ಸಣ್ಣ ನೀರಾವರಿ ಇಲಾಖೆಯ 4 ಕೋ.ರೂ. ತ್ಯಾಜ್ಯ ನೀರುಪಾಲು!
Team Udayavani, Feb 21, 2020, 5:52 AM IST
ಕೃಷಿಕರಿಗೆ ಅನುಕೂಲವಾಗಲೆಂದು ಸಣ್ಣ ನೀರಾವರಿ ಇಲಾಖೆಯು ನಾಲ್ಕು ಕೋಟಿ ರೂ. ಖರ್ಚು ಮಾಡಿ ಕಿಂಡಿ ಅಣೆಕಟ್ಟು ಕಟ್ಟಿತು. ಆದರೆ ನಗರ ಸಭೆಯ ನಿರ್ವಹಣೆಯ ಕೊರತೆಯಿಂದ ಇಂದ್ರಾಣಿ ನದಿಗೆ ಸೇರಿದ ಕಲುಷಿತ ನೀರು ಅವೆಲ್ಲವವನ್ನೂ ನುಂಗಿ ಹಾಕಿತು. ಈ ಸಂಬಂಧ ನಗರ ಸಭೆಗೆ ಆರು ವರ್ಷಗಳ ಹಿಂದೆ ಪತ್ರ ಬರೆದ ನೀರಾವರಿ ಇಲಾಖೆ ಉತ್ತರಕ್ಕಾಗಿ ಕಾದು ಕುಳಿತಿದೆ. ಆರು ವರ್ಷಗಳಾದರೂ ಮತ್ತೆ ಇಲಾಖೆಯು ವಿವರಣೆ ಕೇಳಬಹುದಿತ್ತು.ಒಟ್ಟಿನಲ್ಲಿ ಜನರ ತೆರಿಗೆ ಹಣ ಪೋಲಾಗಿದೆ.
ಕೊಡಂಕೂರು: ಕೃಷಿಗೆ ನೀರು ಒದಗಿಸಲೆಂದೇ ಸಣ್ಣ ನೀರಾವರಿ ಇಲಾಖೆಯು 4 ಕೋಟಿ ರೂ. ಗೂ ಹೆಚ್ಚು ವೆಚ್ಚದಲ್ಲಿ ಇಂದ್ರಾಣಿ ನದಿ ಪಾತ್ರದಲ್ಲಿ ಕಿಂಡಿ ಅಣೆಕಟ್ಟು ಕಟ್ಟಿ ಈಗ ನಗರಸಭೆಯ ಮುಂದೆ ಕೈ ಕಟ್ಟಿ ಕುಳಿತಿದೆ.
ಇಂದ್ರಾಣಿ ನದಿಗೆ ನಗರಸಭೆಯ ನಿರ್ವಹಣೆ ಕೊರತೆ ಮತ್ತು ಇತರ ಕಾರಣಗಳಿಂದ ಸೇರುತ್ತಿರುವ ಮಲಿನ ನೀರು ಈ ಪ್ರದೇಶದ ಕೃಷಿ ಕ್ಷೇತ್ರಕ್ಕೆ ಈಗಾಗಲೇ ಹೊಡೆತ ನೀಡಿದೆ. ಈಗ ನೀರಾವರಿ ಇಲಾಖೆಯ ಹಣವೂ ಪೋಲಾಗಿದೆ.
ನೀರಾವರಿ ಇಲಾಖೆ ಜನರ ತೆರಿಗೆ ಹಣದಿಂದ 4 ಕೋಟಿ ರೂ. ಗಿಂತಲೂ ಹೆಚ್ಚು ವೆಚ್ಚದಲ್ಲಿ ಈ ಪ್ರದೇಶದಲ್ಲಿ 5 ಕಿಂಡಿ ಅಣೆಕಟ್ಟು ಕಟ್ಟಿದೆ. ಈಗ ಇದೇ ಮಲಿನ ನೀರಿನಿಂದ ಅವುಗಳನ್ನು ನಿರ್ವಹಿಸ ಲಾಗದೆ ಕೈ ಮುಗಿದು ಕುಳಿತಿದೆ. ಅಷ್ಟೇ ಅಲ್ಲ ; ಕಿಂಡಿ ಅಣೆಕಟ್ಟನ್ನು ಬಳಸುವ ರೈತರಿಂದ ವಸೂಲು ಮಾಡಬೇಕಿದ್ದ ಕರವನ್ನೂ ವಸೂಲು ಮಾಡದ ಸ್ಥಿತಿ ತಲುಪಿದೆ. ಇದಲ್ಲದೇ 2 ಕೋಟಿ ರೂ. ವೆಚ್ಚದಲ್ಲಿ ರಾಜಾಂಗಣದ ಬಳಿ ಅಣೆಕಟ್ಟು ನಿರ್ಮಿಸಲಾಗುತ್ತಿದೆ.
ಈ ಸಂಬಂಧ ನೀರಾವರಿ ಇಲಾಖೆ ಅಧಿಕಾರಿಗಳನ್ನು ಕೇಳಿದರೆ, “ನಾವು ಏನೂ ಮಾಡುವಂತಿಲ್ಲ. ನಗರಸಭೆಯ ಕೊಳಚೆ ನೀರಿನಿಂದ ಕೃಷಿ ಮಾಡದ ಪರಿಸ್ಥಿತಿ ಇದೆ. ಹಾಗಾಗಿ ನಾವು ನಿರ್ವಹಣೆ ಮಾಡುತ್ತಿಲ್ಲ, ಕರವನ್ನೂ ವಸೂಲು ಮಾಡುತ್ತಿಲ್ಲ. ಈ ಬಗ್ಗೆ ಸರಕಾರಕ್ಕೂ ಪತ್ರ ಬರೆಯಲಾಗಿದೆ’ ಎನ್ನುತ್ತಾರೆ.
ಎಷ್ಟು ವಿಚಿತ್ರ?
ಉದಯವಾಣಿ ಸುದಿನ ಅಧ್ಯಯನ ತಂಡವು ಪ್ರಮುಖ ಕಿಂಡಿ ಅಣೆಕಟ್ಟು ಪ್ರದೇಶಗಳಿಗೆ ಭೇಟಿ ನೀಡಿದಾಗ ಎರಡು ಇಲಾಖೆಗಳ ನಿರ್ವಹಣೆ ಕೊರತೆಯಿಂದ ತೆರಿಗೆ ಹಣ ಪೋಲಾಗಿರುವುದು ಕಂಡು ಬಂದಿತು. ನೀರಾವರಿ ಇಲಾಖೆಯ ಪ್ರಕಾರ ಕಲ್ಮಾಡಿ, ಚೆನ್ನಂಗಡಿ, ಬಗ್ಗುಮುಂಡ, ಬಾಪುತೋಟ, ಕೊಡಂಕೂರು ಗ್ರಾಮಗಳಲ್ಲಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಿದೆ. ಇದನ್ನು ಸ್ಥಳೀಯವಾಗಿ ದೈವಳ ಕಂಬಳಕಟ್ಟ, ಗರಡೆ ಕಟ್ಟ, ಕೊಡಂಕೂರು ಕಟ್ಟ, ಮಾರಿಗುಡಿ ಹಾಗೂ ಬೊಬ್ಬರ್ಯ ಪಾದೆ (ಬಾಪುತೋಟ)ಕಟ್ಟ ಎಂದೂ ಕರೆಯುತ್ತಾರೆ. ಇವೆಲ್ಲವನ್ನೂ ಸಮುದ್ರದಿಂದ ಬರುವ ಉಪ್ಪನೀರು ತಡೆದು ಕೃಷಿಗೆ ಅನುಕೂಲ ಕಲ್ಪಿಸಲು ನಿರ್ಮಿಸಲಾಯಿತು. ವಿಪರ್ಯಾಸವೆಂದರೆ ಮಾಲಿನ್ಯ ನೀರು ಇದೇ ನದಿಗೆ ಸೇರತೊಡಗಿ ಉದ್ದೇಶವೇ ನಿರರ್ಥಕವಾಗಿದೆ.
ಈ ಸಂಬಂಧ ಮಾಹಿತಿ ಹಕ್ಕು ಕಾಯಿದೆಯಡಿ ಕೇಳಿದ ಪ್ರಶ್ನೆಗೂ ನೀರಾವರಿ ಇಲಾಖೆಯು “ಕೊಡವೂರು, ಕಲ್ಮಾಡಿ ಮತ್ತಿತರ ಕಡೆ ಉಪ್ಪು ನೀರು ತಡೆ ಅಣೆಕಟ್ಟು ಕಟ್ಟಿದ್ದು, ಹಲಗೆಗಳನ್ನು ಜೋಡಿಸಿದ ಅನಂತರ ಸಂಗ್ರಹವಾಗುವ ನದಿಯ ನೀರಿಗೆ ಕೊಳಚೆ ನೀರು ಮಿಶ್ರಣವಾಗಿ ರೋಗ ರುಜಿನಗಳು ಹರಡುವ ಭೀತಿ ಹೆಚ್ಚಿರುತ್ತದೆ. ಆದ ಕಾರಣ ಆ ಅಣೆಕಟ್ಟನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ’ ಎಂದು ತಿಳಿಸಿದೆ. ಈ ಅಣೆಕಟ್ಟುಗಳ ನಿರ್ಮಾಣಕ್ಕೆ ಸಣ್ಣ ನೀರಾವರಿ ಯೋಜನೆ ಆಹಗೂ ಪಿಕ್ ಅಪ್ ಅನುದಾನ ಬಳಸಿತ್ತು.
ನಿರ್ವಹಣೆ ಏಕಿಲ್ಲ
ಎಂಟು ವರ್ಷಗಳಿಂದ ಕಿಂಡಿ ಅಣೆಕಟ್ಟುಗಳನ್ನು ನಿರ್ವಹಿಸುತ್ತಿಲ್ಲ. ಕೊಳಚೆ ನೀರು ನಿಲುಗಡೆ ಆಗುತ್ತಿರುವುದರಿಂದ ಸ್ಥಳೀಯರೂ ಕಟ್ಟ ಹಾಕಲು ಅವಕಾಶ ಕೊಡುತ್ತಿಲ್ಲ ಎಂದು ಉದಯವಾಣಿಗೆ ವಿವರಿಸಿರುವ ನೀರಾವರಿ ಇಲಾಖೆ ಅಧಿಕಾರಿಗಳು, ಈ ಸಂಬಂಧ ಆರು ವರ್ಷಗಳ ಹಿಂದೆ ಸರಕಾರಕ್ಕೆ ಪತ್ರ ಬರೆದಿದ್ದೇವೆ. ನಗರಸಭೆಗೂ ಪತ್ರ ಬರೆದಿದ್ದು, ಯಾವುದೇ ಉತ್ತರ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶುಲ್ಕವನ್ನೂ ಸಂಗ್ರಹಿಸುತ್ತಿಲ್ಲ. ಇಲ್ಲವಾದರೆ ವಾರ್ಷಿಕ ಶುಲ್ಕವಾಗಿ ತೋಟಗಾರಿಕೆ ಮಾಡುತ್ತಿದ್ದರೆ ಒಂದು ಎಕ್ರೆಗೆ 35 ರೂ. ಹಾಗೂ ಕೃಷಿಗೆ 100 ರೂ. ನಂತೆ ವಸೂಲು ಮಾಡಬೇಕಿತ್ತು.
ನೀರು ಚೆನ್ನಾಗಿದ್ದರೆ ಪರಿಸ್ಥಿತಿಯೇ ಬೇರೆ
ಹೀಗೆ ಅಧ್ಯಯನ ತಂಡಕ್ಕೆ ಹೇಳಿದವರು ಕೊಡಂಕೂರಿನ ಬೇಬಿ ಪೂಜಾರಿ¤. “ಆಗ ಇದೇ ನೀರಿನಲ್ಲಿ ಕೃಷಿ ಮಾಡುತ್ತಿದ್ದೆವು. ನಾವೆಲ್ಲ ಸ್ನಾನ ಮಾಡಿ, ನಮ್ಮ ಜಾನುವಾರುಗಳಿಗೂ ಸ್ನಾನ ಮಾಡಿಸುತ್ತಿದ್ದೆವು. ನಮ್ಮ ಬಾವಿಯಲ್ಲಿ ನೀರೂ ಸಹ ಚೆನ್ನಾಗಿತ್ತು. ಹದಿನೈದು ವರ್ಷಗಳಿಂದ ಕೊಳಚೆ ಸೇರಲು ಸೇರಿದ ಮೇಲೆ ಅವೆಲ್ಲವೂ ಮಾಯವಾಗಿದೆ. ಪುಣ್ಯಕ್ಕೆ ನಗರಸಭೆಯ ನೀರು ಕುಡಿಯಲು ಸಿಗುತ್ತಿದೆ. ಆದರೆ ಆ ಬದಿಯಲ್ಲಿ (ನದಿಯ ಮತ್ತೂಂದು ಬದಿ) ಜನರಿಗಾಗಿ ಸಾರ್ವಜನಿಕ ಬಾವಿ ತೆರೆಯಲಾಗಿತ್ತು. ಅದರ ನೀರು ಹಾಳಾಗಿದೆ. ಅವರಿಗೂ ನೀರಿಲ್ಲ. ನಮ್ಮದೇ ನಳ್ಳಿಯಿಂದ ಪೈಪು ಹಾಕಿ ನೀರು ನೀಡಲಾಗುತ್ತಿದೆ. ಇಲ್ಲದಿದ್ದರೆ ಅವರಿಗೂ ನೀರಿಲ್ಲ ಎನ್ನುತ್ತಾರೆ ದೇವಿಯಮ್ಮ. ಮೊದ ಮೊದಲು ನೀರಿನಲ್ಲಿ ಇಳಿದರೆ ಏನೂ ಆಗುತ್ತಿರಲಿಲ್ಲ. ಕ್ರಮೇಣ ಗುಳ್ಳೆಗಳು ಆಗುತ್ತವೆ ಎಂದು ನೆನಪಿಸಿಕೊಂಡ ಬೇಬಿ ಅವರು, ಇದರಿಂದ ಸೊಳ್ಳೆಗಳ ಕಾಟವೂ ತಪ್ಪಿಲ್ಲ ಎನ್ನುತ್ತಾರೆ.
ಸಂಪ್ರದಾಯವೂ ನಾಶ
ಯುಗಾದಿ ಹಬ್ಬದ ಸಂದರ್ಭ ಮಠದಬೆಟ್ಟು ವಿನಿಂದ ಕಲ್ಮಾಡಿವರೆಗೂ ನದಿಯಲ್ಲಿ ಮೀನು ಹಿಡಿದು ಅಲ್ಲೇ ಅಡುಗೆ ಮಾಡಿ, ಗತಿಸಿದ ತಮ್ಮ ಹಿರಿಯರಿಗೆ ಎಡೆ ಇಟ್ಟು ನಮಿಸುತ್ತಿದ್ದರು. ಅದೊಂದು ರೀತಿಯ ಉತ್ಸವದಂತೆ ನಡೆಯುತ್ತಿತ್ತು. ಆದರೀಗ ಈ ಕೊಳಚೆ ನೀರಿನಿಂದಾಗಿ ಆ ಸಂಪ್ರದಾಯವೇ ನಾಶವಾಗಿದೆ.
ಬೆಳೆಗೆ ಹಾಯಿಸಿದರೆ ನಾಶ
ಇನ್ನೂ ವಿಚಿತ್ರವೆಂದರೆ ಕೆಲವರು ಕಟ್ಟ ಹಾಕಿ ಜಾನುವಾರುಗಳಿಗೆ ಜೋಳ ಬೆಳೆಯುತ್ತಿದ್ದಾರೆ. ಈ ನೀರಿನಲ್ಲಿನ ಮಲಿನ ಅಂಶ ಎಷ್ಟು ಅಪಾಯದದ್ದೆಂದರೆ, ನೀರಿನ ಪಸೆ ಇದ್ದರೆ ಬೆಳೆಗಳಿಗೆ ಪರವಾಗಿಲ್ಲ. ಹಾಗೆಂದು ಇದೇ ನೀರನ್ನು ಪಂಪ್ ಮೂಲಕ ಗಿಡದ ಬುಡಗಳಿಗೆ ಹಾಯಿಸಿದರೆ ಅವು ಸುಟ್ಟು ಹೋಗುತ್ತವೆ ಎನ್ನುತ್ತಾರೆ ಕೃಷಿಕ ಅಪ್ಪು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.