8ನೇ ವಾರ್ಡ್ ಲಕ್ಷ್ಮೀ ನಗರ ಕಾಲನಿ ಚರಂಡಿ ಸಮಸ್ಯೆಗೆ ಮುಕ್ತಿ
Team Udayavani, Jun 29, 2019, 5:56 AM IST
ಕಾಪು: ಕಾಪು ಪುರಸಭೆ ವ್ಯಾಪ್ತಿಯ ಪಡುಗ್ರಾಮದ 8ನೇ ವಾರ್ಡ್ – ಲಕ್ಷ್ಮೀ ನಗರ ಕಾಲನಿಯ 20ಕ್ಕೂ ಅಧಿಕ ಕುಟುಂಬಗಳನ್ನು ಕೆಲವು ವರ್ಷದಿಂದ ಕಾಡುತ್ತಿದ್ದ ಕೃತಕ ನೆರೆ ಭೀತಿಗೆ ಪುರಸಭೆ ಮುಕ್ತಿ ದೊರಕಿಸುವ ಯತ್ನ ಮಾಡಿದೆ.
ಲಕ್ಷ್ಮೀನಗರ ಕಾಲನಿಯಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿಯ ವ್ಯವಸ್ಥೆಯಿಲ್ಲದೇ ಮಳೆ ನೀರು ಗದ್ದೆ ಹಾಗೂ ಕಾಲನಿಯ ಮನೆಗಳ ತೋಟದಲ್ಲಿ ಶೇಖರಣೆಗೊಂಡು ಕೃತಕ ನೆರೆಯ ಭೀತಿ ಎದುರಾಗುತ್ತಿತ್ತು. ಕಳೆದ ರವಿವಾರವೂ ಇಂತಹ ಪರಿಸ್ಥಿತಿ ಎದುರಾದಾಗ ಸ್ಥಳೀಯರು ಕಾಪು ತಹಶೀಲ್ದಾರ್ ಸಂತೋಷ್ ಕುಮಾರ್ ಅವರಿಗೆ ಈ ಬಗ್ಗೆ ದೂರು ನೀಡಿದ್ದರು. ಸ್ಥಳಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ್ ಪುರಸಭೆ ಇಂಜಿನಿಯರ್‌ರನ್ನು ಕರೆಯಿಸಿ ಕೂಡಲೇ ಪರಿಹಾರ ಕಂಡುಕೊಳ್ಳುವಂತೆ ಸೂಚನೆ ನೀಡಿದ್ದರು.
ಸೋಮವಾರ ಈ ಪುರಸಭೆ ಮುಖ್ಯಾಧಿಕಾರಿ ರಾಯಪ್ಪ ಅವರು ಕೂಡಾ ಭೇಟಿ ನೀಡಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಪುರಸಭೆ ಪೌರ ಕಾರ್ಮಿಕರು ಮತ್ತು ಚರಂಡಿ ತೆಗೆಯುವ ಗುತ್ತಿಗೆ ಕಾರ್ಮಿಕರು ನೀರು ಹರಿದು ಹೋಗಲು ತಡೆಯಾಗಿದ್ದ ರಸ್ತೆಯನ್ನು ಅಗೆದು, ಸಿಮೆಂಟ್ ಪೈಪ್ ಹಾಕಿ ಕೊಟ್ಟಿದ್ದಾರೆ. ಎರಡು ಕಡೆ ಚರಂಡಿ ನಿರ್ಮಿಸಿ ಮಳೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
ಸಾರ್ವಜನಿಕ ಸಹಕಾರವೂ ಅಗತ್ಯ
ಮನೆ ಸುತ್ತಲಿನ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಮನೆ ನಿರ್ಮಾಣ ಸಂದರ್ಭ ಚರಂಡಿ ರಚಿಸುವುದು ಮೊದಲಾದ ಅಗತ್ಯದ ಮೂಲ ಸೌಕರ್ಯಗಳನ್ನು ಜನರು ಸ್ವತಃ ತಾವಾಗಿಯೇ ಮಾಡಿಕೊಳ್ಳಬೇಕಿದೆ. ಜನರ ಸಹಕಾರ ಇದ್ದಾಗ ಮಾತ್ರ ಪುರಸಭೆ ಪೂರಕವಾಗಿ ಸ್ಪಂದಿಸಲು ಸಾಧ್ಯವಾಗುತ್ತದೆ.
-ರಾಯಪ್ಪ , ಮುಖ್ಯಾಧಿಕಾರಿ, ಕಾಪು ಪುರಸಭೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.