ಅಗ್ನಿವೀರರಿಗೆ ಇಲಾಖೆ ಹುದ್ದೆಯಲ್ಲಿ ಶೇ.75 ಮೀಸಲಾತಿ: ಸಚಿವ ಶ್ರೀನಿವಾಸ ಪೂಜಾರಿ
Team Udayavani, Jun 22, 2022, 7:58 PM IST
ಉಡುಪಿ: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಅಗ್ನಿಪಥ್ ದೇಶದ ಯುವಕರಿಗೆ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಲು, ದೇಶಸೇವೆಗಾಗಿ ಸಿಕ್ಕಿರುವ ಸುವರ್ಣ ಅವಕಾಶವಾಗಿದೆ.
ಅಗ್ನಿಪಥ್‌ನಲ್ಲಿ ಸೇವೆ ನಿರ್ವಹಿಸಿ ಹಿಂದಿರುಗಿದ ಯುವಜನರಿಗೆ ರಾಜ್ಯದ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ವಸತಿ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳಲ್ಲಿ ಶೇ.75ರಷ್ಟು ಮೀಸಲಾತಿ ನೀಡಲು ಯೋಜನೆಗಳನ್ನು ರೂಪಿಸಲು ಚಿಂತನೆ ನಡೆಸಲಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನೆಗೆ ಸಂಬಂಧಿಸಿ ಚರ್ಚೆ, ವಿವಾದ ನಡೆಯುತ್ತಿದೆ. ಭಾರತೀಯ ಯುವಕರು ಶಿಸ್ತು ಮತ್ತು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಯೋಜನೆ ಕಾರಣವಾಗಲಿದೆ. ರಾಜ್ಯದಲ್ಲಿರುವ ಇಲಾಖೆಯ 826ರಷ್ಟು ವಸತಿ ಶಾಲೆಗಳಲ್ಲಿ ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ವಾರ್ಡನ್ ಹುದ್ದೆಗೆ ಸಂಬಂಧಿಸಿ ಶೇ.75ರಷ್ಟು ಮೀಸಲಾತಿ ಇಡುವ ಬಗ್ಗೆ ಇಲಾಖೆಗೆ ಟಿಪ್ಪಣಿ ಕಳುಹಿಸಿದ್ದೇನೆ ಎಂದು ತಿಳಿಸಿದರು. ಇಲಾಖೆಯ ಇತರೆ ಹುದ್ದೆಗಳಲ್ಲೂ ಯಾವ ರೀತಿ ಆದ್ಯತೆ ನೀಡಬಹುದು ಎಂದು ಪರಿಶೀಲನೆ ನಡೆಸಲಾಗುತ್ತಿದೆ. ಇಲಾಖೆ ಮೂಲಕ ಈ ಯೋಜನೆಯನ್ನು ರೂಪಿಸಿ ಜಾರಿಗೊಳಿಸುತ್ತೇವೆ ಎಂದು ಕೋಟ ಹೇಳಿದರು.
ಸೇನೆ ಸೇರ್ಪಡೆಗೆ ತರಬೇತಿ ಕೇಂದ್ರ
ಭಾರತೀಯ ಸೇನೆ ಸೇರ್ಪಡೆಗೆ ಇಚ್ಛಿಸುವ ಯುವಕರಿಗೆ ಕರಾವಳಿ ಮೂರು ಜಿಲ್ಲೆಗಳಲ್ಲಿ ಹಿಂದುಳಿದ ವರ್ಗಗಳ ಇಲಾಖೆ ವತಿಯಿಂದ ಎರಡು ತಿಂಗಳ ಒಳಗೆ ತರಬೇತಿ ಕೇಂದ್ರ ಆರಂಭಿಸಲಾಗುವುದು ಎಂದರು. ದಕ್ಷಿಣ ಕನ್ನಡದಲ್ಲಿ ವೀರರಾಣಿ ಅಬ್ಬಕ್ಕನ ಹೆಸರಿನಲ್ಲಿ, ಉಡುಪಿಯಲ್ಲಿ ವೀರ ಯೋಧರಾದ ಕೋಟಿ ಚೆನ್ನಯ್ಯ ಅವರ ಹೆಸರಿನಲ್ಲಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಹೇಂಜಾ ನಾಯ್ಕರ ಹೆಸರಿನಲ್ಲಿ ಸೇನೆ ಸೇರ್ಪಡೆಗೆ ತರಬೇತಿ ಸಂಸ್ಥೆಗಳು ಪ್ರಾರಂಭಗೊಳ್ಳಲಿದೆ ಎಂದರು.
ಇದನ್ನೂ ಓದಿ:ಪವಾರ್ ವಿರುದ್ಧ ಪೋಸ್ಟ್ ಮಾಡಿದ್ದ ನಟಿಗೆ ಜಾಮೀನು; ಜೈಲಿನಿಂದ ಬಿಡುಗಡೆ
ನಾರಾಯಣಗುರು ವಸತಿ ಶಾಲೆಗೆ 100 ಕೋ. ರೂ. ಬಿಡುಗಡೆ
ನಾರಾಯಣಗುರು ವಸತಿ ಶಾಲೆಗಳು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರಾರಂಭಗೊಳ್ಳಲಿದ್ದು, ಇದಕ್ಕಾಗಿ ತಲಾ 25 ಕೋಟಿ ರೂ.ಗಳಂತೆ ಒಟ್ಟು 100 ಕೋಟಿ ರೂ. ಬಿಡುಗಡೆಯಾಗಿದೆ. ರಾಜ್ಯದಲ್ಲಿ ಸೇಂದಿ ನಿಷೇಧವನ್ನು ಹಿಂದೆಗೆದುಕೊಳ್ಳಬೇಕು ಹಾಗೂ ನಾರಾಯಣಗುರು ನಿಗಮ ಸ್ಥಾಪಿಸಬೇಕು ಎಂಬ ಬೇಡಿಕೆಯನ್ನಿಟ್ಟು ಉಪವಾಸ ಸತ್ಯಾಗ್ರಹ ಪ್ರಾರಂಭಿಸುವುದಾಗಿ ಹೇಳಿರುವ ಶ್ರೀಪ್ರಣವಾನಂದ ಸ್ವಾಮೀಜಿ ಅವರನ್ನು ಮನ ಒಲಿಸುವ ಕಾರ್ಯ ಮಾಡಲಾಗಿದೆ ಎಂದರು.
ಹಾಸ್ಟೆಲ್ ಪ್ರವೇಶಾತಿ ಕೌನ್ಸೆಲಿಂಗ್ ರದ್ದು
ಹಿಂದುಳಿದ ವರ್ಗ, ಸಮಾಜ ಕಲ್ಯಾಣ ಇಲಾಖೆ ಸಂಬಂಧಿಸಿ ಹಾಸ್ಟೆಲ್ ಪ್ರವೇಶ ಪ್ರಕ್ರಿಯೆಗೆ ಈ ವರ್ಷದಿಂದ ಜಾರಿಯಾಗಬೇಕಿದ್ದ ಕೌನ್ಸೆಲಿಂಗ್ ಪದ್ದತಿಯನ್ನು ರದ್ದುಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದರು. ವಿದ್ಯಾರ್ಥಿಗಳು, ಪೋಷಕರು ಗೊಂದಲಪಡುವ ಅಗತ್ಯವಿಲ್ಲ. ಈ ಹಿಂದಿನ ವ್ಯವಸ್ಥೆಯಂತೆ ಪ್ರವೇಶಾತಿ ಪ್ರಕ್ರಿಯೆ ನಡೆಯಲಿದೆ ಕೋಟ ಸ್ಪಷ್ಟಪಡಿಸಿದ್ದಾರೆ.
ಪಠ್ಯಪುಸ್ತಕ ವಿವಾದ: ಮನವರಿಕೆ ಮಾಡುತ್ತಿದ್ದೇವೆ
ಪಠ್ಯಪುಸ್ತಕಗಳ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿ ಹಿರಿಯರಾದ ಎಚ್.ಡಿ.ದೇವೇಗೌಡ ಅವರು ಸರಕಾರಕ್ಕೆ ಬರೆದಿರುವ ಪತ್ರ ಬರೆದಿದ್ದು, ಅವರ ಸಲಹೆಯನ್ನು ಗೌರವಿಸುತ್ತೇವೆ. ಈ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಸಾಹಿತಿ, ಲೇಖಕರನ್ನು ರಾಜ್ಯ ಶಿಕ್ಷಣ ಸಚಿವರು ಭೇಟಿ ಮಾಡಿ ಅವರಿಗೆ ಮನವರಿಕೆ ಮಾಡುವ ಪ್ರಯತ್ನ ನಡೆಯುತ್ತಿದೆ. ಸರಕಾರದ ನಡೆಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಸಾಹಿತಿಗಳ ಬಳಿ ಖುದ್ದು ಹೋಗಿ ಅವರ ಆತಂಕ ನಿವಾರಿಸುವ ಪ್ರಯತ್ನಗಳು ನಡೆದಿದೆ ಎಂದರು. ಜಿ. ಪಂ ಮಾಜಿ ಅಧ್ಯಕ್ಷ ದಿನಕರ ಬಾಬು ಪತ್ರಿಕಾಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.