ಸುಸಜ್ಜಿತ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲಿಲ್ಲ!
Team Udayavani, Jan 19, 2019, 12:30 AM IST
ತೆಕ್ಕಟ್ಟೆ: ಜನರಿಗೆ ತೀರ ಅಗತ್ಯವಾಗಿ ಬೇಕಾದ ಸುಸಜ್ಜಿತ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಿಲ್ಲದೆ ತೆಕ್ಕಟ್ಟೆ ಗ್ರಾ.ಪಂ. ಪರಿತಪಿಸುತ್ತಿದೆ. ಇದರಿಂದ ಇಲ್ಲಿನವರು ತುರ್ತು ಚಿಕಿತ್ಸೆಗೆ ಬೇಕಾದರೂ ದೂರದ ಆಸ್ಪತ್ರೆಗಳನ್ನೇ ಆಶ್ರಯಿಸಬೇಕಿದೆ.
ಗ್ರಾ.ಪಂ. 1343.55 ಎಕರೆ ವಿಸ್ತೀರ್ಣವನ್ನು ಹೊಂದಿದ್ದು ಸುಮಾರು 5 ಸಾವಿರಕ್ಕೂ ಅಧಿಕ ಜನಸಂಖ್ಯೆಯಿದೆ. ಆದರೆ ಇಲ್ಲಿ ಆರೋಗ್ಯ ಕೇಂದ್ರವಿಲ್ಲದೆ ಗ್ರಾಮೀಣರಿಗೆ ಸಮಸ್ಯೆಯಾಗಿದೆ.
ಸರಕಾರಿ ಜಾಗವಿದೆ
ಗ್ರಾ.ಪಂ.ಕಚೇರಿಯ ಸುತ್ತಲೂ ಸುಮಾರು 1.05 ಎಕರೆ ವಿಸ್ತೀರ್ಣದ ಸರಕಾರಿ ಜಾಗವಿದ್ದರೂ ಪ್ರಾಥಮಿಕ ಆರೋಗ್ಯ ಕೇಂದ್ರದ ಕನಸು ನನಸಾಗಿಲ್ಲ. ಇದರೊಂದಿಗೆ ಪಶು ಆಸ್ಪತ್ರೆಗೆ ಜನರು ಬೇಡಿಕೆ ಇಟ್ಟಿದ್ದೂ ನಿರ್ಮಾಣವಾಗಿಲ್ಲ.
ಕುಂಭಾಸಿಗೆ ಬೇಕು ಹೆರಿಗೆ ಆಸ್ಪತ್ರೆ
ಕುಂಭಾಸಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು, ಸೇವೆಯಲ್ಲಿದೆ. ಆದೆ ಇದು ಮೇಲ್ದರ್ಜೆಗೇರಿಲ್ಲ. ಇಲ್ಲೊಂದು ಹೆರಿಗೆ ಆಸ್ಪತ್ರೆಯಾಗಬೇಕೆನ್ನುವುದು ಸಾರ್ವಜನಿಕರ ಬೇಡಿಕೆ. 3 ಎಕರೆಗೂ ಅಧಿಕ ವಿಸ್ತೀರ್ಣದ ಜಾಗವನ್ನು ಈ ಆರೋಗ್ಯ ಕೇಂದ್ರ ಹೊಂದಿದ್ದು, ವೈದ್ಯಾಧಿಕಾರಿಗಳು, ಸಿಬಂದಿ ಸಹಿತ 19 ಮಂದಿ ಆಶಾ ಕಾರ್ಯಕರ್ತರನ್ನು ಒಳಗೊಂಡಿದೆ. ಜಾಗವನ್ನು ಆರೋಗ್ಯ ಇಲಾಖೆ ಸಮರ್ಪಕವಾಗಿ ಸದ್ಭಳಕೆ ಮಾಡಿಕೊಂಡು ವ್ಯವಸ್ಥಿತವಾದ ಹೆರಿಗೆ ಆಸ್ಪತ್ರೆ ನಿರ್ಮಿಸಬೇಕು ಎನ್ನುವ ಆಗ್ರಹವಿದೆ.
ಜನರ ಬೇಡಿಕೆ ಈಡೇರಿಸಲಿ
ಕುಂಭಾಸಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಂಬಂಧಪಟ್ಟ ಸುಮಾರು 3 ಎಕರೆ ವಿಸ್ತೀರ್ಣದ ಜಾಗವನ್ನು ಸದುಪಯೋಗಪಡಿಸಿಕೊಂಡು ಸುವ್ಯವಸ್ಥಿತವಾದ ಹೆರಿಗೆ ಆಸ್ಪತ್ರೆ ನಿರ್ಮಿಸಿದರೆ ಗ್ರಾಮೀಣರಿಗೆ ನೆರವಾಗುತ್ತದೆ. ಹಾಗೆಯೇ ತೆಕ್ಕಟ್ಟೆ ಗ್ರಾ.ಪಂ.ಕಚೇರಿಯ ಸಮೀಪದಲ್ಲಿರುವ ಸುಮಾರು 1.05 ಎಕರೆ ವಿಸ್ತೀರ್ಣದ ಜಾಗದಲ್ಲಿ ಸುಸಜ್ಜಿತ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣವಾಗಬೇಕು .
– ಕೆ.ವಿ. ನಾಯಕ್ ತೆಕ್ಕಟ್ಟೆ,
ವಿಶ್ರಾಂತ ಉಪನ್ಯಾಸಕರು
ಬೇಡಿಕೆಗೆ ಅನುಗುಣ ವಾಗಿ ಸ್ಪಂದನೆ
ಗ್ರಾಮಸ್ಥರ ಬೇಡಿಕೆಯಂತೆ ತೆಕ್ಕಟ್ಟೆ ಗ್ರಾಮದಲ್ಲಿ ಪಶು ಸಂಗೋಪನಾ ಆಸ್ಪತ್ರೆ ನಿರ್ಮಿಸುವ ಕುರಿತು ಈಗಾಗಲೇ ಸಂಬಂಧಪಟ್ಟ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮಸ್ಥರ ಬೇಡಿಕೆಗೆ ಅನುಗುಣವಾಗಿ ಸ್ಪಂದಿಸುತ್ತೇವೆ.
– ತೇಜಪ್ಪ ಕುಲಾಲ್,ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳು. ತೆಕ್ಕಟ್ಟೆ
– ಟಿ. ಲೋಕೇಶ್ ಆಚಾರ್ಯ ತೆಕ್ಕಟ್ಟೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.