Udupi ಪ್ರತ್ಯೇಕ ಪ್ರಕರಣ: ಆನ್‌ಲೈನ್ ಮೂಲಕ ಲಕ್ಷಾಂತರ ರೂ.ವಂಚನೆ
Team Udayavani, May 29, 2024, 9:45 PM IST
ಉಡುಪಿ: ಆನ್‌ಲೈನ್ ಮೂಲಕ ಉದ್ಯೋಗ ಅನ್ವೇಷಣೆಯಲ್ಲಿದ್ದ ಯುವತಿಯ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂ.ಗಳನ್ನು ಆರೋಪಿಗಳು ಎಗರಿಸಿದ ಘಟನೆ ನಡೆದಿದೆ.
ಉಡುಪಿಯ ರೇಷ್ಮಾ ಅವರನ್ನು ಮೇ 22ರಂದು ವಾಟ್ಸಾಪ್ ಮೂಲಕ ಅಪರಿಚಿತ ವ್ಯಕ್ತಿಯು ತಾನು ಮೀಡಿಯಾ ಏಜೆನ್ಸಿ ರಿಕ್ರೂಟರ್ ಅನೀಶ ಎಂದು ಪರಿಚಯಿಸಿದ್ದಾನೆ. COIN DCX ಎಂಬ ಸಂಸ್ಥೆ ಎಂದು ಹೇಳಿ ನಂಬಿಸಿ, ದಿನಕ್ಕೆ 5,000 ರೂ. ಗಳಿಸಬಹುದು ಎಂದು ಸಂದೇಶ ಕಳುಹಿಸಿದ್ದಾನೆ. ಇದಕ್ಕೆ ಒಪ್ಪಿದ ರೇಷ್ಮಾ ಅವರು ಆರೋಪಿ ಕಳುಹಿಸಿದ ಲಿಂಕ್‌ನಲ್ಲಿ ಕೆಲವೊಂದು ಆನ್‌ಲೈನ್ ಟಾಸ್ಕ್ ಪೂರ್ತಿಗೊಳಿಸಿದ್ದಾರೆ.
3 ಟಾಸ್ಕ್ ಪೂರ್ತಿಗೊಳಿಸಿದಾಗ ರೇಷ್ಮಾ ಅವರ ಬ್ಯಾಂಕ್ ಖಾತೆಗೆ 120 ರೂ. ಜಮೆಯಾಗಿದೆ. ಮುಂದಿನ ಟಾಸ್ಕ್ ಬಗ್ಗೆ ಅಪರಿಚಿತ ವ್ಯಕ್ತಿಗಳು ವಾಟ್ಸಾಪ್‌ಗೆ ಲಿಂಕ್ ಕಳುಹಿಸಿದ್ದು, ಇದನ್ನು ಕ್ಲಿಕ್ ಮಾಡಿದಾಗ ಟೆಲಿಗ್ರಾಮ್ ಆ್ಯಪ್ ಓಪನ್ ಆಗಿದ್ದು, ಅನಂತರ ಅದರಲ್ಲಿ ಯಾರೋ ಅಪರಿಚಿತ ವ್ಯಕ್ತಿ ತನ್ನ ಪರಿಚಯ ಮಾಡಿಕೊಂಡು ಪುನಃ 20 ಟಾಸ್ಕ್ ನೀಡಿದ್ದಾನೆ. ಆರೋಪಿ ಹೆಚ್ಚಿನ ಹಣ ಹೂಡಿಕೆ ಮಾಡುವಂತೆ ತಿಳಿಸಿದ ಮೇರೆಗೆ ರೇಷ್ಮಾ ಅವರು ಮೇ 23ರಿಂದ 27ರ ವರೆಗೆ ಹಂತಹಂತವಾಗಿ 5,91,500 ರೂ. ಗಳನ್ನು ಆರೋಪಿಗಳು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿದ್ದಾರೆ.
ಆದರೆ ಆರೋಪಿಗಳು ಉದ್ಯೋಗ ಹಾಗೂ ಪಾವತಿಸಿದ ಹಣವನ್ನು ವಾಪಸ್ ನೀಡದೇ ಮೋಸ ಮಾಡಿದ್ದಾರೆ.
ಇನ್ನೊಂದು ಘಟನೆಯಲ್ಲಿ ಉಡುಪಿಯ ಅತುಲ್ (30) ಅವರನ್ನು ಅಪರಿಚಿತ ವ್ಯಕ್ತಿಗಳು ವಾಟ್ಸಾಪ್‌ನಲ್ಲಿ ಟ್ರೇಡಿಂಗ್ ವ್ಯವಹಾರದ ಬಗ್ಗೆ ತಿಳಿಸಿ, Provex Securities app ಡೌನ್ ಲೋಡ್ ಮಾಡುವಂತೆ ಸಂದೇಶದ ಲಿಂಕ್ ಕಳುಹಿಸಿ, ಸೇರ್ಪಡೆಗೊಳ್ಳುವಂತೆ ತಿಳಿಸಿ ಪಾಸ್‌ವರ್ಡ್‌ಗಳನ್ನು ನೀಡಿದ್ದರು. ಅದನ್ನು ಕ್ಲಿಕ್ ಮಾಡಿದಾಗ Provex Securities app ಓಪನ್ ಆಗಿದ್ದು, ಅದರಲ್ಲಿ ಟ್ರೇಡಿಂಗ್ ಬಗ್ಗೆ ಹಾಗೂ ಲಾಭಾಂಶಗಳ ಬಗ್ಗೆ ಮಾಹಿತಿ ಇತ್ತು. ಅನಂತರ ಒಂದು Black Rock Exclusive Member Group ಎಂಬ ಹೆಸರಿನ ವಾಟ್ಸಾಪ್ ಗ್ರೂಪ್‌ಗೆ ಸೇರ್ಪಡೆಗೊಳ್ಳುವಂತೆ ತಿಳಿಸಿ, ಸೇರ್ಪಡೆಗೊಂಡಾಗ ಗ್ರೂಪ್‌ನಲ್ಲಿ ಟ್ರೆಡಿಂಗ್ ಬಗ್ಗೆ ತರಬೇತಿ ನೀಡುತ್ತಿದ್ದು, ಈ ಟ್ರೇಡಿಂಗ್ ನಲ್ಲಿ ಕನಿಷ್ಠ 1.50 ಲ.ರೂ.ಹೂಡಿಕೆ ಮಾಡುವಂತೆ ತಿಳಿಸಿ, ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಸೆ ತೋರಿಸಿ, ಹಣವನ್ನು ಹೂಡಿಕೆ ಮಾಡಲು ತಿಳಿಸಿದ್ದರು. ಇದನ್ನು ನಂಬಿದ ಅತುಲ ಅವರು ಆರೋಪಿಗಳು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ 2,01,000 ರೂ.ಹೂಡಿಕೆ ಮಾಡಿದ್ದರು. ಆದರೆ ಆರೋಪಿಗಳು ಮೋಸದಿಂದ ನಷ್ಟ ಉಂಟು ಮಾಡಿದ್ದಾರೆ. ಸೆನ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.