ಆರ್ಥಿಕ ಕ್ರಾಂತಿಯೊಂದಿಗೆ ಖಾಸಗಿ ಡೈರಿಗಳಿಗೆ ಸಡ್ಡು ಹೊಡೆದ ಸಂಸ್ಥೆ
ಉಳಿಯಾರಗೋಳಿ ಹಾಲು ಉತ್ಪಾದಕರ ಸಹಕಾರ ಸಂಘ
Team Udayavani, Feb 25, 2020, 5:11 AM IST
ಹೈನುಗಾರರ ಅಭಿವೃದ್ಧಿಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ಸ್ಥಾಪಿತವಾದ ಉಳಿಯಾರಗೋಳಿ ಹಾಲು ಉತ್ಪಾದಕರ ಸಂಘ. ಇದು ಏರಿದ ಎತ್ತರ ಇತರ ಸಹಕಾರಿ ಸಂಘಗಳಿಗೂ ಮಾದರಿ.
ಕಾಪು: ಖಾಸಗಿ ಡೈರಿಗಳ ಶೋಷಣೆಯಿಂದ ಬಳಲುತ್ತಿದ್ದ ಮತ್ತು ಶ್ರಮಕ್ಕೆ ಅನುಗುಣವಾಗಿ ಆದಾಯಗಳಿಸದಿದ್ದಾಗ ಹೈನುಗಾರರನ್ನು ಸಂಕಷ್ಟದಿಂದ ಪಾರು ಮಾಡಲು ಹುಟ್ಟಿಕೊಂಡದ್ದೇ ಉಳಿಯಾರಗೋಳಿ ಹಾಲು ಉತ್ಪಾದಕರ ಸಂಘ.
ಊರವರ ಕನಸು
ಹೈನುಗಾರಿಕೆಯನ್ನು ಪ್ರಮುಖ ಕಸುಬನ್ನಾಗಿಸುವುದು ಮತ್ತು ಸ್ಥಳೀಯವಾಗಿ ಆರ್ಥಿಕಾಭಿವೃದ್ಧಿಗೆ ಪ್ರೇರಣೆ ನೀಡುವ ಉದ್ದೇಶದಿಂದ ಕಾಪು ದಿವಾಕರ ಶೆಟ್ಟಿ, ನಡಿಕೆರೆ ರತ್ನಾಕರ ಶೆಟ್ಟಿ, ರವೀಂದ್ರ ಎಂ., ಶ್ರೀಧರ ಶೇಣವ, ಪುರಂದರ್ ಭಟ್ ಮೊದಲಾದ ಸಮಾನ ಮನಸ್ಕರು ಸೇರಿಕೊಂಡು ಸಂಘ ಕಟ್ಟಲು ಯೋಜಿಸಿದರು. ಅದರಂತೆ ಹಾಲು ಉತ್ಪಾದಕ ಸಂಘ 1990 ನ.22ರಂದು ಜನ್ಮ ಪಡೆಯಿತು. ಪ್ರಥಮ ದಿನ 12 ಮಂದಿ ಸದಸ್ಯರ ಮೂಲಕ 21 ಲೀಟರ್ ಹಾಲು ಸಂಗ್ರಹವಾಗಿದ್ದು, ಪ್ರಸ್ತುತ 194 ಸದಸ್ಯರಿಂದ ಸರಾಸರಿ 600 ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಸಂಘ ಈಗ ಕೈಪುಂಜಾಲಿನಲ್ಲಿ ಉಪಕೇಂದ್ರವನ್ನೂ ಹೊಂದಿದೆ.
ಯೋಜನೆಗಳು
ಸದಸ್ಯರ ರಾಸುಗಳಿಗೆ ಉಚಿತ ಜಂತುಹುಳ ನಿವಾರಣಾ ಔಷಧಿ, ಕಾಲು ಬಾಯಿ ಜ್ವರ ನಿರೋಧಕ ಲಸಿಕೆ ಕಾರ್ಯಕ್ರಮ, ಶುದ್ಧ ಹಾಲು ಉತ್ಪಾದನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಪ್ರತೀ ವರ್ಷ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ಹತ್ತು ಜನ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಗುತ್ತದೆ. ಸ್ಥಳೀಯ ದಂಡತೀರ್ಥ ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ನೀಡಲಾಗುತ್ತಿದೆ. ಅತಿ ಹೆಚ್ಚು ಅಂಕ ಪಡೆದ ದಂಡತೀರ್ಥ ಮತ್ತು ಕೈಪುಂಜಾಲು ಕನ್ನಡ ಮಾಧ್ಯಮ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿಗಳು ಮತ್ತು ಕ್ರೀಡೆಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕೃತ ಸದಸ್ಯರ ಮಕ್ಕಳನ್ನು ಸಮ್ಮಾನಿಸಲಾಗುತ್ತಿದೆ. ಇದರೊಂದಿಗೆ ಸಾವಯವ ಕೃಷಿಕರನ್ನೂ ಸಮ್ಮಾನಿಸುವ ಕ್ರಮವನ್ನು ಸಂಘ ಹೊಂದಿದೆ.
ಪ್ರಸ್ತುತ ಸ್ಥಿತಿಗತಿ
ಸಂಘದ ಮೂಲಕವಾಗಿ ಸದಸ್ಯರಿಗೆ ಒಕ್ಕೂಟದಿಂದ ಹಾಗೂ ಸರಕಾರದಿಂದ ಸಿಗುವ ಅನುದಾನ ಹಾಗೂ ಸವಲತ್ತುಗಳನ್ನು ನಿರಂತರವಾಗಿ ಒದಗಿಸಿಕೊಂಡು ಬರಲಾಗುತ್ತಿದೆ. ನಿರಂತರ ಲಾಭ ಗಳಿಸಿ ಬೋನಸ್ ಹಾಗೂ ಡಿವಿಡೆಂಡ್ ವಿತರಿಸುತ್ತಿದೆ. ಲೆಕ್ಕ ಪರಿಶೋಧನ ವರದಿಯಲ್ಲಿ ಎ ದರ್ಜೆಯ ತರಗತಿಯನ್ನು ಹೊಂದಿರುತ್ತದೆ. ಸೊಸೈಟಿಯಲ್ಲಿ ಹಾಲಿ 194 ಸದಸ್ಯರಿದ್ದು 39,40,000 ರೂ. ಪಾಲು ಬಂಡವಾಳ ಹೊಂದಿದೆ. 1 ಕೋಟಿ ರೂ. ಮಿಕ್ಕಿ ವಾರ್ಷಿಕ ವಹಿವಾಟು ನಡೆಸುತ್ತಿದೆ.
ನಿರಂತರ ಅಭಿವೃದ್ಧಿ:
1998ರವರೆಗೆ ಉಳಿಯಾರಗೋಳಿ ಗ್ರಾ.ಪಂ.ನ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದ ಸಂಘವು 1998ರ ಮೇ 16ರಂದು ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. 2003ರಲ್ಲಿ ದಕ್ಷಿಣ ಕನ್ನಡ ಹಾಲು ಒಕ್ಕೂಟದ ಮೂಲಕವಾಗಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಪ್ರಾರಂಭಿಸಲ್ಪಟ್ಟ ಪ್ರಥಮ ಹತ್ತು ಶೀತಲೀಕರಣ ಘಟಕಗಳ ಪೈಕಿ ಉಳಿಯಾರಗೋಳಿ ಡೈರಿಯಲ್ಲಿ ಮೂರನೇ ಘಟಕವನ್ನು ಪ್ರಾರಂಭಿಸಲಾಯಿತು. 2007ರಲ್ಲಿ ಸಂಘದ ಪ್ರಥಮ ಮಹಡಿಯಲ್ಲಿ ಸಭಾಭವನ ನಿರ್ಮಾಣವಾಗಿದ್ದು ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆದಿವೆ.
ಪ್ರಶಸ್ತಿ -ಪುರಸ್ಕಾರ
ಸಂಘವು 6 ಬಾರಿ ಉಡುಪಿ ತಾಲೂಕಿನ ಉತ್ತಮ ಗುಣಮಟ್ಟದ ಹಾಲು ಪೂರೈಸಿದ್ದಕ್ಕಾಗಿ ಪ್ರಶಸ್ತಿಯನ್ನು ಗಳಿಸಿದೆ. 2007-08ರಲ್ಲಿ ಸಂಘದ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ ಅವರಿಗೆ ಒಕ್ಕೂಟದ ಉತ್ತಮ ಹೈನುಗಾರ ತೃತೀಯ ಪ್ರಶಸ್ತಿ, 2009-10ರಲ್ಲಿ ಡಿ.ಸಿ.ಸಿ ಬ್ಯಾಂಕ್‌ನಿಂದ ಸಾಧನಾ ಪ್ರಶಸ್ತಿ ಲಭಿಸಿದೆ.
ಸೊಸೈಟಿಯ ಆರಂಭ ಕಾಲದಲ್ಲಿ ನಾವು ಹೊಂದಿದ್ದ ಉದ್ದೇಶವನ್ನು ಹಂತ ಹಂತವಾಗಿ ಈಡೇರಿಸಿಕೊಂಡು ಬರಲಾಗಿದೆ. ಸಂಘದ ಮೂಲಕವಾಗಿ ಹೈನುಗಾರಿಕೆ ಜೊತೆಗೆ ಸಾಮಾಜಿಕ ಅಭಿವೃದ್ಧಿಯ ಕೆಲಸಗಳಿಗೂ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಗ್ರಾಮೀಣ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಲು ಮತ್ತು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಒತ್ತು ನೀಡುತ್ತಿದ್ದೇವೆ.
ದಿವಾಕರ ಶೆಟ್ಟಿ ಅಧ್ಯಕ್ಷರು
ಅಧ್ಯಕ್ಷರು
ಯು.ಆರ್. ಆನಂದ ರಾವ್, ನಡಿಕೆರೆ ರತ್ನಾಕರ ಶೆಟ್ಟಿ, ಕಾಪು ದಿವಾಕರ ಶೆಟ್ಟಿ (ಹಾಲಿ)
ಕಾರ್ಯದರ್ಶಿಗಳು
ಕಾರ್ಯದರ್ಶಿ : ಕಳೆದ 30 ವರ್ಷಗಳಿಂದ ರಾಘು (ಹಾಲಿ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.