ಮೀನು ಹಿಡಿಯುತ್ತಿದ್ದ ಕೈಗಳಲ್ಲಿ ದೇಶ ರಕ್ಷಣೆಯ ಬಂದೂಕು
Team Udayavani, Feb 25, 2019, 1:00 AM IST
ಮಲ್ಪೆ: ಮಲ್ಪೆ ಬಂದರಿನಲ್ಲಿ ದೋಣಿಯಿಂದ ಮೀನು ಇಳಿಸುತ್ತಿದ್ದ, ನಾಡ ದೋಣಿಯಲ್ಲಿ ಸಮುದ್ರಕ್ಕೆ ತೆರಳಿ ಮೀನು ಹಿಡಿಯುತ್ತಿದ್ದ ವಸಂತ ಅಮೀನ್ ಇಂದು ಬಂದೂಕು ಹಿಡಿದು ದೇಶ ಕಾಯುವ ಯೋಧರಾಗಿದ್ದಾರೆ.
ಸಿಪಾಯಿ ಯಾಗಿ ಸುದೀರ್ಘ 17 ವರ್ಷಗಳನ್ನು ಕಳೆದಿದ್ದಾರೆ. ಉಡುಪಿ ತಾಲೂಕಿನ ತೊಟ್ಟಂ ವಡಭಾಂಡೇಶ್ವರ ಬೇಬಿ ಅಮೀನ್ ಮತ್ತು ಕೃಷ್ಣಪ್ಪ ಕೋಟ್ಯಾನ್ ದಂಪತಿಯ ಐವರು ಮಕ್ಕಳ ಪೈಕಿ ವಸಂತ ಅಮೀನ್ ಮೂರನೆಯವರು. ಮೀನುಗಾರ ಕುಟುಂಬ. ವಸಂತರು ವಡಭಾಂಡೇಶ್ವರ ಗಾಂಧಿ ಶತಾಬ್ದಿ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪೂರೈಸಿದ ಬಳಿಕ ಕುಲಕಸುಬಿಗೆ ಹೆಗಲು ಕೊಟ್ಟರು. ಸುಮಾರು 6 ವರ್ಷ ಮಲ್ಪೆಯ ಮೀನುಗಾರಿಕೆ ಬಂದರಿನಲ್ಲಿ “ಕನ್ನಿ ಕೆಲಸ’, ಅಂದರೆ ಬೋಟಿನಿಂದ ಮೀನು ಇಳಿಸುವ ಕಾಯಕಕ್ಕೆ ಸೇರಿಕೊಂಡರು. ಜತೆಗೆ ನಾಡದೋಣಿಯಲ್ಲಿ ಸಮುದ್ರಕ್ಕೆ ತೆರಳಿ ಮೀನು ಹಿಡಿಯುತ್ತಿದ್ದರು. ವಸಂತ ಅಮೀನರಿಗೆ ಎಳವೆಯಿಂದಲೇ ಸೇನೆ ಎಂದರೆ ಆಸಕ್ತಿ, ಕುತೂಹಲ. ಮಿಲಿಟರಿ ಸೇರುವ ಆಸೆ ಆಗಲೇ ಇತ್ತು. ದೊಡ್ಡವರಾದ ಮೇಲೆ ಏನಾಗುತ್ತೀರಿ ಎಂದು ಮೇಷ್ಟ್ರು ಕೇಳಿದ ಪ್ರಶ್ನೆಗೆ “ದೇಶ ಸೇವೆ ಮಾಡುವ ಯೋಧನಾಗುತ್ತೇನೆ’ ಎಂದು ಉತ್ತರಿಸುತ್ತಿದ್ದ ಬಾಲಕ.
ಗೆಳೆಯರ ಪ್ರೋತ್ಸಾಹ
ಶಿಕ್ಷಣವನ್ನು ಪ್ರೌಢಶಾಲೆ ಹಂತದಲ್ಲಿ ನಿಲ್ಲಿಸಿ ಕಾಯಕದಲ್ಲಿ ತೊಡಗಿದ್ದ ವಸಂತರು ಸೈನಿಕನಾಗುವ ಬಯಕೆಯನ್ನು ಗೆಳೆಯರಲ್ಲಿ ಆಗಾಗ ಹೇಳಿಕೊಳ್ಳು ತ್ತಿದ್ದರು. ಆದರೆ ಸ್ಪಷ್ಟ ದಾರಿ ಗೊತ್ತಿರಲಿಲ್ಲ. ಒಂದು ದಿನ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಸೇನಾ ನೇಮಕಾತಿ ರ್ಯಾಲಿಯ ಬಗ್ಗೆ ಸ್ನೇಹಿತ ಶೈಲೇಶ್ ಕುಮಾರ್ ಗಮನ ಸೆಳೆದರು. ಅದಕ್ಕೆ ಬೇಕಾದ ಅರ್ಜಿಯನ್ನು ಅವರೇ ತಂದು ಭರ್ತಿ ಮಾಡಿ ಕಳುಹಿಸಿಕೊಟ್ಟಿದ್ದರು.
ವಸಂತ ಅಮೀನ್ 2002ರ ಜೂನ್‌ನಲ್ಲಿ ಮೈಸೂರಿನಲ್ಲಿ ನಡೆದ ಸೇನಾ ನೇಮಕಾತಿಯಲ್ಲಿ ಭಾಗ
ವಹಿಸಿ ಮೊದಲ ಸುತ್ತಿನಲ್ಲೇ ಆಯ್ಕೆಯಾದರು. ಬಳಿಕ ಜಮ್ಮುವಿನ ನುಡಂಪೂರಿನಲ್ಲಿ ತರಬೇತಿ ಪಡೆದು, ಅಲ್ಲೇ ಸೇನೆಗೆ ನಿಯೋಜನೆಗೊಂಡರು. ಆ ಬಳಿಕ ಪಶ್ಚಿಮ ಬಂಗಾಲ, ಮಿಜೋರಾಂ, ಅಸ್ಸಾಂಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಈಗ ಐದು ವರ್ಷಗಳಿಂದ ಗುಜರಾತಿನ ಗಾಂಧಿನಗರದಲ್ಲಿದ್ದಾರೆ.
ಉಗ್ರರ ಜತೆ ಸೆಣಸಾಟದ ನೆನಪು
2004ರ ಆಗಸ್ಟ್ 14ರಂದು ಜಮ್ಮು-ಕಾಶ್ಮೀರದಲ್ಲಿ ನಡೆದ ಘಟನೆ. ಶಿಬಿರದಲ್ಲಿದ್ದಾಗ ರಾತ್ರಿ ಸುಮಾರು 11 ಗಂಟೆ ವೇಳೆಗೆ ಉಗ್ರರು ಹಠಾತ್ತನೆ ಗುಂಡಿನ ದಾಳಿ ಆರಂಭಿಸಿದರು. ನಾವು ತತ್‌ಕ್ಷಣ ಪ್ರತಿದಾಳಿ ನಡೆಸಿದೆವು. ಸುತ್ತಲೂ ಪೂರ್ತಿ ಕತ್ತಲು, ಏನೂ ಕಾಣಿಸುತ್ತಿರಲಿಲ್ಲ. ಕೇವಲ ಗುಂಡು ಸಿಡಿಯುವುದು ಮಾತ್ರ ಕಾಣಿಸುತ್ತಿತ್ತು. ನಾವು ಸುಮಾರು 20 ಮಂದಿ ಯೋಧರಿದ್ದೆವು. ಒಂದೂವರೆ ಗಂಟೆ ಕಾಲ ಗುಂಡಿನ ಚಕಮಕಿ ನಡೆಯಿತು. ಉಗ್ರರು ಕೊನೆಗೆ ಪಲಾಯನ ಹೂಡಿದರು – ಇದು ವಸಂತ ಅಮೀನ್ ಅವರ ರಣಾಂಗಣದ ನೆನಪು.
ಮತ್ತೂಂದು ಘಟನೆ 2018ರದು. ನವೆಂಬರ್ ತಿಂಗಳಿನಲ್ಲಿ ಛತ್ತೀಸ್‌ಗಢದಲ್ಲಿ ಚುನಾವಣಾ ಕರ್ತವ್ಯ ದಲ್ಲಿದ್ದೆವು. ಅಲ್ಲಿನ ಕಾಂಚೇರ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ನಮ್ಮನ್ನು ನಿಯೋಜಿಸಲಾಗಿತ್ತು. ನದಿ ಸಮೀಪದ ಅದು ನಕ್ಸಲ್ ಬಾಧಿತ ಪ್ರದೇಶ. ಬೆಳಗ್ಗೆ ನಾವು ಮತದಾನ ಕೇಂದ್ರಕ್ಕೆ ಹೋಗಬೇಕೆನ್ನುವಾಗ ನಕ್ಸಲರು ಬಾಂಬ್ ಸಿಡಿಸಿ ಗುಂಡಿನ ದಾಳಿ ನಡೆಸಿದರು. ನಾವು ಪ್ರತ್ಯುತ್ತರಿಸಿದೆವು. ಈ ವೇಳೆ ನಮ್ಮ ಕಮಾಂಡರ್‌ಗೆ ಗುಂಡು ತಗುಲಿ ನೆಲಕ್ಕುರುಳಿದರು. ಗುಂಡಿನ ದಾಳಿ ಮುಂದುವರಿದಿದ್ದುದರಿಂದ ಅವ ರನ್ನು ರಕ್ಷಿಸಲಾಗಲಿಲ್ಲ. ದಾಳಿ ನಿಂತಾಗ ಕಮಾಂಡರ್ ಹುತಾತ್ಮರಾಗಿದ್ದರು- ಈಗಲೂ ವಸಂತ ಅಮೀನರಿಗೆ ನೋವಾಗಿ ಕಾಡುವ ಘಟನೆಯಿದು.
ನನಗೂ ಸೈನ್ಯಕ್ಕೆ ಸೇರಬೇಕೆಂದು ಆಸೆಯಾಗುತ್ತದೆ
ಯೋಧನ ಪತ್ನಿ ಎನ್ನುವುದಕ್ಕೆ ಹೆಮ್ಮೆಯಾಗುತ್ತಿದೆ. ಜನರು ಗೌರವದಿಂದ ಕಾಣುತ್ತಾರೆ, ಮಾತನಾಡು ತ್ತಾರೆ. ಆಗ ನಾನೂ ಸೇನೆಗೆ ಸೇರಿ ದೇಶ ಸೇವೆ ಮಾಡಬೇಕಿತ್ತು ಅನಿಸುತ್ತದೆ. ಮದುವೆಯಾಗಿ 10 ವರ್ಷ ಆಗುತ್ತಾ ಬಂತು. ಇದುವರೆಗೆ ಒಮ್ಮೆಯೂ ಪತಿಯ ಜತೆಯಲ್ಲಿ ಮಗಳು ತನ್ವಿಯ ಹುಟ್ಟುಹಬ್ಬ, ಮದುವೆ ವರ್ಷಾಚರಣೆ ಅಥವಾ ದೀಪಾವಳಿ ಆಚರಿಸಲಾಗಲಿಲ್ಲ. ಹುಟ್ಟುಹಬ್ಬ ಆಚರಿಸುವ ವೇಳೆ “ಡ್ಯಾಡಿ ಬರುವುದಿಲ್ಲವಾ’ ಎಂದು ಮಗಳು ಕೇಳುವಾಗ ಸ್ವಲ್ಪ ದುಃಖವಾಗುತ್ತದೆ.
– ರೋಶಿನಿ, ವಸಂತ ಅವರ ಪತ್ನಿ
ಜನ ಗೌರವವೇ ಹೆಮ್ಮೆ
ಶಾಲಾ ದಿನಗಳಿಂದಲೇ
ಸೇನೆ ಸೇರುವ ಬಯಕೆ ಇತ್ತು. ಆದರೆ ದಾರಿ ತಿಳಿದಿರಲಿಲ್ಲ.ಬಡತನದಿಂದಾಗಿ ಶಿಕ್ಷಣ ವನ್ನು ಮೊಟುಕುಗೊಳಿಸಿ ಕುಲಕಸುಬು ಮಾಡುತ್ತಿದ್ದೆ. ಸೇನೆ ಸೇರುವ ಬಾಲ್ಯದ ಬಯಕೆ ನನ್ನ ಕೈ ಹಿಡಿಯಿತು. ಈಗ ನಾಲ್ಕು ಜನ ನನ್ನನ್ನು ಗೌರವದಿಂದ ಕಾಣುತ್ತಾರೆ, ಅದೇ ನನಗೆ ಹೆಮ್ಮೆ.
-ವಸಂತ ಅಮೀನ್, ಭಾರತೀಯ ಯೋಧ
ಖುಷಿ ಮತ್ತು ಹೆದರಿಕೆ
ಮಗ ನಮ್ಮಿಂದ ದೂರ ಹೋಗಿ ಅಂತಹ ಕೆಲಸಕ್ಕೆ ಸೇರುವ ಬಗ್ಗೆ ಮೊದಲು ಅಸಮಾಧಾನವಿತ್ತು. ಈಗ ಸೈನಿಕನಾಗಿ ದೇಶ ಸೇವೆ ಮಾಡುತ್ತಿದ್ದಾನೆ ಎಂಬ ಬಗ್ಗೆ ಹೆಮ್ಮೆಯಿದೆ. ಜತೆಗೆ, ಕೆಲವು ಘಟನೆಗಳ ಬಗ್ಗೆ ಕೇಳುವಾಗ ಮಗ ಹೇಗಿದ್ದಾನೋ ಏನು ಮಾಡುತ್ತಿದ್ದಾನೋ ಎಂದು ಹೆದರಿಕೆಯೂ ಆಗುತ್ತದೆ.
– ಬೇಬಿ ಅಮೀನ್, ವಸಂತ ಅಮೀನರ ತಾಯಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Kundapura: ಅಕಾಲಿಕ ಮಳೆ; ಭತ್ತ ಕಟಾವಿಗೆ ಅಡ್ಡಿ; ಬೆಳೆ ನಾಶದ ಭೀತಿಯಲ್ಲಿ ರೈತರು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
MUST WATCH
ಹೊಸ ಸೇರ್ಪಡೆ
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.