64ರ ಹರೆಯದಲ್ಲಿಯೂ ಮಿಶ್ರ ಬೆಳೆ ಕೃಷಿ ನಡೆಸುತ್ತಿರುವ ಮಾದರಿ ಕೃಷಿಕ
ಜಾರ್ಕಳ ಮುಂಡ್ಲಿ ಮಾಧವ ಗೌಡರ ಕೃಷಿ ಯಶೋಗಾಥೆ
Team Udayavani, Dec 22, 2019, 4:49 AM IST
ಹೆಸರು: ಮಾಧವ ಗೌಡ
ಏನೇನು ಕೃಷಿ: ಭತ್ತ, ಅಡಿಕೆ, ತೆಂಗು, ಬಾಳೆ, ಕಾಳುಮೆಣಸು, ರಾಂಪತ್ರೆ, ತರಕಾರಿ
ಎಷ್ಟು ವರ್ಷ: 64
ಕೃಷಿ ಪ್ರದೇಶ: ಸುಮಾರು 6 ಎಕ್ರೆ
ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಆದ್ದರಿಂದಲೇ ಭೂಮಿಯ ಜತೆಗೆ ಒಡನಾಡುವ ಕೃಷಿಗೆ ಮಹತ್ವದ ಸ್ಥಾನ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.
ಅಜೆಕಾರು: ಭಾರತದ ಆರ್ಥಿಕತೆಯ ಮೂಲವೇ ಕೃಷಿಯಾಗಿದ್ದು ಕೃಷಿ ಸಂಸ್ಕೃತಿಯನ್ನೇ ಶತಶತಮಾನಗಳಿಂದ ದೇಶ ಅಳವಡಿಸಿಕೊಂಡಿದೆ. ಬಹಳಷ್ಟು ವರ್ಷಗಳವರೆಗೆ ದೇಶದ ಆರ್ಥಿಕ ಸ್ಥಿತಿ ಕೃಷಿಯನ್ನೇ ಅವಲಂಬಿಸಿತ್ತು. ಅನಂತರದ ದಿನಗಳಲ್ಲಿ ಭತ್ತದ ಕೃಷಿಯನ್ನು ಅವಗಣನೆ ಮಾಡಿ ವಾಣಿಜ್ಯ ಬೆಳೆಗಳತ್ತ ಮುಖ ಮಾಡಿದ ಪ್ರತಿಫಲವಾಗಿ ರೈತರ ಭತ್ತದ ಗದ್ದೆಗಳು ಹಡಿಲು ಬೀಳುವ ಜತೆಗೆ ಅಂತರ್ಜಲ ಕೊರತೆಯೂ ಕಾಡತೊಡಗಿತು.
ಆದರೆ ಜಾರ್ಕಳ ಮುಂಡ್ಲಿಯ ಮಾಧವ ಗೌಡರು ತಮ್ಮ 64 ವರ್ಷ ಪ್ರಾಯದಲ್ಲಿಯೂ ಸುಮಾರು 2 ಎಕ್ರೆ ಪ್ರದೇಶದಲ್ಲಿ ಭತ್ತ ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ. ಸುಮಾರು 6 ಎಕ್ರೆ ಕೃಷಿ ಭೂಮಿ ಹೊಂದಿರುವ ಇವರು 3 ಎಕ್ರೆ ಪ್ರದೇಶದಲ್ಲಿ ಅಡಿಕೆ, 1 ಎಕ್ರೆ ಪ್ರದೇಶದಲ್ಲಿ ತೆಂಗು, ಉಳಿದ ಜಾಗದಲ್ಲಿ ಬಾಳೆ, ಕಾಳುಮೆಣಸು, ಪಪ್ಪಾಯಿ, ವೀಳ್ಯದೆಲೆ, ರಾಂಪತ್ರೆ ಹಾಗೂ ತರಕಾರಿ ಬೆಳೆಗಳನ್ನು ಬೆಳೆದು ಪ್ರಗತಿಪರ ಕೃಷಿಕರಾಗಿ ದುಡಿಯುತ್ತಿದ್ದು, 2017-18ನೇ ಸಾಲಿನ ಉಡುಪಿ ಜಿಲ್ಲಾ ಮಟ್ಟದ ಉತ್ತಮ ಕೃಷಿಕ ಪ್ರಶಸ್ತಿ ಪಡೆದುಕೊಂಡಿದ್ದಾರೆ.
20 ಕ್ವಿಂಟಾಲ್ ಭತ್ತ
ಪ್ರತೀ ಎಕರೆಗೆ ಸುಮಾರು 20 ಕ್ವಿಂಟಾಲ್ ಭತ್ತದ ಫಸಲು ಪಡೆಯುವ ಇವರು ಭತ್ತದ ಕೃಷಿಯಿಂದಲೂ ಸಾಕಷ್ಟು ಲಾಭ ಗಳಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಅಲ್ಲದೆ ವಿವಿಧ ತರಕಾರಿಗಳಾದ ಸುವರ್ಣಗಡ್ಡೆ, ಬೆಂಡೆ, ಅಲಸಂಡೆ ಬೆಳೆದು ಲಾಭ ಪಡೆಯುತ್ತಿದ್ದಾರೆ. ಅಡಿಕೆ, ತೆಂಗು, ರಾಂಪತ್ರೆ ಕೃಷಿಯಿಂದಲೂ ಲಾಭ ಗಳಿಸುತ್ತಿದ್ದಾರೆ.
ಹೈನುಗಾರಿಕೆ
ಕೃಷಿಗೆ ಪೂರಕವಾಗಿ 6 ದನಗಳನ್ನು ಸಾಕಿ ಹೈನುಗಾರಿಕೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಕೃಷಿಗೆ ಹಟ್ಟಿಗೊಬ್ಬರವನ್ನು ಬಳಸುತ್ತಿದ್ದು, ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ತಂದೆ ಜಾಣ ಗೌಡರ ಕಾಲದಿಂದಲೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಇವರು ಪ್ರಾಥಮಿಕ ಶಿಕ್ಷಣ ಮೊಟಕುಗೊಳಿಸಿ ಬಾಲ್ಯದಿಂದಲೇ ಹಲವು ಕೃಷಿ ಪದ್ಧತಿಗಳನ್ನು ತಮ್ಮ ಕೃಷಿ ಭೂಮಿಯಲ್ಲಿ ಅಳವಡಿಸಿಕೊಂಡಿದ್ದರು.
ಪ್ರತಿಯೋರ್ವ ಕೃಷಿಕರೂ ಮಿಶ್ರಬೆಳೆ ಬೆಳೆದಲ್ಲಿ ಮಾತ್ರ ಲಾಭ ಪಡೆಯಬಹುದಾಗಿದ್ದು, ಕಡಿಮೆ ಕೃಷಿ ಭೂಮಿ ಹೊಂದಿರುವವರೂ ಹೈನುಗಾರಿಕೆಯ ಜತೆಗೆ ಮಿಶ್ರ ಬೆಳೆ ಮಾಡಬೇಕು ಎಂದವರು ಹೇಳುತ್ತಾರೆ. ಬೆಳೆದ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಿ ಮಾರಾಟ ಮಾಡುವ ಇವರು ಮಧ್ಯವರ್ತಿಗಳ ವ್ಯವಹಾರದಿಂದ ದೂರವಿದ್ದಾರೆ. ಮಾಧವ ಗೌಡರು ವರ್ಷದಿಂದ ವರ್ಷಕ್ಕೆ ಕೃಷಿ ಪದ್ಧತಿಯನ್ನು ಬದಲಾಯಿಸುತ್ತಿದ್ದು, ಹೊಸ ಹೊಸ ಬೆಳೆ ಬೆಳೆದು ಲಾಭ ಗಳಿಸುತ್ತಿದ್ದಾರೆ. ಅವರು ಹೆಚ್ಚಾಗಿ ಕೃಷಿಗೆ ಹಸುರೆಲೆ, ಹಟ್ಟಿಗೊಬ್ಬರ, ಸುಡುಮಣ್ಣುಗಳನ್ನೇ ಬಳಸುತ್ತಿದ್ದು ಸಾವಯವ ಕೃಷಿಗೆ ಉತ್ತಮ ಎಂದು ಹೇಳುತ್ತಾರೆ. ಪತ್ನಿ ದೇವಕಿ ಹಾಗೂ ಐವರು ಮಕ್ಕಳು ಕೃಷಿ ಕಾರ್ಯಕ್ಕೆ ನಿರಂತರ ಸಹಕಾರ ನೀಡುತ್ತಿದ್ದಾರೆ. ಇವರಿಗೆ ಜಿಲ್ಲಾ ಉತ್ತಮ ಕೃಷಿಕ ಪ್ರಶಸ್ತಿಯ ಜತೆಗೆ ವಿವಿಧ ಸಂಘ ಸಂಸ್ಥೆಗಳಿಂದ ಸಮ್ಮಾನ ಸಂದಿದೆ.
ಕುಕ್ಕುಟೋದ್ಯಮ
ಕೆಲವು ವರ್ಷಗಳಿಂದ ಮಾಧವ ಗೌಡರು ಕುಕ್ಕುಟೋದ್ಯಮವನ್ನೂ ಮಾಡುತ್ತಿದ್ದಾರೆ. ಸುಮಾರು 6 ಸಾವಿರ ಕೋಳಿಗಳನ್ನು ಫಾರಂ ಮೂಲಕ ಸಾಕಿ ಲಾಭ ಪಡೆಯುತ್ತಿದ್ದಾರೆ. ಕೃಷಿ ಹಾಗೂ ಕೃಷಿಗೆ ಪೂರಕವಾಗಿ ಹೈನುಗಾರಿಕೆ, ಕೋಳಿ ಸಾಕಣೆ ಮಾಡುವುದರಿಂದ ಸಾಕಷ್ಟು ಲಾಭ ಗಳಿಸಬಹುದಾದರೂ ಕಾಡು ಪ್ರಾಣಿಗಳ ಹಾವಳಿಯಿಂದಾಗಿ ರೈತರಿಗೆ ನಿರಂತರ ಸಮಸ್ಯೆ ಉಂಟಾಗುತ್ತಿದ್ದು ಕಾಡುಪ್ರಾಣಿಗಳ ಹಾವಳಿ ತಡೆಗಟ್ಟಿದಲ್ಲಿ ರೈತರು ಹೆಚ್ಚಿನ ಲಾಭ ಗಳಿಸಬಹುದು ಎಂದು ಮಾಧವ ಅವರು ಹೇಳುತ್ತಾರೆ.
ಕೃಷಿಯಿಂದ ಬದುಕು ಸಾಧ್ಯ
ಯುವ ಸಮುದಾಯ ಸುಖದ ಜೀವನ ಶೈಲಿಗೆ ಮಾರುಹೋಗಿ ಪೇಟೆಗಳತ್ತ ಮುಖ ಮಾಡದೆ ಕೃಷಿ ಭೂಮಿಯಲ್ಲಿ ಶ್ರಮ ವಹಿಸಿ ದುಡಿದಲ್ಲಿ ಬದುಕು ಕಟ್ಟಿಕೊಳ್ಳಬಹುದಾಗಿದೆ. ಕೃಷಿ ಕ್ಷೇತ್ರವನ್ನು ಅವಗಣನೆ ಮಾಡುವುದು ಸರಿಯಲ್ಲ. ಭತ್ತದ ಬೆಳೆ ಬೆಳೆಯುವುದರಿಂದ ಆಹಾರದ ಸಮಸ್ಯೆಯನ್ನು ನೀಗಿಸುವ ಜತೆಗೆ ನೀರಿನ ಸಮಸ್ಯೆಯನ್ನು ಪರಿಹರಿಸಬಹುದು. ಭತ್ತ, ಅಡಿಕೆ, ತೆಂಗು ಬೆಳೆಗಳ ಜತೆಗೆ ಎಡೆ ಬೆಳೆಗಳಾಗಿ ಕಾಳುಮೆಣಸು, ವೀಳ್ಯದೆಲೆ, ಬಾಳೆ ಬೆಳೆಯುವುದರಿಂದ ಪ್ರಸ್ತುತ ದಿನಗಳಲ್ಲಿ ಹೆಚ್ಚಿನ ಲಾಭ ಗಳಿಸಬಹುದಾಗಿದೆ. ಅಲ್ಲದೆ ರೈತರು ಭೂಮಿಯ ಫಲವತ್ತತೆ ಕಾಪಾಡುವ ನಿಟ್ಟಿನಲ್ಲಿ ಸಾವಯವ ಕೃಷಿಯನ್ನೇ ಮಾಡಬೇಕಾಗಿದೆ. ನಿಗದಿತ ಆದಾಯದಲ್ಲಿ ಸ್ವಲ್ಪ ಪ್ರಮಾಣವನ್ನು ಕೃಷಿ ಬಂಡವಾಳವಾಗಿ ತೆಗೆದಿಟ್ಟಲ್ಲಿ ಕೃಷಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.
-ಮಾಧವ ಗೌಡ, ಪ್ರಗತಿಪರ ಕೃಷಿಕ
ಜಗದೀಶ್ ಅಜೆಕಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.