ಅಂಗವೈಕಲ್ಯಕ್ಕೊಳಗಾದರೂ ಹೈನುಗಾರಿಕೆ ಕಾಯಕ
ಸ್ವಾವಲಂಬಿಯಾಗಿ ಯುವ ಸಮುದಾಯಕ್ಕೆ ಮಾದರಿ ಕೃಷಿಕ ಸಂತೋಷ್ ಪೂಜಾರಿ
Team Udayavani, Nov 28, 2019, 4:30 AM IST
ಅಜೆಕಾರು: ಸತತ ಪರಿಶ್ರಮ ದೊಂದಿಗೆ ಜೀವನದಲ್ಲಿ ಗುರಿ ಮುಟ್ಟ ಬಹುದು ಎಂಬುದನ್ನು ತನ್ನ ಸಾಧನೆಯ ಮೂಲಕ ಅಂಡಾರಿನ ಸಂತೋಷ್ ಪೂಜಾರಿ ತೋರಿಸಿಕೊಟ್ಟಿದ್ದಾರೆ ಕೆಲ ವರ್ಷಗಳ ಹಿಂದೆ ಅಪಘಾತವೊಂದರಲ್ಲಿ ಕಾಲು ಕಳೆದುಕೊಂಡು ಅಂಗವೈಕಲ್ಯಕ್ಕೆ ತುತ್ತಾದರೂ ಇತರರಿಗೆ ಹೊರೆಯಾಗಿ ಜೀವಿಸದೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಅಂಗವೈಕಲ್ಯ ಮೆಟ್ಟಿನಿಂತು ಸ್ವಾವಲಂಬಿಯಾಗಿ ಯುವ ಸಮುದಾಯಕ್ಕೆ ಮಾದರಿ ಕೃಷಿಕರಾಗಿದ್ದಾರೆ.
ಹಾಲು ಮಾರಾಟ
ಕಾರ್ಕಳ ತಾಲೂಕಿನ ಅಂಡಾರು ಗ್ರಾಮದ ನಿವಾಸಿಯಾದ ಇವರು, ಸಣ್ಣ ವಯಸ್ಸಿನಿಂದಲೇ ಕೃಷಿಯಲ್ಲಿ ಆಸಕ್ತಿ ಬೆಳೆಸಿಕೊಂಡವರು. ಎಸೆಸೆಲ್ಸಿ ವಿದ್ಯಾಭ್ಯಾಸ ಮೊಟಕುಗೊಳಿಸಿ ಜೀವನಕ್ಕಾಗಿ ವಿದೇಶಕ್ಕೆ ಕೆಲಸಕ್ಕೆ ತೆರಳಿದ್ದರೂ ವಿಧಿಯಾಟದಲ್ಲಿ ತನ್ನ ಕಾಲು ಕಳೆದುಕೊಂಡು ಊರಿಗೆ ಬರುವಂತಾಯಿತು. ಜೀವನ ಪೂರ್ತಿ ಅಂಗವೈಕಲ್ಯಕ್ಕೆ ಒಳಗಾದರೂ ಈ ಬಗ್ಗೆ ಚಿಂತಿಸದೆ ಹೈನುಗಾರಿಕೆಯತ್ತ ಗಮನ ಹರಿಸಿ ದಾಖಲೆಯ ಪ್ರಮಾಣದಲ್ಲಿ ಈಗ ಹಾಲು ಮಾರಾಟ ಮಾಡುತ್ತಿದ್ದಾರೆ.
ಆಧುನಿಕ ಹೈನುಗಾರಿಕೆ ಪದ್ಧತಿ
ಹಸುಗಳ ಸ್ವತ್ಛತೆ, ಆಹಾರ, ಲಾಲನೆ ಪಾಲನೆ ಮಾಡುವುದು ಇವರ ದಿನನಿತ್ಯದ ಕಾಯಕ. ಹೈನುಗಾರಿಕೆಯಲ್ಲಿ ಲಾಭ ಗಳಿಸಬೇಕಾದಲ್ಲಿ ಗುಣಮಟ್ಟದ ಹಸು ಬೇಕಾಗುವುದನ್ನು ಮನಗಂಡ ಇವರು ಎಚ್‌ಎಫ್, ಜರ್ಸಿ, ಗೀರ್ ಜಾತಿಯ ದನಗಳನ್ನು ಸಾಕುತ್ತಿದ್ದಾರೆ. ಇವರು 8 ಲೀಟರ್ ಹಾಲಿನಿಂದ ಹೈನುಗಾರಿಕೆ ಆರಂಭಿಸಿ ಪ್ರಸ್ತುತ ಸುಮಾರು 12 ದನಗಳನ್ನು ಸಾಕುತ್ತಿದ್ದು ದಿನವೊಂದಕ್ಕೆ ಸರಾಸರಿ 100 ಲೀಟರ್ ಹಾಲನ್ನು ಡೇರಿಗೆ ನೀಡುತ್ತಿದ್ದಾರೆ. ಕಳೆದ 5 ವರ್ಷಗಳಿಂದ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಆಧುನಿಕ ಹೈನುಗಾರಿಕೆ ಪದ್ಧತಿಯಲ್ಲಿ ಲಾಭ ಗಳಿಸುತ್ತಿದ್ದಾರೆ.
ಆಧುನಿಕ ಹಟ್ಟಿ ನಿರ್ಮಾಣ
ತಮ್ಮ ಕೃಷಿ ಭೂಮಿಯಲ್ಲಿ ಹಸಿರುಮೇವು ಬೆಳೆಸುವುದಲ್ಲದೆ ಜೋಳ, ನೆಲಕಡಲೆ, ಹೆಸರುಕಾಳು, ಗೋಧಿ ಭೂಸಾ, ಕಡಲೆ ಹೊಟ್ಟು, ಹತ್ತಿಕಾಳಿನಹಿಂಡಿ, ಶೇಂಗಾ ಹಿಂಡಿ, ಅಕ್ಕಿ ತವಡು, ಇನ್ನಿತ್ತರ ಆಹಾರಗಳನ್ನು ನೀಡುತ್ತಾರೆ. ಹಾಲು ಕರೆಯಲು ಯಂತ್ರವನ್ನು ಉಪಯೋಗಿಸುತ್ತಿದ್ದಾರೆ. ಆಧುನಿಕ ಮಾದರಿಯ ಹಟ್ಟಿ ನಿರ್ಮಿಸಿ ಫ್ಯಾನ್ ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ. ಇದರಿಂದ ದನವು ದಿನವೊಂದಕ್ಕೆ ಸರಾಸರಿ 20-25 ಲೀಟರ್ ಹಾಲು ನೀಡುತ್ತದೆ ಎಂದು ಸಂತೋಷ್ ಹೇಳುತ್ತಾರೆ. ತಿಂಗಳಿಗೆ 3000 ಲೀಟರ್ ಹಾಲನ್ನು ಡೇರಿಗೆ ಹಾಕಿ 90 ಸಾವಿರ ಆದಾಯ ಪಡೆಯುವಂತಾಗಿದೆ. ಅಲ್ಲದೆ ಗೊಬ್ಬರ ಮಾರಾಟ ಮಾಡಿ ಅದರಲ್ಲಿಯೂ ಆದಾಯ ಬರುವಂತೆ ನೋಡಿಕೊಳ್ಳುತ್ತಿದ್ದಾರೆ.
ವಿವಿಧ ಪ್ರಶಸ್ತಿ
ಹೈನುಗಾರಿಕೆ ಕೃಷಿಯಲ್ಲಿ 5 ವರ್ಷಗಳ ಕಾಲ ಇವರ ಸತತ ಪ್ರಯತ್ನಕ್ಕೆ ಇತ್ತೀಚೆಗೆ ತಾಲೂಕು ಮಟ್ಟದಲ್ಲಿ “ಉತ್ತಮ ಹೈನುಗಾರ ಕೃಷಿಕ’ ಎಂಬ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅಲ್ಲದೆ ಸತತ 4 ವರ್ಷಗಳಿಂದ ಅತಿ ಹೆಚ್ಚು ಹಾಲು ಸಂಘಕ್ಕೆ ಪೂರೈಕೆದಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇವರು ತಂದೆ ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಾರೆ.
ಸ್ವಂತ ದುಡಿಮೆಯಿಂದ ಲಾಭ
ಹಸುಗಳ ಆರೈಕೆಗೆ ಕಾರ್ಮಿಕರನ್ನು ಬಳಸದೆ ಸ್ವಂತವಾಗಿ ದುಡಿಯುವುದರಿಂದ ಲಾಭ ಗಳಿಸಬಹುದು. ಹಸುಗಳಿಗೆ ಆರೋಗ್ಯ ಸಮಸ್ಯೆ ಬಂದ ಕೂಡಲೇ ಸೂಕ್ತ ಚಿಕಿತ್ಸೆ ನೀಡಬೇಕು. ದೃಢತೆ, ಸಹನೆ, ತಾಳ್ಮೆ ಇದ್ದರೆ ಜೀವನದಲ್ಲಿ ಗುರಿ ಸಾಧಿಸಬಹುದು.
-ಸಂತೋಷ್ ಪೂಜಾರಿ, ಪ್ರಗತಿಪರ ಹೈನುಗಾರ
ಸ್ವಾವಲಂಬಿ ಜೀವನ
ಕಳೆದ 5 ವರ್ಷದಿಂದ ಸಂಘಕ್ಕೆ ಹಾಲು ನೀಡುತ್ತಿದ್ದು ಗುಣಮಟ್ಟದ ಹಾಲು ಒದಗಿಸುವ ಜತೆಗೆ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.
-ಸುರೇಂದ್ರ ಕುಲಾಲ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಂಡಾರು ಹಾ.ಉ. ಸಂಘ
-ಜಗದೀಶ ಅಜೆಕಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.