National Anthem: ದೇಶ ಭಕ್ತನ ರಾಷ್ಟ್ರ ಪ್ರೇಮ: 365 ದಿನಗಳ ರಾಷ್ಟ್ರ ಗೀತ ಗಾಯನ
Team Udayavani, Aug 13, 2023, 11:43 PM IST
ಹೆಬ್ರಿ: ಇಲ್ಲಿನ ಅಪ್ರತಿಮ ದೇಶ ಭಕ್ತ ದಿನಕರ್ ಪ್ರಭು ಅವರ ರಾಷ್ಟ್ರ ಪ್ರೇಮ ಇಂದು ದೇಶವೇ ಗಮನಿಸುವಂತೆ ಮಾಡಿದೆ. ಹೆಬ್ರಿಯಲ್ಲಿರುವ ತನ್ನ ಉಷಾ ಮೆಡಿಕಲ್‌ನಲ್ಲಿ ಹೆಬ್ಬೇರಿ ಬೈಸಿಕಲ್ ರೈಡರ್ಸ್ ಸಂಸ್ಥೆ ಯ ನೇತೃತ್ವದಲ್ಲಿ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪ್ರತಿದಿನ ಬೆಳಗ್ಗೆ 11 ಗಂಟೆಗೆ ಹರ್ ದಿನ್ ಜನಗಣಮನ ಹೆಸರಿನಲ್ಲಿ 365 ದಿನವೂ ರಾಷ್ಟ್ರ ಗೀತಾ ಗಾಯನ ಯಜ್ಞದ ಮೂಲಕ ದೇಶದ ಗಮನ ಸೆಳೆಯುವ ಕೆಲಸವನ್ನು ದಿನಕರ್ ಪ್ರಭು ಮಾಡಿದ್ದಾರೆ.
ಪ್ರತಿ ದಿನ 10.50ಕ್ಕೆ ಮೆಡಿಕಲ್‌ನಿಂದ ಹೊರಬಂದು ವಿಸಿಲ್ ಹಾಕುತ್ತಾರೆ. ಕೂಡಲೇ ಸುತ್ತಮುತ್ತಲಿನ ಜನ ಸೇರಿ ಒಕ್ಕೊರಲಿನಲ್ಲಿ ರಾಷ್ಟ್ರ ಗೀತೆಯನ್ನು ಹಾಡುತ್ತಾರೆ. ತದನಂತರ ಬಂದವರಿಗೆ ಅವರು ಸಿಹಿತಿಂಡಿಯನ್ನು ಹಂಚುತ್ತಾರೆ. ಪ್ರತಿದಿನವೂ ಕಾರ್ಯಕ್ರಮ ಆಯೋಜಿಸುತ್ತಿರುವ ಅವರ ರಾಷ್ಟ್ರ ಭಕ್ತಿಯ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರ ಜಾಗೃತಿ
ಪ್ರತಿ ದಿನ ಅತಿಥಿಯೊರ್ವರನ್ನು ಕರೆದು ಅವರೊಂದಿಗೆ ರಾಷ್ಟ್ರ ಗೀತ ಗಾಯನದ ಜತೆ ಅವರ ಅನಿಸಿಕೆಗಳನ್ನು ಪುಸ್ತಕದಲ್ಲಿ ದಾಖಲಿಸಿದ್ದಾರೆ. ಪ್ರತಿ ರವಿವಾರ ಸುತ್ತಮುತ್ತಲಿನ ಹಾಲು ಡೈರಿ, ಸಂಘ ಸಂಸ್ಥೆ, ವಠಾರಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ದೇಶ ಪ್ರೇಮ, ನಿಧಿ ಸಂಗ್ರಹಣೆ
ದೇಶ ಹಾಗೂ ಸೈನಿಕರ ಮೇಲೆ ಅಪಾರ ಗೌರವ ಹೊಂದಿರುವ ಅವರು ತನ್ನ ಮೆಡಿಕಲ್‌ನಲ್ಲಿ ಸೈನಿಕ ನಿಧಿ, ಅನಾಥ ನಿಧಿ ಮತ್ತು ಗೋಗ್ರಾಸ ನಿಧಿಯನ್ನು ತೆರೆದು ಸ್ನೇಹಿತರು ಹಾಗೂ ನಾಗರಿಕರು ನೀಡಿದ ದೇಣಿಗೆಯನ್ನು ಸಂಬಂಧಪಟ್ಟವರಿಗೆ ನೀಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ದೇಶಕ್ಕೆ ಮಾದರಿ ವರ್ಷವಿಡಿ ರಾಷ್ಟ್ರಗೀತೆಯನ್ನು ಸಾಮೂಹಿಕವಾಗಿ ಹಾಡಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯನ್ನು ಅರ್ಥಪೂರ್ಣವಾಗಿ ಮಾಡಿದ ದಿನಕರ್ ಪ್ರಭು ಅವರ ರಾಷ್ಟ್ರ ಭಕ್ತಿ ದೇಶಕ್ಕೆ ಮಾದರಿ
– ಡಾ| ಕೆ. ವಿದ್ಯಾಕುಮಾರಿ, ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ
ಇಂದು 365ನೇ ದಿನದ ರಾಷ್ಟ್ರ ಗೀತ ಗಾಯನ
ದಿನಕರ್ ಪ್ರಭು ಅವರ ನೇತೃತ್ವದಲ್ಲಿ ವರ್ಷವಿಡೀ ಅಯೋಜಿಸಿದ ಹರ್‌ದಿನ್ ಜನಗಣಮನ ರಾಷ್ಟ್ರ ಗೀತ ಗಾಯನ ಯಜ್ಞ ದ ಕೊನೆಯ ದಿನ 365ನೇ ದಿನದ ಕಾರ್ಯಕ್ರಮ ಆ. 14ರಂದು ಬೆಳಗ್ಗೆ 11ಕ್ಕೆ ಹೆಬ್ರಿ ಉಷಾ ಮೆಡಿಕಲ್ ನಲ್ಲಿ ನಡೆಯಲಿದೆ. ಶಾಸಕ ವಿ. ಸುನೀಲ್ ಕುಮಾರ್, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೊದಲಾದವರು ಭಾಗವಹಿಸಲಿದ್ದಾರೆ.
ರವಿವಾರ ನಡೆದ 364ನೇ ದಿನದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಭಾಗವಹಿಸಿದರು.
ತಾಯಿಯೇ ಪ್ರೇರಣೆ
ದೇಶದ ಬಗ್ಗೆ ಜನರಲ್ಲಿ ರಾಷ್ಟ್ರ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಯಜ್ಞವನ್ನು ಮಾಡುತ್ತಿದ್ದೇನೆ. ಈ ಕಾರ್ಯಕ್ರಮದಲ್ಲಿ ದಿನನಿತ್ಯ ಭಾಗವಹಿಸಲು ತಾಯಿ ಸುಶೀಲಾ ಶ್ಯಾಮ ಪ್ರಭು ಅವರೇ ಪ್ರೇರಣೆ.
– ದಿನಕರ್ ಪ್ರಭು
ಹೆಬ್ರಿ ಉದಯ ಕುಮಾರ್ ಶೆಟ್ಟಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.