ಎಸಿಬಿ ಬಲೆಗೆ ಬಿದ್ದ ಮುಖ್ಯೋಪಾಧ್ಯಾಯ
Team Udayavani, Mar 18, 2018, 6:00 AM IST
ಉಡುಪಿ: ಸರಕಾರದ ಶೂ ಭಾಗ್ಯ ಯೋಜನೆಯ ಬಿಲ್ ಪಾಸ್ ಮಾಡಲು ಲಂಚ ಪಡೆಯುತ್ತಿದ್ದ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯರನ್ನು ಉಡುಪಿ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳ ತಂಡ ಮಾ. 17ರಂದು ಬಂಧಿಸಿದೆ.
ಹಿರಿಯಡಕ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋ ಪಾಧ್ಯಾಯ ಎಂ.ಕೆ. ವಾಸುದೇವ ಬಂಧಿತರು. ಶಾಲಾ ಶೂ ಭಾಗ್ಯ ಯೋಜನೆಯಲ್ಲಿ ಲಂಚದ ಹಣಕ್ಕಾಗಿ ಅವರು ಅರ್ಜಿದಾರರನ್ನು ಪೀಡಿಸುತ್ತಿದ್ದರು ಎನ್ನುವ ದೂರಿನ ಮೇರೆಗೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿ ಮತ್ತು ಸಿಬಂದಿ ಮುಖ್ಯೋಪಾಧ್ಯಾಯರ ಕಚೇರಿ ಮೇಲೆ ಶನಿವಾರ ದಾಳಿ ನಡೆಸಿ ಅರ್ಜಿದಾರರಿಂದ 7,000 ರೂ. ಲಂಚ ಪಡೆಯುತ್ತಿದ್ದಾಗ ರೆಡ್‌ಹ್ಯಾಂಡ್ ಆಗಿ ಬಂಧಿಸಿ ದ್ದಾರೆ. ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸ ಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಮಣಿಪಾಲದ ಖಾಸಗಿ ಸಂಸ್ಥೆಯೊಂದು ಶಾಲೆಯ ಮಕ್ಕಳಿಗೆ ಶೂ ವಿತರಿಸಿತ್ತು. ಅದರ ಬಿಲ್ 1,09,000 ಆಗಿದ್ದು, ಅದನ್ನು ಬಿಡುಗಡೆ ಮಾಡಲು ಮುಖ್ಯೋಪಾಧ್ಯಾಯರು 10 ಸಾ. ರೂ. ಬೇಡಿಕೆ ಇಟ್ಟಿದ್ದರು. ಕೊನೆಗೆ 7 ಸಾವಿರಕ್ಕೆ ವ್ಯವಹಾರ ಕುದುರಿತ್ತು. ಈ ಹಿಂದೆಯೂ ಅವರು ಮಕ್ಕಳಿಂದ ಹಣ ವಸೂಲಿ ಮಾಡಿದ ಆರೋಪ ಶಿಕ್ಷಣ ಇಲಾಖೆಯ ಮೇಲಧಿಕಾರಿಗಳಿಗೆ ಹೋಗಿದ್ದು, ಅದರಲ್ಲೂ ಅವರು ತಪ್ಪೆಸಗಿದ್ದು ಕಂಡುಬಂದಿತ್ತು ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಎಸಿಬಿ ಪಶ್ಚಿಮ ವಲಯ ಪೊಲೀಸ್ ಅಧೀಕ್ಷಕಿ ಶ್ರುತಿ ಅವರ ಮಾರ್ಗದರ್ಶನದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಉಪ ಅಧೀಕ್ಷಕ ದಿನಕರ ಶೆಟ್ಟಿ, ನಿರೀಕ್ಷಕರಾದ ಜಯರಾಮ್ ಡಿ. ಗೌಡ ಹಾಗೂ ಸತೀಶ್ ಬಿ.ಎಸ್., ಸಿಬಂದಿ ಕೃಷ್ಣಪ್ಪ, ರವೀಂದ್ರ ಗಾಣಿಗ, ಅಬ್ದುಲ್ ಜಲಾಲ್, ಪ್ರಸನ್ನ ದೇವಾಡಿಗ, ಸುರೇಶ್ ನಾಯಕ್, ರಾಘವೇಂದ್ರ, ಸೂರಜ್ ಕಾಪು, ಪಾವನಾಂಗಿ ಮತ್ತು ರಮೇಶ ಅವರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.