ವ್ಯರ್ಥ್ಯ ಬಾಟಲ್‌ಗಳನ್ನು ಹೀಗೂ ಬಳಸಬಹುದೆಂದು ತೋರಿಸಿಕೊಟ್ಟ ದಂಪತಿ
Team Udayavani, Feb 2, 2020, 5:27 AM IST
ಉಡುಪಿ: ಸರಕಾರಿ ಸೇವೆಯಲ್ಲಿ ಇರುವ ದಂಪತಿ ಪ್ಲಾಸ್ಟಿಕ್ ಮರುಬಳಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಎಲ್ಲೆಂದರಲ್ಲಿ ಎಸೆಯುವ ನಿರುಪಯುಕ್ತ ಬಾಟಲಿಗಳನ್ನು ಬಳಸಿಕೊಂಡು ವಿಭಿನ್ನ ರೀತಿಯಲ್ಲಿ ಪ್ಲಾಸ್ಟಿಕ್ ಗಾರ್ಡ್‌ನ್ ನಿರ್ಮಿಸಿದ್ದಾರೆ.
ಹಸುರು- ಶ್ರೀಮಂತಿಕೆ
ಮಲ್ಪೆಯ ಕಿದಿಯೂರು ಗ್ರಾಮದ ನಿವಾಸಿಯಾದ ಯತೀಶ್ ಹಾಗೂ ಅಶ್ವಿತಾ ದಂಪತಿ ಮನೆಯಲ್ಲಿ ಬಳಕೆಯಾದ ಪ್ಲಾಸ್ಟಿಕ್ ಬಾಟಲಿಗಳಿಗೆ ಹಸಿರು ಸ್ಪರ್ಶ ನೀಡಿದ್ದಾರೆ. ತಂಪು ಪಾನೀಯ ಬಾಟಲಿಗಳನ್ನು ಆಕರ್ಷಕವಾಗಿ ಕತ್ತರಿಸಿ ಆಲಂಕಾರಿಕ, ಹೂವಿನ ಗಿಡ, ಗಿಡ ಮೂಲಿಕೆ, ಆಯ್ದ ತರಕಾರಿ ಗಿಡಗಳನ್ನು ಬೆಳೆಸುವ ಪಾತ್ರೆಯಾಗಿ ಪರಿವರ್ತಿಸಿದ್ದಾರೆ. 50ಕ್ಕೂ ಅಧಿಕ ಬಾಟಲಿ ಗಾರ್ಡನ್‌ನಲ್ಲಿ 30 ಬಗೆಯ ಗಿಡಗಳನ್ನು ಬೆಳೆಸಿದ್ದಾರೆ.
ಪರಿಸರ ಕಾಳಜಿ
ಯತೀಶ್ ಅವರು ಕಳೆದ ಅನೇಕ ವರ್ಷಗಳಿಂದ ಅಪರ ಜಿಲ್ಲಾಧಿಕಾರಿಗಳ ಆಪ್ತ ಕಾರ್ಯದರ್ಶಿಯಾಗಿ ಉಡುಪಿ ಡಿಸಿ ಕಚೇರಿಯಲ್ಲಿ ಹಾಗೂ ಪತ್ನಿ ಅಶ್ವಿತಾ ಸರಕಾರಿ ಶಾಲೆ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪರಿಸರದ ಬಗ್ಗೆ ಅಪಾರ ಕಾಳಜಿ ಇರುವ ದಂಪತಿ ಪ್ಲಾಸ್ಟಿಕ್ ಮರುಬಳಕೆ ನಿಟ್ಟಿನಲ್ಲಿ ಬಾಟಲಿ ಗಾರ್ಡನ್ ನಿರ್ಮಿಸಿದ್ದಾರೆ. ಅಂದದ ಜತೆಗೆ ಪರಿಸರ ಕಾಳಜಿಯೂ ಇದೆ.
ಸಾರ್ವಜನಿಕರಿಗೂ ಅರಿವು
ಶಿಕ್ಷಕಿ ಅಶ್ವಿತಾ ಶಾಲಾ ಮಕ್ಕಳಿಗೆ ಪ್ಲಾಸ್ಟಿಕ್ ಮರುಬಳಕೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮೊದಲ ಹಂತದಲ್ಲಿ ತಮ್ಮ ಮನೆಯಲ್ಲಿ ಬಾಟಲ್ ಗಾರ್ಡನ್ ಕೃಷಿ ಮಾಡಿ ಯಶಸ್ಸು ಕಂಡಿದ್ದು, ಇದೀಗ ಸ್ವತ್ಛತೆ ಹಾಗೂ ಪ್ಲಾಸ್ಟಿಕ್ ಮರುಬಳಕೆ ಕುರಿತು ಸಾರ್ವಜನಿಕರಿಗೆ ಮತ್ತು ಮಕ್ಕಳಿಗೆ ಅರಿವು ಮೂಡಿಸುತ್ತಿದ್ದಾರೆ.ಈ ಜೋಡಿ ಬಿಡುವಿನ ಸಮಯವನ್ನು ಬಳಸಿಕೊಂಡು ಬಾಟಲ್ ಗಾರ್ಡನ್ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಬಾಟಲಿ ಗಾರ್ಡನ್ ತಯಾರಿಕೆ ಹೇಗೆ?
ಪ್ಲಾಸ್ಟಿಕ್ ಬಾಟಲಿಗಳನ್ನು ಭಿನ್ನ ಅಳತೆ-ಆಕಾರದಲ್ಲಿ ಕತ್ತರಿಸಿ, ಮನೆ ತಾರಸಿಗೆ ಉದ್ದವಾದ ಹಗ್ಗಕ್ಕೆ ಬಾಟಲಿಗಳನ್ನು ಒಂದರ ಮೇಲೊಂದರಂತೆ ಒಂದು ನಿರ್ದಿಷ್ಟ ಅಂತರದಲ್ಲಿ ಕಟ್ಟಿ ತೂಗು ಬೀಳುವಂತೆ ನೇತುಹಾಕಬೇಕು. ಬಳಿಕ ಕೆಂಪು ಮಣ್ಣು ಮತ್ತು ಮರಳು, ತೆಂಗಿನ ನಾರಿನ ಹುಡಿ, ಗೊಬ್ಬರ ತುಂಬಿದ ಪ್ಲಾಸ್ಟಿಕ್ ಬಾಟಲಿಯಲ್ಲಿ ಕಡಿಮೆ ಬೇರು ಗಿಡವನ್ನು ನೆಡಬೇಕು. ಒಂದೂವರೆ ತಿಂಗಳಲ್ಲಿ ಗಿಡಗಳು ಚಿಗುರಿ ಹೂವು ಬಿಡಲು ಪ್ರಾರಂಭವಾಗುತ್ತದೆ. ಕಡಿಮೆ ಖರ್ಚಿನಲ್ಲಿ ಪರಿಶ್ರಮವಿಲ್ಲದೆ ಬಾಟಲಿ ಗಾರ್ಡನ್ ನಿರ್ಮಿಸಬಹುದು.
ಪ್ಲಾಸ್ಟಿಕ್‌ಗೆ ಹಸುರು ಸ್ಪರ್ಶ
ಬಿಸಿಲ ಬೇಗೆ ತಣಿಸಲಿಕ್ಕೆ ತಂಪುಪಾನೀಯಗಳ ಮೊರೆಹೋಗುತ್ತೇವೆ. ಅನಂತರ ಎಸೆಯುವುದರಿಂದ ಪರಿಸರ ಮಾಲಿನ್ಯವಾಗುತ್ತದೆ. ಇದನ್ನು ತಡೆಗಟ್ಟಿ ಮನೆಯ ಅಂದವನ್ನೂ ಹೆಚ್ಚಿಸುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ಬಾಟಲಿಗಳಿಗೆ ಹಸುರು ಪರಿಸರ ಸ್ಪರ್ಶ ನೀಡಿದ್ದೇವೆ. ಬಾಟಲಿ ಗಾರ್ಡನ್‌ಗೆ ಪತ್ನಿ ಹಾಗೂ ಮಗಳು ಧನ್ವಿ ಸಹಕಾರ ನೀಡುತ್ತಿದ್ದಾರೆ.
-ಯತೀಶ್,
ಕಿದಿಯೂರು ನಿವಾಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.