ್ರಿಕೆ ಸೋರಿಕೆ, ಅವುಗಳ ಖರೀದಿ ಮತ್ತು ಮಾರಾಟ, ಮೊಬೈಲ್ ಫೋನ್ ಅಥವಾ ಎಲೆಕ್ಟ್ರಾನಿಕ್ ಉಪಕರಣಗಳ ಮುಖಾಂತರ ಪ್ರಶ್ನೆ ಪತ್ರಿಕೆ ಸೋರಿಕೆಗೆ ವಿದ್ಯಾರ್ಥಿ ಹಾಗೂ ವ್ಯಕ್ತಿಗಳೊಂದಿಗೆ ಸಹಕರಿಸುವುದು, ಪ್ರಶ್ನೆ ಪತ್ರಿಕೆ ಬಗ್ಗೆ ವದಂತಿ ಹರಡುವುದು, ಅಕ್ರಮಕ್ಕೆ ಪ್ರೇರೇಪಿಸುವುದು ಮತ್ತು ಪ್ರೋತ್ಸಾಹಿಸುವುದು ಕಂಡುಬಂದಲ್ಲಿ ಅವರ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳಲಾಗುವುದು. ಈ ಅಕ್ರಮಗಳಲ್ಲಿ ಭಾಗಿಯಾದ ವ್ಯಕ್ತಿಗಳಿಗೆ 5 ವರ್ಷಗಳ ಕಾಲ ಜೈಲುವಾಸ, 5 ಲಕ್ಷ ರೂ. ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.