ಕೇವಲ ಆಶ್ವಾಸನೆಗಷ್ಟೇ ಸೀಮಿತವಾದ ಸರಕಾರಿ ಮೆಡಿಕಲ್ ಕಾಲೇಜು
ಈಡೇರದ ಉಡುಪಿ ಜಿಲ್ಲೆಯ ಬಹುಕಾಲದ ಬೇಡಿಕೆ
Team Udayavani, Jun 2, 2024, 7:35 AM IST
ಉಡುಪಿ: ಜಿಲ್ಲೆಯ ಬಹುಕಾಲದ ಬೇಡಿಕೆಯಾದ ಸರಕಾರಿ ವೈದ್ಯಕೀಯ ಕಾಲೇಜು ಕೇವಲ ಚುನಾವಣೆ ಆಶ್ವಾಸನೆಗಷ್ಟೇ ಸೀಮಿತಗೊಂಡಿದೆ. ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ನೇಪಥ್ಯಕ್ಕೆ ಸರಿದಾಗಿದೆಯಾದರೂ ಚುನಾವಣೆ ಹೊತ್ತಿನಲ್ಲಿ ಮಾತ್ರ ಭರವಸೆ ನೀಡುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ಆರಂಭಗೊಂಡರೆ ಜಿಲ್ಲೆಯ ಪ್ರತಿಭಾವಂತ ಬಡ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದರೆ ಇಲ್ಲಿಯೇ ಸರಕಾರಿ ಸೀಟ್ ಕೂಡ ಸಿಗಬಹುದು. ಸರಕಾರಿ ಶುಲ್ಕ ವಾರ್ಷಿಕ 60 ಸಾವಿರದಿಂದ 70 ಸಾವಿರ ರೂ. ಇದ್ದರೆ ಖಾಸಗಿ ಕಾಲೇಜಿನಲ್ಲಿ ಸರಕಾರಿ ಸೀಟಿಗೆ 1.50 ಲ.ರೂ.ಗಳಷ್ಟಿದೆ. ಖಾಸಗಿಯಲ್ಲಿ ದುಬಾರಿ ಶುಲ್ಕ ಇರುವುದರಿಂದ ಜಿಲ್ಲೆಯ ಹಲವಾರು ಮಂದಿ ಪ್ರತಿಭಾನ್ವಿತ ಬಡಮಕ್ಕಳು ವೈದ್ಯಕೀಯ ಶಿಕ್ಷಣದಿಂದಲೇ ವಂಚಿತವಾಗುತ್ತಿದ್ದಾರೆ.
ಜಾಗ ನಿಗದಿ
ಬ್ರಹ್ಮಾವರ ತಾಲೂಕಿನ ಉಪ್ಪೂರಿನಲ್ಲಿ 30 ಎಕರೆ ಜಮೀನನನ್ನು ಸರಕಾರ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಮೀಸಲಿರಿಸಿದೆಯಾದರೂ ಅನಂತರ ಯಾವುದೇ ಬೆಳವಣಿಗೆ ನಡೆದಿಲ್ಲ. ಈ ನಡುವೆ ವೈದ್ಯಕೀಯ ಕಾಲೇಜು ಸ್ಥಾಪನೆಗೆ ವೈದ್ಯಕೀಯ ಶಿಕ್ಷಣ ಇಲಾಖೆ/ಆರೋಗ್ಯ ಇಲಾಖೆಯಿಂದ ಅನುಮೋದನೆಯಾಗಿದೆಯೇ, ಆಗಿದ್ದಲ್ಲಿ ಪ್ರಸ್ತಾವಿಸಿರುವ ಜಮೀನಿನಲ್ಲಿ ವೈದ್ಯಕೀಯ ಕಾಲೇಜು ನಿರ್ಮಿಸಲು ಸಂಬಂಧಪಟ್ಟ ಇಲಾಖೆ ಒಪ್ಪಿದೆಯೇ ಹಾಗೂ ಯಾವ ಹೆಸರಿನ ಇಲಾಖೆಯಲ್ಲಿ ಮಂಜೂರು ಮಾಡಬೇಕು ಎಂಬುದನ್ನು ತಿಳಿಸುವಂತೆ ಕಂದಾಯ ಇಲಾಖೆ ವತಿಯಿಂದ 2022ರಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಪತ್ರ ಬಂದಿದೆ.
ಪಿಪಿಪಿ ಮಾದರಿಗೆ ಚಿಂತನೆ
ಈ ನಡುವೆ ಸರಕಾರ ಖಾಸಗಿ ಹಾಗೂ ಸಾರ್ವಜನಿಕ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಹೊರಟಿದ್ದು, ಇದಕ್ಕೆ ಜಿಲ್ಲೆಯಲ್ಲಿ ವಿರೋಧ ವ್ಯಕ್ತವಾಗಿದೆ. ವೈದ್ಯಕೀಯ ಕಾಲೇಜು ಸಂಪೂರ್ಣ ಸರಕಾರದ ನಿಯಂತ್ರಣದಲ್ಲೇ ಇರಬೇಕೆಂಬುದು ಜನರ ಆಗ್ರಹ. ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣಗೊಂಡರೆ ಶೇ. 50 ಸೀಟು ಸರಕಾರಕ್ಕೆ ಹಾಗೂ ಶೇ. 50 ಸೀಟುಗಳು ಖಾಸಗಿ ಸಂಸ್ಥೆಯ ಪಾಲಾಗುತ್ತದೆ. ಇದರಲ್ಲಿ ಎನ್‌ಆರ್‌ಐ ವಿದ್ಯಾರ್ಥಿಗಳಿಗೆ ಶೇ. 15ರಷ್ಟು ಸೀಟು ಮೀಸಲಿಡಬೇಕು. ಎನ್‌ಆರ್‌ಐಗಳಿಂದ ಎಷ್ಟು ಶುಲ್ಕ ಪಡೆಯಬೇಕು ಎಂಬುದನ್ನು ಖಾಸಗಿ ಸಂಸ್ಥೆಯೇ ನಿರ್ಧರಿಸುವುದರಿಂದ ಲಕ್ಷಾಂತರ ರೂ. ಆದಾಯ ಹರಿದುಬರಲಿದೆ. ಬೆರಳೆಣಿಕೆ ಸೀಟುಗಳು ಮಾತ್ರ ಜಿಲ್ಲೆಯ ವಿದ್ಯಾರ್ಥಿಗಳಿಗೆ ಸಿಗುವಂತಾಗುತ್ತದೆ. ಇದರಿಂದ ಜಿಲ್ಲೆಯ ಮಕ್ಕಳಿಗೆ ಅನ್ಯಾಯವಾಗಲಿದೆ ಎನ್ನುತ್ತಾರೆ ಸರಕಾರಿ ಮೆಡಿಕಲ್ ಕಾಲೇಜಿಗಾಗಿ ಹೋರಾಟ ನಡೆಸುತ್ತಿರುವ ಡಾ| ಪಿ.ವಿ. ಭಂಡಾರಿ.
ರಾಜಕೀಯ ಲೆಕ್ಕಾಚಾರ
ಚುನಾವಣೆ ಸಂದರ್ಭ ಬಹುತೇಕ ಎಲ್ಲ ಪಕ್ಷಗಳ ಪ್ರಣಾಳಿಕೆಯಲ್ಲಿಯೂ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯ ಬಗ್ಗೆ ಉಲ್ಲೇಖ ಇರುತ್ತದೆಯಾದರೂ ಚುನಾವಣೆ ಮುಗಿದ ಬಳಿಕ ಅಷ್ಟೇ ವೇಗದಲ್ಲಿ ಮರೆಯಾಗುತ್ತಿದೆ. ಈ ಬಗ್ಗೆ ಕೆಲವೊಂದು ಬಾರಿಯಷ್ಟೇ ಹೋರಾಟಗಳು ನಡೆಯುತ್ತಿವೆಯಾದರೂ ತೀವ್ರ ಸ್ವರೂಪ ಪಡೆದುಕೊಂಡಿಲ್ಲ.
ನಗರ ಭಾಗದಲ್ಲಿ ನಿರ್ಮಿಸಲು ಆಗ್ರಹ
ಪ್ರಸ್ತುತ ಸರಕಾರದ ಸುಪರ್ದಿಯಲ್ಲಿರುವ ಕೂಸಮ್ಮ ಶಂಭು ಶೆಟ್ಟಿ ಬಿಆರ್‌ಎಸ್ ಆಸ್ಪತ್ರೆ ಇರುವ ಜಾಗದಲ್ಲಿಯೂ ವೈದ್ಯಕೀಯ ಕಾಲೇಜು ನಿರ್ಮಾಣ ಮಾಡಬಹುದು. ಅಜ್ಜರಕಾಡು ಜಿಲ್ಲಾಸ್ಪತ್ರೆಯ 300 ಬೆಡ್, ಕೂಸಮ್ಮ ಶಂಭು ಶೆಟ್ಟಿ ಆಸ್ಪತ್ರೆಯ 200 ಬೆಡ್ ಹಾಗೂ ಅಲ್ಲಿಯೇ ಪಕ್ಕದಲ್ಲಿರುವ ಜಾಗದಲ್ಲಿ 200 ಬೆಡ್‌ಗಳ ಆಸ್ಪತ್ರೆ ನಿರ್ಮಾಣಕ್ಕೆ ಅವಕಾಶವಿದೆ. 700 ಬೆಡ್‌ಗಳ ಆಸ್ಪತ್ರೆಯ ಜತೆಗೆ ಇಲ್ಲಿಯೇ ಸುತ್ತಮುತ್ತ 7 ಕಿ.ಮೀ.ವ್ಯಾಪ್ತಿಯಲ್ಲಿ ಕಾಲೇಜು ಹಾಗೂ ಅದಕ್ಕೆ ಬೇಕಿರುವ ಹಾಸ್ಟೆಲ್‌ಗಳನ್ನೂ ನಿರ್ಮಿಸಬಹುದು. ಇದರಿಂದ ನಗರಭಾಗದಲ್ಲಿಯೇ ಕಾಲೇಜು ನಿರ್ಮಾಣ ಆದಂತೆಯೂ ಆಗುತ್ತದೆ ಎಂಬುವುದು ಕಾಲೇಜು ನಿರ್ಮಾಣಕ್ಕಾಗಿ ಹೋರಾಡುತ್ತಿರುವವರ ಅನಿಸಿಕೆಯಾಗಿದೆ.
ಸರಕಾರಿ ವೈದ್ಯಕೀಯ ಕಾಲೇಜು ಆರಂಭಿಸುವುದಾಗಿ ಸರಕಾರ ಈಗಾಗಲೇ ಘೋಷಣೆ ಮಾಡಿದೆ. ಬ್ರಹ್ಮಾವರದಲ್ಲಿ ಜಾಗವನ್ನೂ ನಿಗದಿಗೊಳಿಸಲಾಗಿದೆ. ವೈದ್ಯಕೀಯ ಶಿಕ್ಷಣ ವಿಭಾಗದಿಂದ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾದ ಬಳಿಕ ಇದು ವೇಗ ಪಡೆದುಕೊಳ್ಳಲಿದೆ.
-ಡಾ| ಕೆ. ವಿದ್ಯಾಕುಮಾರಿ, ಜಿಲ್ಲಾಧಿಕಾರಿ
-ಪುನೀತ್ ಸಾಲ್ಯಾನ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.